Saturday, November 7, 2009

ಬಿಟಿ ಭಟ್ಟಂಗಿಗಳು ಮತ್ತು ವಾಸ್ತವ

ಹತ್ತಿಯ ಮೂಲಕ ಕೊಟ್ಟಿಗೆ ಪ್ರವೇಶಮಾಡಿದ್ದ ಕುಲಾಂತರಿ ತಳಿ ತಂತ್ರಜ್ಞಾನ ಈಗ ಬದನೆಕಾಯಿ ಮೂಲಕ ಭಾರತೀಯರ ಅಡುಗೆ ಮನೆ ಪ್ರವೇಶಕ್ಕೆ ಕದ ತಟ್ಟುತ್ತಿದೆ. ಬಾಗಿಲು ತೆರೆಯಲು ಇದು ಸಕಾಲವಲ್ಲ ಮುಂದೆ ಹೋಗಿ ಎಂದು ಅರಣ್ಯ ಸಚಿವರು ಹೇಳಿರುವುದರಿಂದ ಬಾಗಿಲ ಪಕ್ಕದಲ್ಲಿ ಕುಳಿತು ಬಿಟಿ ಭೂತ ಕಾಯುತ್ತಿದೆ. ಜೈವಿಕ ತಂತ್ರಜ್ಞಾನ ಒಪ್ಪಿಗೆ ಸಮಿತಿ( GEAC- Genetic Engineering approval Commitee) ಅನುಮತಿ ನೀಡಿರುವುದು ಇದಕ್ಕೆ ಕಾರಣ ರೋಗ ನಿರೋಧಕ ಶಕ್ತಿ, ಹೆಚ್ಚು ಉತ್ಪಾದನೆ, ಹೆಚ್ಚು ಲಾಭ... ಮುಂತಾದ ೧೯೯೦ರಲ್ಲಿ ಊದಿದ್ದ ಹಳೇ ತುತ್ತೂರಿಯನ್ನು ಬಿಟಿ ಭಟ್ಟಂಗಿಗಳು ಮತ್ತೊಮ್ಮೆ ಊದುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ. ಆದರೂ ಅವರ ದುರ್ಬೋಧನೆಗೆ ದೇಶದ ನಾಗರಿಕರು ಮತ್ತೊಮ್ಮೆ ಎಚ್ಚರದಿಂದ ಕಿವಿಗೊಡಬೇಕಾಗಿ ಬಂದಿದೆ. ಬಿಟಿ ಹತ್ತಿ ಬೆಳೆಯುವುದರಿಂದ ಲಾಭವಾಗುತ್ತದೆ ಎಂದು ೧೯೯೦ ರಲ್ಲೇ ಹೇಳಿದ್ದರು ಆದರೆ ಯಾರಿಗೆ ಎನ್ನುವುದನ್ನು ಹೇಳಿರಲಿಲ್ಲ. ಇದರಿಂದ ಬೀಜ ಕಂಪನಿಗಳಿಗೆ ಲಾಭವಾಯಿತು. ದೇಶಿ ಬೀಜ ತಳಿಗಳು, ರೈತರು ನಿರ್ನಾಮವಾದರು. ಸತ್ಯ ಅರಿವಾಗಲು ಸುಮಾರು ಎಂಟು ವರ್ಷ ಬೇಕಾಯಿತು. ಕಂಪನಿಗಳ ಬೆಳ್ಳನೆಯ ಮಾತು ನಂಬಿದ ರೈತರು ಯಥೇಚ್ಛವಾಗಿ ಗೊಬ್ಬರ ಸುರಿದು ಬಿಟಿ ಹತ್ತಿ ಬೆಳೆದು ನಿರೀಕ್ಷಿತ ಫಲಬಾರದೆ ಹತಾಶರಾಗಿ ಆತ್ಮ ಹತ್ಯೆಗೆ ಶರಣಾದರು.
ಮಹಾರಾಷ್ಟ್ರದ ವಿದರ್ಭದಲ್ಲಿ ಬಿಟಿ ಹತ್ತಿ ಬೆಳೆದ ರೈತರು ಸಾಲುಸಾಲಾಗಿ ನೇಣು ಬಿಗಿದುಕೊಳ್ಳುತ್ತಿದ್ದಾಗ ಬಿಟಿ ಜನಮಾತನಾಡಲಿಲ್ಲ. ೨೦೦೭ರಲ್ಲಿ ಆಂಧ್ರಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇ. ೬೦ ಮಂದಿ ಬಿಟಿ ಹತ್ತಿ ಬೆಳೆಗಾರರು ಎನ್ನುವುದು ರುಜುವಾತಾಯಿತು. ಛತ್ತೀಸ್ಗಢದಲ್ಲಿ ೨೦೦೬ರಲ್ಲಿ ,೪೮೩ ಮಂದಿ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡಿದರು. ಅವಲ್ಲಿ ಶೇ. ೫೦ ಮಂದಿ ಬಿಟಿ ಹತ್ತಿ ಬೆಳೆದವರು ಮತ್ತು ಸಣ್ಣ ರೈತರು ಎನ್ನುವುದನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿದವು. ಆಗ ಬದನೆಕಾಯಿ ಪಂಡಿತರಸೊಲ್ಲಡಗಿಹೋಗಿತ್ತು! ೨೦೦೧ರಲ್ಲಿ ಇದೇ ಬಿಟಿ ಹತ್ತಿ ಬೆಳೆದು ವಿಚಿತ್ರ ರೋಗದಿಂದ ಫಸಲು ಬಾರದೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ರೈತರು ಪರಿತಪಿಸಿದಾಗ ಲಾಭ ಕೋರರುಉಸಿರೆತ್ತಲಿಲ್ಲ. ಇವು ಸ್ಯಾಂಪಲ್ಗಳು. ಉತ್ತರ ಕರ್ನಾಟಕದಲ್ಲಿ ಇಂಥ ಸಾವಿರಾರು ಉದಾಹರಣೆಗಳಿವೆ.
ಬಿಟಿ ಹತ್ತಿ ಬೆಳೆಯಲು ಅನುಮತಿ ನೀಡಿದಾಗಲೇ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಿಂದ ಆಗಬಹುದಾದ ಅನಾಹುತಗಳು ಏನೆಂಬುದನ್ನು ಅರಿತ ಹಲವಾರು ಸಂಘಟನೆಗಳು, ಕೃಷಿಕರು ವಿರೋಸಿದ್ದರು. ಅದ್ಯಾವುದನ್ನೂ ಪರಿಗಣಿಸದೆ ಅಂದಿನ ಸರಕಾರ ಅನುಮತಿ ನೀಡಿತು. ಅದರ ಪರಿಣಾಮವಾಗಿ ಇಂದು ಯಾವ ರಾಜ್ಯದಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರಕಾರವೇ ವರ್ಷಕ್ಕೊಮ್ಮೆ ಲೆಕ್ಕ ಕೊಡಬೇಕಾದ ದುಃಸ್ಥಿತಿ ಬಂದಿದೆ.
ಉದಾರೀಕರಣ ನೀತಿಯ ಒಂದು ಭಾಗವೇ ಆಗಿರುವ ಬೀಜ ನಿಯಮಗಳಿಂದ ಮುಂದೊಂದು ದಿನ ದೇಶ ಭಾರೀ ಗಂಡಾಂತರ ಎದುರಿಸಬೇಕಾಗುತ್ತದೆ ಎನ್ನುವ ಅರಿವಿರುವುದರಿಂದ ಪ್ರಜ್ಞಾವಂತರು ಎಚ್ಚೆತ್ತುಕೊಂಡಿದ್ದಾರೆ. ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ ಭಾರತ ಪ್ರಯೋಗ ಶಾಲೆಯಾಗಿದೆ, ಇಲ್ಲಿನ ಜನ ಪ್ರಯೋಗಪಶುಗಳಾಗುತ್ತಿದ್ದಾರೆ. ಸರಕಾರಗಳೂ ಅದಕ್ಕೆ ಇಂಬು ಮಾಡಿಕೊಡುತ್ತಿವೆ. ಅದನ್ನು ಅರ್ಥ ಮಾಡಿಕೊಂಡ ಇಲ್ಲಿನ ಕೆಲವುಹೌದಪ್ಪವಿಜ್ಞಾನಿಗಳು ತಲೆ ಹಾಕುತ್ತಿದ್ದಾರೆ, ಹಾಗೆಯೇ ಎಲ್ಲರೂ ತಲೆ ಹಾಕಬೇಕೆಂದು ಪುಸಲಾಯಿಸುತ್ತಿದ್ದಾರೆ. ವಂಚನೆಗೆ ವಿಜ್ಞಾನದ ನುಣುಪಾದ ಶಾಲು ಸುತ್ತಿಕೊಂಡಿದ್ದಾರೆ. ಬಿಟಿ ಆಹಾರದಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ಹೇಳುವವರಿದ್ದಾರೆ. ನಿಜ, ಇವುಗಳಿಂದ ತಕ್ಷಣ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ. ದೂರಗಾಮಿ ನೆಲೆಯಲ್ಲಿ ತನ್ನ ಕರಾಳ ಮುಖಗಳನ್ನು ಪರಿಚಯಿಸುತ್ತದೆ. ಅಷ್ಟೊತ್ತಿಗೆ ದೇಶದ ಕೃಷಿ ಸಾಮ್ರಾಜ್ಯಶಾಹಿ ಕಂಪನಿಗಳ ಗುಲಾಮಗಿರಿಗೊಳಪಟ್ಟಿರುತ್ತದೆ. ಬಿಟಿ ಬೀಜದ ಯಾವುದೇ ಬೆಳೆಯ ಸೊಪ್ಪು ತಿಂದರೂ ಹಸುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿವೆ. ಮನುಷ್ಯರು ಚರ್ಮರೋಗ, ತುರಿಕೆಯಿಂದ ಬಳಲಿದ್ದನ್ನು ಮನಗಂಡು ದಕ್ಷಿಣ ಅಮೆರಿಕ, ಆಫ್ರಿಕದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ, ಯುರೋಪಿನ ಒಕ್ಕೂಟ ಒಪ್ಪಂದವನ್ನೇ ಮುಂದೂಡಿದೆ. ಆದರೆ ಭಾರತ ಸರಕಾರಕ್ಕೆ ಮಾತ್ರ ಅಂಥ ಧೈರ್ಯವಿಲ್ಲ ಎನ್ನುವುದು ಈಗ ಮತ್ತೊಮ್ಮೆ ದೃಢಪಟ್ಟಿದೆ. ಧೈರ್ಯವಿದ್ದಿದ್ದರೆ ಇಂಥ ಜೀವವಿರೋ ಸಂಶೋಧನೆಗೆ ಅವಕಾಶವನ್ನೇ ನೀಡುತ್ತಿರಲಿಲ್ಲ.
ಅಂದು ಹತ್ತಿಯಿಂದ ದೇಶ ಪ್ರವೇಶ ಮಾಡಿದ ಬಿಟಿ ವಿಷ ಇಂದು ಬದನೆ ಮೂಲಕ ನೇರವಾಗಿ ಭಾರತೀಯರ ದೇಹ ಪ್ರವೇಶಕ್ಕೆ ಮುಂದಾಗಿದೆ. ಇದು ತಂದೊಡ್ಡುವ ಅಪಾಯಗಳನ್ನು ಅರ್ಥಮಾಡಿಕೊಂಡು ರೈತ ದ್ರೋಹಿ ಬೀಜ ಕಂಪನಿಗಳನ್ನು ದೇಶದಿಂದ ಹೊರಗಟ್ಟಬೇಕಾಗಿದೆ. ರೈತರ ಬೀಜದ ಮೇಲಿನ ಹಕ್ಕನ್ನು ನಾಶಮಾಡಲು ಬಿಡದೆ, ಒರಿಸ್ಸಾ, ಕೇರಳ ರಾಜ್ಯಗಳು ತಿರಸ್ಕರಿಸಿವೆ. ಕರ್ನಾಟಕ ಸರಕಾರ ಮಾತ್ರ ಇನ್ನೂ ಪಂಚಾಗ ನೋಡುತ್ತ ಗಳಿಗೆಗಾಗಿ ಕಾಯುತ್ತಿದೆ. ನಿಮ್ಮ ಬಿಟಿಯೂ ಬೇಡ, ಕಾಟವೂ ಬೇಡ. ಹಸಿರು ಕ್ರಾಂತಿಯ ಸಂದರ್ಭದಲ್ಲೆ ನಿಮ್ಮ ನಿಜಬಣ್ಣ ಬಯಲಾಗಿದೆ ಹೊರಟು ಹೋಗಿ ಎಂದು ತಳ್ಳಿದರೂ ಕೆಲವು ದಲ್ಲಾಳಿಗಳು ಮತ್ತೆ ಮತ್ತೆ ರೈತರ ಜಮೀನಿಗೆ ಹೆಜ್ಜೆ ಇಡುತ್ತಿದ್ದಾರೆ. ತಮಗೆ ಗೊತ್ತಿರುವ ವಿಜ್ಞಾನವೇ ಜಗತ್ತಿನ ಜ್ಞಾನ ಎಂದು ಬಿಂಬಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯೂ ಕೂಡಾ ನಮ್ಮ ದೇಶಕ್ಕೆ ಹೆಜ್ಜೆ ಇಟ್ಟದ್ದು ವ್ಯಾಪಾರ ಮಾಡುವ ನೆಪದಲ್ಲಿ ನಂತರ ಅದು ಏನು ಮಾಡಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ದೇಶ ಪ್ರವೇಶ ಮಾಡುತ್ತಿರುವ ಬೀಜ ಕಂಪನಿಗಳ ಹುನ್ನಾರಗಳು ಅದಕ್ಕಿಂತ ಭಿನ್ನವಾಗಿಲ್ಲ. ಅಂದು ತಕ್ಕಡಿ ಹಿಡಿಯಲು ಬಂದಿದ್ದವರೇ ಇಂದು ಬೀಜ, ಕೈಗಾರಿಕೆಯ ಮುಖವಾಡ ಧರಿಸಿ ನೆಲ ಹಿಡಿಯಲು ಬರುತ್ತಿದ್ದಾರೆ ಎನ್ನುವುದನ್ನು ಅರಿಯಬೇಕಾಗಿದೆ. ರೈತರನ್ನು ಒಡೆದು ಆಳಲು (ಬ್ರಿಟಿಷರಂತೆ) ಎಲ್ಲ ಸಂಚುಗಳನ್ನೂ ರೂಪಿಸುತ್ತಿದ್ದಾರೆ ಅವನ್ನು ಭಗ್ನಗೊಳಿಸಲು ಒಗ್ಗಟ್ಟು ಪ್ರದರ್ಶಿಸಬೇಕು. ಇದು ಬರೀ ಆಹಾರ, ಕೃಷಿ ಪ್ರಶ್ನೆ ಮಾತ್ರವಲ್ಲ, ದೇಶದ ರೈತರ ಸಾರ್ವಭೌಮತ್ವ, ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ.
ಸುಳ್ಳುಗಳ ರಾಶಿಯನ್ನು ಭಾರತದಲ್ಲಿ ಸುರಿಯುವುದನ್ನು ಗಮನಿಸಿದರೆ ಜೀವ ವಿಜ್ಞಾನವನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಎನ್ನುವ ಅರಿವಾಗುತ್ತದೆ. ವಿಜ್ಞಾನ ಎಲ್ಲವನ್ನೂ ಚಿಕಿತ್ಸಕ ದೃಷ್ಟಿಯಿಂದ ನೋಡಿ ಸರಿ ದಾರಿ ತೋರಬೇಕು. ಆದರೆ ಅದೇ ಕವಲುದಾರಿಯಲ್ಲಿ ನಿಂತಂತೆ ಗೋಚರಿಸುತ್ತಿದೆ. ಕುಲಾಂತರವನ್ನು ಬೀಜ ಭಾಷೆಯಲ್ಲಿವಾಮಾಚಾರಎನ್ನುತ್ತಾರೆ. ಅದನ್ನೇ ವಿಜ್ಞಾನದ ಭಾಷೆಯಲ್ಲಿ ಬೋಸಲಾಗುತ್ತಿದೆ. ಕಂದಾಚಾರ, ವಾಮಾಚಾರಗಳನ್ನು ಬೋಸುವುದು ವಿಜ್ಞಾನದ ಗಿರಿಯೇ?
ಸಾವಯವ ದುಬಾರಿಯಂತೆ!
ಸಾವಯವ ಕೃಷಿ ದುಬಾರಿಯಾಗಿದ್ದು ಇದು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಿಲ್ಲ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಇದರಂಥ ಹಸಿಸುಳ್ಳು ಜಗತ್ತಿನಲ್ಲಿ ಇನ್ನೊಂದಿರಲಾರದು. ಇದನ್ನುಶತಮಾನದ ಸುಳ್ಳುಎಂದು ಹೊಸ ನಾಮಕರಣ ಮಾಡಬೇಕಾಗಿದೆ. ನಮ್ಮ ಮೂಲ ಕೃಷಿಯೇ ಸಹಜ ಮತ್ತು ಸಾವಯವ, ಅದರಲ್ಲೇ ರೈತರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಹಸಿರು ಕ್ರಾಂತಿ ಆರಂಭಕ್ಕೂ ಮುನ್ನ (ರಸಾಯನಿಕ ಕೃಷಿ ಆರಂಭ) ಅದರಲ್ಲೇ ಬದುಕುತ್ತಿದ್ದರು. ಆಗ ಯಾವೊಬ್ಬ ರೈತನೂ ಆತ್ಮಹತ್ಯೆಗೆ ಶರಣಾಗಿಲ್ಲ. ಈಗಿನಂತೆ ನಾನಾ ರೋಗಗಳಿಂದ ಜನ ಬಳಲುತ್ತಿರಲಿಲ್ಲ. ನಾವು ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ರಾಸಾಯನಿಕ ಕೃಷಿ ಆರಂಭಕ್ಕೂ ಮೊದಲು ಇದ್ದ ರೈತರ ಆತ್ಮಹತ್ಯೆಗೂ ಈಗ ಆಗಿರುವ ವ್ಯತ್ಯಾಸವನ್ನು. ಇಂಥ ಕಟು ವಾಸ್ತವಗಳನ್ನು ಕೆಲವು ಕಂಪನಿಗಳ ಏಜೆಂಟರು ತಿರುಚಿ ತಮ್ಮದೇ ಆದ ಹಸಿ ಸುಳ್ಳಿನ ಸುರುಳಿ ಬಿಚ್ಚುತ್ತಿದ್ದಾರೆ. ಒಂದು ಸತ್ಯವನ್ನು ಮರೆಮಾಚಲು ನೂರಾರು, ಅದನ್ನು ಮರೆ ಮಾಚಲು ಸಾವಿರಾರು ಸುಳ್ಳುಗಳನ್ನು ಜೋಡಿಸುತ್ತಿದ್ದಾರೆ. ಒಟ್ಟಿನಲ್ಲಿ ತಾವೇ ಸೃಷ್ಟಿಸಿಕೊಂಡ ಸುಳ್ಳಿನ ಸುಳಿಯಿಂದ ಹೊರಬರಲಾಗದೆ ತತ್ತರಿಸುತ್ತಿದ್ದಾರೆ.
ರಾಸಾಯನಿಕ ಕೃಷಿಯಿಂದ ಬೇಸತ್ತ ರೈತರು ಸಾವಯವ, ಸಹಜ, ಜೀವಾಮೃತ ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಬಳಕೆದಾರರಲ್ಲೂವಿಷತರಕಾರಿಗಳ ಬಗ್ಗೆ ಅರಿವು ಮೂಡಿದೆ. ಅಲ್ಲದೆ ಸಾವಯವ ಜನಪ್ರಿಯಗೊಳ್ಳುತ್ತಿರುವುದರಿಂದ ಬಂಡವಾಳ ಶಾಹಿ ಕಂಪನಿಗಳಿಗೆ ಕಂಪನವುಂಟಾಗಿದೆ. ತಮ್ಮ ಉತ್ಪನ್ನಗಳ ಮಾರುಕಟ್ಟೆ ಕುಸಿದು ಹೋಗುವ ಆಂತಕ ಎದುರಾಗಿದೆ. ಆದ್ದರಿಂದ ಇದು ಲಾಭದಾಯಕವಲ್ಲ, ಇದರಿಂದ ಅಭಿವೃದ್ಧಿಹೊಂದಲು ಸಾಧ್ಯವಿಲ್ಲ ಎನ್ನುವಂಥ ವಿತಂಡವಾದವನ್ನು ಮಂಡಿಸುತ್ತಿದ್ದಾರೆ. ಈಗಿರುವ ದೇಶಿ ಬೀಜದಿಂದ ಬದನೆ ಬೆಳೆದರೆ ಅದು ಕನಿಷ್ಠ ಎರಡೂವರೆ ತಿಂಗಳು ಸಮೃದ್ಧ ಬೆಳೆ ಕೊಡುತ್ತದೆ. ಆದರೆ ಬಿಟಿ ಬದನೆಗೆ ಅಂಥ ಶಕ್ತಿ ಇಲ್ಲ. ಅದು ಬೆ ಕೊಡುವ ಅವ ತೀರಾ ಕಡಿಮೆ. ನಂತರ ಬೀಜವನ್ನು ಅದರಿಂದ ಸಂಗ್ರಹಿಸುವಂತಿಲ್ಲ. (ಬೀಜವೇ ಇರುವುದಿಲ್ಲ)ಹಾಗೇನಾದರೂ ಮಾಡಿದರೆ ಅದು ಕಂಪನಿ ನಿಯಮದ ಉಲ್ಲಂಘನೆಯಾಗುತ್ತದೆ. ಕಂಪನಿ ಅಂತಾರಾಷ್ಟ್ರೀಯ ನ್ಯಾಯಾಲದಲ್ಲಿ ಮೊಕದಮೆ ದಾಖಲಿಸುತ್ತದೆ ಅಲ್ಲಿ ರೈತರು ಹೋರಾಡಬೇಕಾಗುತ್ತದೆ ಇದು ಸಾಧ್ಯವೆ?
ಅಗತ್ಯವೇನು?
ಬಿಟಿ ಉತ್ಪಾದನೆಯಿಂದ ಭಾರೀ ಲಾಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದು ನಿಜವಲ್ಲ ಎಂದು ಗೊತ್ತಿದ್ದರೂ ಒಲ್ಲದ ಮನಸ್ಸಿನಿಂದ ಒಪ್ಪೋಣ. ಆದರೆ ಇದುವರೆಗೂ ನಮ್ಮ ದೇಶದಲ್ಲಿ ಬದನೆ ಕೊರತೆಯೇ ಉಂಟಾಗಿಲ್ಲ. ಜಗತ್ತಿನಲ್ಲೇ ಭಾರತ ಅತಿ ಹೆಚ್ಚು ಬದನೆ ಬೆಳೆಯುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶಿ ತಳಿಯಲ್ಲೇ ನಾವು ಉನ್ನತವಾದದ್ದನ್ನು ಸಾಸಿದ್ದೇವೆ. ಆದ್ದರಿಂದ ಕುಲಾಂತರಿ ಅಗತ್ಯವೇನು? ನಮಗೆ ಬೇಕಾಗಿಯೇ ಇಲ್ಲದ ಕುಲಾಂತರಿ ತಂತ್ರಜ್ಞಾನದ ಬದನೆಯನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಈಗ ಇದನ್ನು ತಿನ್ನಿ ಎಂದು ಹೇಳುತ್ತಿರುವ ಕಂಪನಿಗಳು ಮುಂದೊಂದು ದಿನ ಇದನ್ನೇ ತಿನ್ನಬೇಕು ಎಂದು ಆಗ್ರಹಿಸಿದರೆ ಆಶ್ಚರ್ಯವಿಲ್ಲ. ನಮ್ಮ ಜುಟ್ಟನ್ನು ಬಂಡವಾಳಿಗರ ಕೈಗೆ ಕೊಡುವ ಮುನ್ನ ಕೊಂಚ ಯೋಚಿಸೋಣ.

No comments: