Monday, October 12, 2009

ನಮ್ಮ ಕೃಷಿ ಕ್ಷೇತ್ರ ಆ(ಹಾ)ಳುತ್ತಿವೆ ಬೀಜ ಕಂಪೆನಿಗಳು

ಸರಕಾರಿ ಬೀಜಗಳು ಶೇ. ೯೦ರಷ್ಟು ಹಾಗೇ ನಿಗಮಕ್ಕೆ ಹಿಂತಿರುಗುತ್ತವೆ. ಸರಕಾರಿ ಬೀಜಗಳು ಇದ್ದರೂ ಇಲ್ಲ ಎಂದು ರೈತರನ್ನು ವಾಪಸ್ ಕಳಿಸಿದ ನೂರಾರು ಉದಾಹರಣೆಗಳಿವೆಯಂತೆ. ರಾಜ್ಯದಲ್ಲಿ ೬೦ಕ್ಕೂ ಹೆಚ್ಚು ಕಂಪನಿಗಳು ರೈತರಿಗೆ ಬಿತ್ತನೆ ಬೀಜ ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿವೆ. ಅವೆಲ್ಲ ತಮ್ಮ ಕಂಪನಿ ಬೀಜಗಳನ್ನು ಮಾರಿಕೊಳ್ಳುತ್ತಿವೆ. ಇದರಿಂದ ಇಂದು ಶೇಕಡಾ ಐದರಷ್ಟು ಮಾತ್ರ ದೇಶಿ ಬೀಜಗಳ ಬಳಕೆಯಾಗುತ್ತಿದೆ. ಖಾಸಗಿಯವರ ಹಾವಳಿಯಿಂದ ಸರಕಾರದ ಗೋದಾಮುಗಳಲ್ಲಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜ ಹಾಗೇ ಕೊಳೆಯುತ್ತಿದೆ.

ಬಿತ್ತನೆ ಬೀಜ ಎನ್ನುವುದು ರೈತ ಸಮುದಾಯಕ್ಕೆ ಈಗ ಆಯ್ಕೆಯಾಗಿ ಉಳಿದಿಲ್ಲ. ಕಾರಣ ಹೆಚ್ಚು ಇಳುವರಿ, ಹೆಚ್ಚು ಲಾಭದ ಹೆಸರಿನಲ್ಲಿ ಖಾಸಗಿ ಕಂಪನಿಗಳು ಅವರನ್ನು ಮೋಸ ಮಾಡುವುದರ ಜತೆಗೆ ಅವರ ಆಯ್ಕೆಯ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿವೆ. ಮುಂಗಾರು ಆರಂಭವಾದಾಗ ಸಂಭ್ರಮಿಸುತ್ತಿದ್ದ ರೈತರು ಈಗ ಸಂಕಟ ಪಡುತ್ತಿದ್ದಾರೆ ಕಾರಣ, ಬಿತ್ತನೆ ಬೀಜ, ಗೊಬ್ಬರ! ಬಿತ್ತಿ ಬೆಳೆದು ಅನ್ನ ನೀಡುತ್ತೇವೆ. ಬೀಜ ಕೊಡಿ, ಗೊಬ್ಬರ ಕೊಡಿ ಎಂದು ಕೇಳಲು ಹೋದ ರೈತರ ಮೇಲೆ ಗೋಲಿಬಾರ್ ಮಾಡಿದ್ದು ಭಾರತದ ಕೃಷಿ ಕ್ಷೇತ್ರದ ದುರಂತ.
ತಮ್ಮ ಹೊಲದಲ್ಲಿ ಬೆಳೆದ ಬೆಳೆಯಿಂದ ಬೀಜ ಹಿಡಿದಿಟ್ಟುಕೊಂಡು ಅದರಿಂದ ಸಮೃದ್ಧ ಕೃಷಿ ಮಾಡುತ್ತಿದ್ದ ರೈತ ಸಮುದಾಯ ಇಂದು ಖಾಸಗಿ ಬೀಜ ಕಂಪನಿಗಳ ಬಾಗಿಲ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಬೀಜ ಕಂಪನಿಗಳ ಹಂಗಿನಿಂದ, ಸರಕಾರದ ಮುಲಾಜುಗಳಿಂದ ರೈತರು ಹೊರಬರಬೇಕಾದರೆ ಪಾರಂಪರಿಕ ಕೃಷಿಯತ್ತ ಗಮನಹರಿಸಬೇಕಾಗಿರುವುದು ಈ ಹೊತ್ತಿನ ತುರ್ತು ಅಗತ್ಯ. ಬಹುರಾಷ್ಟ್ರೀಯ ಬೀಜ ಕಂಪನಿಗಳ ಹಸ್ತಕ್ಷೇಪದಿಂದಾಗಿ ಇವತ್ತು ಇಡೀ ಕೃಷಿ ಕ್ಷೇತ್ರ ಅತಂತ್ರ ಸ್ಥಿತಿ ತಲುಪಿದೆ. ಹೀಗೆ ಅತಂತ್ರಸೃಷ್ಟಿಸಿ ತಮ್ಮ ವಸಾಹತು ಸ್ಥಾಪಿಸಿಕೊಳ್ಳುವುದೇ ಈ ಕಂಪೆನಿಗಳ ಹುನ್ನಾರ. ಹಸಿರು ಕ್ರಾಂತಿಯ ಹೆಸರಿನಲ್ಲಿ ಕಳೆದ ಮೂರೂವರೆ ದಶಕದಿಂದ ಭೂಮಿಗೆ ಸುರಿದ ಅಪಾರ ಪ್ರಮಾಣದ ಗೊಬ್ಬರ ಮತ್ತು ಕೀಟನಾಶಕಗಳಿಂದಾಗಿ ಅನ್ನಬೆಳೆಯುವ ಭೂಮಿಯೇ ವಿಷವಾಗಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಆಯ್ಕೆಗಳೂ ಕೂಡಾ ತುಂಬ ಸಂಕೀರ್ಣಗೊಂಡಿವೆ. ದೇಶದ ಜನಸಂಖ್ಯೆ ಏರುಗತಿಯಲ್ಲಿದ್ದಾಗ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಕೈಗೊಂಡ ನಿರ್ಧಾರಗಳು ಈಗ ವ್ಯತಿರಿಕ್ತ ಪರಿಣಾಮ ಬೀರತೊಡಗಿವೆ. ಜಾಗತೀಕರಣದ ದಿಡ್ಡಿಬಾಗಿಲು ತೆರೆದ ನಂತರವಂತೂ ಕೃಷಿ ಕ್ಷೇತ್ರ ಮಾಡು ಇಲ್ಲವೆ ಮಡಿ ಎನ್ನುವ ಹಂತಕ್ಕೆ ಬಂದು ನಿಂತಿವೆ.
ಆರಂಭದಲ್ಲಿ ದೊರೆತ ಇಳುವರಿ ಈಗ ಇಲ್ಲವಾಗಿದೆ, ರಾಸಾಯನಿಕ ಗೊಬ್ಬರಹಾಕದೇ ಭೂಮಿ ಬೆಳೆಯುತ್ತಿಲ್ಲ ಎಂಬ ಧ್ವನಿ ಈಗ ರೈತ ಸಮುದಾಯದಿಂದ ಕೇಳಿಬರತೊಡಗಿದೆ. ಆಳುವವರು ಇದನ್ನು ಅರ್ಥಮಾಡಿಕೊಂಡು ಸಹಜ ಮತ್ತು ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕಾಗಿದೆ. ಅದನ್ನೊಂದು ಆಂದೋಲನದ ಮಾದರಿಯಲ್ಲಿ ಮಾಡಿದರೆ ಮಾತ್ರ ಕೃಷಿಕ್ಷೇತ್ರವನ್ನು ಖಾಸಗಿ ದಲ್ಲಾಳಿಗಳ ಹಿಡಿತದಿಂದ ಪಾರುಮಾಡಬಹುದು. ಸಾವಯವ ಅಥವಾ ಸಹಜ ಕೃಷಿಯತ್ತ ಸಾಗುವುದು ಎಂದರೆ ಭಾರತದ ನೆಲಮೂಲ ಸಂಸ್ಕೃತಿಯನ್ನು ಸಂರಕ್ಷಿಸುವುದೆ ಆಗಿದೆ. ಇದರಿಂದ ಕೃಷಿ ಪರಂಪರೆಯನ್ನು ಕಾಯ್ದುಕೊಳ್ಳುವುದರ ಜತೆಗೆ ಅದನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು. ಇದರಲ್ಲಿ ಮಣ್ಣಿನ ಆರೋಗ್ಯ ಕಾಯುವ ಕೈಂಕರ್ಯ ಮಾತ್ರವಿಲ್ಲ, ದೇಶದ ನಾಗರಿಕರ ಆರೋಗ್ಯ ಕಾಪಾಡುವ ಮಹತ್ತರ ಜವಾಬ್ದಾರಿಯೂ ಇದೆ.
ಸಮಸ್ಯೆಯ ಆಳ ಅಗಲಗಳನ್ನು ಅರಿತು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲಾಗದ ನಮ್ಮ ಆಡಳಿತ ವ್ಯವಸ್ಥೆ ಅದನ್ನು ಬರಿದೇ ಮುಂದೊತ್ತಲು ತೊಡಗುತ್ತದೆ. ಅದರ ಒಂದು ಭಾಗವೇ ಖಾಸಗೀಕರಣ. ಆಹಾರ ಸಾರ್ವಭೌಮತ್ವದ ಹೆಸರಿನಲ್ಲಿ ದೇಶ ಪ್ರವೇಶ ಮಾಡಿದ ಖಾಸಗಿ ಬೀಜ ಮತ್ತು ಗೊಬ್ಬರ ಕಂಪನಿಗಳು ಇಂದು ಇಡೀ ಕೃಷಿ ಕ್ಷೇತ್ರವನ್ನು ಆ(ಹಾ)ಳತೊಡಗಿವೆ ಎಂದರೆ ದುಬಾರಿ ಮಾತಾಗಲಾರದು. ದೇಶ ಆಹಾರ ಸಾರ್ವಭೌಮತ್ವ ಕಾಪಾಡುವ ಜವಾಬ್ದಾರಿ ಹೊತ್ತಾಗಲೇ ಬೀಜ ಸ್ವಾತಂತ್ರ್ಯಮತ್ತು ರಕ್ಷಣೆಯ ಕಡೆಗೂ ಗಮನನೀಡಬೇಕಾಗಿತ್ತು. ಅಂಥ ಕ್ರಮಗಳನ್ನು ಕೈಗೊಳ್ಳದ ಕಾರಣ ಬಹುರಾಷ್ಟ್ರೀಯ ಕಂಪೆನಿ ಬೀಜಗಳು ಇಂದು ನಮ್ಮ ಪಾರಂಪರಿಕ ಕೃಷಿ ಪದ್ಧತಿಯನ್ನು ಮಾತ್ರವಲ್ಲ ರೈತ ಸಮುದಾಯದ ಸ್ವಾಭಿಮಾನವನ್ನೇ ನಾಶ ಮಾಡಲು ಮುಂದಾಗಿವೆ.
ಕಳೆದ ಹತ್ತು ವರ್ಷಗಳಿಂದೀಚೆಗೆ ಬೀಜ ಕಂಪನಿಗಳು ಮಾಡಿದ ಮೋಸಕ್ಕೆ ಲೆಕ್ಕವೇ ಇಲ್ಲ. ಆದರೂ ನಮ್ಮ ಜನನಾಯಕರೆನಿಸಿಕೊಂಡವರಿಗೆ, ರೈತರ ಪರವಾಗಿ ಉದ್ದುದ್ದ ಭಾಷಣ ಮಾಡುವವರಿಗೆ ಇಂಥ ವಿಚಾರಗಳು ತಿಳಿಯುವುದೇ ಇಲ್ಲ. ಆದ್ದರಿಂದಲೇ ಎಲ್ಲ ಸವಲತ್ತುಗಳನ್ನು ‘ಖಾಸಗಿ ಯಜಮಾನರ’ ಕೈಗೆ ನೀಡಲು ಮುಂದಾಗಿದ್ದಾರೆ. ಈಗ ಖಾಸಗಿ ಕಂಪನಿಗಳ ಬಿತ್ತನೆ ಬೀಜಗಳನ್ನು ಕರ್ನಾಟಕ ಬೀಜ ನಿಗಮದ ಕಚೇರಿಯಲ್ಲೇ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಕರ್ನಾಟಕ ರಾಜ್ಯ ಬೀಜ ನಿಗಮ ರಾಜ್ಯದಲ್ಲಿ ಸ್ಥಾಪಿಸಿರುವ ೩೦ ಕೇಂದ್ರಗಳಲ್ಲೂ ಖಾಸಗಿ ಕಂಪನಿಗಳು ಬೀಜಗಳನ್ನು ಮಾರಾಟ ಮಾಡಬಹುದು. ಅಂದರೆ ಖಾಸಗೀಕರಣ ಕೃಷಿ ಕ್ಷೇತ್ರವನ್ನು ಮಾತ್ರ ಪ್ರವೇಶ ಮಾಡಿಲ್ಲ. ಆ ಮೂಲಕ ಸರಕಾರದಲ್ಲೂ ಪ್ರವೇಶ ಮಾಡಿದೆ ಎಂದಾಯಿತು!
‘ಆಡಳಿತದಲ್ಲಿರುವವರು ಒಂದಲ್ಲ ಒಂದು ಕಾರಣಕ್ಕೆ ಖಾಸಗಿ ಬೀಜ ಕಂಪನಿಗಳ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ, ೧೯೯೫ರಿಂದ ಈಚೆಗೆ ಇದು ಹೆಚ್ಚಿದೆ. ಅವರ ಕುಮ್ಮಕ್ಕಿನಿಂದಲೇ ಬೀಜ ಮಾರುವವರು ಕೊಬ್ಬಿದ್ದಾರೆ. ಆಡಳಿತ ವ್ಯವಸ್ಥೆ ಸುಧಾರಣೆಯಾಗಬೇಕು, ಆಯಾ ಕ್ಷೇತ್ರದಲ್ಲಿ ಅನುಭವವಿರುವವರು ಮಂತ್ರಿಗಳಾಗಬೇಕು. ಆದರೆ ಈಗ ಹಾಗಾಗುತ್ತಿಲ್ಲ. ಹಣವಿದ್ದವರು ಏನುಬೇಕಾದರೂ ಆಗಬಹುದು ಎಂಬ ವಾತಾವರಣವಿದೆ, ಇದು ಬದಲಾಗಬೇಕು. ಇಲ್ಲಿ ಅಕಾರಿಗಳನ್ನು ದೂರುವುದರಲ್ಲಿ ಅರ್ಥವಿಲ್ಲ. ತಲೆಗೆ ನೀರು ಹಾಕಿದರೆ ಅದು ತಾನಾಗಿಯೇ ಕಾಲಿಗಿಳಿಯುತ್ತದೆ ಆದರೆ ಈಗ ಕಾಲಿಗೆ ನೀರು ಹಾಕಿ ತಲೆಗೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂಥ ಯತ್ನಗಳು ಫಲ ನೀಡುವುದಿಲ್ಲ ಹಾಗೆ ಮಾಡಿದರೆ ಕೊಳೆ ತೆಗೆದಂತಾಗುವುದಿಲ್ಲ ಬದಲಿಗೆ ಧೂಳು ಬರೀ ಧೂಳು ಕೊಡವಿದಂತಾಗುತ್ತದೆ ಅಷ್ಟೇ’ ಎಂದು ಹೆಸರು ಹೇಳಲಿಚ್ಛಿಸದ ಸರಕಾರಿ ಅಕಾರಿಯೊಬ್ಬರು ಹೇಳಿದರು. ಅವರ ಮಾತು ನಿಜ. ಇನ್ನೊಂದು ವಿಚಾರ ಎಂದರೆ ರಾಜ್ಯ ಬೀಜ ನಿಗಮದ ಕಚೇರಿಯಲ್ಲೇ ಖಾಸಗಿ ಕಂಪನಿ ಬೀಜಗಳನ್ನೂ ಮಾರಲಾಗುತ್ತದೆ ಮಾರಾಟಕ್ಕೆ ಕಳಿಸಿದ ಸರಕಾರಿ ಬೀಜಗಳು ಶೇ. ೯೦ರಷ್ಟು ಹಾಗೇ ಹಿಂತಿರುಗುತ್ತವೆ. ಅಲ್ಲಿ ಖಾಸಗಿ ಬೀಜಗಳು ಮಾತ್ರ ಮಾರಾಟವಾಗುತ್ತವೆ. ಅಕಸ್ಮಾತ್ ಸರಕಾರಿ ಬೀಜಗಳು ಇದ್ದರೂ ಇಲ್ಲ ಎಂದು ರೈತರನ್ನು ವಾಪಸ್ ಕಳಿಸಿದ ನೂರಾರು ಉದಾಹರಣೆಗಳಿವೆಯಂತೆ. ರಾಜ್ಯದಲ್ಲಿ ೬೦ಕ್ಕೂ ಹೆಚ್ಚು ಕಂಪನಿಗಳು ರೈತರಿಗೆ ಬಿತ್ತನೆ ಬೀಜ ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿವೆ. ಅವೆಲ್ಲ ತಮ್ಮ ಕಂಪನಿ ಬೀಜಗಳನ್ನು ಮಾರಿಕೊಳ್ಳುತ್ತಿವೆ. ಇದರಿಂದ ಇಂದು ಶೇಕಡಾ ಐದರಷ್ಟು ಮಾತ್ರ ದೇಶಿ ಬೀಜಗಳ ಬಳಕೆಯಾಗುತ್ತಿದೆ. ಖಾಸಗಿಯವರ ಹಾವಳಿಯಿಂದ ಸರಕಾರದ ಗೋದಾಮುಗಳಲ್ಲಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜ ಹಾಗೇ ಕೊಳೆಯುತ್ತಿದೆ.
ಕಂಪನಿಗಳ ಇಂಥ ಮೋಸದ ವಿಚಾರಗಳನ್ನು ಬಹಳ ಮೊದಲೇ ಅರ್ಥ ಮಾಡಿಕೊಂಡ ಜಾಂಬಿಯಾ, ಜಿಂಬಾಬ್ವೆ, ಇಂಡೋನೇಷ್ಯಾದಂಥ ಸಣ್ಣ ದೇಶಗಳು ಹತ್ತು ವರ್ಷಗಳ ಹಿಂದೆಯೇ ಬಿ.ಟಿ. (ಬ್ಯಾಸಿಲ್ಲಸ್ ತುರಿಂಜೆನಿಸಿಸ್) ಬೀಜಗಳಿಗೆ ವಿದಾಯಹೇಳಿದ್ದವು. ಅದಕ್ಕೂ ಮೊದಲು ಐದಾರು ವರ್ಷ ಈ ಬೀಜಗಳನ್ನು ಬಳಸಿದ್ದರಿಂದ ಭೂಮಿಯ ಫಲವತ್ತತೆಯ ಮೇಲೆ ಬೀರಿದ್ದ ಅಡ್ಡ ಪರಿಣಾಮಗಳನ್ನು ಮನಗಂಡು ಅಲ್ಲಿನ ರೈತರು ಈ ನಿರ್ಧಾರಕ್ಕೆ ಬಂದಿದ್ದರು. ನಂತರ ರೈತರು ಸ್ಥಳೀಯವಾಗಿ ತಾವೇ ಸಿದ್ಧಪಡಿಸಿಕೊಂಡ ಬೀಜದಿಂದ ಸಮೃದ್ಧ ಕೃಷಿ ಮಾಡಿದ್ದರಿಂದ ಆ ದೇಶಗಳಲ್ಲಿ ಕಂಪನಿ ಬೀಜಗಳಿಗೆ ಬಹುತೇಕ ಪೂರ್ಣ ವಿರಾಮ ಬೀಳತೊಡಗಿದೆ. ಈಗ ಉತ್ತರ ಅಮೆರಿಕದ ವೆನಿಜುವೆಲಾ, ಬೊಲಿವಿಯಾ, ಪೆರು ಮುಂತಾದ ಸಣ್ಣ ದೇಶಗಳೂ ಇದೇ ದಾರಿಯಲ್ಲಿ ಸಾಗುತ್ತಿವೆ. ಅಲ್ಲಿನ ಸರಕಾರಗಳೂ ಕೂಡ ರೈತರ ಈ ನಿರ್ಧಾರಗಳನ್ನು ಬೆಂಬಲಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಅಕಾರದ ಚುಕ್ಕಾಣಿ ಹಿಡಿದವರು ಬಹುರಾಷ್ಟ್ರೀಯ ಕಂಪನಿಗಳ ಬಾಲಂಗೋಚಿಗಳಾಗುತ್ತಿರುವುದು ಮತ್ತು ಸಮಸ್ಯೆಯ ಬಗ್ಗೆ ಸ್ಪಷ್ಟ ಅರಿವಿಲ್ಲದವರು ಪ್ರಮುಖ ಸ್ಥಾನಗಳಲ್ಲಿ ಕೂರುತ್ತಿರುವುದರಿಂದ ಪರಿಹಾರ ಕಷ್ಟಸಾಧ್ಯವಾಗಿದೆ.
ಬೀಜ ವಾಮಾಚಾರದ ಇನ್ನೊಂದು ಮುಖವೇ ಕುಲಾಂತರಿ ತಂತ್ರeನ! ಇದು ಮನುಷ್ಯನನ್ನು ನಿಂತ ಜಾಗದಲ್ಲೇ ರಾಕ್ಷಸನನ್ನಾಗಿಸುವ ಯತ್ನ. ಬೇರೆ ಜೀವಿಯ ವಂಶವಾಹಿ ಜೀನು ಬಳಸಿ ತಯಾರಿಸುವ ಈ ಕುಲಾಂತರಿ ತಂತ್ರeನದಿಂದ ಇಡೀ ಮಾನವ ಕುಲವೇ ಅತಂತ್ರವಾಗುವ ಹಾಗಾಗಿದೆ. ಮೈಮೇಲೆ ಪಟ್ಟಿ ಇದ್ದರೆ ಹೇಸರುಗತ್ತೆ ಇಲ್ಲದೆ ಇದ್ದರೆ ಕತ್ತೆ ಎಂದು ಹೇಗೆ ವಿಂಗಡಿಸಿ ಹೇಳಬಹುದೋ ಹಾಗೆಯೇ ಕುಲಾಂತರಿ ತಳಿ ಕೂಡ. ಈ ಆಹಾರದಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆದು ಅವು ಇದನ್ನು ‘ಕುಲಗೆಟ್ಟ ತಂತ್ರeನ’ಎಂದು ಹೇಳಿವೆ. ಇದರ ಸಂಶೋಧನೆ ಅನಿವಾರ್ಯವಲ್ಲ ಎಂದು ಯೂರೋಪಿನ ಒಕ್ಕೂಟ ಮುಂದೂಡಿದೆ. ಆದರೂ ಕಂಪನಿಗಳು ಮಾತ್ರ ಇದರಿಂದ ಹಿಂದೆ ಸರಿಯುತ್ತಿಲ್ಲ. ಬದನೆಕಾಯಿ ಗಿಡದ ಬೇರಿನಲ್ಲೆ ಆಲೂಗಡ್ಡೆ ಬೆಳೆಯಬಹುದು ಎಂಬ ಯೋಚನೆಯನ್ನೂ ಮಾಡಲಾಗಿತ್ತಂತೆ! ಆದರೆ ಯಾಕೋ ಅದು ಫಲ ಕೊಡಲಿಲ್ಲ ಎಂದು ತೆಪ್ಪಗಾಗಿರಬಹುದು. ಮಾವಿನ ಮರದಲ್ಲೇ ತೆಂಗಿನಕಾಯಿ ಬಿಡುವ ತಂತ್ರ ಕಂಡುಹಿಡಿದರೆ ನಾವು ‘ಮಾತೆಂಗಿನಕಾಯಿ’ ತಿನ್ನಬಹುದು!
ಕುಲಾಂತರಿ ತಂತ್ರeನ ಕುರಿತು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಇತ್ತೀಚೆಗೆ ‘My right to safe food' ‘ಸುರಕ್ಷಿತ ಆಹಾರ ನನ್ನ ಹಕ್ಕು’ ಸಾಕ್ಷ್ಯ ಚಿತ್ರದಲ್ಲಿ ನಾಡಿನ ಖ್ಯಾತ ಆಹಾರ ನೀತಿಜ್ಞ ದೇವಿಂದರ್ ಶರ್ಮ, ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕುಲಾಂತರಿ ಆಹಾದದಿಂದ ಆಗಬಹುದಾದ ಅನಾಹುತಗಳನ್ನು ವಿವರಿಸಿದ್ದಾರೆ. ಶ್ರೀ ಶ್ರೀಯವರಂತೂ ಇದನ್ನು ಜೈವಿಕ ಭಯೋತ್ಪಾದನೆ (Bio terrorism) ಎಂದು ತೀಕ್ಷ್ಣವಾಗಿ ವ್ಯಾಖ್ಯಾನಿಸಿದ್ದಾರೆ. ಹೀಗೆ ನಾಡಿನ ಚಿಂತಕರಿಂದ, ಕೃಷಿಕರಿಂದ ತಿರಸ್ಕೃತಗೊಂಡ ತಂತ್ರeನ ದೇಶದಿಂದ ತೊಲಗುತ್ತಿಲ್ಲ ವೇಕೆ ಎನ್ನುವುದೇ ಆಶ್ಚರ್ಯಕರ ಸಂಗತಿ.

No comments: