Monday, October 12, 2009

ವಿದೇಶದಲ್ಲೂ ಹೂಡಿಕೆಯಾಗುತ್ತಿದೆ ‘ಶೂನ್ಯ ಬಂಡವಾಳ’

ಶ್ರೀಲಂಕಾದಲ್ಲೂ ‘ಪಾಳೇಕಾರಿಕೆ’
ಸಹಜ, ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಪದ್ಧತಿಗಳು ಹಿಂದಿನಿಂದ ಇದ್ದವಾದರೂ, ಕೃಷಿ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಇವೆಲ್ಲ ಅಪರಿಚಿತ ಎನ್ನುವಂತೆ ಮಾಡಿವೆ. ಬಂಡವಾಳ ಅಥವಾ ಆಧುನಿಕ ಕೃಷಿ ನೀತಿಯಿಂದ ರೋಗಗ್ರಸ್ತವಾಗಿರುವ ಭಾರತೀಯ ಸಮಾಜವನ್ನು ಆರೋಗ್ಯ ಪೂರ್ಣಗೊಳಿಸಲು ಸುಭಾಷ್ ಪಾಳೇಕಾರ್ ಆರಂಭಿಸಿರುವ ‘ಶೂನ್ಯ ಬಂಡವಾಳ’ ಕೃಷಿ ಈಗ ನೆರೆ ರಾಷ್ಟ್ರ ಶ್ರೀಲಂಕಾದಲ್ಲೂ ಹೆಚ್ಚು ಪ್ರಚಾರ ಪಡೆಯುತ್ತಿದೆ.
ಕೃಷಿ ಕಲುಷಿತವಾದರೆ ಇಡೀ ಸಮಾಜ ರೋಗಪೀಡಿತವಾಗುತ್ತದೆ ಎಂಬ ಅರಿವು ಕ್ರಮೇಣ ಜನರಲ್ಲಿ ಮೂಡತೊಡಗಿದೆ. ಆದ್ದರಿಂದ ಅಡ್ಡ ಪರಿಣಾಮವಿಲ್ಲದ ಆಹಾರಗಳತ್ತ ಜನ ಯೋಚಿಸುತ್ತಿದ್ದಾರೆ. ಇದಕ್ಕೆ ದೇಶ, ಭಾಷೆಯ ಗಡಿ ಇಲ್ಲ. ಈ ‘ಆರ್ಗ್ಯಾನಿಕ್ ಆಹಾರ’ವನ್ನೇ ಹಳೇ ತಲೆಮಾರಿನ ಜನ ‘ರೋಗವಿಲ್ಲದ ಆಹಾರ’ ಎಂದಿದ್ದರು. ಹೆಚ್ಚು ಇಳುವರಿ, ಹೆಚ್ಚು ಲಾಭ ಎಂಬ ಭ್ರಮೆಯಿಂದ ಸಹಜ ಆಹಾರ, ಸಹಜ ಜೀವನದತ್ತ ರೈತರು, ಬಳಕೆದಾರರು ಮರಳುತ್ತಿದ್ದಾರೆ.
ಭಾರತದಾದ್ಯಂತ ಸುದ್ದಿ ಮಾಡಿರುವ ಪಾಳೇಕಾರರ ‘ಶೂನ್ಯ ಬಂಡವಾಳ’ ಈಗ ಶ್ರೀಲಂಕಾದಲ್ಲೂ ಹೂಡಿಕೆಯಾಗುತ್ತಿದೆ. ಕೊಲಂಬೋದ ವಿeನಿ, Center for sustainable agirculture research and development ಸಂಸ್ಥೆಯ ಸಹಯೋಗದಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಭೂಮಿ ಮತ್ತು ಕೃಷಿ ಸುಧಾರಣಾ ಆಂದೋಲನ ರಾಷ್ಟ್ರೀಯ ಸಂಚಾಲಕ ಡಾ. ಲಿಯೊನೆಲ್ ವಿರಾಕೂನ್ ನಾಗಪುರದಲ್ಲಿ ಪಾಳೇಕಾರರನ್ನು ಭೇಟಿ ಮಾಡಿ, ಶೂನ್ಯ ಬಂಡವಾಳ ಕೃಷಿಯ ಮಾಹಿತಿ ಪಡೆದರು. ನೀರಿನ ಮಿತಬಳಕೆ, ಕಡಿಮೆ ಖರ್ಚು, ಜೀವ ವೈವಿಧ್ಯಕ್ಕೆ ಧಕ್ಕೆಯಾಗದ ಈ ಕೃಷಿ ಪದ್ಧತಿಯಿಂದ ಪ್ರಭಾವಿತರಾಗಿ, ತಮ್ಮ ದೇಶದಲ್ಲೂ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಶೂನ್ಯ ಬಂಡವಾಳ ಕೃಷಿ ಕುರಿತು ಅವರು ಮಾತನಾಡಿದ್ದು ಹೀಗೆ: ರಾಸಾಯನಿಕ ಕೃಷಿಯಿಂದ ರೈತ ಸಮುದಾಯ ನಷ್ಟ ಮಾತ್ರ ಅನುಭವಿಸುತ್ತಿಲ್ಲ. ಸಾಲ ಬಾಧೆ ತಾಳದೆ ಆತ್ಮಹತ್ಯೆಗೂ ಶರಣಾಗುತ್ತಿದೆ. ಇದಕ್ಕೆ ಕಾರಣ, ಕೃಷಿಗೆ ತೊಡಗಿಸುತ್ತಿರುವ ಬಂಡವಾಳ ಹಿಂತಿರುಗುತ್ತಿಲ್ಲ. ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರದಿಂದ ಭೂಮಿಯೂ ವಿಷವಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಂಡವಾಳವಿಲ್ಲದ, ಜೈವಿಕ ಕ್ರಿಯೆಗೆ ಧಕ್ಕೆಯಾಗದಂಥ ಕೃಷಿ ಪದ್ಧತಿ ಅನಿವಾರ್ಯ. ಆದ್ದರಿಂದ ಭಾರತದಲ್ಲಿ ಪಾಳೇಕಾರ್ ಆರಂಭಿಸಿರುವ ಶೂನ್ಯ ಬಂಡವಾಳ ಕೃಷಿಯನ್ನು ಅರಿಯಲು ಮೂರು ದಿನ ನಾಗಪುರದಲ್ಲಿದ್ದೆ. ನಿಜಕ್ಕೂ ಅದೊಂದು ಅದ್ಭುತ ಕೃಷಿ ಪದ್ಧತಿ. ಅದನ್ನು ನಾವೂ ನಮ್ಮ ಸಂಸ್ಥೆಯ ಮೂಲಕ ಜಾರಿಗೆ ತರಲು ನಿರ್ಧರಿಸಿದ್ದೇವೆ.
೧೫ ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮ ಸಂಸ್ಥೆಯಲ್ಲಿ ಐದು ಸಾವಿರ ಸದಸ್ಯರಿದ್ದು, ೩,೫೦೦ ಮಂದಿ ಈಗಾಗಲೇ ಸುಸ್ಥಿರ ಕೃಷಿಯಲ್ಲಿ ತೊಡಗಿ ಉತ್ತಮ ಫಲ ಪಡೆದಿದ್ದಾರೆ. ಶೂನ್ಯ ಬಂಡವಾಳ ಕೃಷಿಯಲ್ಲೂ ಅವರನ್ನು ತೊಡಗಿಸುವ ಯೋಚನೆ ಇದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪಾಳೇಕಾರರನ್ನು ನಮ್ಮ ದೇಶಕ್ಕೆ ಕರೆಸುವುದೋ ಅಥವಾ ನಮ್ಮ ರೈತರನ್ನು ಭಾರತಕ್ಕೆ ಕಳಿಸುವುದೋ ಎನ್ನುವುದನ್ನು ಸಂಸ್ಥೆಯ ಸದಸ್ಯರೆಲ್ಲ ಸೇರಿ ತೀರ್ಮಾನಿಸುತ್ತೇವೆ.
ಹಸಿರು ಕ್ರಾಂತಿಯಿಂದ ಬಂಡವಾಳ ಕೃಷಿ ಆರಂಭವಾಯಿತು. ಇದರಿಂದ ದೇಶಿ ಕೃಷಿ ಪದ್ಧತಿ, ಪಾರಂಪರಿಕ eನ ನಿರ್ಲಕ್ಷ್ಯಕ್ಕೊಳಗಾಯಿತು. ಅದರ ಪುನರುತ್ಥಾನಕ್ಕೆ ಸುಸ್ಥಿರ ಕೃಷಿ ಪದ್ಧತಿಯಂಥ ಮಾರ್ಗಗಳು ಅನಿವಾರ್ಯ ಎಂಬುದನ್ನು ಮನಗಂಡಿದ್ದೇವೆ. ಜಾಗತೀಕರಣವನ್ನು ವಿಶ್ವ ವಾಣಿಜ್ಯ ಸಂಸ್ಥೆ ಮೂಲಕ ಬಡ ದೇಶಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಯಿತು. ಈಗಲೂ ಅಂಥ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚು ತೊಂದರೆಗೊಳಗಾಗಿದ್ದಾರೆ. ಅನೇಕ ಸಂದರ್ಭದಲ್ಲಿ ಸರಕಾರದ ಯೋಜನೆಗಳೂ ರೈತ ವಿರೋಯಾಗಿರುತ್ತವೆ. ಇದರಿಂದ ಆಗುವ ಅನ್ಯಾಯಗಳಬಗ್ಗೆ ರೈತರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಜೈವಿಕ ಇಂಧನ ಬಳಕೆಯಂಥ ವಿಚಾರಗಳಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ ನಮ್ಮೊಂದಿಗೆ ಸಹಕಾರ ನೀಡುತ್ತಿದೆ. ಇದರಿಂದ ವಾತಾವರಣ ಕಲುಷಿತವಾಗದಂತೆ ತಡೆಯುವ ಕುರಿತು ಹಲವಾರು ಕಾರ್ಯಕ್ರಮಗಳನ್ನೂ ಮಾಡಿದ್ದೇವೆ.
ಬಹುರಾಷ್ಟ್ರೀಯ ಕಂಪನಿಗಳ ಬೀಜದಿಂದ ಆಗುತ್ತಿರುವ ತೊಂದರೆಗಳು, ಕುಲಾಂತರಿ ವಂಶವಾಹಿಗಳು ಮನುಷ್ಯನ ಮೇಲೆ ಬೀರುವ ದುಷ್ಪರಿಣಾಮ ಕುರಿತು ಅಧ್ಯಯನ ನಡೆಸಿ ಜಾಗೃತಿ ಮೂಡಿಸುವುದು,ರಾಸಾಯನಿಕಗಳ ಬಳಕೆಯಿಂದ ಜೀವ ವೈವಿಧ್ಯ ನಾಶ ಕುರಿತು ಮಾಹಿತಿ ನೀಡುವುದು,ಆಹಾರ ಸಾರ್ವಭೌಮತ್ವ, ಭೂಮಿ ಮೇಲಿನ ರೈತರ ಹಕ್ಕು ಕುರಿತು ಮಾಹಿತಿ ನೀಡುತ್ತಿದ್ದೇವೆ. ರಾಷ್ಟ್ರೀಯ ಕೃಷಿಕರ ಒಕ್ಕೂಟದಡಿಯ ೪೦೦ ಸರಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ನಮ್ಮ ಜತೆ ಕೈ ಜೋಡಿಸಿವೆ.
ಕೇವಲ ೧೦ ಸಂಸ್ಥೆಗಳು ವಿಶ್ವಕ್ಕೇ ಬೀಜ ಸರಬರಾಜು ಮಾಡುತ್ತಿವೆ. ಇದರಿಂದ ಕೃಷಿ ಕ್ಷೇತ್ರ ಕೆಲವೇ ಜನರ ಸ್ವತ್ತಾಗುವ, ಏಕಸ್ವಾಮ್ಯಕ್ಕೆ ಒಳಗಾಗುವ ಅಪಾಯಗಳನ್ನು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಬಂಡವಾಳಶಾಹಿಗಳ ಹಿಡಿತದಿಂದ ಕೃಷಿ ಕ್ಷೇತ್ರವನ್ನು ಪಾರು ಮಾಡಲು ಹಂಚಿಕೊಳ್ಳುವ ವ್ಯವಸ್ಥೆ ಅಥವಾ ಕೊಡು ಕೊಳು ಪದ್ಧತಿಯ ಪುನರ್ ಸ್ಥಾಪನೆ ಪ್ರಯೋಗ ಯಶಸ್ಸು ಸಾಸಿದೆ. ಹೆಚ್ಚು ಜನಸಂಖ್ಯೆಯಿರುವ ಹಳ್ಳಿಗಳೇ ಹೆಚ್ಚು ಬಳಕೆದಾರರನ್ನೂ ಹೊಂದಿದ್ದು, ವ್ಯಾಪಾರಿ ಮತ್ತು ಬಳಕೆದಾರರ ನಡುವೆ ಇದ್ದ ದಲ್ಲಾಳಿಗಳ ಹಾವಳಿ ತಡೆದಿದ್ದೇವೆ. ಇದರಿಂದ ಗ್ರಾಹಕರು ಮತ್ತು ರೈತರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು, ಹಳ್ಳಿಗಳು ಆರ್ಥಿಕವಾಗಿ ಸದೃಢವಾಗುತ್ತಿವೆ.
ಭಾರತದಲ್ಲೂ ಶೂನ್ಯ ಬಂಡವಾಳ ಕೃಷಿಯಿಂದ ಆನೇಕರು ಆರ್ಥಿಕ ಸ್ವಾವಲಂಬಿಗಳಾಗಿರುವುದನ್ನು ಕಂಡಿದ್ದೇವೆ. ಇಂಥ ಪರಿಸರ ಸ್ನೇಹಿ ಕೃಷಿಯಿಂದ ಮಾತ್ರ ರೈತರು ಆತ್ಮಗೌರವದಿಂದ ಬದುಕಲು ಸಾಧ್ಯ. ಮೈಸೂರು ಸುತ್ತಮುತ್ತಲ ಪ್ರದೇಶದಲ್ಲಿ ಈ ಪದ್ಧತಿಯಲ್ಲಿ ಬೆಳೆದ ಭತ್ತ, ರಾಗಿ, ಜೋಳ, ಕಬ್ಬು, ಬದನೆ, ಬೆಂಡೆ ಮತ್ತಿತರ ಬೆಳೆ ನೋಡಿದಾಗ ನನಗೆ ಆಶ್ಚರ್ಯವಾಯಿತು. ಬಹು ಸಾಲು ಪದ್ಧತಿಯನ್ನೂ ಅಳವಡಿಸಿಕೊಂಡಿರುವುದು ಇದರ ವಿಶೇಷ. ಈ ಕ್ರಮಗಳನ್ನು ಶ್ರೀಲಂಕಾದಲ್ಲೂ ಅಳವಡಿಸುತ್ತೇವೆ. ಇಂಥ ಪರ್ಯಾಯ ದಾರಿಗಳ ಮೂಲಕವಷ್ಟೇ ರೈತರು ಜಾಗತೀಕರಣದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಎಂದರು. ಒಟ್ಟಿನಲ್ಲಿ ಸರಳ ಕೃಷಿ ಪದ್ಧತಿಗಳು ಎಲ್ಲೆಡೆ ಬಳಕೆಗೆ ಬರುತ್ತಿರುವುದು ಸಂತೋಷದ ವಿಚಾರ.

No comments: