Monday, October 12, 2009

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ
ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು ರಾಜಕಾರಣ ಮಾಡುವುದು ಎಂದರೆ ಪೂರ್ವ ಪಶ್ಚಿಮಗಳು ಒಂದಾದಂತೆ ಎನ್ನುವ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಆ ಕ್ಷೇತ್ರದಲ್ಲಿರುವ ಪ್ರಾಮಾಣಿಕರನ್ನೂ ಸಮಾಜ ಅದೇ ದೃಷ್ಟಿಯಿಂದ ನೋಡುತ್ತಿದೆ. ರಾಜಕಾರಣಿ ಇದ್ದದ್ದನ್ನು ಇಂದ್ದಂತೆ ಹೇಳುವುದು ಅದನ್ನು ಅರಗಿಸಿಕೊಳ್ಳುವು ಒಂದು ರೀತಿಯ ಸವಾಲು. ಕಾರಣ, ಪ್ರಾಮಾಣಿಕತೆ-ರಾಜಕಾರಣದ ನಡುವೆ ಇರುವ ಕಂದರ ಅಷ್ಟು ದೊಡ್ಡದು. ವಕ್ ಮತ್ತು ಹಜ್ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ಅವರದು ವಿಶೇಷ ವ್ಯಕ್ತಿತ್ವ. ಸಧ್ಯದ ರಾಜಕಾರಣದಲ್ಲಿರುವ ಸಾಹಿತಿಯೂ ಆಗಿರುವ ಅವರು ಸತ್ಯದ ಕಹಿಗಳನ್ನು ಹೇಳುವಾಗ ಅದರ ಎಡಬಲಗಳನ್ನು ಯೋಚಿಸುವುದೇ ಇಲ್ಲ.
ಇವರು ಆಡಿದ ಮಾತುಗಳು ಮತಾಂಧರೂ ಸೇರಿದಂತೆ ಹಲವರ ಟೀಕೆಗೆ ಗುರಿಯಾಗಿವೆ. ಇವರ ನೇರ ಮಾತು, ಪ್ರಾಮಾಣಿಕತೆಯೇ ದೌರ್ಭಲ್ಯಗಳಾಗಿಯೂ ಕಂಡ ಉದಾಹರಣೆಗಳಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿ, ‘ಜಿಲ್ಲಾಡಳಿತದ ಬಿಗಿಯಿಲ್ಲದೆ ತಾಲೂಕಿನಲ್ಲಿ ಅಕಾರಿಗಳು ಭ್ರಷ್ಟರಾಗಿದ್ದಾರೆ ಇದರಿಂದ ಜನಸಾಮಾನ್ಯರ ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು. ಇದನ್ನು ಕೇಳಿದ ಸಚಿವರು, ‘ಸರಕಾರ ಹಾಗೂ ಅಕಾರಿಗಳಿರೋದು ಅಕಾರದಲ್ಲಿರೊರ ಪರವೇ ಹೊರತು ಸಾಮಾನ್ಯ ಜನರಪರವಾಗಿ ಅಲ್ಲ. ಆದ್ದರಿಂದ ಏನ್ಮಾಡೋದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ’ ಎಂದು ಪ್ರೊಫೆಸರ್ ಆಳುವವರ ಧೋರಣೆಗಳನ್ನು ತಣ್ಣಗೆ ಬಿಚ್ಚಿಟ್ಟರು. ಅದಕ್ಕೆ ಸುಮ್ಮನಾಗದ ಕಾರ್ಯಕರ್ತರು, ‘ಅಲ್ಲ ಸಾರ್ ಖಾತೆ ಮಾಡೋದಕ್ಕೂ ಹಣ ಕೇಳ್ತಾರೆ, ಹಣ ಕೊಟ್ಟರೂ ಕೆಲವರು ಕೆಲ್ಸ ಮಾಡ್ತಿಲ್ಲ ಹಿಂಗಾದ್ರೆ ಹೆಂಗೆ’ ಎಂದು ಮರುಪ್ರಶ್ನೆ ಹಾಕಿಯೇಬಿಟ್ಟರು ಅದಕ್ಕೆ ಸಚಿವರು, ‘ಅಯ್ಯೊ ನಿಮ್ಮದು ಇರಲಿ, ದೇವನಹಳ್ಳಿ ಬಳಿ ಇರೋ ನನ್ನ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟು ಮೂರು ವರ್ಷ ಕಳೆದರೂ ಕೆಲಸ ಆಗಲಿಲ್ಲ. ನಾನು ಮಿನಿಷ್ಟ್ರಾದ ಮೇಲೆ ಖಾತೆ ಮಾಡಿಸಿಕೊಂಡೆ ಏನ್ಮಾಡೋದು ಹೇಳಿ’ ಎಂದು ಕೇಳಿರು ಇದರಿಂದ ದೂರು ನೀಡಲುಹೋಗಿದ್ದವರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರು.
ಸಾರ್ ಇಲ್ಲಿನ ತಹಸೀಲ್ದಾರ್ ‘ನಾನು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂ’ ಎಂದು ಹೇಳಿಕೊಂಡು ದಬ್ಬಾಳಿಕೆ ಮಾಡ್ತ್ತಿದ್ದಾರೆ ಅವರೊಬ್ಬರನ್ನಾದರೂ ಟ್ರಾನ್ಸ್‌ಫರ್ ಮಾಡಿಸ್ರಿ ಎಂದಾಗ, ‘ಆಕೆ ನನ್ನ ಮಗಳಿದ್ದಂತೆ. ಹೆಣ್ಣುಮಕ್ಕಳ ಮೇಲೆ ಹಾಗೆಲ್ಲ ಆಕ್ಷನ್ ತಗೊಳ್ಳೋದು ನನ್ನ ಜಾಯಮಾನ ಅಲ್ರಿ’ ಎಂದುಬಿಡೋದೆ?
ಅದೊಂದು ದಿನ ಸಚಿವರು ಬಂದರು ಅವತ್ತು ಎರಡನೇ ಶನಿವಾರ. ಅವರ ಬಳಿ ಯಾವೊಬ್ಬ ಅಕಾರಿಯೂ ಇರಲ್ಲಿ. ಅದನ್ನು ನೋಡಿದ ಕಾರ್ಯಕರ್ತರು, ‘ಸಾರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು. ಬೆಂಗಾವಲಿನ ಪೊಲೀಸ್ ಬಿಟ್ಟರೆ ಯಾವೊಬ್ಬ ಅಕಾರಿಯೂ ಜತೆಗಿಲ್ಲ. ಅಕಾರಿಗಳ ಮೇಲೆ ನಿಮ್ಮ ಹಿಡಿತ ಎಷ್ಟರಮಟ್ಟಿಗೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತೆ’ ಎಂದಾಗ, ‘ಇವತ್ತು ಸೆಕೆಂಡ್ ಸಾಟರ್ಡೆ. ಸರಕಾರಿ ರಜೆ. ಅಕಾರಿಗಳಿಗೆ ಮನೆ -ಮಠ, ಹೆಂಡತಿ ಮಕ್ಕಳು ಇರಲ್ವೆ’ ಎಂದು ಅವರೇ ಪ್ರಶ್ನಿಸಿದ್ದರು.
ಅವರ ಉಸ್ತುವಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ವೊಂದರ ಆವರಣದಲ್ಲಿ ಅವೈಜ್ಞಾನಿಕವಾಗಿ ತೆಗೆದಿದ್ದ ನೀರಿನ ತೊಟ್ಟಿಗೆ ಮಗುವೊಂದು ಬಿದ್ದು ಮೃತಪಟ್ಟಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವರು ತೆರಳಿದ್ದರು. ತೊಟ್ಟಿಯನ್ನು ವೀಕ್ಷಿಸಿ, ಈ ಘಟನೆ ಸಂಭವಿಸಲು ತೊಟ್ಟಿ ನಿರ್ಮಿಸಿದ ಗುತ್ತಿಗೆದಾರ, ಗ್ರಾ.ಪಂ.ಕಾರ್ಯದರ್ಶಿ ನಿರ್ಲಕ್ಷ್ಯ ಕಾರಣ. ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ತಪ್ಪು ಮಾಡಿದವರಿಂದಲೇ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿದರು. ಯಾರು ತಪ್ಪು ಮಾಡುತ್ತಾರೋ ಅವರಿಗೇ ಶಿಕ್ಷೆಯಾಗಬೇಕು. ಎಲ್ಲರ ತಪ್ಪುಗಳಿಗೆ ಸರಕಾರ ಹಣ ನೀಡುತ್ತಹೋದರೆ ಇಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಈ ಆದೇಶ ನೀಡಿದ್ದರು. ಅಲ್ಲೇ ಇದ್ದ ಕೆಲವು ಗ್ರಾಮಸ್ಥರು ಸರಕಾರದಿಂದ ಎಷ್ಟು ಪರಿಹಾರ ಕೊಡಿಸ್ತೀರಿ ಅನ್ನೊದನ್ನು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.
‘ಪರಿಹಾರ ಇಷ್ಟೆ ಕೊಡಿಸ್ತಿನಿ ಅಂತ ಹೇಳೋಕಾಗೊಲ್ಲ, ಅದಕ್ಕೆಲ್ಲ ಕೆಲವು ನಿಯಮಗಳಿವೆ ಅವನ್ನು ಪಾಲಿಸಬೇಕಾಗುತ್ತದೆ ಎಂದರು. ಇದರಿಂದ ರೊಚ್ಚಿಗೆದ್ದ ಕೆಲವರು ಧರಣಿ ನಡೆಸುವುದಾಗಿ ಧಮಕಿ ಹಾಕಿದರು. ಧರಣಿ? ಮಾಡ್ಕೊಳ್ಳಿ ನನಗೇನು ಎಂದು ಪ್ರೊಫೆಸರ್ ಸಾಹೇಬರು ಕಾರಿನತ್ತ ಹೊರಟರು. ಧರಣಿ ಮಾಡಲು ನಿರ್ಧರಿಸಿದವರು ಏನು ಮಾಡಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡತೊಡಗಿದ್ದರು.
ಬೆಂಗಳೂರಿನ ಹೋಟೆಲ್ ವಿಂಡ್ಸರ್ ಮ್ಯಾನರ್ ಜಾಗದ ಬಗ್ಗೆಯೂ ಅವರು ‘ಇದು ವಕ್ ಆಸ್ತಿ ಇದನ್ನು ಹೋಟೆಲ್ ನಡೆಸಲು ಕೊಟ್ಟಿದ್ದಾರೆ. ಇಲ್ಲಿ ಹಂದಿ ತಿನ್ನುತ್ತಾರೆ, ಕುರಾನ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಇದು ಧರ್ಮ ದ್ರೋಹ. ಇದಕ್ಕೆ ಅವಕಾಶ ನೀಡಿದವರೂ ಧರ್ಮ ದ್ರೋಹಿಗಳು’ ಎಂದು ಪ್ರಮಾಮಾಣಿಕವಾಗಿ ನುಡಿದು ಸುದ್ದಿಯಾಗಿದ್ದರು.
ಮುಜರಾಯಿ ಸಚಿವ ಕೃಷ್ಣಯ್ಯ ಶಟ್ಟಿ ಕೈಲಾಸ ಯಾತ್ರಿಗಳಿಗೆ ಲಾಡು ಹಂಚಿದರೆ, ಮುಮ್ತಾಜ್‌ಅಲಿಖಾನ್ ಅವರು ಹಜ್ ಯಾತ್ರಿಗಳಿಗೆ ಖರ್ಜೂರ ಹಂಚಿದ್ದರು.
ಮಂತ್ರಿಗಳು ರಾಜರು, ಅವರ ಮಕ್ಕಳು ರಾಜಕುಮಾರರು, ಕಾನೂನುಗಳಿರುವುದು ದೊಡ್ಡವರ ಮಕ್ಕಳು ಉಲ್ಲಂಘಿಸಲು ಎನ್ನುವಂಥ ವಾತಾವರಣವಿದೆ. ಆದರೆ ಮುಮ್ತಾಜ್ ಅಲಿ ಖಾನ್ ಅವರು ಎಂದೂ ಅಂಥ ಠೀವಿಯಿಂದ ಬೀಗಿದವರಲ್ಲ. ಅವರು ಸಚಿವರಾಗಿದ್ದಾಗಲೇ ಸ್ಕೂಟರ್ ಅಪಘಾತದಲ್ಲಿ ಪುತ್ರ ಮೃತಪಟ್ಟ. ಇರಿಂದ ಅವರು ತೀವ್ರನೊಂದಿದ್ದರು. ಮನಸು ಮಾಡಿದ್ದರೆ ವಕ್ ಮಂಡಳಿಯಿಂದ ಉತ್ತಮ ದರ್ಜೇಯ ಕಾರುಗಳನ್ನು ತರಿಸಿ ಮಗನನ್ನು ಪೊಲೀಸ್ ಬೆಂಗಾವಲಿನಲ್ಲ ಕಳಿಸಿಕೊಡಬಹುದಾಗಿತ್ತು. ಆದರೆ ಅವರು ಎಂದೂ ಹಾಗೆ ಅಕಾರ ದುರುಪಯೋಗಪಡಿಸಿಕೊಂಡವರೂ ಅಲ್ಲ, ಅದನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಂಡು ಗುದ್ದಾಡಿದವರೂ ಅಲ್ಲ.
‘ಲಂಚ ತಗೊಳ್ಳೋದು ಅಪರಾಧ, ಲಂಚ ತಿನ್ನುವವರು ಪಾಪಿಗಳು, ಅವರು ನರಕಕ್ಕೆ ಹೋಗುತ್ತಾರೆ’ ಎಂಬುದನ್ನು ಅವರು ಆಗಾಗ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಮತ್ತು ಅದನ್ನು ತಡೆಯಲಾಗದ ಬಗ್ಗೆ ಅವರಲ್ಲಿ ಯಾವಾಗಲೂ ಒಂದು ಬೇಸರ, ಆತಂಕ ಮನೆಮಾಡಿರುತ್ತದೆ. ಯಾರಾದರೂ ಬಂದು ಸಚಿವರನ್ನು ಭೇಟಿ ಮಾಡಿ ಸಾರ್.... ನನ್ನ ಕೆಲಸ ಆಗಿಲ್ಲ ಎಂದರೆ ತಕ್ಷಣ ಜಿಲ್ಲಾಕಾರಿಗೆ ಫೋನ್ ಮಾಡಿ ‘ಏನ್ರಿ ನೀವು ಸರಿಯಾಗಿ ಕೆಲಸ ಮಾಡಲ್ಲ ಜನ ನನ್ನ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರೆ. ನನ್ನ ಸರಳತೆಯನ್ನು ನೀವು ದೌರ್ಭಲ್ಯ ಅಂಥ ಭಾವಿಸಬಾರದು’ ಎಂದು ಮತ್ತೊಂದು ಮನವಿ ಮಾಡುತ್ತಾರೆ. ‘ನೋಡ್ರಿ ನನಿಗೆ ಹಣ ಮಾಡುವ ಆಸೆ ಇಲ್ಲ, ಭ್ರಷ್ಟ ರಾಜಕಾರಣಿ ಎಂದು ‘ಕೀರ್ತಿ’ ಪಡೆಯುವ ಹುಮ್ಮಸ್ಸಿಲ್ಲ, ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎನ್ನುತ್ತಾರೆ. ಆದರೂ ಅವರ ಉಸುವಾರಿ ಜಿಲ್ಲೆ ಭಿವೃದ್ಧಿಯಲ್ಲಿ ಅಷ್ಟಕ್ಕಷ್ಟೆ ಎನ್ನುವುದು ಸ್ಥಳೀಯರ ಮತ್ತು ಪ್ರತಿಪಕ್ಷದವರ ಆರೋಪ. ಸಚಿವರ ಬಳಿ ಅನಗತ್ಯ ಪೊಲೀಸ್ ಪಹರೆ ಇರುವುದಿಲ್ಲ, ಭಟ್ಟಂಗಿಗಳಿಗೆ ಜಾಗವೇ ಇಲ್ಲ, ‘ಹೌದಪ್ಪ’ಗಳು ಹತ್ತುಮಾರು ದೂರ. ರಾಜಕಾರಣಿಗಳು ಎಂದೂ ಒಪ್ಪಲಾಗದ ಸರಳತೆ, ನೇರ ನಡೆ ನುಡಿ ಅವರದು. ಯಾರೇ ಹೋದರೂ ಅವರನ್ನು ನೇರವಾಗಿ ಭೇಟಿಮಾಡಿ ಮಾತನಾಡಬಹುದಾದಷ್ಟು ಪ್ರಜಾಪ್ರಭುತ್ವವಿರುತ್ತದೆ. ಇಲ್ಲಿ ಕೆಲಸ ಕಡಿಮೆ. ಪ್ರಾಮಾಣಿಕತೆ ಜಾಸ್ತಿ!

No comments: