Monday, October 12, 2009

ರಾಜಕೀಯ ಹೊಲಸು ತೊಳೆಯಲು ಗಾಂಜಿ ಅನುಯಾಯಿಗಳೇ ಬರಬೇಕೆ?

ಒಂದು ದಿನ ಗಾಂ ಅನುಯಾಯಿಗಳು ಹಳ್ಳಿಯೊಂದಕ್ಕೆ ತೆರಳಿ ಅಲ್ಲಿನ ರಸ್ತೆಗಳನ್ನು ಗುಡಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಿದರು, ಹಾಗೆಯೇ ಎಂಟು ದಿನ ನಿರಂತರವಾಗಿ ಅದೇ ಗ್ರಾಮಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಒಂದು ದಿನ ತಾವೇ ನಿರ್ಧರಿಸಿ ಹದಿನೈದು ದಿನ ಗ್ರಾಮ ಸ್ವಚ್ಛತೆಗೆ ಹೋಗಲಿಲ್ಲ. ನಂತರ ತಮ್ಮ ಕಡೆಯವರೊಬ್ಬರನ್ನು ಅಲ್ಲಿಗೆ ಕಳುಹಿಸಿ ಸ್ವಚ್ಛತೆ ಪರಿಶೀಲಿಸಲು ಹೇಳಿದರು. ಅವರು ಹೋಗಿ ನೋಡಿದರೆ ಇಡೀ ಗ್ರಾಮ ಕಸದ ರಾಶಿಯಂತಾಗಿತ್ತು. ಸ್ವಚ್ಛತೆ ಎನ್ನುವುದು ಗ್ರಾಮದ ಜನರ ಅರಿವಿಗೇ ಬಂದಿರಲಿಲ್ಲ. ಹೋದ ವ್ಯಕ್ತಿ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೀವ್ಯಾರೂ ಗಮನ ಹರಿಸುತ್ತಿಲ್ಲ ಯಾಕೆ ಎಂದು ಒಬ್ಬರನ್ನು ಕೇಳಿದರು ಆಗ ಆ ವ್ಯಕ್ತಿ ಹೇಳಿದನಂತೆ ‘ಯಾಕೋ ಕಳೆದ ಹದಿನೈದು ದಿನಗಳಿಂದ ಗಾಂ ಕಡೆಯವರು ಸ್ವಚ್ಛ ಮಾಡಲು ಬರುತ್ತಿಲ್ಲ ಆದ್ದರಿಂದ ಕಸ ಹರಡಿದೆ’ ಅಂತ.
ಗಾಂ ಅಥವಾ ಅವರ ಅನುಯಾಯಿಗಳು ಎಂದರೆ ಚರಂಡಿ ಗುಡಿಸುವವರು ಎಂಬ ಮೂರ್ಖ ಆಲೋಚನೆಗಳನ್ನು ಮಾಡುವವರಿಲ್ಲ ಎಂದಲ್ಲ, ಆದರೆ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದಕ್ಕೆ ಕಾರಣವಿದೆ. ಈಗ ಇಡೀ ದೇಶಕ್ಕೆ ಚುನಾವಣೆ ಕಾವು ಏರಿದೆ. ಸ್ವಾತಂತ್ರ್ಯಾನಂತರದ ೬೦ ವರ್ಷಗಳಲ್ಲಿ ದೇಶ ಇಂಥ ಅನೇಕ ಚುನಾವಣೆಗಳನ್ನು ಕಂಡಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪ್ರಜೆಗಳ ರಾಜಕೀಯ ಅರಿವನ್ನು ವಿಸ್ತರಿಸುತ್ತವೆ ಎನ್ನುವ ನಂಬಿಕೆ ಇದೆ ಆ ಮಾತು ಭಾರತದಂಥ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅನ್ವಯವಾಯಿತು ಎಂದು ಹೇಳಲಾಗುವುದಿಲ್ಲ. ಆಳುವವರ ತಪ್ಪನ್ನು ಹಿಡಿದು ಕೇಳುವ ಎಚ್ಚರದ ಮತ್ತು ಬದ್ಧ ರಾಜಕೀಯ ಪ್ರಜ್ಞೆಯನ್ನು ಭಾರತದಲ್ಲಿ ಚುನಾವಣೆಗಳು ಬೆಳೆಸಲಿಲ್ಲ. ಬದಲಾಗಿ ಮೊದಲೇ ಇದ್ದ ಜಾತಿ ಕಂದಕಗಳನ್ನು ಮತ್ತಷ್ಟು ಹೆಚ್ಚಿಸಿದವು, ಜನ ಸಮುದಾಯದ ಮೌಢ್ಯ- ಕಂದಾಚಾರವನ್ನು ವಿಸ್ತರಿಸಿದವು. ಭ್ರಷ್ಟಾಚಾರ ಎನ್ನುವುದನ್ನು ಸರ್ವೆ ಸಾಮಾನ್ಯ ಎನ್ನುವಂತೆ ಮಾಡಿ ಲಜ್ಜೆಗೆಟ್ಟ ವರ್ಗವನ್ನು ಸೃಷ್ಟಿಸಿದವು. ಚುನಾವಣೆ ನಡೆದಂತೆಲ್ಲ ನಮ್ಮ ಸಾಮಾಜಿಕ ಬದುಕು ಸಾಗಬೇಕಾದ ದಾರಿಯನ್ನು ಬಿಟ್ಟು ಮತ್ತೊಂದು ದಾರಿಯನ್ನು ಆಯ್ಕೆಮಾಡಿಕೊಂಡಿತು. ಚುನಾವಣೆಗಳು ಹೆಚ್ಚಿದಂತೆ ರಾಜಕೀಯ ಅರಿವು ಮೂಡುವ ಬದಲು ಕುಡುಕರು ಹೆಚ್ಚಿದರು. ಚುನಾವಣೆಗಳು ಹೆಚ್ಚಿದಂತೆ ದೇಶದ ಸಂಪತ್ತು ತಿಂದು ಹಾಕುವ ರಾಜಕಾರಣಿಗಳು ಹೆಚ್ಚಿದರು, ಭ್ರಷ್ಟರು ಹೆಚ್ಚಿದರು, ಬಹು ಮುಖ್ಯವಾಗಿ ಹಣಕ್ಕೆ ಮತ ಮಾರಿಕೊಳ್ಳುವ ನಿರಭಿಮಾನಿ ಮತದಾರರು ಹೆಚ್ಚಿದರು. ಒಂದು ಅಂದಾಜಿನ ಪ್ರಕಾರ ಪ್ರತೀ ಚುನಾವಣೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ. ೧೫ ರಷ್ಟು ಕುಡುಕರು ಹೆಚ್ಚುತ್ತಿದ್ದಾರೆ. ಇದು ಬಡ ಭಾರತಕ್ಕೆ ಚುನಾವಣೆಗಳ ಕೊಡುಗೆ!
ಜನತಂತ್ರ ವ್ಯವಸ್ಥೆಯಲ್ಲಿ ಎದುರಾಗುವ ರಾಜಕೀಯ ಸನ್ನಿವೇಶಗಳು ಹಲವು ಕಾರಣಕ್ಕೆ ಪ್ರಮುಖವೆನಿಸುತ್ತವೆ. ಎಲ್ಲ ಪಕ್ಷಗಳ ಮೇಲಾಟಗಳನ್ನು ಸೂಕ್ಷ್ಮವಾಗಿ ಗಮನಿಸುವ ಜನ ಸಮುದಾಯ ಚುನಾವಣೆಯಲ್ಲಿ ತನ್ನ ನಿಲುವನ್ನು ಪ್ರಕಟಿಸುತ್ತದೆ. ಆದರೆ ಪರಿಸ್ಥಿತಿ ಈಗ ಹಿಂದೆಂದಿಗಿಂತ ತೀರಾ ಭಿನ್ನವಾಗತೊಡಗಿದೆ. ಹೆಂಡ ಮತ್ತು ಹಣದ ಆಮಿಷಗಳಿಂದ ಜನರ ಮನಸ್ಥಿತಿಯನ್ನು ಬದಲಿಸುವ, ಮತಗಳನ್ನು ಖರೀದಿಸುವ ಕೀಳು ತಂತ್ರಗಳು ಆರಂಭವಾಗಿವೆ. ಕಳೆದೆರಡು ಚುನಾವಣೆಯಲ್ಲಿ ಹೆಂಡ ಹಣದ ಪ್ರಭಾವ ಮಿತಿಮೀರಿದ್ದು ಇದಕ್ಕೆ ಸಾಕ್ಷಿ. ಅದಕ್ಕೂ ಮೊದಲು ನಾವು ಹೆಂಡ ಹಂಚುವುದಿಲ್ಲ, ಹಣ ಕೊಡುವುದಿಲ್ಲ, ಸಿದ್ಧಾಂತವೇ ನಮ್ಮ ಧ್ಯೇಯವಾಗಿರುವುದರಿಂದ ಜನ ನಮ್ಮನ್ನೇ ಬೆಂಬಲಿಸುತ್ತಾರೆ ಎಂದು ಕೆಲವರಾದರೂ ಹೇಳುತ್ತಿದ್ದರು. ಈಗ ಅಷ್ಟು ಧೈರ್ಯವಾಗಿ ಹೇಳಲು ಯಾರೂ ಸಿದ್ಧರಿಲ್ಲ. ಅಕಸ್ಮಾತಾಗಿ ಹೇಳಿದರೆ ನಂಬಲು ಜನರೂ ಸಿದ್ಧರಿಲ್ಲ. ಎರಡು ಚುನಾವಣೆಗಳ ಹಿಂದೆ ಅಲ್ಪ ಸ್ವಲ್ಪ ಪ್ರಾಮಾಣಿಕತೆ ಎನ್ನುವುದು ಆಂತರಿಕವಾಗಿ ಇಲ್ಲದಿದ್ದರೂ ಬಾಹ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಕಾಣುತ್ತಿತ್ತು. ಈಗ ತಮ್ಮ ಪಾವಿತ್ರ್ಯದ ಬಗ್ಗೆ ಹೇಳಿಕೊಳ್ಳುವಷ್ಟು ಶುದ್ಧ- ಬದ್ಧರಾಗಿ ಯಾವ ಪಕ್ಷವೂ ಉಳಿದಿಲ್ಲ. ಇದು ಚುನಾವಣೆಗಿಂತ ಚುನಾವಣೆಗೆ ಸಾಮಾಜಿಕ ಪರಿಸ್ಥಿತಿ ಕಲುಷಿತಗೊಳ್ಳುತ್ತಿರುವುದರ ಸಂಕೇತ. ಅಲ್ಲದೇ ರಾಜಕೀಯದಲ್ಲಿ ಮೌಲ್ಯವಿಲ್ಲದ, ಬದ್ಧತೆಯಿಲ್ಲದ ಜನರು ಪ್ರವೇಶಮಾಡುತ್ತಿರುವುದರ ದ್ಯೋತಕ.
ಜಾತಿ ಸಂಘರ್ಷದಿಂದ ನಲುಗಿದ್ದ ಹಳ್ಳಿಗಳಿಗೆ ಸ್ವಾತಂತ್ರ್ಯಾನಂತರ ಹೊಸ ಎಚ್ಚರ ಬರುವಹೊತ್ತಿಗೆ ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಯಾಯಿತು. ಇದರಿಂದ ಹಳ್ಳಿಗಳನ್ನು ಪ್ರವೇಶಿಸಿದ ರಾಜಕೀಯ ಅಲ್ಲಿನ ಒಗ್ಗಟ್ಟನ್ನು ನಾಶಮಾಡಿತು. ಹಳ್ಳಿಗಳಲ್ಲಿದ್ದ ಜಾತಿಯ ಬೆಂಕಿ ಆರದಂತೆ ಅದನ್ನು ಮತಗಳಾಗಿ ಪರಿವರ್ತಿಸಲು ನಡೆದ ಕಸರತ್ತುಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆಮಾಡಿತು. ಜಾತಿಯ ಕೆಸರಿಗೆ ಪಕ್ಷ ರಾಜಕಾರಣದ ಕೊಳಕು ಸೇರುತ್ತಿದ್ದಂತೆ ಅಲ್ಲೇ ಕೆಲವು ಪುಡಿ ರಾಜಕಾರಣಿಗಳು ಸೃಷ್ಟಿಯಾಗಿ ಜನಪದರ ರಮ್ಯ ಮತ್ತು ಮುಗ್ಧ ಹಳ್ಳಿಗಳು ನಾಶವಾಗಿ ಈಗ ರಾಜಕೀಯ ಹಳ್ಳಿಗಳು ಮಾತ್ರ ಉಳಿದಿವೆ. ರಾಜಕಾರಣಿಗಳು ಸೃಷ್ಟಿಯಾಗಲು ಯಾವ ಮಾರ್ಗಗಳು ಬೇಕೋ ಅವೆಲ್ಲ ಈಗಾಗಲೇ ಸೃಷ್ಟಿಯಾಗಿವೆ. ಇದರಿಂದ ರಾಜಕಾರಣವು ಸೇವೆಯಾಗಿ ಉಳಿಯದೆ ವೃತ್ತಿಯಾಗಿ ರೂಪುಗೊಂಡಿದೆ. ಮೇಲ್ಮಟ್ಟದ ಪರಮ ಭ್ರಷ್ಟ ರಾಜಕಾರಣಿಗಳ ಕಾರ್ಯ ವೈಖರಿಯನ್ನು ಗಮನಿಸುವ ಪುಡಿರಾಜಕಾರಣಿಗಳು ಇಲ್ಲೂ ಅದನ್ನೇ ಮಾಡುತ್ತಿರುವುದರಿಂದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೆನ್ನುವುದು ಸಂಪೂರ್ಣ ಮರೆಯಾಯಿತು. ಇದರಿಂದ ಗ್ರಾಮಗಳ ಬಗ್ಗೆ ಇದ್ದ ಪ್ರೀತಿ ಕಡಿಮೆಯಾಗಿ ಗ್ರಾಮಗಳು ಸಂಪತ್ತಿನ ಕ್ರೋಡೀಕರಿಸುವ, ಅದನ್ನು ಅಭಿವೃದ್ಧಿಯಾಗಿ ಪರಿವರ್ತಿಸುವ ಅಪರೂಪದ ಕ್ರಿಯಾಶೀಲ ಪ್ರಕ್ರಿಯೆ ಯಾವ ಹಳ್ಳಿಯಲ್ಲೂ ಉಳಿದಿಲ್ಲ. ಅದೂ ಅಲ್ಲದೇ ಪಂಚಾಯಿತಿಗೆ ಇಷ್ಟು ಎಂದು ಸರಕಾರವೇ ಧನ ಸಹಾಯ ನೀಡುತ್ತಿರುವುದರಿಂದ ಹಳ್ಳಿಗಳು ಕ್ರಮೇಣ ಸರಕಾರದ ಮತ್ತು ಆಳುವವರ ಕೈಗೊಂಬೆಗಳಾಗಿವೆ. ಹಣ ನೀಡಲು ಸರಕಾರಕ್ಕೆ ಹಳ್ಳಿಗಳ ಮೇಲೆ ಪ್ರೀತಿ ಇದೆ ಎಂದು ಭಾವಿಸುವುದು ಸರಿಯಲ್ಲ, ಬದಲಾಗಿ ಹಳ್ಳಿಗಳು ಧನಸದಹಾಯಕ್ಕೆ ಕೈಚಾಚಿಕೊಂಡೇ ಇರಬೇಕು ಎನ್ನುವ ಸೂಕ್ಷ್ಮ ಆಗ್ರಹ.
ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ಕೊಡಲು ಈ ಹಿಂದೆ ದೇಶದಲ್ಲಿ ಕೆಲವು ಸಮಸ್ಯೆಗಳು ಕಣ್ಣಿಗೆ ಕಾಣುತ್ತಿದ್ದವು. ಉದಾಹರಣೆಗೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ನಿರುದ್ಯೋಗ ಸಮಸ್ಯೆ ನಿವಾರಿಸುವುದಾಗಿ ಭರವಸೆಗಳನ್ನಾದರೂ ನೀಡಲು ಅವಕಾಶವಿತ್ತು. ಈಗ ಅದೂ ಉಳಿದಿಲ್ಲ, ಕಾರಣ ಸಮಸ್ಯೆಗಳೇ ಇಲ್ಲ ಎಂದರ್ಥವಲ್ಲ, ಇವನ್ನು ಯಾರಿಂದಲೂ ನಿವಾರಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗಿಹೋಗಿದೆ. ಭಗವಂತನೂ ಕೂಡ ಇವುಗಳಿಗೆ ಪರಿಹಾರ ಕಂಡು ಹಿಡಿಯಲು ಅಶಕ್ತನಾಗಿದ್ದಾನೆ ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೂ ಮನವರಿಕೆಯಾಗಿದೆ. ಆದ್ದರಿಂದ ಕಾಲ ಬದಲಾದಂತೆ ಜನರ ಅಗತ್ಯಗಳೂ ಬದಲಾಗಿವೆ ಎಂದು ಈಗ ಬಣ್ಣದ ಟಿವಿ ಮತ್ತು ಕೇಬಲ್, ಮೊಬೈಲ್, ಲಾಪ್‌ಟ್ಯಾಪ್ ಕೊಡುವ ಭರವಸೆ ನೀಡುತ್ತಿದ್ದಾರೆ. ದೇಶದಲ್ಲಿ ಸರಿಸುಮಾರು ೨೩ ಕೋಟಿ ಜನರಿಗೆ ಒಂದು ಹೊತ್ತಿನ ಅನ್ನ ಸಿಗುತ್ತಿಲ್ಲ ಅದನ್ನು ಪೂರೈಸಲು ಯೋಜನೆ ರೂಪಿಸುತ್ತೇವೆ ಎಂದು ಗಟ್ಟಿಯಾಗಿ ಹೇಳುವಷ್ಟು ಶಕ್ತಿವಂತ ನಾಯಕರೇ ಇಲ್ಲ.
ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಎಲ್ಲ ಪಕ್ಷಗಳೂ ಹೇಳುತ್ತಿವೆ. ಸಾಲ ಮನ್ನಾ ಎನ್ನುವುದು ರೈತರ ಸಮಸ್ಯೆಗೆ ಶಾಶ್ವತ ಪರಿಹಾರವೇ ಅಲ್ಲ, ಕಳೆದ ವರ್ಷವಷ್ಟೇ ಕೇಂದ್ರ ಸರಕಾರ ೬೫ ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ. ಈಗ ಮತ್ತೆ ಅದೇ ಪ್ರಣಾಳಿಕೆಯಾಗಿ ಕಾಣತೊಡಗಿದೆ. ಸಾಲ ಮನ್ನಾ ಎನ್ನುವುದು ದುಡಿಯುವ ಕೈಗಳನ್ನು ಬಂಸುವ ಪ್ರಯತ್ನ ಮತ್ತು ತಾತ್ಕಾಲಿಕ ಪರಿಹಾರ. ಇದನ್ನು ಪ್ರತಿಯೊಬ್ಬರೂ ಮುಂದುವರಿಸಿದರೆ ದೇಶದ ಆರ್ಥಿಕ ಆರೋಗ್ಯ ಸುಧಾರಿಸಲು ಸಾಧ್ಯವೇ ಇಲ್ಲ. ಇದಕ್ಕೆ ಬದಲಾಗಿ ರೈತರಿಗೆ ಸಾಧ್ಯವಾದಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಸೂಕ್ತ ಮಾರುಕಟ್ಟೆ ಒದಗಿಸಬೇಕು, ಬೆಳೆಗೆ ನ್ಯಾಯಯುತವಾದ ಬೆಲೆ ಸಿಗುವಂತಾದರೆ ಸಾಲ ಮರುಪಾವತಿ ಸಮಸ್ಯೆಯಾಗಲಾರದು ಅತಿವೃಷ್ಟಿ, ಅನಾವೃಷ್ಟಿಯಂಥ ಸಂದರ್ಭ ಹೊರತುಪಡಿಸಿದರೆ ಉಳಿದಂತೆ ಸಾಲ ಮರುಪಾವತಿ ಅನಿವಾರ್ಯ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡದೇ ಹೋದರೆ ಹಣದ ಬೆಲೆಯೇ ಅರ್ಥವಾಗದ ಹಳ್ಳಿಗಳು ಉದಯಿಸಲಿವೆ. ಪಡೆದ ಸಾಲ ತೀರಿಸದಿದ್ದರೆ ಮನ್ನಾ ಆಗುತ್ತದೆ ಎಂಬ ಭಾವನೆ ರೈತ ಸಮುದಾಯದಲ್ಲಿ ಈಗಾಗಲೇ ಬರಲಾರಂಭಿಸಿದೆ. ಹೀಗೆಯೇ ಮುಂದುವರಿದರೆ ಹಳ್ಳಿಗಳಿಗೆ ನೀಡಿದ ಸಾಲ ಮರುಪಾವತಿ ಅಸಾಧ್ಯವಾಗುತ್ತದೆ. ೨೭ ಲಕ್ಷಕ್ಕೂ ಅಕ ಹಳ್ಳಿಗಳನ್ನು ಹೊಂದಿರುವ ಭಾರತದಲ್ಲಿ ಅವುಗಳ ಆದಾಯವನ್ನು ನಿರ್ಲಕ್ಷಿಸಲಾಗುವುದಿಲ್ಲ. ಆದ್ದರಿಂದ ಚುನಾವಣೆಗಳು ಗ್ರಾಮಗಳನ್ನು ಒಡೆಯದೇ ಅವುಗಳ ಸರ್ವತೋಮುಖ ಬೆಳವಣಿಗೆಗೆ ಮುಂದಾಗಬೇಕಿದೆ. ನಗರದ ಆಕರ್ಷಣೆ ತಡೆಯಲು ಹಳ್ಳಿಗಳ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳದಿದ್ದರೆ ಹಳ್ಳಿಗಳು ಕಟ್ಟೆ ಪಂಚಾಯಿತಿ ಕೇಂದ್ರಗಳಾಗಿ ಮಾರ್ಪಡುವ ಅಪಾಯವಿದೆ.
ನಾನು ಮೊದಲೇ ಪ್ರಸ್ತಾಪಿಸಿದಂತೆ ಗಾಂ ಕಡೆಯವರು ಕಸ ಗುಡಿಸಲು ಬಂದಿಲ್ಲ.... ಹಾಗೆಯೇ ಸಾಲ ಮನ್ನಾ ವಿಚಾರವನ್ನು ಪ್ರಸ್ತಾಪಿಸದೇ ಹೋದರೆ ಇದು ಒಳ್ಳೆಯ ಪಕ್ಷವೇ ಅಲ್ಲ, ಸರಕಾರವೇ ಅಲ್ಲ ಎಂದು ತೀರ್ಮಾನಿಸುವ ಕಾಲ ದೂರವಿಲ್ಲ. ಸಾಲ ತೀರಿಸದಿದ್ದರೆ ಅದು ನಾನು ದೇಶಕ್ಕೆ, ದೇಶದ ಬೆಳವಣಿಗೆಗೆ ಮಾಡುವ ವಂಚನೆ ಎಂದು ತಾತ್ವಿಕವಾಗಿ ಚಿಂತಿಸುವಂತೆ ಜನರ ಮನಸ್ಥಿತಿಯನ್ನು ಬದಲಿಸಬೇಕಿದೆ. ಇಲ್ಲದೆ ಹೋದರೆ ಶೇ. ೭೨ ಭಾಗ ಇರುವ ದೇಶದ ರೈತರು ಹಳ್ಳಿಗಾಡಿನ ಜನರು ಇಂಥ ಯೋಚನೆಯಲ್ಲಿ ತೊಡಗಿದರೆ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಡೋಲಾಯಮಾನವಾಗಲಿದೆ. ಇಂಥ ಸಂಕೀರ್ಣ ಸನ್ನಿವೇಶದಲ್ಲೇ ರಾಜಕಾರಣಿಗಳು ಜನರನ್ನು ದುರ್ಬಲರನ್ನಾಗಿ ಮಾಡುವ ಸಾಧ್ಯತೆ ಹೆಚ್ಚು. ಪರಿಸ್ಥಿತಿಯ ದುರ್ಲಾಭ ಪಡೆಯುವ ನಾಯಕರಿಗೆ ತಿವಿಯಲು, ಭರವಸೆಗಳ ಮಳೆಸುರಿಸಿ ದೂರವಾಗುವವರಿಗೆ ಬುದ್ಧಿ ಕಲಿಸಲು ಈಗ ಮತ್ತೊಮ್ಮೆ ಕಾಲ ಬಂದಿದೆ ಇದನ್ನು ಸಮರ್ಥವಾಗಿ ವಿಶ್ಲೇಷಿಸಿ ನಿಭಾಯಿಸಿದರೆ ಮಾತ್ರ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುವಾಗುತ್ತಾರೆ. ಇಲ್ಲದಿದ್ದರೆ ಪ್ರಭುತ್ವದ ಅಡಿಯಾಳುಗಳಾಗುತ್ತಾರೆ.

No comments: