Monday, October 12, 2009

ಇದು ಸಾಧನೆಯ ಮಾತಲ್ಲ, ಮಾತುಗಳ ಸಾಧನೆ!

‘ನನಗೆ ಈ ಅಕಾರ ಕೊಟ್ಟಿದ್ದೇ ಹಸಿರು ಶಾಲು, ನಾನೂ ನಿಮ್ಮವನೇ, ನಾನೂ ರೈತನ ಮಗ’ ಎಂದು ಮುಖ್ಯಮಂತ್ರಿಯಾಗಿ ಅಕಾರ ಸ್ವೀಕರಿಸಿದ ದಿನ ರಾಮಕೃಷ್ಣ ಹೆಗಡೆ ಹೆಗಲ ಮೇಲೆ ಹೊದ್ದಿದ್ದ ಹಸಿರು ಶಾಲು ತೋರಿಸಿ ಹೇಳಿದ್ದರು. ಅದು ಅಕ್ಷರಶಃ ನಿಜವಾಗಿತ್ತು. ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿದ್ದ ಜನತೆ ಕಾಂಗ್ರೆಸೇತರ ಸರಕಾರಕ್ಕಾಗಿ ಹಾತೊರೆಯುತ್ತಿದ್ದಾಗ ಜನಪರ, ಪ್ರಗತಿಪರ, ಸಮಾಜವಾದದ ಲೇಬಲ್ ಅಂಟಿಸಿಕೊಂಡಿದ್ದ ಜನತಾ ದಳವನ್ನು ರೈತ ಸಂಘ ಸೇರಿದಂತೆ ಎಲ್ಲರೂ ಬೆಂಬಲಿಸಿದ್ದರು. ಬಹಳ ಮುಖ್ಯವಾಗಿ ರಾಜ್ಯದಲ್ಲಿ ಬಹಳ ಬಲಿಷ್ಠವಾಗಿದ್ದ ರೈತ ಸಂಘ ರಾಜಕಾರಣಿಗಳ ಬಣ್ಣದ ಮಾತಿನ ಮರ್ಮ ಅರಿಯದೆ ಕಾಯಾ ವಾಚಾ ಮನಸಾ ಜನತಾ ದಳವನ್ನು ಬೆಂಬಲಿಸಿತ್ತು. ಹೆಗಡೆ ಹೇಳಿದ ಅಕಾರ ನೀಡಿದ ಮಾತು ನಿಜವಾಗಿತ್ತಾದರೂ ಅದರ ಹಿಂದೆ ಇದ್ದ ಇನ್ನೊಂದು ನಿಜವೆಂದರೆ ಅವರು ಮುಖ್ಯಮಂತ್ರಿಯಾದ ನಂತರ ಸರಕಾರವನ್ನು ಪ್ರಶ್ನಿಸುವ ರೈತ ಶಕ್ತಿಯನ್ನು ಸಹಿಸಲಿಲ್ಲ. ಆಗ ಹೆಗಡೆಯವರಲ್ಲಿದ್ದ ಪ್ರಭುತ್ವದ ದಬ್ಬಾಳಿಕೆಯ ಮನಸ್ಥಿತಿ ಜಾಗೃತವಾಯಿತು. ರಾಜ್ಯದಲ್ಲಿ ರೈತ ಸಂಘಟನೆಯನ್ನು ಬಗ್ಗುಬಡಿಯಲು ಮುಂದಾಯಿತು. ರೈತ ನಾಯಕರನ್ನು ಕಂಡಲ್ಲಿ ಬಂಸಲು ಹೆಗಡೆ ಸಂಚು ರೂಪಿಸಿ ರೈತ ಚಳವಳಿಯನ್ನೇ ನಾಶ ಮಾಡಲು ಮುಂದಾದದ್ದು ಚರಿತ್ರೆಯ ಕರಾಳ ಅಧ್ಯಾಯ. ಅವರ ಇಂಥ ಗೋಮುಖ ವ್ಯಾಘ್ರಬುದ್ಧಿಯನ್ನು ಗಮನಿಸಿದ ರೈತರು ‘ಗುಳ್ಳೆ ನರಿ ಹೆಗಡೆ’ ಎಂದು ಬಿರುದು ನೀಡಿದ್ದರು.
ಈಗ ಅದೇ ದಾರಿಯಲ್ಲಿ ನಿಂತಂತೆ ಕಾಣುತ್ತಿದ್ದಾರೆ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ. ಕರ್ನಾಟಕ ರಾಜ್ಯ ರೈತ ಸಂಘದ ಲಾಂಛನವಾದ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿ, ಈಗ ಅದೊಂದೇ ಕಾರಣಕ್ಕೆ ಪ್ರತಿಪಕ್ಷಗಳು ಸೇರಿದಂತೆ ಎಲ್ಲರ ಟೀಕೆಗೆ ಒಳಗಾಗುತ್ತಿದ್ದಾರೆ. ಅಕಾರದಿಂದ ಏನನ್ನಾದರೂ ಸಾಸಿಬಿಡಬಲ್ಲೆ ಎಂಬ ಮನಸ್ಥಿತಿಯಲ್ಲಿದ್ದ ಯಡಿಯೂರಪ್ಪ ಈಗ ತಾವೇ ಸೃಷ್ಟಿಸಿಕೊಂಡಿರುವ ವರ್ತುಲದಲ್ಲಿ ನಿಂತಿದ್ದಾರೆ. ಆರಂಭದಲ್ಲಿ ರೈತ ಮುಖಂಡರ ಸಭೆ ಕರೆದು ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಚಳವಳಿಯನ್ನು ತಾತ್ಕಾಲಿಕವಾಗಿ ತಡೆದದ್ದನ್ನು ಬಿಟ್ಟರೆ ಅದೂ ಒಂದು ಚುನಾವಣೆ ಪ್ರಣಾಳಿಕೆಯಂತೆ ಕಾಣತೊಡಗಿದೆ.
ಕಳೆದ ವರ್ಷ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ರೈತರು ಬಲಿಯಾಗಿದ್ದರು. ಆಗ ಕರ್ನಾಟಕದಲ್ಲಿ ಕಂಡು ಬಂದ ರಾಜಕೀಯ ಮೇಲಾಟಗಳು ಎಣಿಸಲಸಾಧ್ಯ. ಸಮರ್ಪಕವಾಗಿ ಗೊಬ್ಬರ ಪೂರೈಸಲಾಗದ, ಅಕಾರಿ ವರ್ಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದ ಸರಕಾರ ಹಿಂದಿನ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದಿಂದ ಗೊಬ್ಬರದ ಅಭಾವ ಉಂಟಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವುದಾಗಿ ಹೇಳಿ ಎದುರಾಗಬಹುದಾಗಿದ್ದ ಸಮಸ್ಯೆಯಿಂದ ನುಣುಚಿಕೊಂಡಿತ್ತು. ಸಂವೇದನೆಯಿರುವ ಸರಕಾರವಾಗಿದ್ದರೆ ಗೋಲಿಬಾರ್‌ನಿಂದ ಪಾಠ ಕಲಿತು ತಕ್ಷಣ ಸೂಕ್ತ ಪರಿಹಾರ ಕಂಡುಕೊಳ್ಳ ಬೇಕಾಗಿತ್ತು ಹಾಗಾಗಲಿಲ್ಲ, ಸರಕಾರ ಈಗ ಮತ್ತೊಂದು ಸಮಸ್ಯೆಗೆ ರೈತರನ್ನು ಸಿಕ್ಕಿಸಿ ಕಣ್ ಕಣ್ ಬಿಡತೊಡಗಿದೆ. ಕಳೆದ ವರ್ಷದಂತೆ ರಾಜ್ಯದ ಅನೇಕ ಕಡೆ ಗೊಬ್ಬರ ಮತ್ತು ಬಿತ್ತನೆ ಬೀಜದ ಸಮಸ್ಯೆ ಮರುಕಳಿಸಿದೆ. ಇದನ್ನು ಗಮನಿಸಯೇ ನಾಲ್ಕು ತಿಂಗಳ ಹಿಂದಿನಿಂದಲೇ ಮಾಧ್ಯಮಗಳು ಎಚ್ಚರಿಸುತ್ತ ಬಂದಿದ್ದವು. ಲೋಕಸಭೆ ಚುನಾವಣೆಯಲ್ಲಿ ಮಗ್ನವಾದ ಸರಕಾರ ಮತ್ತು ಅಕಾರಿವರ್ಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಮತ್ತೊಮ್ಮೆ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಬಿಂತಿದೆ. ಈ ಬಾರಿ ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ತೊಂದರೆಯಾಗದಂತೆ ಎಲ್ಲ ಏರ್ಪಾಡು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಾವೇರಿಯಲ್ಲಿ ಹೇಳಿ ಇನ್ನೂ ಅವರು ಬೆಂಗಳೂರು ತಲುಪಿದ್ದರೋ ಇಲ್ಲವೊ, ಅಷ್ಟೊತ್ತಿಗಾಗಲೇ ಅದೇ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗೊಬ್ಬರ ಮತ್ತು ಬೀಜಕ್ಕಾಗಿ ರೈತರು ಪ್ರತಿಭಟನೆ ನಡೆಸಿದ್ದರು. ಇದು ಸರಕಾರಕ್ಕೆ ರೈತರ ಮೇಲೆ ಇರುವ ನಿರ್ಲಕ್ಷ್ಯ ಪ್ರತಿಫಲನ.
ಆಳುವವರಿಗೆ ಅಕಾರಿ ವರ್ಗದ ಮೇಲೆ ಹಿಡಿತವಿಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಹಾವೇರಿಯಲ್ಲಿ ಗೋಲಿಬಾರ್ ನಡೆದಾಗ ಮೃತಪಟ್ಟ ರೈತರ ಮನೆಗೆ ಹತ್ತಿಳಿಯದ ‘ರಾಜಕೀಯ ಮಣ್ಣಿನ ಮಕ್ಕಳೇ’ ಇಲ್ಲ. ಎಲ್ಲರೂ ಒಂದೊಂದು ಬಾರಿ ಅವರ ಮನೆಗೆ ಹೋಗಿ ಅತ್ತು ಬಂದರು. ಮೃತರ ವಾರ್ಷಿಕ ಶ್ರದ್ಧಾಂಜಲಿ ಎನ್ನುವಂತೆ ಮತ್ತೆ ಅನ್ನದಾತ ಹಳೇ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದಾನೆ. ಎಲ್ಲರೂ ರೈತರ ಪರವಾಗಿ ಮಾತನಾಡಿದರೂ ಅವರ ಸಮಸ್ಯೆಗಳಿಗೆ ಪರಿಹಾರ ಮಾತ್ರ ದೊರೆಯುತ್ತಿಲ್ಲ. ಆದ್ದರಿಂದ ಈ ಹೇಳಿಕೆಗಳ ನಿಜಾಂಶ ಬಯಲಾಗುತ್ತದೆ. ಇಷ್ಟು ಮಾತ್ರವಲ್ಲ ಬೀಜ, ಗೊಬ್ಬರ ಸಾಕಷ್ಟು ದಾಸ್ತಾನಿದೆ ಎಂದು ಹೇಳುವ ಸರಕಾರ ಅದು ಎಲ್ಲಿದೆ ಎಂದು ಹೇಳುತ್ತಿಲ್ಲ. ಅದನ್ನು ವಿತರಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದಿಲ್ಲ. ಇದಕ್ಕೆ ಕಾರಣ ದಾಸ್ತಾ ನಿರುವುದು ಸರಕಾರದ ಬಳಿಯಲ್ಲ, ಶ್ರೀಮಂತರ ಗೋದಾಮುಗಳಲ್ಲಿ! ಸಬ್ಸಿಡಿ ನೀಡುವುದಿರಲಿ ನಿಗದಿತ ಬೆಲೆಗಿಂತ ನೂರಾರು ರೂಪಾಯಿ ಹೆಚ್ಚು ಹಣ ಪೀಕುವ ಶ್ರೀಮಂತ ಕುಳಗಳು ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ‘ನಮ್ಮ ಬೆಲೆ ಇಷ್ಟೇ ಬೇಕಿದ್ದರೆ ತಗೊಳ್ರಯ್ಯ ಬೇಡವಾದ್ರೆ ಹೋಗ್ರಿ’ ಎಂದು ತಮ್ಮ ವ್ಯಾಪಾರಿ ಬುದ್ಧಿ ಪ್ರದರ್ಶಿಸಿದ್ದರಿಂದ ರೊಚ್ಚಿಗೆದ್ದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು.
ಎಲ್ಲವೂ ಸರಿ ಇದೆ ಎಂದು ಸರಕಾರ ಹೇಳುತ್ತಿದೆ ಆದರೆ ಯಾವುದೂ ಸರಿ ಇಲ್ಲ ಎನ್ನುವುದೇ ವಾಸ್ತವ. ಇಂಥ ದ್ವಂದ್ವಗಳಿಂದ ರೈತರನ್ನು ಪಾರುಮಾಡಲು ಹಾವೇರಿ ಜಿಲ್ಲಾಕಾರಿ ಕರೆದಿದ್ದ ಸಭೆಯಲ್ಲಿ ‘ವ್ಯಾಪಾರಿಗಳ ಧ್ವನಿಯೇ ಹೆಚ್ಚಾಗಿತ್ತು, ಅವರ ಅಬ್ಬರದಲ್ಲಿ ರೈತರ ಧ್ವನಿ ಕ್ಷೀಣಿಸಿತ್ತು’ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದೂ ಅಲ್ಲದೆ ರೈತರಿಗೆ ವಂಚಿಸಿದ ಅಂಗಡಿಗಳ ಪರವಾನಗಿ ರದ್ದುಮಾಡಲು ಜಿಲ್ಲಾಕಾರಿ ಮುಂದಾದಾಗ ಅಂಥ ಕ್ರಮಕ್ಕೆ ಮುಂದಾಗದಂತೆ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಗಳು ಡಿಸಿ ಮೇಲೆ ಒತ್ತಡ ತಂದಿದ್ದರು. ಅಂದರೆ ಆಳುವವರ ಚಿತ್ತ ರೈತಪರವಾಗಿದೆಯೇ ಅಥವಾ ಬಂಡವಾಳಶಾಹಿಗಳ ಪರವಾಗಿದೆಯೇ ಎನ್ನುವುದನ್ನು ಇದು ತೋರುತ್ತದೆ. ಸರಕಾರಗಳನ್ನೇ ಆಟವಾಡಿಸುವ ಶಕ್ತ ಬಂಡವಾಳ ಶಾಹಿಗಳು ರೈತರನ್ನು ಆಡಿಸದೇ ಬಿಟ್ಟಾರೆಯೇ ಎಂಬ ಸಣ್ಣ ಅರಿವು ಇದ್ದರೂ ಸರಕಾರ ಬೀಜ ಮತ್ತು ಗೊಬ್ಬರವನ್ನು ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬಹುದಾಗಿತ್ತು. ಇಂಥ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗದ ಸರಕಾರ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ ಎನ್ನುವಂತೆ ಶ್ರೀಮಂತರ ಪ್ರೀತಿಯನ್ನು ರೈತರ ವೋಟನ್ನೂ ಕಳೆದುಕೊಳ್ಳಲು ಇಚ್ಛಿಸುತ್ತಿಲ್ಲ ಸರಕಾರಕ್ಕೆ ರೈತರ ಮೇಲೆ ಇರುವ ಪ್ರೀತಿ ಢೋಂಗಿತನದ್ದು ಎನ್ನದೆ ಬೇರೆ ದಾರಿಯೇ ಇಲ್ಲ.
ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬು ಅರೆದು ತಿಂದಿವೆ ಬಾಕಿ ಪಾವತಿಸಿಲ್ಲ. ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಮುಸುಕಿನ ಜೋಳ ಖರೀದಿಸಿರುವ ಸರಕಾರವೇ ಅನೇಕ ಕಡೆ ಸರಕಾರವೇ ರೈತರಿಗೆ ಹಣ ಸಂದಾಯ ಮಾಡಿಲ್ಲ. ಬಿತ್ತಲು ಬೀಜವಿಲ್ಲ. ಎಲ್ಲವೂ ಇದ್ದರೆ ಮಳೆ ಇಲ್ಲ. ಮಳೆಯಾದರೆ ಉತ್ತಮ ಬೆಲೆ ಇಲ್ಲ.... ಹೀಗೆ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ರಾಜ್ಯದ ಕೃಷಿ ಕ್ಷೇತ್ರ ನಲುಗುತ್ತಿದೆ ಗ್ರಾಮ ಸಹಾಯಕರಿಂದ ಹಿಡಿದು ತಹಸೀಲ್ದಾರ್‌ವರೆಗೆ ಬೃಹತ್ತಾದ ಕಂದಾಯ ಇಲಾಖೆ, ಕೃಷಿ ಇಲಾಖೆ, ಕೃಷಿ ಸಲಹಾ ಕೇಂದ್ರಗಳಿವೆ. ಇದು ಸಾಲದಿದ್ದರೆ ಇಡೀ ಆಡಳಿತಯಂತ್ರವನ್ನೇ ಬಳಸಿಕೊಂಡು ಸರಕಾರ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಿಸಬಹುದು. ಅದನ್ನು ಬಿಟ್ಟು ಖಾಸಗಿಯವರಿಗೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡು ಈಗ ಸಬೂಬು ಹೇಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ನಮಗೆ ವರ್ಷಕ್ಕೆ ಎಷ್ಟು ಗೊಬ್ಬರ, ಬೀಜ ಬೇಕು ಎನ್ನುವ ಅಂದಾಜು ಪಟ್ಟಿ ಸರಕಾರದ ಮುಂದಿದ್ದರೂ ಇಂಥ ಗೊಂದಲಗಳಿಗೆ ಕಾರಣ ಶ್ರೀಮಂತರ ಗೋದಾಮುಗಳಲ್ಲಿ ಅವು ಬಂಯಾಗಿರುವುದು. ಆದ್ದರಿಂದ ತುಂಬ ಅಗತ್ಯ ವಸ್ತುಗಳನ್ನು ಸರಕಾರ ಖಾಸಗಿ ಆಡಳಿತಕ್ಕೆ ನೀಡದೇ ನೇರವಾಗಿ ವಿತರಿಸುವ ಧೈರ್ಯ ತೋರಿದರೆ ಇಂಥ ಅವಘಡಗಳು ನಡೆಯ ದಂತೆ ತಡೆಯಬಹುದು. ಬಹಳ ಮುಖ್ಯವಾಗಿ ಕಂಪನಿ ಬೀಜಗಳ ವಿಷಯದಲ್ಲಿ ಸರಕಾರ ರೈತರನ್ನು ಎಚ್ಚರಿಸಬೇಕಿದೆ. ರಾಸಾಯನಿಕ ಕೃಷಿಯಿಂದ ಆಗುತ್ತಿರುವ ನಷ್ಟದ ಬಗ್ಗೆಯೂ ಜಾಗೃತಿ ಮೂಡಿಸಬೇಕಾಗಿದೆ. ರೈತರು ತಮ್ಮ ಹೊಲದಲ್ಲೇ ಬೆಳೆದ ಬೆಳೆಯಲ್ಲೇ ಬೀಜ ತಯಾರಿಸಿ ಸಮೃದ್ಧ ಕೃಷಿ ಮಾಡಿದ ಇತಿಹಾಸವನ್ನು ಮನವರಿಕೆ ಮಾಡಿ, ಪಾರಂಪರಿಕ ಮತ್ತು ಸಮೃದ್ಧ ಕೃಷಿಗೆ ಮುಂದಾಗಬೇಕಾಗಿದೆ ಇದರಿಂದ ರೈತರಿಗೆ ಪರಾವಲಂಬಿ ಬದುಕು ತಪ್ಪುವುದರ ಜತೆಗೆ ನಮ್ಮ ಪರಂಪರೆಯನ್ನು ಮುಂದುವರಿಸಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ಗೋಲಿಬಾರ್ ಎನ್ನುವುದು ಮಕ್ಕಳು ಸಿಡಿಸುವ ಪಟಾಕಿಯಾಗುತ್ತದೆ. ಆತ್ಮಹತ್ಯೆ ಎನ್ನುವುದು ಸಮೂಹ ಸನ್ನಿಯಾಗುತ್ತದೆ. ಎಲ್ಲ ಸರಕಾರಗಳಂತೆ ಬಿಜೆಪಿ ಸರಕಾರವೂ ತನ್ನ ವಾರ್ಷಿಕ ಸಾಧನೆಯ ಸಮಾವೇಶವನ್ನು ಆಚರಿಸಿಕೊಂಡಿದೆ. ಇಲ್ಲಿ ಸಾಧನೆ ಮಾತಾಡುತ್ತಿಲ್ಲ, ಮಾತುಗಳೇ ಸಾಧನೆಯಾಗಿ ಕಾಣುತ್ತಿವೆ.

No comments: