Monday, October 12, 2009

ಕೃಷಿ ಕ್ಷೇತ್ರದ ಅಭಿವೃದ್ಧಿಯ ತುತ್ತೂರಿ ಬಜೆಟ್

ಕೇಂದ್ರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ವಿಶ್ವದ ಆರ್ಥಿಕ ಹಿಂಜರಿತವನ್ನು ಗಮನದಲ್ಲಿಟ್ಟುಕೊಂಡು ಕಸರತ್ತು ನಡೆಸಿರುವುದನ್ನು ಬಿಟ್ಟರೆ ಬಹುಜನರ ಬದುಕಿನ ಮೂಲವಾಗಿರುವ ಕೃಷಿ ಕ್ಷೇತ್ರದ ಬೆಳವಣಿಗೆಗೆ ಹೇಳಿಕೊಳ್ಳುವಂಥ ಪ್ರಯತ್ನಗಳು ನಡೆದಿಲ್ಲ. ದೇಶದ ಆಹಾರ ಉತ್ಪಾದನೆ ಕ್ಷೇತ್ರವಾಗಿರುವ ಕೃಷಿಯ ನಿರೀಕ್ಷೆಗಳನ್ನು ಈಡೇರಿಸುವತ್ತ ಮಾಮೂಲಿ ಪ್ರಯತ್ನ ಮಾತ್ರ ಆಗಿದೆ.
೧೯೯೫ಕ್ಕೂ ಮೊದಲು ಭಾರತ ಕೃಷಿ ಉತ್ಪನ್ನಗಳ ರಫ್ತಿನ ಸಾಲಿನಲ್ಲಿತ್ತು ಆನಂತರದಲ್ಲಿ ಆದ ಕೈಗಾರಿಕೆಗಳ ಕ್ಷಿಪ್ರ ಬೆಳವಣಿಗೆಯಿಂದ ಕೃಷಿ ಉತ್ಪನ್ನಗಳ ರಫ್ತು ಕಡಿಮೆಯಾಯಿತು. ಇದರಿಂದ ಆ ಕ್ಷೇತ್ರ ಅವಗಣನೆಗೆ ಒಳಗಾಗಿ ಕೃಷಿ ಲಾಭದಾಯಕ ಉದ್ಯಮವೇ ಅಲ್ಲ ಎನ್ನುವಂಥ ಬಂಡವಾಳಶಾಹಿ ಧೋರಣೆಗಳು ದೇಶದಲ್ಲಿ ಬೇರೂರಿದವು. ಇಂಥ ಕಾರಣಗಳಿಂದ ಬೃಹತ್ ಜನಸಂಖ್ಯೆ ಹೊಂದಿರುವ ದೇಶ ಇಂದು ಜಗತ್ತಿನ ಆಮದುದಾರನಾಗಿದೆ. ಹಠಾತ್ ಎದುರಾದ ವಿಶ್ವ ಆರ್ಥಿಕ ಹಿಂಜರಿತದಿಂದ ಏಕ ಆರ್ಥಿಕ ಮೂಲ ಹೊಂದಿದ್ದ ಶ್ರೀಮಂತ ದೇಶಗಳು ದಿವಾಳಿಯಾದವು. ಕೆಲವು ದೇಶಗಳಲ್ಲಿ ಬ್ಯಾಂಕುಗಳೇ ಬಾಗಿಲು ಮುಚ್ಚಿದವು. ಆಗ ಎಲ್ಲರಿಗೂ ಅರಿವಾದ ಒಂದು ಸತ್ಯ ಎಂದರೆ ದೇಶದ ಆಂತರಿಕ ಉತ್ಪಾದನೆ ಹೆಚ್ಚಿಸುವುದು, ಆಹಾರ ಸ್ವಾವಲಂಬನೆಗೆ ಒತ್ತು ನೀಡುವುದು ಮತ್ತು ಬಹು ಉತ್ಪನ್ನಗಳನ್ನು ಉತ್ತೇಜಿಸುವುದು. ಜಾಗತೀಕರಣದ ಒಪ್ಪಂದಗಳಿಂದಾಗಿ ಬಡರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳ ಮಾರುಕಟ್ಟೆಯಾಗಿ ರೂಪುಗೊಂಡಿವೆ. ಉದಾರೀಕರಣದ ಮುಖ್ಯ ಗುರಿಯೇ ತೃತೀಯ ಜಗತ್ತಿನ ರಾಷ್ಟ್ರಗಳನ್ನು ಆರ್ಥಿಕ ಗುಲಾಮಗಿರಿಗೆ ಒಳಪಡಿಸುವುದು. ಅದು ಈಗ ಈಡೇರಿ ಶ್ರೀಮಂತ ರಾಷ್ಟ್ರಗಳ ರಫ್ತು ಮಾರುಕಟ್ಟೆ ಜಗತ್ತಿನಾದ್ಯಂತ ವಿಸ್ತರಣೆಗೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ದೇಶಿ ಮಾರುಕಟ್ಟೆಯನ್ನು ಬಲಿಷ್ಠಗೊಳಿಸಲು ಬಜೆಟ್‌ನಲ್ಲಿ ಕೃಷಿಗೆ ಇನ್ನೂ ಹೆಚ್ಚು ಒತ್ತು ನೀಡುವ ಅಗತ್ಯವಿತ್ತು.
ರಫ್ತನ್ನೇ ಗುರಿಯಾಗಿಟ್ಟುಕೊಂಡಿದ್ದ ದೇಶಗಳು ಅದರಿಂದ ಹಿನ್ನಡೆಯಾದಾಗ ಆದ ನಷ್ಟವನ್ನು ಇಡೀ ವಿಶ್ವದ ನಷ್ಟ ಎಂದು ಹೇಳಿ ತಮ್ಮ ಸಮಸ್ಯೆಗಳನ್ನು ಜಾಗತಿಕ ಸಮಸ್ಯೆಯಾಗಿ ಬಿಂಬಿಸಿದವು. ಕೃಷಿ ಕ್ಷೇತ್ರ ಉತ್ತೇಜನಕ್ಕೆ ಭಾರತ ಯಾವ ಹೆಜ್ಜೆಗಳನ್ನಿಡುತ್ತಿದೆ ಎಂದು ಅವು ಕಾಯುತ್ತಿರುವಾಗ ಕೇಂದ್ರ ಸರಕಾರ ಕೃಷಿ ಕ್ಷೇತ್ರ ಬೆಳವಣಿಗೆಗೆ ಬಜೆಟ್‌ನಲ್ಲಿ ಮಹತ್ವದ ಹೆಜ್ಜೆಗಳನ್ನಿಡಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ರೈಲ್ವೆಗೆ ಇರುವಂತೆ ಕೃಷಿಗೂ ಪ್ರತ್ಯೇಕ ಬಜೆಟ್ ಬೇಕೆಂಬ ಒತ್ತಾಯಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ದೇಶದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನದ ಕೆಲವು ಅಂಶಗಳನ್ನು ಹೊರತುಪಡಿಸಿದರೆ ಇದೊಂದು ಸಂಪ್ರದಾಯಿಕ ಬಜೆಟ್‌ನಂತೆ ಕಾಣುತ್ತಿದೆ. ರಸಗೊಬ್ಬರದ ಸಬ್ಸಿಡಿ ನೇರವಾಗಿ ರೈತರಿಗೆ ಸಿಗುವಂತೆ, ಶೇ. ೬ರ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸಿಗುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಇವು ಸಹಜವಾಗಿ ಜಾರಿಗೆ ಬರುವ ಯೋಜನೆಗಳು. ಸಾಲದ ಪ್ರಮಾಣ ಹೆಚ್ಚಾಗುವುದು ಒಂದು ರೀತಿಯಲ್ಲಿ ಆಶಾದಾಯಕ ಬೆಳವಣಿಗೆಯಂತೆ ಕಂಡುಬಂದರೂ ರೈತರು ಪಡೆಯುವ ಸಾಲದ ಪ್ರಮಾಣ ಜಾಸ್ತಿಯಾದರೆ ಅದು ಬೇರೊಂದು ದಾರಿಗೆ ಕಾರಣವಾಗುತ್ತದೆ ಎಂಬ ಅಪಾಯವನ್ನು ಗಮನಿಸಬೇಕು.
ಈಗಿನ ಅಗತ್ಯಗಳು
ದೇಶಿ ಮಾರುಕಟ್ಟೆ ಸುಧಾರಣೆ, ದಲ್ಲಾಳಿಗಳಿಂದ ರೈತರಿಗೆ ಮುಕ್ತಿ, ಉತ್ಪಾದಕರು ಮತ್ತು ರೈತರ ನಡುವೆ ನೇರ ಸಂಪರ್ಕ, ಬೆಂಬಲ ಬೆಲೆ, ದೇಶಿ ಕೃಷಿಗೆ ಉತ್ತೇಜನ, ಅತಿವೃಷ್ಟಿ-ಅನಾವೃಷ್ಟಿಯಂಥ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಆವರ್ತ ನಿ ಹೆಚ್ಚಳದಂಥ ಕ್ರಮಗಳು ಪ್ರಸ್ತಾಪ ಆಗಿಲ್ಲ. ಜಗತ್ತಿನ ಎರಡನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವೆಂದು ಬೀಗುತ್ತಿರುವ ಭಾರತದಲ್ಲಿ ಇದುವರೆಗೆ ಕೃಷಿಯನ್ನು ಒಂದು ಲಾಭದಾಯಕ ಉದ್ಯಮ ಎಂದು ಘೋಷಿಸಲು ಸಾಧ್ಯವಾಗಿಲ್ಲ. ಅಮೆರಿಕದ ಹೇಳಿಕೆಗೆ ಬಾಲ ಅಲ್ಲಾಡಿಸುತ್ತ ನಮ್ಮ ರೈತರಿಗೆ ನೀಡುತ್ತಿರುವ ಸಬ್ಸಿಡಿಯನ್ನು ಮೊಟಕುಗೊಳಿಸುವ ಸರಕಾರಗಳು ಕೃಷಿ ಉದ್ಯಮದ ಬಗ್ಗೆ ಬೊಗಳೆ ಮಾತುಗಳನ್ನಾಡುತ್ತಿವೆ.
ಕಳೆದ ೨೦ ವರ್ಷಗಳಿಂದ ಇಂಥ ಬೊಗಳೆ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ. ಇದೇ ತುತ್ತೂರಿಗಳನ್ನು ಎಲ್ಲ ಸರಕಾರಗಳೂ ಊದುತ್ತಲೇ ಬಂದಿವೆ. ಆದರೆ ನಮ್ಮ ಉತ್ಪಾದನೆ ಪ್ರಮಾಣ ಮಾತ್ರ ನಿಂತ ಜಾಗದಲ್ಲೇ ಗಿರಕಿ ಹೊಡೆಯುತ್ತಿದೆ.
ಗ್ರಾಮಗಳ ಅಭಿವೃದ್ಧಿಯತ್ತ ನಮ್ಮ ಪಯಣ ಎಂದು ಎಲ್ಲ ಸರಕಾರಗಳೂ ಹೇಳುತ್ತಲೇ ಬಂದಿವೆ. ಬಜೆಟ್‌ನಲ್ಲಿ ಒತ್ತುನೀಡಿದರೂ ಗ್ರಾಮಗಳು ಖಾಲಿಯಾಗುತ್ತಾ ನಗರಗಳು ವಿಸ್ತಾರವಾಗುತ್ತಲೇ ಇವೆ. ೨೭ ಲಕ್ಷಕ್ಕೂ ಅಕ ಹಳ್ಳಿಗಳನ್ನು ಹೊಂದಿರುವ ಭಾರತದಲ್ಲಿ ಗ್ರಮೀಣ ಅಭಿವೃದ್ಧಿ ಮಂತ್ರ ಜಪಿಸದಿದ್ದರೆ ಅಕಾರ ದೊರೆಯುವುದಿಲ್ಲ ಎಂಬ ಕಟು ಸತ್ಯವನ್ನು ಅರಿತ ಎಲ್ಲ ರಾಜಕೀಯ ಪಕ್ಷಗಳೂ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಲೇ ಭಾರತದ ಹಳ್ಳಿಗಳನ್ನು, ಕೃಷಿಯನ್ನು ದಿವಾಳಿ ಎಬ್ಬಿಸಿವೆ.
ಲೋಕಸಭೆ ಚುನಾವಣೆಗೆ ಮೊದಲು ಯುಪಿಎ ಘೋಷಣೆಯಂತೆ ಅಮ್ ಆದ್ಮಿಪರ ನಡೆಯಲು ಸಾಕಷ್ಟು ಪ್ರಯತ್ನಗಳಾಗಿವೆ ಎನ್ನುವುದೇ ಬಜೆಟ್‌ನ ಹೈಲೈಟ್. ಆಹಾರ ಭದ್ರತೆ ಒದಗಿಸಲು ಬಡವರಿಗೆ (ಬಿಪಿಎಲ್ ಪಡಿತರದಾರರಿಗೆ) ಕಡಿಮೆ ಬೆಲೆಗೆ ೨೫ ಕೆಜಿ ಗೋ, ಅಕ್ಕಿ ಕೊಡುವ ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹವೇ ಆದರೂ ಉತ್ಪಾದನೆಯೇ ಕುಂಠಿತಗೊಂಡಿರುವಾಗ ಬೇಡಿಕೆಯ ಪ್ರಮಾಣ ಹೆಚ್ಚಾದರೆ ಮತ್ತೆ ಆಮದು ಎಂಬ ಹೊನ್ನಶೂಲಕ್ಕೆ ತಲೆಕೊಡಬೇಕಾಗುತ್ತದೆ. ಅಂತ್ಯೋದಯ ಯೋಜನೆಗೆ ಒಳಪಡುವವರೂ ಸೇರಿ ಕರ್ನಾಟಕ ರಾಜ್ಯವೊಂದರಲ್ಲೇ ೧.೦೬ ಕೋಟಿ ಬಿಪಿಎಲ್ ಕಾರ್ಡುದಾರರಿದ್ದಾರೆ. ಈ ಎಲ್ಲ ಕುಟುಂಬಗಳು ಪ್ರತಿ ತಿಂಗಳು ೨೦ ಕೆಜಿ ಅಕ್ಕಿ, ೩ ಕೆಜಿ ಗೋ ಹಾಗೂ ೭೫೦ ಗ್ರಾಂ ಸಕ್ಕರೆ ಪಡೆಯುತ್ತಿವೆ. ಅದಕ್ಕಾಗಿ ಸದ್ಯ ರಾಜ್ಯ ಸರಕಾರ ಆಹಾರ ಸಹಾಯಧನ ಎಂದು ೧,೫೬೦ ಕೋಟಿ ರೂ. ಖರ್ಚು ಮಾಡುತ್ತಿದೆ. ಕೇಂದ್ರದ ಹೊಸ ಯೋಜನೆ ಜಾರಿಗೆ ಬಂದರೆ ಈ ಖರ್ಚಿನ ಬಾಬತ್ತು ಬಹುತೇಕ ದುಪ್ಪಟ್ಟಾಗಲಿದೆ.
ಬಡವರಿಗೆ ಅನ್ನ ಸಿಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಬೇರೆಯವರಿಂದ ಪಡೆದು ನೀಡುವುದಕ್ಕಿಂತ ನಾವೇ ಉತ್ಪಾದಿಸಿ ನೀಡುವಂಥ ಯೋಜನೆಗಳು ಭಾರತಕ್ಕೆ ಅಗತ್ಯವಾಗಿವೆ. ಗೊಬ್ಬರಕ್ಕೆ ನೀಡುವ ಸಬ್ಸಿಡಿ ಎಂದರೆ ರಾಸಾಯನಿಕ ಕೃಷಿಯನ್ನು ಉತ್ತೇಜಿಸಿ ಗೊಬ್ಬರ ಕಂಪನಿ ಮಾಲೀಕರನ್ನು ಶ್ರೀಮಂತರನ್ನಾಗಿ ಮಾಡುವುದು ಎಂದೇ ಅರ್ಥ. ಬೀಜ ಕಂಪನಿಗೆ ಹಣ ಸುರಿದು ರೈತರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ. ಆದ್ದರಿಂದ ಈಗ ಸ್ವಾಭಿಮಾನಿ ಕೃಷಿ ನೀತಿಗಳು, ನೀರಾವರಿ ಸವಲತ್ತುಗಳು ಹೆಚ್ಚಾಗುವಂಥ ಯೋಜನೆಗಳು ಪ್ರಸಕ್ತಸಾಲಿನ ಬಜೆಟ್‌ನಲ್ಲಿ ಮಾಯವಾಗಿರುವುದು ಉತ್ತೇಜನ ಕ್ರಮಗಳೇನಲ್ಲ. ಸಾಲ ಮನ್ನಾ ಎನ್ನುವುದು ಶಾಶ್ವತ ಪರಿಹಾರವೇ ಅಲ್ಲ, ಸಾಧ್ಯವಾದರೆ ಇನ್ನೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಇಲ್ಲವಾದರೆ ಪಂಚವಾರ್ಷಿಕ ಯೋಜನೆಯಂತೆ ಸಾಲ ಮನ್ನಾದ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ.
ಈ ಬಾರಿಯ ಬಜೆಟ್‌ನಲ್ಲಿ ಭಾರೀ ಯೋಜನೆಗಳನ್ನು ರೂಪಿಸಲಾಗಿದೆ. ಇವೆಲ್ಲ ಚುನಾವಣೆ ಸಂದರ್ಭದ ಭರವಸೆಗಳಂತೆ ಕಾಣುತ್ತಿವೆ. ಏಕಕಾಲಕ್ಕೆ ಬಹು ಯೋಜನೆಗಳನ್ನು ರೂಪಿಸುವುದು ಎಂದರೆ ಎಲ್ಲವನ್ನೂ ಅರ್ಧಕ್ಕೇ ನಿಲ್ಲಿಸುವುದು ಅಥವಾ ಅಲ್ಪ ಯೋಜನೆಗಳನ್ನು ಮಾತ್ರ ಪೂರ್ಣಗೊಳಿಸುವುದು ಎಂದೇ ಅರ್ಥ. ದೇಶಿ ಬಂಡವಾಳ ಹೆಚ್ಚಿಸುವ ಯೋಜನೆಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಆರ್ಥಿಕ ಸಂಪನ್ಮೂಲ ಹೆಚ್ಚಿಸಬಹುದಾದ ಕ್ರಮಗಳೂ ಇಲ್ಲ. ಇದೊಂದು ಯುಪಿಎ ಚುನಾವಣೆ ಪ್ರಣಾಳಿಕೆಯನ್ನು ಬೆನ್ನು ಹತ್ತಿದ ಪ್ರಯತ್ನವಷ್ಟೆ. ಕೆಲವು ಸುಧಾರಣಾ ಕ್ರಮಗಳನ್ನು ಹೇಳಿದ್ದಾರೆ. ಈ ಕ್ರಮಗಳನ್ನು ಅವರು ಬಜೆಟ್‌ನ ನಂತರದಲ್ಲೂ ಹೇಳಬಹುದಾಗಿತ್ತು. ಈ ಅಂಶಗಳನ್ನು ಗಮನಿಸಿದರೆ ಬಜೆಟ್ ಬಹು ನಿರೀಕ್ಷೆಯನ್ನು ಹುಸಿಗೊಳಿಸಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ೨೩ ಕೋಟಿ ಜನ ಒಂದು ಹೊತ್ತು ಹಸಿದು ಮಲಗುತ್ತಿದ್ದಾರೆ. ಅವರ ಸಂಖ್ಯೆ ೨೦೨೦ರ ವೇಳೆಗೆ ೪೦ ಕೋಟಿ ತಲುಪಲಿದೆ ಎಂದು ಹೇಳಲಾಗುತ್ತಿದೆ. ಇಂಥ ವಿಚಾರಗಳತ್ತ ಬಜೆಟ್ ಕೇಂದ್ರೀಕರಿಸಬೇಕಾಗಿತ್ತು.

No comments: