Monday, October 12, 2009

‘ಮಠಾಧೀಶ’ರನ್ನು ಒಲಿಸಿಕೊಳ್ಳುವ ಹೊಸ ಪರಿ

ಈಗ ನಾವು ಮಾಧ್ಯಮಗಳ ಯುಗದಲ್ಲಿದ್ದೇವೆ. ಜ್ಞಾನ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದು ಎನ್ನಲಾಗುತ್ತಿದ್ದರೂ ಅವು ಅಜ್ಞಾನವನ್ನೂ ಪ್ರಚಾರ ಮಾಡುತ್ತಿವೆ ಎನ್ನುವ ಎಚ್ಚರ ಈಗಿನ ಅನಿವಾರ್ಯ. ದಿನದಿಂದ ದಿನಕ್ಕೆ ಮಾಧ್ಯಮ ಲೋಕ ಬೆಳೆದಂತೆ ಪೈಪೋಟಿಯೂ ತೀವ್ರಗೊಳ್ಳುತ್ತಿದೆ. ಈಗ ಅವುಗಳು ಯಾವ ಮಟ್ಟಕ್ಕೆ ಬಂದು ನಿಂತಿವೆ ಎಂದರೆ ದೆವ್ವ-ಭೂತ-ಪಿಶಾಚಿ-ದೇವರು, ಅವುಗಳ ಶಕ್ತಿ ಮುಂತಾದ ವಿಚಾರಗಳನ್ನು ಪ್ರಚುರ ಪಡಿಸುತ್ತ ಇಡೀ ಸಮಾಜವನ್ನು ಮೌಢ್ಯದ ಕಟಕಟೆಯಲ್ಲಿ ನಿಲ್ಲಿಸತೊಡಗಿವೆ. ಈ ಕಲ್ಲಿನಲ್ಲಿ ಅದೆಂಥ ಅದ್ಭುತ ಶಕ್ತಿ ಇದೆ ಎಂದರೆ.... ಈ ಮಣ್ಣಿನಲ್ಲಿ ವಿಚಿತ್ರವಾದ ಶಕ್ತಿ ಇದೆ, ಅಗೋಚರ ದಿಬ್ಬ.... ಎಂದು ಹೇಳುತ್ತ ಮುಗ್ಧ ಜನರ ನಂಬಿಕೆಗಳನ್ನು ಪಲ್ಲಟಗೊಳಿಸುತ್ತಿವೆ. ಇದರಿಂದ ಜನರಲ್ಲಿ ಸತ್ಯ ಮತ್ತು ಅಸತ್ಯದ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ಅಲ್ಲದೆ ಜನರು ಸ್ವಶಕ್ತಿಯಮೇಲೆ ನಂಬಿಕೆ ಕಳೆದುಕೊಂಡು ಅಗೋಚರ ಶಕ್ತಿಯನ್ನು ಮಾತ್ರ ನಂಬುವಂತೆ ಮಾಡತೊಡಗಿವೆ. ಈ ಮಣ್ಣಿನ ಪ್ರತಿ ಕಣದಲ್ಲೂ ವಿಶೇಷ ಶಕ್ತಿ ಇದೆ ಎಂಬ ನಂಬಿಕೆಯನ್ನು ದಾಸರು, ಶರಣರು ಬಹಳ ಹಿಂದೆಯೇ ಹೇಳಿದ್ದಾರೆ. ಏಕಲವ್ಯ ಮಾಡಿಟ್ಟುಕೊಂಡಿದ್ದ ದ್ರೋಣರ ಮಣ್ಣಿನ ಮೂರ್ತಿಗೆ ಅದ್ಯಾವ ಶಕ್ತಿ ಇತ್ತು? ಪ್ರಹ್ಲಾದ ತೋರಿಸಿದ ಕಂಬದಲ್ಲೇ ಉಗ್ರ ನರಸಿಂಹ ಹೇಗೆ ಬಂದ? ಪುರಾಣದ ಇಂಥ ನೂರಾರು ನಿದರ್ಶನಗಳು ನಮ್ಮ ಮುಂದಿವೆ. ‘ನಂಬಿದರೆ ಇಂಬಾಗು, ನಂಬಿ ಕರೆದರೆ ಓ ಎನ್ನನೇ ಶಿವನು ಎಂದಿದ್ದರು ವಚನಕಾರರು. ನಂಬಿ ಕೆಟ್ಟವರಿಲ್ಲವೋ ಎಂದರು ದಾಸರು. ಯಾವುದು ನಮ್ಮ ಆಚರಣೆಯೋ ಅದೇ ನಮಗೆ ಪ್ರಿಯವಾಗಿ, ಅದೇ ನಂಬಿಕೆಯೂ ಆಗುತ್ತದೆ. ಆಗ ಘಟಿಸುವ ಘಟನೆಗಳು ನಂಬಿಕೆಗಳ ಮೇಲೆ ಪರಿಣಾಮ ಬೀರುವುದರಿಂದ ಅದರ ಮೇಲೆ ನಂಬಿಕೆಗಳು ಹೆಚ್ಚುತ್ತಾ ಹೋಗುತ್ತವೆ. ಇದು ಶ್ರದ್ಧೆ, ಭಕ್ತಿ, ನಂಬಿಕೆಗಳ ಮಿಳಿತವಷ್ಟೆ. ಇದನ್ನೆ ವಿಚಿತ್ರವೆಂದು ಇಡೀ ಸಮಾಜವನ್ನು ಮೌಢ್ಯದಲ್ಲಿ ಕೊಂಡೊಯ್ಯಲು ಮಾಧ್ಯಮಗಳು ಮುಂದಾಗಿರುವುದು ನಾಚಿಕೆಗೇಡಿನ ಕೃತ್ಯವಲ್ಲದೆ ಬೇರೇನೂ ಅಲ್ಲ.
ಇಂಥ ಕಟ್ಟುಕಥೆಗಳನ್ನು ನಂಬುವ ಮೂಢ ರಾಜಕಾರಣಿಗಳ ಸಂಖ್ಯೆಯೂ ಕಡಿಮೆ ಇಲ್ಲ. ಇವರ ಮೌಢ್ಯದ ಫಲ ಪಡೆಯಲು ಜೋತಿಷಿಗಳಸಂಖ್ಯೆಯಂತೂ ದ್ವಿಗುಣಗೊಳ್ಳತೊಡಗಿದೆ. ಇದರಿಂದ ಸ್ವ ಶಕ್ತಿಯಮೇಲೆ ನಂಬಿಕೆಗಳು ಮಾಯವಾಗಿ ಅಗೋಚರ ಶಕ್ತಿಯನ್ನೇ ನಂಬುವ ವರ್ಗವೇ ಸೃಷ್ಟಿಯಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಲೋಕಸಭೆ ಚುನವಣೆ ಸ್ಪರ್ಧೆಗೆ ಟಿಕೆಟ್ ಬೇಕಾದವರು ಜ್ಯೋತಿಷಿಗಳಿಂದ ಸರ್ಟಿಫಿಕೇಟ್ ತರುವುದು ಕಡ್ಡಾಯ ಎಂದು ಜಾ. ದಳದ ನಾಯಕರು ಫರ್ಮಾನು ಹೊರಡಿಸಿದ್ದರು. ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷದಿಂದ ಚುನಾವಣೆ ಟಿಕೆಟ್ ಬೇಕಾದವರು ಜನ್ಮಕುಂಡಲಿಯೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿತ್ತು. ಇದು ಕುಂಡಲಿ ಮತ್ತು ಕಮಂಡಲದ ರಾಜಕಾರಣ, ನಂಬುವುದು ಮತ್ತು ನಂಬದಿರುವುದು ಅವರವರ ನಿರ್ಧಾರಕ್ಕೆ ಬಿಟ್ಟದ್ದು ಆದರೆ ಅದನ್ನು ಸಾರ್ವತ್ರೀಕರಣಗೊಳಿಸುವುದು ಸಲ್ಲ. ಇವರ ಕುಂಡಲಿ ಸರಿ ಇದ್ದು ಗ್ರಹಗತಿಗಳೂ ಇವರ ಪರವಾಗಿಯೇ ಇವೆ ಎಂದುಕೊಳ್ಳೊಣ ಆದರೆ ಜನರೇ ವೋಟು ನೀಡದಿದ್ದರೆ ಪಕ್ಷದ ಕುಂಡಲಿ ನೋಡುತ್ತಾರೆಯೇ? ಅಥವಾ ಪಕ್ಷದ ಅಧ್ಯಕ್ಷರ ಕುಂಡಲಿ ನೋಡುತ್ತಾರೆಯೇ? ಅವೆಲ್ಲವೂ ಸರಿ ಇದ್ದು ಕೆಲಸಮಾಡದ ಸೋಮಾರಿಗಳು ಆಯ್ಕೆಯಾದರೆ ದೇಶದ ಕುಂಡಲಿ ನೋಡುತ್ತಾರೆಯೇ? ಇತ್ತೀಚಿನ ದಿನಗಳಲ್ಲಿ ಅನೇಕ ತೀರಾ ತೀರ ಖಾಸಗಿ ವಿಚಾರಗಳು ಸಾರ್ವತ್ರೀಕರಣಗೊಳ್ಳುತ್ತಿವೆ. ಅಲ್ಲದೆ ತಮ್ಮ ನಂಬಿಕೆಗಳನ್ನು ಇತರರ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಇಂಥ ವಿಚಾರಗಳಲ್ಲಿ ನಂಬಿಕೆಯಿಲ್ಲದವರೂ ಕೂಡಾ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಒಪ್ಪಬೇಕಾಗುತ್ತಿದೆ. ಇದರಿಂದ ಸರಿ ತಪ್ಪುಗಳ ವಿಮರ್ಶೆಯೇ ನಡೆಯದಂತಾಗಿ ಪ್ರಶ್ನಿಸುವ ಗುಣವೇ ಜನರಿಂದ ಮಾಯವಾಗುತ್ತಿದೆ.
ಇತ್ತೀಚೆಗೆ ಮಠಾಶರೊಬ್ಬರ ಬಗ್ಗೆ ರಾಜಕೀಯ ನಾಯಕರೊಬ್ಬರು ಹಗುರವಾಗಿ ಮಾತನಾಡಿದ್ದರು ಅದಕ್ಕೆ ಮಠಾಶರ ಸಮುದಾಯದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಆ ರಾಜಕಾರಣಿ, ‘ಒಂದು ಸಮುದಾಯದವರು ಪ್ರತಿಭಟಿಸಿದರೆ ಉಳಿದವರು ಸುಮ್ಮನಿರುತ್ತಾರೆಯೇ’ ಎಂದು ಪ್ರಶ್ನಿಸಿದ್ದರು. ಅಂದರೆ ಯಾರಾದರೂ ಪ್ರತಿಭಟಿಸಿದರೆ ಮತ್ತೊಬ್ಬರು ಅದರ ವಿರುದ್ಧ ಪ್ರತಿಭಟಿಸಲೇ ಬೇಕು ಎನ್ನುವುದು ಅವರ ಮಾತಿನ ಅರ್ಥವಾಗಿತ್ತು. ಇದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ. ಒಬ್ಬರನ್ನು ಮತ್ತೊಬ್ಬರ ಮೇಲೆ ಎತ್ತಿಕಟ್ಟಿ ಮಾಡುತ್ತಿರುವ ವರ್ತಮಾನದ ರಾಜಕಾರಣ ಯಾರ ಹಿತವನ್ನೂ ಬಯಸಲಾರದು.
ಕೇವಲ ಎರಡು ದಶಕಗಳ ಹಿಂದೆ ಮಠಗಳು ವಿಧಾನ ಸೌಧದಿಂದ ಸಮಾನ ದೂರ ಕಾಯ್ದುಕೊಂಡಿದ್ದವು. ಮಠಗಳು ವಿಚಾರ ಮತ್ತು ಧರ್ಮದ ಆಚರಣೆ ಕುರಿತು ಬೋಸುತ್ತಿದ್ದವು, ಆಗ ರಾಜಕೀಯ ನಾಯಕರು ಮಠಗಳನ್ನು ಅಥವಾ ಸಮುದಾಯವನ್ನು ಟೀಕಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗೇನಾದರೂ ಅಂಥ ಸಂದರ್ಭ ಎದುರಾದರೆ ಹತ್ತಾರುಬಾರಿ ಯೋಚಿಸುತ್ತಿದ್ದರು. ಮತ್ತು ಬಹಳ ಎಚ್ಚರದಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿದ್ದರು. ಹಾಗೆಯೇ ಮಠಾಶರು ಧರ್ಮ ಮತ್ತು ರಾಜಧರ್ಮದ ನಡುವಿನ ವ್ಯತ್ಯಾಸವನ್ನು ಗ್ರಹಿಸುತ್ತಿದ್ದರಿಂದ ಘರ್ಷಣೆಗಳು ಕಡಿಮೆ ಇರುತ್ತಿದ್ದವು. ವೈದ್ಯ ಮತ್ತು ತಾಂತ್ರಿಕ ಕಾಲೇಜುಗಳನ್ನು ತೆರೆದು ಶಿಕ್ಷಣ ಮಾರುವ ದುರಾಸೆ ಮಠಗಳಲ್ಲಿ ಬೆಳೆದಂತೆ ಅವನ್ನು ಈಡೇರಿಸಿಕೊಳ್ಳಲು ಮಠಾಶರು ವಿಧಾನ ಸೌಧಕ್ಕೆ ಹತ್ತಿರವಾಗತೊಡಗಿದರು. ಆಗಿನಿಂದ ರಾಜಧರ್ಮ ಮತ್ತು ಧರ್ಮದ ನಡುವಿನ ಗೆರೆ ತೆಳುವಾಗತೊಡಗಿತು. ಈಗಂತೂ ಆ ಗೆರೆ ಕಾಣದಷ್ಟು ತೆಳುವಾಗಿದೆ. ಇದನ್ನು ಅರ್ಥ ಮಾಡಿಕೊಂಡ ರಾಜಕೀಯ ನಾಯಕರು ವೋಟಿಗಾಗಿ ಮಠಾಶರನ್ನು ‘ಮತಾಶ’ರನ್ನಾಗಿ ಪರಿವರ್ತಿಸಿ ‘ಇವ ನಮ್ಮವ’ ಎನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲ ಪ್ರಮುಖ ಜಾತಿಯ ಮಠಗಳಿಗೆ ಸರಕಾರದ ಬೊಕ್ಕಸದ ಹಣವನ್ನು ಮನಸೋ ಇಚ್ಛೆ ನೀಡುತ್ತಿದ್ದಾರೆ. ಸರಕಾರಿ ಶಾಲೆಗಳು ದನದಕೊಟ್ಟಿಗೆಗಿಂತ ಅತ್ತತ್ತಲಾಗಿವೆ ಅವುಗಳನ್ನು ಅಭಿವೃದ್ಧಿ ಪಡಿಸಲಾಗದ ಸರಕಾರ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿವೆ. ಅದಕ್ಕಾಗಿ ಹಣ ನೀಡುತ್ತೇವೆ ಎಂದು ಹೇಳುತ್ತಿರುವುದರ ಹಿಂದೆ ನಮಗೆ ಆ ಸೌಕರ್ಯ ನೀಡಲಾಗುತ್ತಿಲ್ಲ ಎಂಬ ಅಸಹಾಯಕತೆ ಮತ್ತು ಅಸಮರ್ಥತೆ ಎದ್ದು ಕಾಣುತ್ತಿದೆ. ಅನೇಕತೆಯಲ್ಲಿ ಏಕತೆಯನ್ನು ಕಂಡ ಭಾರತದಲ್ಲಿ ಮಠಗಳ ಪಾತ್ರವನ್ನು, ಅವುಗಳ ಸೇವೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಆದರೆ ಅವೇ ಸರಕಾರವಲ್ಲ. ಸರಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುವ ಮಠಗಳು ಸಣ್ಣ ಸಣ್ಣ ಸಾಮ್ರಾಜ್ಯಗಳಾಗುತ್ತಿರುವುದರಿಂದ ಅವು ಹಣ ಮಾಡುವ ಕೇಂದ್ರಗಳಾಗುತ್ತಿವೆ. ಐಷಾರಾಮಿ ಮಠಗಳಲ್ಲಿದ್ದುಕೊಂಡು ವಿದೇಶಿ ಕಾರುಗಳಲ್ಲಿ ಓಡಾಡುವ ಮಠಾಶರು ಭಕ್ತ ಸಮೂಹಕ್ಕೆ ಸರಳ ಜೀವನದ ಪಾಠ ಹೇಳುತ್ತಾರೆ. ಆಸೆಗಳನ್ನು ತ್ಯಜಿಸಬೇಕು ಎಂಬ ಆಣಿಮುತ್ತುಗಳನ್ನು ಉದುರಿಸುತ್ತಾರೆ. ಇವು ಅವರ ನಡೆ ನುಡಿಗೆ ತದ್ವಿರುದ್ಧವಾಗುವುದರಿಂದ ಭಕ್ತರೂ ಸಹ ನಂಬುವುದಿಲ್ಲ. ಸರಳವಾಗಿ ಬದುಕಿ ಎಂದು ಹೇಳುವ ಬದಲು ಹೇಳುವವರೇ ಬದುಕಿ ತೋರಿಸಬೇಕು. ಆಸೆಗಳನ್ನು ತ್ಯಜಿಸಿ ಎಂದು ಉಪದೇಶ ಕೊಡುವವರು ಮೊದಲು ತ್ಯಜಿಸಿ ತೋರಿಸಬೇಕು. ಗಾಂ ಸರಳತೆಯನ್ನು ಬೋಸಲಿಲ್ಲ ಬದಲಾಗಿ ಹಾಗೆ ಬದುಕಿ ತೋರಿಸಿದರು. ಸಾಮ್ರಾಜ್ಯದ ಅಪತಿಯ ಮಗನಾಗಿದ್ದರೂ ಬುದ್ಧ ಅದಕ್ಕೆ ಅಂಟಿಕೊಂಡು ಕೂರಲಿಲ್ಲ. ಬದಲಾಗಿ ಎಲ್ಲದನ್ನೂ ತ್ಯಾಗಮಾಡಿ ಮಾನವ ಪ್ರೀತಿ ಅರಸುತ್ತ ಹೋದ. ನುಡಿದಂತೆ ನಡೆಸು ನಡೆದಂತೆ ನುಡಿಸು ನುಡಿ ನಡೆಗೆ ಭಿನ್ನವಾದರೆ ನಮ್ಮ ಶರಣರೊಪ್ಪರು ಎಂದು ಬಸವಣ್ಣ ನುಡಿ ನಡೆಯ ಸರಳ ರೇಖೆಯನ್ನು ಹಾಕಿ ತೋರಿಸಿದರು. ಇಂಥದ್ದೊಂದು ಸರಳತೆಯ ಇತಿಹಾಸವನ್ನೇ ಬೆನ್ನಿಗಿಟ್ಟುಕೊಂಡಿರುವ ಮಠಗಳು ಸಿದ್ಧಾಂತಗಳನ್ನು ಬೋಧನೆಗಷ್ಟೇ ಸೀಮಿತಗೊಳಿಸಿಕೊಂಡಿರುವುದರಿಂದ ಭಕ್ತರೂ ಸೇರಿದಂತೆ ಇಡೀ ಸಮಾಜ ಅನುಮಾನದಿಂದ ನೋಡುವಂತೆ ಮಾಡಿವೆ. ಮಠಗಳ ನಿರಂತರ ರಾಜಕೀಯ ಸಂಪರ್ಕದಿಂದ ಒಂದಲ್ಲ ಒಂದು ವರ್ಗ ಅನುಮಾನ ಪಡುತ್ತಿದೆ. ಅಲ್ಲದೆ ಯಾವ ಜಾತಿಯವರು ಪ್ರಮುಖ ಸ್ಥಾನದಲ್ಲಿ ಇರುತ್ತಾರೋ ಆ ಸಮುದಾಯದ ಸ್ವಾಮಿಗಳು ಲಾಭ ಪಡೆಯಲು ಮುಂದಾಗುತ್ತಾರೆ ಇದು ಇನ್ನೊಂದು ವರ್ಗಕ್ಕೆ ಅನುಮಾನಗಳು ಹೆಚುತ್ತಲೇ ಇರುವಂತೆ ಮಾಡಿವೆ. ಈ ಹಿಂದೆ ರಾಜಕೀಯ ನಾಯಕರೊಬ್ಬರಿಗೆ ಅತೀ ಆಪ್ತವಾಗಿದ್ದ ಮಠವೊಂದು ನಂತರ ಬಂದ ಭಿನ್ನಾಭಿಪ್ರಾಯದಿಂದ ಆ ಮಠ ಎರಡಾಯಿತು. ಇದು ರಾಜಕೀಯ ಮನಸ್ಥಿತಿಯ ಸೂಕ್ಷ್ಮತೆ. ಅತಿಯಾಗಿ ರಾಜಕೀಯ ನಾಯಕರನ್ನು ಸೇರಿಸುವ ಮಠಗಳಿಗೆ ಇದು ಉತ್ತಮ ಪಾಠ, ಎಚ್ಚರಿಕೆ ಗಂಟೆ. ತಮಗೆ ಸ್ವಲ್ಪ ನೋವಾದರೂ ರಾಜಕಾರಣಿಗಳು ಎಂಥ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯಲು ಹೇಸುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.
ಹಿಂದೆ ಮಠಗಳು ರಾಜಕೀಯದಲ್ಲಿ ಗುರುತಿಸಿಕೊಂಡಿರಲಿಲ್ಲ ಎಂದಲ್ಲ, ಆದರೆ ನೇರ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದವು. ಭಕ್ತ ಸಮೂಹದಲ್ಲಿಯೂ ಮಠಗಳ ಬಗ್ಗೆ ಗೌರವ ಇತ್ತು. ಈಗ ಪ್ರತಿಯೊಂದು ಜಾತಿಗೂ ಒಬ್ಬೊಬ್ಬ ಮಠಾಶರಿರುವುದರಿಂದ ಅವರು ರಾಜಕೀಯದಲ್ಲಿ ಮೂಗು ತೂರಿಸಲು ಆರಂಭಿಸಿದ ನಂತರವಂತೂ ಅನೇಕ ರಾಜಕೀಯ ಮುಖಂಡರು ತಮ್ಮ ರಾಜಕೀಯ ತೀಟೆ ತೀರಿಸಿಕೊಳ್ಳಲು ಮಠಗಳ ಆಶ್ರಯ ಪಡೆಯುತ್ತಿದ್ದಾರೆ. ಇಂಥ ಕಾರಣಗಳಿಗಾಗಿ ಬೆಳೆಯುತ್ತಿರುವ ನಾಯಕರು ಒಂದೊಂದು ಕುಲದ, ಜಾತಿಯ ಚೌಕಟ್ಟಿಗೆ ಸೀಮಿತವಾಗುತ್ತಿದ್ದು, ಇಡೀ ಮಾನವ ಕುಲದ ಹಿತ ಬಯಸುವ ನಾಯಕರು ಇಲ್ಲವಾಗಿದ್ದಾರೆ. ರಾಜಕೀಯ ತತ್ತ್ವಗಳು ಧರ್ಮದ, ಜಾತಿಯ ಸಿದ್ಧಾಂತಗಳಾಗಿ ರೂಪುಗೊಳ್ಳುತ್ತಿರುವುದರಿಂದ ಗಾಂ ಹೇಳಿದ ತತ್ತ್ವರಹಿತ ರಾಜಕಾರಣ ಮಹಾ ಪಾಪ ಎನ್ನುವುದೇ ಈಗ ಮಹಾ ಪಾಪವಾಗಿ ಕಾಣತೊಡಗಿದೆ. ಒಂದೆಡೆ ಹಳ್ಳಿಗಳಲ್ಲಿದ್ದ ಒಗ್ಗಟ್ಟನ್ನು ನಾಶ ಮಾಡಿದ ರಾಜಕಾರಣ ನಂತರ ಧರ್ಮಗಳನ್ನು ಒಡೆದು ಜಾತಿಯಾಗಿ ವಿಂಗಡಿಸಿತು ಈಗ ಜಾತಿಗಳನ್ನು ಒಡೆದು ರಾಜಕಾರಣ ಆರಂಭಿಸಿದೆ. ಇಂಥ ರಾಜಕೀಯ ಕಪಟ ಮತ್ತು ವೈರುಧ್ಯಗಳನ್ನು ಮೀರಬಹುದಾದ ಮಾರ್ಗ ಎಂದರೆ ಸ್ವ ಎಚ್ಚರ ಮಾತ್ರ.ಒಂದು ಕಡೆ ಮಾಧ್ಯಮಗಳು,ನ್ನೊಂದೆಡೆ ಮಠಗಳ ಮತ್ತು ರಾಜಕಾರಣದ ನಡುವೆ ಸಾಮಾಜಿಕ ವ್ಯವಸ್ಥೆ ತುಂಬಾ ಸಂಕೀರ್ಣಗೊಳ್ಳುತ್ತಿದೆ.

No comments: