Monday, October 12, 2009

ಉತ್ಪಾದನೆ ಕುಂಠಿತ : ದೇಶಕ್ಕೆ ‘ಸಕ್ಕರೆ ಕಾಯಿಲೆ’

ಕಳೆದ ವರ್ಷ ನಾವು ಅಮೆರಿಕದ ವೀಟ್ ಕಂಪನಿಯಿಂದ ಲಕ್ಷಾಂತರ ಟನ್ ಗೋಯನ್ನು, ಪಾಕಿಸ್ತಾನದಿಂದ ಸಕ್ಕರೆಯನ್ನೂ ಆಮದು ಮಾಡಿಕೊಂಡಿದ್ದೆವು. ಈ ವರ್ಷ ಆ ಸರದಿಯಲ್ಲಿ ಸಕ್ಕರೆ ಬಂದು ನಿಂತಿದೆ. ನೆರೆಯ ರಾಷ್ಟ್ರಗಳಿಂದ ಖಾದ್ಯ ತೈಲ ಆಮದು ಎನ್ನುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಶೇ. ೭೨ರಷ್ಟು ಕೃಷಿಕರನ್ನು ಹೊಂದಿರುವ, ಕೃಷಿಯನ್ನೇ ಜೀವಾಳವಾಗಿಸಿಕೊಂಡಿರುವ ಭಾರತದಂಥ ಬೃಹತ್ ಜನಸಂಖ್ಯೆಯ ದೇಶಕ್ಕೆ ಇದು ಅಪಾಯಕಾರಿ ಬೆಳವಣಿಗೆ.
೧೯೯೬ರ ಹೊತ್ತಿಗೆ ಆಹಾರ ಸ್ವಾವಲಂಬಿಯಾಗಿದ್ದ ದೇಶ ಇಂದು ಪ್ರತಿಯೊಂದಕ್ಕೂ ಇತರ ದೇಶಗಳಿಗೆ ಕೈ ಚಾಚುವಂತಾಗಿದೆ. ಆಮದು ಎಂದರೆ ತೆರಿಗೆಗಳನ್ನು ಆಹ್ವಾನಿಸಿದಂತೆಯೇ ಹೊರತು ಸಮೃದ್ಧಿಯನ್ನಲ್ಲ. ಅದೇ ಸಾಲಿನಲ್ಲಿ ನಿಲ್ಲುವುದು ಸಕ್ಕರೆಕೂಡ. ನಮ್ಮ ದೇಶಿ ಮಾರುಕಟ್ಟೆಗೆ ಒಂದು ವರ್ಷಕ್ಕೆ ೨೨ ದಶಲಕ್ಷ ಟನ್ ಸಕ್ಕರೆ ಅಗತ್ಯವಿದೆ. ೨೦೦೭-೦೮ರಲ್ಲಿ ೧೭ ದಶಲಕ್ಷ ಟನ್ ಮಾತ್ರ ಉತ್ಪಾದನೆಯಾಗಿತ್ತು ೨೦೦೯-೧೦ರಲ್ಲಿ ೧೫ ದಶಲಕ್ಷ ಟನ್ ಮಾತ್ರ ಉತ್ಪಾದನೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ನಮ್ಮ ಅಗತ್ಯಕ್ಕಿಂತ ಏಳು ದಶಲಕ್ಷ ಮೆಟ್ರಿಕ್ ಟನ್ ಕೊರತೆ ಕಾಡಲಿದೆ. ಮೂರು ವರ್ಷದ ಹಿಂದೆ ಸಾಕಷ್ಟು ಸಕ್ಕರೆ ಉತ್ಪಾದನೆಯಾಗುತ್ತಿದ್ದರಿಂದ ಅಕ್ಕಿ, ಗೋ, ಬೇಳೆ, ಖಾದ್ಯ ತೈಲಗಳ ಬೆಲೆಗೆ ಹೋಲಿಸಿದರೆ ಸಕ್ಕರೆ ಬೆಲೆ ಹೆಚ್ಚಾಗಿದ್ದು ಕಡಿಮೆಯೇ.
೧೯೮೦ರ ಹೊತ್ತಿಗೆ ಭಾರತದಲ್ಲಿ ೨೭ ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು. ೯೦ರ ಹೊತ್ತಿಗೆ ಅದು ೫೦ ಲಕ್ಷ ಹೆಕ್ಟೇರಿಗೆ ಹೆಚ್ಚಿತು. ಅಂದರೆ ದೇಶದಲ್ಲಿ ಉಳುಮೆ ಭೂಮಿಯ ಶೇಕಡಾ ಮೂರರಷ್ಟು ಭಾಗದಲ್ಲಿ ಕಬ್ಬು ಬೆಳೆಯುತ್ತಿದ್ದರಿಂದ ಸಕ್ಕರೆಯನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿತ್ತು. ಇದರಿಂದ ಭಾರತ ಪ್ರಪಂಚದಲ್ಲೇ ನಾಲ್ಕನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವೆಂಬ ಹೆಗ್ಗಳಿಕೆಯನ್ನೂ ಪಡೆಯಿತು. ಉತ್ಪಾದನೆ ಹೆಚ್ಚಿದಂತೆ ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲು ಸರಕಾರಗಳು ವಿಫಲವಾದವು. ಇದನ್ನೇ ಕಾಯುತ್ತಿದ್ದ ಯುರೋಪಿನ ಶ್ರೀಮಂತ ರಾಷ್ಟ್ರಗಳು ಮತ್ತು ಅಮೆರಿಕಾ, ಬ್ರೆಜಿಲ್ ದೇಶಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡವು. ಆ ಬಲೆಯಲ್ಲಿ ಸಿಕ್ಕಿ ಬಿದ್ದವನು ಭಾರತದ ಕಬ್ಬು ಬೆಳೆಗಾರ!
ಕ್ಯೂಬಾದಂಥ ಸಣ್ಣ ದೇಶಗಳು ಮಾರುಕಟ್ಟೆಯ ಏರುಪೇರುಗಳನ್ನು ಗಮನಿಸಿ. ತಮ್ಮ ರೈತರಿಗೆ ನ್ಯಾಯವೊದಗಿಸಿಕೊಟ್ಟವು. ಬ್ರೆಜಿಲ್ ಜಗತ್ತಿನಲ್ಲೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿತು. ಅಲ್ಲದೆ, ರಫ್ತು ಮಾರುಕಟ್ಟೆಯತ್ತ ದೃಷ್ಟಿ ಹಾಯಿಸಿದ್ದರಿಂದ ಜಾಗತೀಕರಣದ ಅಪಾಯಗಳಿಂದ ತನ್ನ ರೈತರನ್ನು ಪಾರು ಮಾಡಲು ಮುಂದಾಯಿತು. ರಷ್ಯಾ ಕೂಡ ತನ್ನ ರೈತರನ್ನು ಕಾಪಾಡಿಕೊಂಡಿತು. ಭಾರತ ಮಾತ್ರ ಯಾವ ಕ್ರಮಕ್ಕೂ ಮುಂದಾಗಲಿಲ್ಲ. ಮಳೆಯ ಅಭಾವ, ಸಾಲ ಸೌಲಭ್ಯಗಳ ಕೊರತೆ, ಕಾರ್ಖಾನೆಗಳ ನಿರ್ಲಕ್ಷ್ಯದ ನಡುವೆಯೂ ಭಾರತದ ರೈತರು ದೇಶಕ್ಕೆ ಸಿಹಿಯ ಕೊರತೆ ಕಾಡದಂತೆ ನೋಡಿಕೊಂಡಿದ್ದರು ಎನ್ನುವುದೇ ಹೆಮ್ಮೆಯ ಸಂಗತಿ.
ಕೊರತೆಗೆ ಕಾರಣಗಳು
* ಕಾರ್ಖಾನೆಗಳು ಕಬ್ಬು ಅರೆದು ಸಮಯಕ್ಕೆ ಸರಿಯಾಗಿ ರೈತರಿಗೆ ಹಣ ಪಾವತಿಸಲಿಲ್ಲ.
* ಬೆಲ್ಲದ ಬೆಲೆ ದಿಢೀರ್ ಹೆಚ್ಚಿದ್ದರಿಂದ ಕಾರ್ಖಾನೆಗೆ ಕಬ್ಬು ಸಾಗಣೆ ಕಡಿಮೆಯಾಯಿತು.
* ಕಬ್ಬು ಬೆಳೆಗಾರರ ಬಗ್ಗೆ ಸರಕಾರದ ನಿರ್ಲಕ್ಷ್ಯ
* ಶ್ರೀಮಂತರ ಗೋದಾಮುಗಳಲ್ಲಿ ಅಕ್ರಮ ದಾಸ್ತಾನು
ಇಂಥ ಕಾರಣಗಳಿಂದ ಕರ್ನಾಟಕದ ರೈತರಂತೂ ನೆಲಕಚ್ಚಿ ಹೋದರು. ಕಾರ್ಖಾನೆಗಳು ಕಬ್ಬು ಅರೆಯುವ ಬದಲಿಗೆ ರೈತರನ್ನೇ ಅರೆದವು. ಎಂದರೆ ದುಬಾರಿಯಾಗಲಾರದು. ರಾಜ್ಯದ, ದೇಶದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರೇ ಆಗಿರುವುದರಿಂದ ಯಾವ ಸರಕಾರವೂ ಅವರನ್ನು ಮಣಿಸಲಾಗುತ್ತಿಲ್ಲ. ಬದಲಿಗೆ ಸರಕಾರಗಳೇ ಅವರಿಗೆ ಮಣಿದು ಮಂಡಿಯೂರಿ ಮಾತು ಕೇಳುತ್ತವೆ. ಮಾಲೀಕರ ವಂಚನೆಗೆ ಬೇಸತ್ತು ಕಬ್ಬು ಬೆಳೆಗಾರರು ಪ್ರತಿಭಟಿಸಿದರೆ ರೈತರ ಪರವಾಗಿ ನಿಲ್ಲಬೇಕಾದ ಸರಕಾರಗಳು ಮಾಲೀಕರ ಪರವಾಗಿ ವಕಾಲತ್ತು ವಹಿಸಿ ಪೊಲೀಸ್ ಬಲದ ಮೂಲಕ ಪ್ರತಿಭಟನೆಗಳನ್ನು ಬಗ್ಗು ಬಡಿದವು. ಅದಕ್ಕೂ ಬಗ್ಗದಿದ್ದಾಗ ಹಿಂಸೆಯ ಮಾರ್ಗ ಅನುಸರಿಸಿದವು. ಇಂಥ ಕ್ರೂರ ನೆರಳಲ್ಲಿ ಬದುಕು ಕಟ್ಟಲಾಗದ ಅನೇಕ ರೈತರು ಕೊನೆಗೆ ಕಬ್ಬು ಬೆಳೆಗೇ ಗುಡ್ ಬೈ ಹೇಳಿದ್ದಾರೆ. ಸಾಲದ ಶೂಲಕ್ಕೆ ಹೆದರಿ ಕಳೆದ ವರ್ಷ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದೇ ರೀತಿ ಕಳೆದ ಎಂಟು ವರ್ಷಗಳಿಂದ ಕಬ್ಬು ಬೆಳೆಗಾರರನ್ನು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ಇವತ್ತು ದೇಶ ಸಕ್ಕರೆ ಕೊರತೆ ಎದುರಿಸಬೇಕಾಗಿದೆ. ದೇಶದಲ್ಲಿ ಸರಕಾರದ ಪರವಾನಗಿ ಪಡೆದ ೫೬೬ ಕಾರ್ಖಾನೆಗಳಿವೆ. ಅವುಗಳಲ್ಲಿ ೫೪೩ ಚಾಲ್ತಿಯಲ್ಲಿದ್ದು ಅದರಲ್ಲಿ ಶೇ. ೪೦ ಖಾಸಗಿ ಒಡೆತನದಲ್ಲಿವೆ. ಉಳಿದವು ಸಹಕಾರಿ. ಪ್ರಪಂಚದ ಶೇ. ೨೦ರಷ್ಟು ಸಕ್ಕರೆ ಮಿಲ್ಲುಗಳನ್ನು ಭಾರತ ಹೊಂದಿದ್ದು ಅವು ಎರಡು ವರ್ಷದ ಹಿಂದೆ ವಿಶ್ವದ ಶೇ. ೧೫ರಷ್ಟು ಸಕ್ಕರೆ ಉತ್ಪಾದಿಸುತ್ತಿದ್ದವು. ಈಗ ಉತ್ಪಾದನಾ ಪ್ರಮಾಣ ಕಳೆದ ನಾಲ್ಕು ವರ್ಷದಲ್ಲೇ ಅತ್ಯಂತ ಕಡಿಮೆಯಾಗಿದೆ. ಆದ್ದರಿಂದ ನಾವು ಸಕ್ಕರೆಗಾಗಿ ಬ್ರೆಜಿಲ್, ರಷ್ಯಾ, ಕ್ಯೂಬಾದತ್ತ ನೋಡಬೇಕಾಗಿದೆ. ಅಲ್ಲಿಂದ ಆಮದು ಮಾಡಿಕೊಂಡರೂ ಕಡಿಮೆ ಬೆಲೆಗೆ ಸಕ್ಕರೆ ದೊರೆಯುವುದು ಅಸಾಧ್ಯ.
ಈಗ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ ೨೨ಮತ್ತು ೨೩ ರೂ.ಇದೆ. ಅದು ಅಕ್ಟೋಬರ್ ವೇಳೆಗೆ ೩೦ ರೂ. ದಾಟಬಹುದು ಎನ್ನಲಾಗುತ್ತಿದೆ. ಇದರ ಫಲ ರೈತರಿಗಂತೂ ಸಿಗುವುದಿಲ್ಲ.
ಕರ್ನಾಟಕ ಮತ್ತು ಸುತ್ತಮುತ್ತ
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ೨೦೦೭ರಲ್ಲಿ ಕರ್ನಾಟಕದಲ್ಲಿ ನಾಲ್ಕು ಕೋಟಿ ಟನ್ ಕಬ್ಬು ಬೆಳೆಯಲಾಗಿತ್ತು. ೨೦೦೮-೦೯ಕ್ಕೆ ಅದು ಮೂರು ಕೋಟಿ ಟನ್‌ಗೆ ಇಳಿಯಿತು. ೨೦೦೯-೧೦ಕ್ಕೆ ಅದು ೨ ಕೋಟಿ ೭೦ ಲಕ್ಷ ಟನ್‌ಗೆ ಇಳಿಯುವ ಸಾಧ್ಯತೆಗಳಿವೆ. ಇದು ಕರ್ನಾಟಕದ ಸ್ಥಿತಿ ಮಾತ್ರವಲ್ಲ ಕಬ್ಬು ಬೆಳೆಯುವ ಎಲ್ಲ ರಾಜ್ಯಗಳಲ್ಲೂ ಪರಿಸ್ಥಿತಿ ಬೇರೆಯಾಗಿಲ್ಲ. ಇದೆಲ್ಲಕ್ಕೂ ಸರಕಾರಗಳ ನೀತಿಗಳೇ ಕಾರಣ ಎನ್ನದೇ ಬೇರೆ ದಾರಿಯೇ ಉಳಿದಿಲ್ಲ. ಬೆಂಬಲ ಬೆಲೆ ಸಿಗದೆ, ಬೆಳೆದ ಕಬ್ಬನ್ನು ಅರೆಸಲಾಗದೆ ಅನೇಕ ಕಡೆ ರೈತರು ಹೊಲದಲ್ಲೇ ಬಿಟ್ಟು ಬೆಂಕಿ ಹಚ್ಚಿದರು. ಹತಾಶರಾದ ಅನೇಕರು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯ ಮಾಡಿಕೊಂಡರು. ಕೊನೆಗೆ ಬೆಳೆಯುವುದನ್ನೇ ನಿಲ್ಲಿಸಿದರು. ಗಡ್ಡಕ್ಕೆ ಬೆಂಕಿಬಿದ್ದಾಗ ಬಾವಿ ತೋಡಿದರು ಎನ್ನುವಂತೆ ಕಾರ್ಖಾನೆ ಮಾಲೀಕರನ್ನು ಕಬ್ಬು ಅರೆಯಲು ಆದೇಶ ನೀಡಲಾಗದ ನರಸತ್ತ ಸರಕಾರಗಳು ಈಗ ಬಡಬಡಿಸತೊಡಗಿವೆ. ಅಲ್ಲದೆ ಅನೇಕ ಕಾರ್ಖಾನೆಗಳು ಕಬ್ಬು ಅರೆದು ತಿಂದಿದ್ದು, ರೈತರಿಗೆ ಬಾಕಿ ಹಣ ಪಾವತಿಸಿಲ್ಲ. ಅದನ್ನೂ ಕೊಡಿಸಲಾಗದಷ್ಟು ಸರಕಾರಗಳು ನಿರ್ವಿರ್ಯವಾಗಿವೆ.
೨೦೦೯ರ ಆರಂಭದಲ್ಲೇ ಸಕ್ಕರೆ ಅಭಾವದ ಮುನ್ಸೂಚನೆ ದೊರೆತರೂ ಸರಕಾರ ಇದನ್ನು ಬಾಯಿಬಿಡಲಿಲ್ಲ. ಕಾರಣ ಚುನಾವಣೆ ಘೋಷಣೆಯಾಗುವ ಸೂಚನೆಗಳಿದ್ದುದರಿಂದ ಎಲ್ಲವನ್ನೂ ಮುಚ್ಚಿಡಲಾಯಿತು. ಈಗ ಅದು ಬಯಲಾಗಿದೆ. ಇದಕ್ಕೆ ಪರಿಹಾರವೊಂದೇ. ದೇಶದಲ್ಲಿ ಕಬ್ಬು ಬೆಳೆಯನ್ನು ಪ್ರೋತ್ಸಾಹಿಸುವುದು.

No comments: