Wednesday, October 14, 2009

ವೆಚ್ಚ ಕಡಿತವೆಂಬ ಭ್ರಮೆ ಮತ್ತು ವಾಸ್ತವ

ಸರಕಾರಿ ವೆಚ್ಚಕ್ಕೆ ಕಡಿವಾಣ ಹಾಕುವ ಸಂಬಂಧ ಹಲವು ರೀತಿಯ ಚರ್ಚೆ, ತರ್ಕ, ಕುತರ್ಕಗಳು ನಡೆಯುತ್ತಿವೆ. ಇದರ ಫಲಿತಾಂಶ ಧನಾತ್ಮಕವಾಗಿ ಇಲ್ಲವೆ ಋಣಾತ್ಮಕವಾಗಿಯೂ ಬರಬಹುದು ಆದರೆ ಒಂದೇ ಒಂದು ಸಂತೋಷದ ವಿಚಾರವೆಂದರೆ ರಾಜಕೀಯ ನಾಯಕರು ದುಂದು ವೆಚ್ಚ ಮಾಡುತ್ತಿದ್ದಾರೆ ಎನ್ನುವ ಅರಿವು ಮೂಡಿರುವುದು.
ಬಹುಶಃ ಜಗತ್ತಿನ ಯಾವ ದೇಶದ ನಾಯಕರೂ ಖರ್ಚು ಮಾಡಲಾರದಷ್ಟು ಹಣವನ್ನು ನಮ್ಮ ದೇಶದ ನಾಯಕರು ದುಂದುವೆಚ್ಚ ಮಾಡುತ್ತಿದ್ದಾರೆ. ಒಟ್ಟು ಆಡಳಿತ ಯಂತ್ರದ ಖರ್ಚು ಸರಿಸುಮಾರು ಆದಾಯದ ಶೇ. ೨೦ ತಲುಪುತ್ತದೆ. ಅವರ ಮನೆ, ಭದ್ರತೆ, ಸಾರಿಗೆ ಕಾಲಾಳುಗಳು... ಹೀಗೆ ಲೆಕ್ಕ ಮಾಡುತ್ತ ಹೋದರೆ ನಾಯಕರೆನಿಸಿಕೊಂಡವರ ಖರ್ಚಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದೇಶ ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದರೂ ಖರ್ಚಿನ ಮೇಲೆ ಹಿಡಿತಕ್ಕೆ ಮುಂದಾಗಲಿಲ್ಲ ಆದ್ದರಿಂದ ವೆಚ್ಚ ಲೆಕ್ಕಕ್ಕೆ ಸಿಗದೆ ಬೆಳೆಯುತ್ತ ಹೋಯಿತು. ಒಂದು ವರ್ಷದ ಅವಯಲ್ಲಿ ನಮ್ಮ ನಾಯಕರು ಮಾಡಿದ ಖರ್ಚು ೧೦ ಲಕ್ಷ ಕೋಟಿರೂಪಾಯಿ. ಅದರಲ್ಲಿ ೫.೭೫ ಲಕ್ಷ ಕೋಟಿ ದುಂದುವೆಚ್ಚವಾಗಿದೆ. ಇದು ಉತ್ಪ್ರೇಕ್ಷೆಯ ಮಾತಲ್ಲ ದೇಶದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರೇ ಬಹಿರಂಗಪಡಿಸಿದ್ದಾರೆ. ಇಂಥ ವೆಚ್ಚಗಳನ್ನು ಬರೀ ತಡೆದರೆ ಸಾಲದು ಸಂಪೂರ್ಣವಾಗಿ ನಿರ್ಬಂದಿಸುವಂಥ ಕಾನೂನುಗಳು ಜಾರಿಯಾಗಬೇಕು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ದೇಶದ ಜನರ ತೆರಿಗೆಹಣ ಕೆಲವರ ಮೋಜಿಗೆ ಖರ್ಚಾಗಿಬಿಡುವ ಸಾಧ್ಯತೆ ಹೆಚ್ಚು.
ಕೋಟೆ ಲೂಟಿಯಾದಮೇಲೆ ದಿಡ್ಡಿಬಾಗಿಲು ಹಾಕಿದಂತೆ ಹತ್ತಾರುವರ್ಷಗಳಿಂದ ಸಾರ್ವಜನಿಕರ ಹಣ ತಿಂದು ಈಗ ಎಚ್ಚರ ಗೊಂಡವರಂತೆ ಎಲ್ಲರೂ ಬಡಬಡಿಸುತ್ತಿದ್ದಾರೆ ಅದಕ್ಕಾಗಿ ವಿಮಾನಗಳಲ್ಲಿ ಬಿಸಿನೆಸ್‌ಕ್ಲಾಸ್‌ಗಳನ್ನು ಬಿಟ್ಟು ಎಕಾನಮಿ ಕ್ಲಾಸ್‌ಗಳಲ್ಲಿ ಓಡಾಡುವ ತಾಲೀಮು ಮಾಡುತ್ತಿದ್ದಾರೆ. ಈ ತಾಲೀಮು ನಿರಾಕರಿಸಿದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಶಶಿ ಥರೂರಂಥವರು ಸಾಮಾನ್ಯ ದರ್ಜೆಯ ವಿಮಾನಯಾನವನ್ನು ಜಾನುವಾರು ದರ್ಜೆ (ಕ್ಯಾಟ್ಲ್ ಕ್ಲಾಸ್) ಎಂದು ಇಡೀ ದೇಶದ ಮದ್ಯಮ ಮತ್ತು ಮೇಲ್ಮಧ್ಯಮ ವರ್ಗವನ್ನು ಅವಮಾನಿಸಿದ್ದರು. ಅದೇ ಹೊತ್ತಿನಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಸೋನಿಯಾ ಗಾಂ, ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮುಂತಾದವರು ಸಾಮಾನ್ಯ ದರ್ಜೆಯಲ್ಲಿ ಓಡಾಡಿ ಸುದ್ದಿ ಮಾಡಿದ್ದರು. ರಾಹುಲ್‌ಗಾಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಘರೌಂಡಬಳಿ ರಾಹುಲ್ ಇದ್ದ ರೈಲಿನ ಮೇಲೆ ಕೆಲವು ಯುವಕರು ಕಲ್ಲು ತೂರಿ ಗಲಾಟೆಯನ್ನೂ ಮಾಡಿದ್ದರು ಇದರಿಂದ ರಾಹುಲ್‌ಗೆ ಪ್ರಚಾರವೂ ಸಿಕ್ಕಿತು. ವಿಮಾನ ಯಾನಕ್ಕಿಂತ ಖರ್ಚೂ ಹೆಚ್ಚಾಯಿತು. ಒಟ್ಟಾರೆಯಾಗಿ ಭಾರೀ ಸುದ್ದಿಯನ್ನಂತೂ ಮಾಡಿದ್ದರು.
ಇವೆಲ್ಲ ಒಂದು ಹಂತದಲ್ಲಿ ಪ್ರಚಾರವನ್ನೂ ಮತ್ತೆ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ತಂತ್ರಗಳಾಗಿ ಕಾಣುತ್ತಿವೆಯೇ ಹೊರತು ದುಂದುವೆಚ್ಚ ತಡೆಯಲು ಮಾಡಿದ ಶಾಶ್ವತ ಪರಿಹಾರಗಳಾಗಿ ಅಲ್ಲ. ಕಾರಣ, ಇಲ್ಲಿ ಕೆಲವೇ ಸಾವಿರ ರೂಪಾಯಿಗಳ ಖರ್ಚು ತಡೆಯುವ ನಾಟಕವಾಡುವ ರಾಜಕೀಯ ನಾಯಕರು ತಮ್ಮ ನಿವಾಸಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಅಂಶಗಳು ಬೆಳಕಿಗೆ ಬರುತ್ತವೆ. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಬಯಲಾಗುತ್ತದೆ. ಇವೆಲ್ಲವನ್ನು ಗಮನಿಸಿದರೆ ವೆಚ್ಚ ತಡೆಯುವ ಪ್ರಯತ್ನ ಎನ್ನುವುದರ ಸಾಮಾಜಿಕ ಜೀವನದಲ್ಲಿರುವವರು ಆಡಿದ ಬಣ್ಣವಿಲ್ಲದ ನಾಟಕದಂತೆ ಕಾಣುತ್ತದೆ. ಪತ್ರಿಕಾ ಹುಲಿಗಳಾಗಿರುವ ನಮ್ಮ ಕೆಲ ನಾಯಕರು ಒಂದು ತಿಂಗಳ ಸಂಬಳವನ್ನು ಬಿಟ್ಟು ಬಿಡುವುದಾಗಿ ತಿಳಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ನಮ್ಮ ಮಾಜಿ ಪ್ರಧಾನಿ ತಮ್ಮ ವೇತನದ ಶೇ. ೨೦ರಷ್ಟು ಹಣವನ್ನು ವಾಪಸ್ ನೀಡುವುದಾಗಿ ಘೋಷಣೆ ಮಾಡಿಕೊಂಡರು. ಇಂಥ ಅಗ್ಗದ ಪ್ರಚಾರಗಳಿಗೆ ಮುಂದಾಗುವುದನ್ನು ನೋಡಿದರೆ ಒಂದು ಕಡೆ ನಾಚಿಕೆ ಮತ್ತೊಂದು ಕಡೆ ಮರುಕವುಂಟಾಗುತ್ತದೆ.
ಚುನಾವಣೆಯಲ್ಲಿ ಗೆಲುವೊಂದನ್ನು ಗಮನದಲ್ಲಿಟ್ಟುಕೊಂಡು ವಾಮ ಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ಚೆಲ್ಲುವವರು ಇಲ್ಲಿ ಕೆಲವೇ ಸಾವಿರ ರೂಪಾಯಿಗಳಿಗೆ ತಮ್ಮ ಜನ್ಮಾಂತರದ ಆಸ್ತಿಯನ್ನು ಬಿಟ್ಟುಕೊಡುವವರಂತೆ ಹೇಳಿಕೆಗಳನ್ನು ಕೊಡುವುದನ್ನು ನೋಡಿದರೆ ನಾಚಿಕೆಯಾಗುತ್ತದೆ. ಉನ್ನತ ನಾಯಕರೆನಿಸಿಕೊಂಡವರು ಸಣ್ಣ ಸಣ್ಣ ಹೇಳಿಕೆಗಳಿಂದ ಮಹಾತ್ಮರಾಗಲು ಯತ್ನಿಸುವುದನ್ನು ನೋಡಿದರೆ ವಿಷಾದವೆನಿಸುತ್ತದೆ.
ದೇಶ ಎಂಥ ಆರ್ಥಿಕ ಸ್ಥಿತಿಯಲ್ಲಿದ್ದರೂ ಶಾಸಕರು, ಸಚಿವರು, ಲೋಕಸಭೆ ಸದಸ್ಯರ ವೇತನ ಹೆಚ್ಚಳಗಳು ನಿಂತಿಲ್ಲ. ಅವು ಕಾಲಕ್ಕೆ ಸರಿಯಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಹೆಚ್ಚುತ್ತಲೇ ಇವೆ. ಅವು ಕಡಿಮೆಯಾದ ಉದಾಹರಣೆಳು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ತೀರಾ ತೀರಾ ವಿರಳ. ಈ ವರ್ಷ ದೇಶ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ನನ್ನ ಸಂಬಳ ಹೆಚ್ಚಳ ಬೇಡ ಎಂದು ಯಾರಾದರೂ ಹೇಳಿದ್ದರೆ ಪವಾಡವೇ ನಡೆದುಹೋಗುತ್ತಿತ್ತೇನೊ. ದೃಷ್ಟವಶಾತ್ ಯಾರೊಬ್ಬರೂ ಅಂಥ ಪವಾಡಕ್ಕೆ ಮುಂದಾಗಿಲ್ಲ ಎನ್ನುವುದೇ ‘ಸಂತೋಷ’ದ ಸಂಗತಿ.
ನಮ್ಮ ದೇಶದ ನಾಯಕರು ಅನೇಕ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿಸಲು ಯತ್ನಿಸುತ್ತಾರೆ. ಅವರ ಆಡಳಿತದಂತೆ ನಾವೂ ಇರಬೇಕು ಎಂದು ಹೇಳುತ್ತಾರೆ. ಆದರೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ತದ್ವಿರುದ್ಧ ನಡೆಯುತ್ತಾರೆ. ಕೃಷಿಯಲ್ಲಿ ಅಮೆರಿಕದ ರೈತರ ಸಾಲಿನಲ್ಲಿ ಭಾರತೀಯ ರೈತರನ್ನು ನಿಲ್ಲಿಸಿ ನೋಡುವ ಮೊಂಡು, ಹುಂಬು ಪ್ರಯತ್ನಗಳು ಅನೇಕ ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಅವರ ನಾಯಕತ್ವದ ಸಾಲಿನಲ್ಲಿ ನಾವು ನಿಂತರೆ ಏನಾಗಬಹುದು ಎಂದು ಯಾರೂ ಯೋಚಿಸುತ್ತಿಲ್ಲ.
ಕೆಲಸಕ್ಕೆ ಬಾರದ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿಸುವ ಬದಲು ಚುನಾವಣೆಯಂಥ ಅತಿ ದುಂದು ವೆಚ್ಚದ ಕ್ರಿಯೆಗಳಲ್ಲಿ ಅನುಕರಿಸಬೇಕಾಗಿದೆ. ನಾಯಕನ ಸಾಮರ್ಥ್ಯವನ್ನು ಹಣದಿಂದ ಒರೆಗೆ ಹಚ್ಚದೆ ಜನಮಾನಸದ ಪ್ರತಿಕ್ರಿಯೆಗಳಿಂದ ನೋಡುವಂಥ ಕ್ರಿಯೆಗಳಿಗೆ ಭಾರತದಲ್ಲಿ ಅವಕಾಶ ನೀಡಬೇಕಾಗಿದೆ.
ದುಂದು ವೆಚ್ಚಕ್ಕೆ ಕಡಿವಾಣ ಎನ್ನುವ ಬದಲು ಅದಕ್ಕೆ ಅವಕಾಶವೇ ಇಲ್ಲದಂಥ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಇದು ಅಸಾಧ್ಯದ ಮಾತಲ್ಲ ಆದರೆ ಆಳುವವರು ಇದನ್ನು ಒಪ್ಪುತ್ತಿಲ್ಲ. ಬ್ರೆಜಿಲ್‌ನಂಥ ದೇಶ ಇವತ್ತು ಕೃಷಿಯಲ್ಲಿ ಏನೆಲ್ಲಾ ಸಾಧನೆ ಮಾಡಿ ತೋರಿಸಿದೆ ಎಂದರೆ ಅದು ಅಲ್ಲಿನ ನಾಯಕರ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ. ವೆನಿಜುಯೆಲಾದಂಥ ಚಿಕ್ಕ ದೇಶ ಇವತ್ತು ಜಗತ್ತಿಗೆ ತನ್ನನ್ನು ತಾನು ಬಿಂಬಿಸಿಕೊಳ್ಳಲು ಹವಣಿಸುತ್ತಿದೆ. ಬೊಲಿವಿಯಾದಂಥ ಸಣ್ಣ ದೇಶ ಶ್ರೀಮಂತ ದೇಶಗಳ ಆರ್ಥಿಕ ದಿಗ್ಬಂಧನದಂಥ ದಬ್ಬಾಳಿಕೆಗಳಿಂದ ಹೊರಬಂದು ಸ್ವಾಭಿಮಾನದಿಂದ ತಲೆ ಎತ್ತುತ್ತಿದೆ. ಅದೇರೀತಿ ಸಣ್ಣಪುಟ್ಟ ದೇಶಗಳು ತಮ್ಮನ್ನು ಹಾಗೇ ಬಿಂಬಿಸಿಕೊಳ್ಳುತ್ತವೆ. ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಅದು ಸಾಧ್ಯವಾಗುತ್ತಿಲ್ಲ ಎಂದರೆ ನಾಚಿಕೆಪಡುವಂಥ ವಿಚಾರ.
ಬ್ರೆಜಿಲ್‌ನ ಅಧ್ಯಕ್ಷ ಲೂಲಾ ಡಿ-ಸಿಲ್ವಾ ಅಕಾರಕ್ಕೆ ಬರುತ್ತಿದ್ದಂತೆಯೇ ಮೊದಲು ಮಾಡಿದ್ದು ಅನಗತ್ಯ ಖರ್ಚುಗಳ ತಡೆ. ಹಾಗೆಯೇ ಅಧ್ಯಕ್ಷರ ಹೆಸರಿನಲ್ಲಿ ಸರಕಾರದ ಖಜಾನೆಯಿಂದ ಸಂದಾಯವಾಗುತ್ತಿದ್ದ ಭಾರಿ ವೇತನ ಮೊಟಕು. ಇದು ಅಧ್ಯಕ್ಷರಿಗೆ ಅನ್ವಯವಾದ ಮೇಲೆ ಎಲ್ಲರಿಗೂ ಅನ್ವಯ ಎಂದು ಬಹುತೇಕರು ತಮ್ಮ ವೇತನವನ್ನು ತಾವೇ ಕಡಿತಗೊಳಿಸಿಕೊಂಡರು. ವೆನಿಜುಯೆಲಾ ದೇಶದ ಅಧ್ಯಕ್ಷರಾಗಿರುವ ಹ್ಯೂಗೊ ಚಾವೆಜ್ ಕೂಡಾ ಅಂಥ ನಿರ್ಧಾರಗಳನ್ನು ಕೈಗೊಂಡರು. ಬೊಲಿವಿಯಾ ದೇಶದ ಅಧ್ಯಕ್ಷರಾಗಿರುವ ಏವೊ ಮೊರಾಲಸ್ ಕೂಡಾ ತಮ್ಮ ವೇತನವನ್ನು ತುಂಬಾ ಕಡಿಮೆ ಮಾಡಿಕೊಂಡರು. ಅದಕ್ಕೆ ಅವರು ಒಂದು ಕಾರಣ ಕೊಟ್ಟಿದ್ದರು. ‘ದೇಶ ನನಗೆ ಓಡಾಡಲು ಕಾರು ನೀಡಿದೆ. ರಕ್ಷಕರನ್ನು ನೀಡಿದೆ. ಮಲಗಲು ಬಂಗಲೆ ನೀಡಿದೆ. ಇವೇ ಮನುಷ್ಯನ ಅಗತ್ಯಗಳು ಅವೆಲ್ಲವನ್ನೂ ಪಡೆದಮೇಲೂ ಅಗತ್ಯಕ್ಕಿಂತ ಹೆಚ್ಚು ವೇತನ ಪಡೆಯುವುದು ಆತ್ಮಹೀನ ಕೃತ್ಯ. ಇಷ್ಟೊಂದು ವೇತನ ನನಗೆ ಬೇಡ, ಅತಿ ಕಡಿಮೆ ಖರ್ಚಿನ ಜೀವನಕ್ಕೆ ಸಾಕಾಗುವಷ್ಟು ಹಣ ಸಾಕು’ ಎಂದು ಸ್ವಲ್ಪ ಹಣವನ್ನು ಮಾತ್ರ ಪಡೆಯುತ್ತಿದ್ದಾರೆ ಉಳಿದದ್ದನ್ನು ಸರಕಾರಿ ಖಜಾನೆಗೆ ಹಿಂತಿರುಗಿಸಿದ್ದಾರೆ. ಒಂದು ಕಡೆ ಅವರು ಹೀಗೆ ಹೇಳಿಕೊಂಡಿದ್ದಾರೆ ‘ಜನರು ತಮ್ಮ ಅನೇಕ ಕನಸುಗಳನ್ನು ಈಡೇರಿಸುವ ಆಶಾಕಿರಣಗಳಾಗಿ ನಮ್ಮನ್ನು ನೋಡುತ್ತಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳುವುದು ಮತ್ತು ಅವರ ಆಸೆಗಳನ್ನು ಈಡೇರಿಸಲು ಪ್ರಾಮಾಣಿಕರಾಗಿ ದುಡಿಯುವುದು ನಮ್ಮ ಆಧ್ಯ ಕರ್ತವ್ಯ. ಅದನ್ನು ನೆನಪಿನಲ್ಲಿಟ್ಟುಕೊಂಡು ನಡೆಯದೆ ದುಂದುವೆಚ್ಚಕ್ಕೆ ಮತ್ತು ಸ್ವಜನಪಕ್ಷಪಾತಕ್ಕೆ ಅವಕಾಶ ನೀಡಿದರೆ ಜನರ ನಿರೀಕ್ಷೆಗಳು ಮಾತ್ರ ಹುಸುಯಾಗುವುದಿಲ್ಲ ಆತ್ಮವಂಚನೆಯಾಗುತ್ತದೆ’ ಎಂದಿದ್ದಾರೆ. ಅವರ ಸಹವರ್ತಿಗಳೂ ಅದೇ ಸಿದ್ಧಾಂತವನ್ನು ಒಪಿಕೊಂಡು ಸಂಸದರ ಹೆಸರಿನಲ್ಲಿ ಸಂದಾಯವಾಗುತ್ತಿದ್ದ ವೇತನವನ್ನು ಪ್ರಥಮ ದರ್ಜೆ ಗುಮಾಸ್ತನಿಗೆ ದೊರೆಯಬಹುದಾದಷ್ಟನ್ನು ಮಾತ್ರ ಪಡೆಯುತ್ತಿದ್ದಾರೆ. ೨೦೦೫ರಿಂದ ಇಲ್ಲಿಯವರೆಗೆ ತಮ್ಮ ವೇತನ ಹೆಚ್ಚಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿಲ್ಲ. ಆದ್ದರಿಂದ ಇಂಥ ಆರ್ಥಿಕ ಹಿಂಜರಿತದಲ್ಲೂ ಆ ದೇಶ ತನ್ನ ಶಕ್ತಿಯನ್ನು ಕಾಯ್ದುಕೊಂಡು ನಿಂತಿದೆ. ಅತೀ ಹಿಂದುಳಿದ ದೇಶ ಎನ್ನುವ ಹಣೆಪಟ್ಟಿ ಕಳಚಿಕೊಳ್ಳುತ್ತಿದೆ. ಇಂಥ ಕ್ರಮಗಳು ಈಗ ಭಾರತಕ್ಕೂ ಅನಿವಾರ್ಯವಾಗಿವೆ. ನಮ್ಮ ನಾಯಕರುಗಳಲ್ಲಿ ತುಂಬಿ ತುಳುಕುತ್ತಿರುವ ಸ್ವಾರ್ಥ ಈ ರೀತಿಯ ಕ್ರಮಗಳಿಗೆ ಮುಂದಾಗಲು ಬಿಡುತ್ತಿಲ್ಲ.
ನಾಯಕರಾದವರಿಗೆ ಮೊದಲು ದೇಶ ಮತ್ತು ಅದರ ಸುಂದರ ಭವಿಷ್ಯ ಕಾಣಬೇಕು. ನಮ್ಮಲ್ಲಿ ಹಾಗಾಗುತ್ತಿಲ್ಲ ಸ್ವಾರ್ಥ, ಮಕ್ಕಳು, ಮೊಮ್ಮಕ್ಕಳು ಮತ್ತು ಮುಂದಿನ ಹತ್ತು ತಲೆಮಾರುಗಳು ಕಾಣುತ್ತಿವೆ. ಇದರಿಂದ ನಿಸ್ವಾರ್ಥ ಸೇವೆ ಎನ್ನುವುದು ವೇದಿಕೆಯ ಭಾಷಣಗಳಿಗೆ ಸೀಮಿತವಾಗುತ್ತಿದೆ. ಆದ್ದರಿಂದ ವೆಚ್ಚ ಕಡಿತ ಎನ್ನುವ ಗಂಭೀರ ವಿಚಾರ ಕೂಡ ನಗೆಪಾಟಲಿಗೆ ಒಳಗಾಗುತ್ತಿದೆ. ಎಚ್ಚಕ್ಕೆ ಕಡಿವಾಣ ಎನ್ನುವುದು ಸಾರ್ವಜನಿಕರಲ್ಲಿ ಭ್ರಮೆ ತುಂಬುವ ಪ್ರಯತ್ನವಾಗದೆ ವಾಸ್ತವಕ್ಕಿಳಿಯಬೇಕು. ದುಂದುವೆಚ್ಚ ನಿಲ್ಲಲು ರಾಜಕೀಯನಾಯಕರು ಈಗ ಪಡೆಯುತ್ತಿರುವ ವೇತನವನ್ನು ಶೇಕಡಾ ೫೦ರಷ್ಟು ಕಡಿಮೆ ಮಾಡಿಕೊಳ್ಳಲಿ.

No comments: