Monday, October 12, 2009

‘ಬೇಸ್‌ಲೆಸ್’ ಸಂಶೋಧನೆಗಳು: ಒಪ್ಪಬೇಕೆಂಬ ಒತ್ತಾಯದ ಹಿಂದಿನ ಶಕ್ತಿ ಯಾವುದು?

ಡಾ. ಎಸ್. ಶಾಂತಾರಾಮ್ ಅವರ ಬಿಟಿ ತರಕಾರಿಗಳ, ಅದರಲ್ಲೂ ಬಿಟಿ ಬದನೆ ಸಮರ್ಥನೆಯ ಮತ್ತು ಅದರ ಬಿಡುಗಡೆಯ ತರಾತುರಿಯ ವಾದವನ್ನು ಓದಿ ಆಶ್ಚರ್ಯವಾಯಿತು. ಜಗತ್ತಿನ ಬಹುತೇಕ ದೇಶಗಳು ಬಿಸಾಕಿದ ತಂತ್ರಜ್ಞಾನವನ್ನು ವಿಜ್ಞಾನದ ಪರಿಭಾಷೆಯಲ್ಲಿ ಬೋಸಿದ ತಕ್ಷಣ ಒಪ್ಪಲೇ ಬೇಕು ಎನ್ನುವಂಥ ವಾದವನ್ನು ಅವರು ಮಂಡಿಸಿದ್ದಾರೆ ಆದರೆ ಲೇಖನಕ್ಕೆ ವಿಜ್ಞಾನದ ಶಕ್ತಿ ತುಂಬಲಾಗದೆ ಸೋತಿದ್ದಾರೆ. ಒಣ ಭೂಮಿಯಲ್ಲಿ ಭತ್ತ ಬೆಳೆಯುವುದು, ನೀರು ನಿಲ್ಲುವ ಜಾಗದಲ್ಲಿ ತೊಗರಿ ಬೆಳೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಮ್ಮ ರೈತರು ತಿಳಿದುಕೊಂಡಿದ್ದು ಜೀವನಾನುಭವದಿಂದಲೇ ಹೊರತು ಯಾವುದೇ ವಿಜ್ಞಾನದಿಂದಲ್ಲ. ಇಷ್ಟು ಮಳೆ ಸುರಿಯುವ ಜಾಗದಲ್ಲಿ ಇಂಥ ಬೆಳೆ ಬೆಳೆಯಬೇಕೆನ್ನುವುದನ್ನು ಯಾವುದೇ ವಿಜ್ಞಾನಿ ಅಥವಾ ವಿಜ್ಞಾನ ನಮ್ಮ ರೈತರಿಗೆ ಹೇಳಿಕೊಟ್ಟಿರಲಿಲ್ಲ, ಅದೆಲ್ಲವನ್ನೂ ಅನುಭವ ಜ್ಞಾನದಿಂದ ಕಲಿತು ಸಾಸಿ ತೋರಿಸಿದ್ದಾರೆ. ಅದಕ್ಕೇ ಕುವೆಂಪು ‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ಎದೆಯ ಧ್ವನಿಗೂ ಮಿಗಿಲು ಶಾಸ್ತ್ರ ಇಹುದೇನು’ ಎಂದಿದ್ದಾರೆ. ಭಾರತದಂಥ ವೈವಿಧ್ಯಮಯ ಕೃಷಿ ಸಂಸ್ಕೃತಿಯಮೇಲೆ ಬೀಜ ಕಂಪನಿಗಳು ಏಕ ಸಂಸ್ಕೃತಿ ನೀತಿಯನ್ನು ಹೇರಿ ತಮ್ಮ ಏಕಸ್ವಾಮ್ಯಸಾಸಲು ಮುಂದಾಗಿವೆ ಎನ್ನುವುದನ್ನೂ ನಮ್ಮ ರೈತರು ಅನುಭವದಿಂದಲೇ ಅರ್ಥಮಾಡಿಕೊಂಡಿದ್ದಾರೆ. ಅದನ್ನು ಅವರಿಗೆ ಯಾರೂ ಹೇಳಿಕೊಡಬೇಕಿಲ್ಲ! ನಿಮ್ಮ ಪರಂಪರೆ, ಸಂಸ್ಕೃತಿ ಏನು ಹೇಳುತ್ತದೆ ಎನ್ನುವುದು ನಮಗೆ ಬೇಕಿಲ್ಲ ಆಧುನಿಕತೆ ಅಥವಾ ಅಮೆರಿಕ ಏನು ಹೇಳುತ್ತದೆ ಅದನ್ನು ಒಪ್ಪಲೇ ಬೇಕು ಎನ್ನುವ ಆಗ್ರಹ ಅವರ ವಾದದಲ್ಲಿದೆ. ಅಮೆರಿಕದಲ್ಲಿ ಸರಿಯಾದದ್ದು ಇಡೀ ಜಗತ್ತಿಗೇ ಸರಿಯನಿಸಬೇಕೆಂಬ ನಿಯಮ ಇಲ್ಲವಲ್ಲ? BT-Brinjal ತನ್ನ ಸ್ವಂತ ಸಾಮರ್ಥ್ಯದಿಂದ ಕಾಂಡ ಕೊರಕ ಮತ್ತು ಕಾಯಿಕೊರಕ ಹುಳುಗಳನ್ನು ಮಾತ್ರ ನಿಯಂತ್ರಿಸುತ್ತದೆ ಎಂದು ತಿಳಿಸಿದ್ದಾರೆ.
ಇದರ ಕಾಯಿಯ ಕಾಂಡವನ್ನು ತಿಂದರೆ ಹುಳುಗಳು ತಾವಾಗಿಯೇ ಸಾಯುತ್ತವೆ ಎಂದರೆ ಇಲ್ಲಿ ಸಾಯುವ ಹುಳ ಯಾವುದಾದರೂ ಆಗಬಹುದು. ಪರಂಪರೆಯಿಂದ ರೈತನ ಮಿತ್ರ ಎಂದೇ ಹೆಸರಾಗಿರುವ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಎರೆಹುಳುವಿನಂಥ ನಿರುಪದ್ರವಿಗಳೂ ಸಾಯಬಹುದು. ಇಲಿಗಳು, ಅವುಗಳನ್ನೇ ತಿಂದು ಬದುಕುತ್ತಿರುವ ಹಾವುಗಳು, ಹಕ್ಕಿಗಳು ಯಾವುದಾದರೂ ಸರಿ ಇದರಿಂದ ಸಾಯುವುದು ಖಚಿತ. ಅಂದರೆ ಈ ತಂತ್ರಜ್ಞಾನದಿಂದ ಜೈವಿಕ ಸರಪಳಿಯೇ ತುಂಡಾಗುತ್ತದೆ. ಒಂದು ಸಾರಿ ಪ್ರಕೃತಿಯಲ್ಲಿ ಇಂಥ ಅವಾಂತರಗಳು ಸಂಭವಿಸಿದರೆ ಅದು ಮರುಪರಿಪೂರ್ಣಗೊಳ್ಳಲು ದಶಕಗಳೇ ಬೇಕಾಗುತ್ತವೆ. ಆದರೂ ಮೊದಲ ಸ್ಥಿತಿಗೆ ಬರುವುದಿಲ್ಲ. ಕೀಟಗಳು ಸಾಯುವ ಈ ತಂತ್ರಜ್ಞಾನದ ಆಹಾರ ತಿಂದರೆ ಮನುಷ್ಯನ ದೇಹಕ್ಕೆ ಏನೂ ಆಗುವುದಿಲ್ಲ. ಮನುಷ್ಯರ ಮತ್ತು ಪ್ರಾಣಿಗಳ ದೇಹಕ್ಕೆ ಬಿಟಿ ಪ್ರೊಟೀನನ್ನು ಅರಗಿಸಿಕೊಳ್ಳುವ ಶಕ್ತಿಯೇ ಇಲ್ಲ ಎಂದಿದ್ದಾರೆ ಒಂದು ಕಡೆ ಇದನ್ನು ಸಮರ್ಥಿಸಿಕೊಳ್ಳುವ ಅವರೇ ಇನ್ನೊಂದು ಕಡೆ ಹೀಗೆ ಹೇಳುತ್ತಿರುವುದನ್ನು ಗಮನಿಸಿದರೆ ಅವರ ವಾದ ಎಷ್ಟು ಗೊಂದಲಮಯವಾಗಿದೆ ಎನ್ನುವುದು ಗೊತ್ತಾಗುತ್ತದೆ. ಏನೇ ಆದರೂ ಇಲ್ಲಿ ವಿಷವೇ ಆಹಾರವಾಗುವುದು ಖಚಿತ! ವಿಜ್ಞಾನದ ‘ವಿ’ ಗೊತ್ತಿಲ್ಲದವರು ರೃತರನ್ನು ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದು ಹುರುಳಿಲ್ಲದ ವಾದ. ಸುಮ್ಮನೇ ತಿರಸ್ಕರಿಸಲು ನಮ್ಮ ವಿಜ್ಞಾನಿಗಳೇನು ದೇಶ, ರೈತ ವಿರೋಗಳಲ್ಲ, ಅನೇಕಬಾರಿ ಸಂಶೋಧನೆ ನಡೆಸಿಯೇ ಅದರ ಸಾಧಕ ಬಾಧಕಗಳನ್ನು ಅರಿತಿದ್ದಾರೆ. ಅವರಿಗೂ ಲ್ಯಾಬ್‌ಗಳು ಗೊತ್ತಿವೆ, ಅವರೂ ವಿಜ್ಞಾನವನ್ನೇ ಓದಿದ್ದಾರೆ.
ಬಿಟಿ (ಬ್ಯಾಸಿಲ್ಲಸ್ ತುರಿಂಜೇನಿಸ್) ಸಂಶೋಧನೆಯನ್ನು ಅನೇಕರು ‘Baseless ’(ಆಧಾರವಿಲ್ಲದ) ಸಂಶೋಧನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇದಕ್ಕೆ ಕಾರಣ ವಿಷವನ್ನು ಆಹಾರದ ಪರಿಭಾಷೆಯಲ್ಲಿ ಬೋಸಲೆತ್ನಿಸುತ್ತಿರುವುದು. ಈಗ ಭಾರತೀಯ ರೈತರು ಮಾತ್ರ ಎಚ್ಚರವಾಗುತ್ತಿಲ್ಲ ಇಂಥ ಕುಲಾಂತರಿ ಬೀಜಗಳ ವಿಷಯದಲ್ಲಿ ಬಳಕೆದಾರರೂ ಎಚ್ಚರವಾಗುತ್ತಿದ್ದಾರೆ. ನಿಧಾನವಾಗಿ ಸಾವಯವ, ಸಹಜ ಕೃಷಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದು ಇದಕ್ಕೆ ಸಾಕ್ಷಿ. ನಮ್ಮ ಆಹಾರಕ್ಕೆ ಒಂದು ಪರಂಪರೆಯೇ ಇದೆ. ನಾನು ನೋಡಿದ, ತಿಳಿದಿರುವ ಮಟ್ಟಿಗೆ ಜಗತ್ತಿನ ಯಾವುದೇ ದೇಶದಲ್ಲೂ ಇಷ್ಟೊಂದು ವೈವಿಧ್ಯಮಯ ಆಹಾರಗಳಿಲ್ಲ. ತರಕಾರಿ, ಬೇಳೆ ಕಾಳು ಹಣ್ಣುಗಳು... ಎಲ್ಲದೂ ನಮ್ಮಲ್ಲಿ ಮಾತ್ರ ಎನ್ನುವುದು ಭಾರತೀಯರ ಹೆಮ್ಮೆ. ಆಹಾರ ನಮಗೆ ಬರೀ ಹೊಟ್ಟೆ ತುಂಬುವ ಕ್ರಿಯ ಮಾತ್ರವಲ್ಲ, ಅದೊಂದು ಜೀವನ ಶೈಲಿ. ಇಂಥ ಆಹಾರ ವೈವಿಧ್ಯವನ್ನು ನಾಶ ಮಾಡುವುದೇ ಜಿ.ಎಂ. (Genetically Modified) ಆಹಾರದ ಗುರಿ. ಇಂಥ ತಂತ್ರeನ ಯಾವಾಗಲೂ ಅಭಿವೃದ್ಧಿ ಹೊಂದಿದ ದೇಶಗಳ ಪರವಾಗಿ ಮತ್ತು ಶೋಷಣೆಯನ್ನು ಗರ್ಭೀಕರಿಸಿಕೊಂಡಿರುತ್ತವೆ. ಇವೆಲ್ಲ ಅಭಿವೃದ್ಧಿ ಹೊಂದುವವರೆಗೆ ಮಾತ್ರ ನಮ್ಮಲ್ಲಿರುತ್ತವೆ. ನಂತರ ಅದೂ ಪೇಟೆಂಟ್ ಆಗುವುದರಿಂದ ಮತ್ತೆ ನಾವು ಆಹಾರಕ್ಕಾಗಿ ಗುಲಾಮರಾಗಿಬಿಡುತ್ತೇವೆ. ಪೇಟೆಂಟ್ ಕೂಡ ದಬ್ಬಳಿಕೆ, ಮೋಸದ ಅಸ್ತ್ರವಾಗಿರುವುದರಿಂದ ಬಲಿಷ್ಠ ರಾಷ್ಟ್ರಗಳು ಬಡ ದೇಶಗಳಿಗೆ ಬೀಜ, ಕ್ರಿಮಿನಾಶಕಗಳನ್ನು ಸರಬರಾಜುಮಾಡಿ ಕೃಷಿಯಲ್ಲೂ ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಮುಂದಾಗುತ್ತವೆ ಅದರ ಒಂದು ಭಾಗವೇ ಬಿಟಿ ಬೀಜಗಳು.
ನಾನು ಇತ್ತೀಚೆಗೆ ಲ್ಯಾಟಿನ್ ಅಮೆರಿಕದ ದೇಶಗಳಿಗೆ ಹೋಗಿದ್ದೆ. ಬೊಲಿವಿಯಾ ದೇಶದ ತರೀಹ ನಗರದಲ್ಲಿ ಸಾವಯವ ಕೃಷಿಕರು ಸಮಾರಂಭವನ್ನು ಏರ್ಪಡಿಸಿದ್ದರು. ಆ ದೇಶದ ಅಧ್ಯಕ್ಷರಾದ ಇಒಮೊರಾಲಸ್ ಅದನ್ನು ಉದ್ಘಾಟಿಸಿ, ‘ವಿದೇಶಿ ಕಂಪನಿ ಬೀಜದಿಂದ ಆದ ಅನಾಹುತಗಳನ್ನು ಗಮನಿಸಿದ್ದೇನೆ, ಕೇಳಿದ್ದೇನೆ. ಅದು ಅನಾರೋಗ್ಯಕರ ಎಂದು ಗೊತ್ತಾಗಿದೆ. ಇಂಥ ಕುಲಾಂತರಿ ಬೀಜಗಳಿಂದ ರೈತರು ದೂರವಿದ್ದು, ದೇಶಿ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಜಾಗತೀಕರಣದಿಂದ ನಮ್ಮ ಸಂಸ್ಕೃತಿ ನಾಶವಾಗದಂತೆ ತಡೆಯಬೇಕೆಂದರೆ ಈ ಮಾರ್ಗ ಅನಿವಾರ್ಯ’ ಎಂದು ಸಲಹೆ ನೀಡಿದರು. ಅದೇ ರೀತಿ ವೆನಿಜುವೆಲಾ, ಪಾರಾಗ್ವೆ, ಬ್ರೆಜಿಲ್, ಅರ್ಜಂಟೀನಾ ಮತ್ತಿತರೆ ದೇಶಗಳಲ್ಲೂ ಬಿಟಿ ಗೆ ಬಲವಾದ ವಿರೋಧ ವ್ಯಕ್ತವಾಗಿದೆ. ಜಾಂಬಿಯಾ, ಜಿಂಬಾಬ್ವೆ, ಇಂಡೋನೇಶಿಯಾದಂಥ ದೇಶಗಳು ಹತ್ತು ವರ್ಷಗಳ ಹಿಂದೆಯೇ ಇದನ್ನು ತಿರಸ್ಕರಿಸಿವೆ. ಯುರೋಪಿಯನ್ ಒಕ್ಕೂಟ ಕೂಡ ಇದರ ಒಪ್ಪಂದವನ್ನು ಹತ್ತು ವರ್ಷ ಮುಂದೂಡಿದೆ. ಭಾರತಕ್ಕೇಕೆ ಈ ಒತ್ತಾಯ?
‘ಒಂದು ಅಂದಾಜಿನ ಪ್ರಕಾರ ಪ್ರಪಂಚದಾದ್ಯಂತ ೧೪ ದಶಲಕ್ಷ ರೈತರು ಕುಲಾಂತರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಮತ್ತು ಅಮೆರಿಕದಲ್ಲಿ ೩೦೦ ದಶಲಕ್ಷ ಪ್ರಜೆಗಳು ೧೯೯೬ರಿಂದ ಕುಲಾಂತರಿ ಆಹಾರ ಸೇವಿಸುತ್ತಿದ್ದಾರೆ’ ಎನ್ನುವುದನ್ನು ಶಾಂತಾರಾಮ್ ಪ್ರಸ್ತಾಪಿಸಿದ್ದಾರೆ ಲ್ಯಾಟಿನ್ ಅಮೆರಿಕದಲ್ಲೇ ಇಷ್ಟೊಂದು ವಿರೋಧ ವ್ಯಕ್ತವಾಗಿರುವಾಗ ಏಷ್ಯಾದ ಅದರಲ್ಲೂ ಭಾರತದಂಥ ಅಭಿವೃದ್ಧಿಶೀಲ ದೇಶದ ಮೇಲೆ ಹೇರಲು ಯತ್ನಿಸುತ್ತಿರುವುದರ ಹಿಂದಿನ ಹುನ್ನಾರವಾದರೂ ಏನು?
ಈ ತಂತ್ರeನದ ಆಹಾರ ಸೇವಿಸಿದವರಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಕ್ಷೀಣಿಸುತ್ತದೆ ಎಂದು ಆಸ್ಟ್ರೇಲಿಯಾದಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ. ಕುಲಾಂತರಿ ಬೆಳೆ ಬೆಳೆಯಲು ಆರಂಭಿಸಿದ ನಂತರ ನಿಸರ್ಗದಲ್ಲಿ ವಂಶವಾಹಿನಿ ವ್ಯವಸ್ಥೆ ಸಂಪೂರ್ಣ ಹಾಳಾಗಲಿದೆ ಎಂಬುದನ್ನಂತೂ ಬಹಳ ಹಿಂದಿನಿಂದಲೇ ಹೇಳಲಾಗುತ್ತಿದೆ. ಬಿಟಿ ಬದನೆ ಬಂದರೆ ಅಪರೂಪದ ಮತ್ತು ಆರೋಗ್ಯಪೂರ್ಣ ರುಚಿ ಹೊಂದಿರುವ ನಮ್ಮ ನಾಟಿ ತಳಿಗಳಾದ ಬದನೆ, ಮುಳ್ಳುಗಾಯಿ, ಚೋಳು ಬದನೆ, ಹಿತ್ತಲ ಬದನೆ, ನೀಲಿಬದನೆ, ಉಡುಪಿ ಗುಳ್ಳಾದಂಥ ಅಪರೂಪದ ಬದನೆ ಮನೆ ಖಾಲಿ ಮಾಡಲಿವೆ. ಎಣ್ಣೆಗಾಯಿ ಪಲ್ಯ ಎನ್ನುವುದು (ಅದರ ರುಚಿ ಗೊತ್ತಾದರೆ ಅದೂ ಪೇಟೆಂಟ್ ಆಗುತ್ತದೆ)ಇತಿಹಾಸವಾಗುತ್ತದೆ. ಕೆಲವು ಸಂಶೋಧಕರು, ವಿeನಿಗಳು ಈ ಜೀನು (ಕು)ತಂತ್ರ ಜ್ಞಾನ ಬೇಕೇಬೇಕು ಎನ್ನುತ್ತಿದ್ದಾರೆ. ಪ್ರeವಂತರು, ರೈತರು, ಎನ್‌ಜಿಓಗಳು ಮತ್ತು ಇದರ ಅಡ್ಡ ಪರಿಣಾಮಗಳನ್ನು ಅರಿತಿರುವವರು ಬೇಡವೇಬೇಡ ಎನ್ನುತ್ತಿದ್ದಾರೆ. ಇದನ್ನು ನಾಟಿ-ಬಿಟಿ.,ಕುಲ ಮತ್ತು ಕುಲಗೆಟ್ಟ, ಇಲ್ಲದಿದ್ದರೆ ಸಂಸ್ಕೃತಿ ಮತ್ತು ವಿಕೃತಿಗಳ ಸಂಘರ್ಷ ಎಂದು ಹೇಳಬಹುದು.
ಭಾರತದ ರೈತರ ಬದುಕು ಬರೀ ವ್ಯಾಪಾರದ ತಳಹದಿಯಮೇಲೆ ರೂಪಿತಗೊಂಡಿಲ್ಲ ಆದ್ದರಿಂದ ಅವರನ್ನು ವ್ಯಾಪಾರದ ದೃಷ್ಟಿಯಿಂದ ನೋಡದೆ ಅವರ ಮನಸುಗಳ ಆಳದಿಂದ ನೋಡಬೇಕಾಗುತ್ತದೆ. ಲಾಭ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ಭಾರತಿಯರ ಆರೋಗ್ಯವನ್ನು ಹಾಳುಗೆಡವುವ ಕಂಪನಿಗಳನ್ನು ಭಾರತೀಯರು ಈಗಾಗಲೇ ಅನುಮಾನದಿಂದ ನೋಡುತ್ತಿದ್ದಾರೆ. ಅಂದು ತಕ್ಕಡಿ ಹಿಡಿದು ದೇಶ ಪ್ರವೇಶಿಸಿದ ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣಕಾರಿ ಮುಖಗಳು ಭಾರತೀಯರಲ್ಲಿ ಇನ್ನೂ ಮಾಸಿಲ್ಲ. ಆಗಲೇ ಬೀಜದ ಹೆಸರಿನಲ್ಲಿ ವಸಾಹತು ಸ್ಥಾಪಿಸಲು ಅನೇಕ ಸಾಮ್ರಾಜ್ಯ ಶಾಹಿ ಕಂಪನಿಗಳು ದೇಶಪ್ರವೇಶಿಸುತ್ತಿವೆ ಎನ್ನುವುದು ಈಗ ಮನವರಿಕೆಯಾಗಿದೆ. ದಕ್ಷಿಣ ಆಫ್ರಿಕದಲ್ಲಿ ಹದಿನೈದು ವರ್ಷಗಳ ಹಿಂದೆ ಆಹಾರ ಕ್ಷಾಮ ತಲೆದೋರಿದಾಗ ಅಮೆರಿಕ ಬಿಟಿ ಆಹಾರ ಕಳಿಸಿತ್ತು ಹಸಿವಿನಿಂದ ಬಳಲುತ್ತಿದ್ದರೂ ಅವು ಆ ಆಹಾರವನ್ನು ತಿರಸ್ಕರಿಸಿ ಅಮೆರಿಕದ ಮುಖಕ್ಕೆ ತಿವಿದಿದ್ದವು. ಆದರೂ ಪಾಠ ಕಲಿಯದೆ ತನ್ನ ರಪ್ತು ಮಾರುಕಟ್ಟೆಯನ್ನು ವಿಸ್ತರಿಸಲು ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಿದೆ ಅದರಲ್ಲಿ ಬಿಟಿ ತಂತ್ರಜ್ಞಾನವೂ ಒಂದು.
ಕಳೆದ ಮೂರು ವರ್ಷಗಳಿಂದೀಚೆಗೆ ಕೋಲಾರ, ಹಾಸನದ ಆಲೂಗಡ್ಡೆ ಬೆಳೆಗಾರರು ಅಂಗಮಾರಿ ರೋಗಕ್ಕೆ ಆಲೂಗಡ್ಡೆ ಬಲಿಯಾಗಿ ನಷ್ಟ ಅನುಭವಿಸುತ್ತಿದ್ದಾರೆ. ಇದರ ಹಿಂದಿನ ಕಟು ಸತ್ಯ ಎಂದರೆ ರೈತರು ಬಳಸಿದ ಮತ್ತು ಬಳಸುತ್ತಿರುವ ಆಲೂಗಡ್ಡೆ ಬಿತ್ತನೆ ಬೀಜ. ಹೆಚ್ಚು ಇಳುವರಿ, ಹೆಚ್ಚು ಲಾಭದ ಆಸೆ ತೋರಿಸಿದ ಖಾಸಗಿ ಬೀಜ ಕಂಪನಿಗಳು ತಮ್ಮ ಸಂಸ್ಥೆಯ ಬೀಜಗಳನ್ನು ಖರೀದಿಸಲು ಪುಸಲಾಯಿಸಿ ಸರಬರಾಜು ಮಾಡಿದವು ಆರಂಭದ ಎರಡು ಮೂರು ವರ್ಷ ಉತ್ತಮ ಇಳುವರಿ ನೀಡಿದ ಬೀಜಗಳು ನಂತರ ತಮ್ಮ ವಿಕಾರ ಮುಖ ಪ್ರದರ್ಶಿಸಿದವು. ನೆಲದ ಮೇಲೆ ಸಮೃದ್ಧವಾಗಿ ಕಾಣುತ್ತಿದ್ದ ಫಸಲು ಒಳಗೆ ತದ್ವಿರುದ್ಧವಾಗಿತ್ತು. ಬೃಹದಾಕಾರದ ಗೆಡ್ಡೆಗಳು ಬೆಳೆದಿದ್ದರೂ ಮೈತುಂಬಾ ಬಿರಿ ಬಿಟ್ಟುಕೊಂಡಿದ್ದವು. ‘ನಮಗೆ ಚಿಪ್ಸ್ ತಯಾರಿಸಲು ಆಲೂಗಡ್ಡೆ ಬೇಕು. ಇವು ಬಿರಿಬಿಟ್ಟಿರುವುದರಿಂದ ಖರೀದಿಸಲಾಗುವುದಿಲ್ಲ’ ಎಂದು ಬೀಜ ನೀಡಿ ಆಲೂಗೆಡ್ಡೆ ಖರೀದಿಸುವ ಭರವಸೆ ನೀಡಿದ್ದ ಕಂಪನಿ ಸಬೂಬು ಹೇಳಿ ಕೈತೊಳೆದುಕೊಂಡಿದ್ದವು. ಅಕ ಇಳುವರಿ, ಅಕ ಲಾಭದ ಆಸೆಗಾಗಿ ಸಾಲ-ಸೋಲ ಮಾಡಿ ಬಿತ್ತಿ ಬೆಳೆದ ರೈತ ಕೊನೆಗೆ ತಲೆಮೇಲೆ ಕೈಹೊತ್ತು ಕುಳಿತಿದ್ದ. ಹಾಗೆಯೇ ಉತ್ತರ ಕರ್ನಾಟಕದಲ್ಲಿ ತೊಗರಿ, ನೆಲಗಡಲೆ, ಹತ್ತಿ ಬೆಳೆಗಾರರು ಖಾಸಗಿ ಕಂಪನಿಗಳ ಇಂಥ ಮೋಸಕ್ಕೆ ಬಲಿಯಾದ ಅನೇಕ ಉದಾಹರಣೆಗಳಿವೆ. ಇಂಥ ಮೋಸದ ಜಾಲದಲ್ಲಿ ಇಂದು ದೇಶದ ಶೇ. ೯೫ ಭಾಗ ರೈತರು ಬೀಳುವ ಅಪಾಯಗಳಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬರುವ ದಿನಗಳಲ್ಲಿ ಭಾರತದ ಕೃಷಿ ಸಂಪೂರ್ಣ ನಾಶವಾಗಿ ಎಲ್ಲರೂ ‘ಖಾಸಗಿ ಒಡೆಯರ’ ಅಡಿಯಾಳುಗಳಾಗಬೇಕಾಗುತ್ತದೆ.
ಭಾರತದಲ್ಲಿ ಒಟ್ಟು ೩೫೦೦ ಜಾತಿಯ ವಿಶೇಷ ತಳಿ ಭತ್ತಗಳಿದ್ದವು. ಕಂಪನಿ ಬೀಜಗಳ ಹಾವಳಿಯಿಂದ ಈಗ ಅವುಗಳ ಸಂಖ್ಯೆ ೩೦೦ಕ್ಕಿಂತ ಕಡಿಮೆ ಎನ್ನಲಾಗುತ್ತಿದೆ. ಇದು ಭಾರತದಂಥ ಕೃಷಿ ಪ್ರಧಾನ ದೇಶದ ದುರಂತ. ಅಪಾರ ಪ್ರಮಾಣದ ರಸಗೊಬ್ಬರ ಕೀಟನಾಶಕ ಮಿಶ್ರಿತ ಆಹಾರ ಸೇವಿಸುತ್ತಿರುವುದರಿಂದ ಭಾರತೀಯರು ಹಲವಾರು ದೈಹಿಕ ಬಾಧೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ಗಮನಿಸಿದ ಅನೇಕ ಹಳ್ಳಿಗಳಲ್ಲಿ ರೈತರು ತಮ್ಮ ಜೀವನಕ್ಕೆ ಬೇಕಾಗುವಷ್ಟು ತರಕಾರಿ, ಭತ್ತ, ದ್ವಿದಳ ಧಾನ್ಯಗಳನ್ನು ಕೀಟನಾಶಕ, ರಸಾಯನಿಕ ಗೊಬ್ಬರವಿಲ್ಲದೆ ದೇಶಿ ಬೀಜಗಳಲ್ಲಿ ಬೆಳೆದುಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರಲ್ಲಿ ಗೊಬ್ಬರ ಮತ್ತು ಕಂಪನಿ ಬೀಜಗಳ ಬಗ್ಗೆ ಅರಿವು ಮೂಡಿದೆ. ಇವನ್ನೆಲ್ಲ ಗಮನಿಸಿದರೆ ವಿಜ್ಞಾನದ ವಾಸ್ತವಗಳು ವಾಸ್ತವದ ಅವಾಸ್ತವಗಳಾಗಿ ‘ಪುಸ್ತಕದ ಬದನೆಕಾಯಿ’ಯಾಗಿ ಕಾಣುತ್ತಿಲ್ಲವೆ?

No comments: