Monday, October 12, 2009

ವಿಶ್ವ ವಾಣಿಜ್ಯ ಸಂಘಟನೆ

ದಿಲ್ಲಿಯಲ್ಲಿ ಎರಡು ದಿನ (ಸೆ. ೩,೪)ನಡೆದ ವಿಶ್ವ ವ್ಯಾಪಾರಿ ಸಂಘಟನೆಯ (ಡಬ್ಲ್ಯೂಟಿಒ) ವಾಣಿಜ್ಯ ಸಚಿವರ ಮಟ್ಟದ ಅನೌಪಚಾರಿಕ ಸಭೆ ಮುಕ್ತಾಯಗೊಂಡಿದೆ. ದೋಹಾ ಸುತ್ತಿನ ಸಂಧಾನ ಮಾತುಕತೆಗೆ ಸಂಬಂಸಿದಂತೆ ರಾಜಕೀಯ ಪ್ರಕ್ರಿಯೆ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು ಎಂಬುದು ವಾಣಿಜ್ಯ ಸಚಿವ ಆನಂದ ಶರ್ಮ ಅವರ ಅಂಬೋಣ. ಅಮೆರಿಕ, ಯೂರೋಪಿಯನ್ ಒಕ್ಕೂಟ, ಆಸ್ಟ್ರೇಲಿಯಾ, ಬ್ರೆಜಿಲ್ ಸೇರಿದಂತೆ ೩೫ ಸದಸ್ಯ ರಾಷ್ಟ್ರಗಳ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಜುಲೈನಲ್ಲಿ ಜಿನೀವಾದಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿ ಈ ಸಭೆ ಏರ್ಪಡಿಸಲಾಗಿತ್ತು. ಬರುವ ನವೆಂಬರ್ ೩೦ರಿಂದ ಡಿಸೆಂಬರ್ ೨ರವರೆಗೆ ಜಿನೀವಾದಲ್ಲಿ ಮತ್ತೆ ಮಾತುಕತೆಗಳು ಪುನಾರಂಭಗೊಳ್ಳಲಿವೆ.
ಈ ಮಾತುಕತೆಯಲ್ಲಿ ಭಾರತ ಪಾಲ್ಗೊಳ್ಳದಂತೆ ನಾನಾ ಜನಪರ ಸಂಘಟನೆಗಳು ಒತ್ತಾಯಿಸಿದ್ದವು. ಇದನ್ನು ಲೆಕ್ಕಿಸದೆ ಪ್ರತಿಭಟಿಸಿದ್ದ ಸಾವಿರಾರು ರೈತ ಮುಖಂಡರನ್ನು ಬಂಸಿ ಸಭೆ ನಡೆಯಿತು. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಈ ಮಾತುಕತೆಗಳಿಗೆ ಮೊದಲು ನಿರೀಕ್ಷಿಸಿದಷ್ಟು ಮಹತ್ವ ಬರಲಿಲ್ಲ ಮತ್ತು ಮಾಧ್ಯಮಗಳೂ ಕೂಡ ಈ ‘ಮಾತನ್ನು’ ಗಟ್ಟಿಯಾಗಿ ಕೇಳಿಸಿಕೊಂಡಂತೆ ಕಾಣಲಿಲ್ಲ. ಜಾಗತೀಕರಣದ ಬಲೆಯಲ್ಲಿ ಎಲ್ಲ ದೇಶಗಳನ್ನು ಹಿಡಿದಿಟ್ಟುಕೊಳ್ಳಲು ಸಂಚು ರೂಪಿಸಿರುವ ಬಲಾಢ್ಯ ದೇಶಗಳು ಮೊದಲಿನಷ್ಟು ಶಕ್ತಿಯುತವಾಗಿ ಉಳಿಯದಿರುವುದನ್ನು ಇದು ಸಾಂಕೇತಿಸುತ್ತದೆ.
ಆರಂಭದಲ್ಲಿ ಕೃಷಿಯನ್ನು ಗ್ಯಾಟ್‌ನಿಂದ ಹೊರಗಿಡುವಂತೆ ಒತ್ತಾಯಿಸಿದ್ದ ಅಮೆರಿಕ ನಂತರ ಅದನ್ನು ಗ್ಯಾಟ್ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿತ್ತು. ಹಾಗೇನಾದರೂ ಆಗದಿದ್ದರೆ ತಾನು ಗ್ಯಾಟ್‌ನಿಂದಲೇ ಹೊರಗಿರುವುದಾಗಿ ಮೊಂಡಾಟ ಮಾಡಿತ್ತು. ಇಲ್ಲಿ ಇನ್ನೊಂದು ದೇಶದ ಹಿತ ಕಾಯುವುದಾಗಿ ಹೇಳುವುದು ಬರೀ ಬೊಗಳೆ. ಸಂಪೂರ್ಣ ಲೆಕ್ಕಾಚಾರ ಇರುವುದು ಲಾಭ ನಷ್ಟದಲ್ಲಿ ಮಾತ್ರ. ಗ್ಯಾಟ್‌ನಿಂದ ಕೃಷಿಯನ್ನು ಹೊರಗಿಟ್ಟರೆ ಭಾರತ, ಚೀನಾ ಅಥವಾ ಬಡ ದೇಶಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು ಎನ್ನುವ ಭಯದಲ್ಲಿ ಹಾಗೆ ಮಾಡಿತ್ತು!
ಜಾಗತೀಕರಣ ಎಂದರೇನು?
ಜಾಗತೀಕರಣದ ಒಪ್ಪಂದ, ಅದರ ವ್ಯಾಪ್ತಿ, ವಿಸ್ತಾರ, ಕುಟಿಲತೆಗಳನ್ನು ಬಿಡಿಸಿ ಹೇಳುವುದು ಸ್ವಪ್ಪ ಕಷ್ಟ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಡರಾಷ್ಟ್ರಗಳ ಮೇಲೆ ಹಿಡಿತ ಸಾಸಲು ಲೂಟಿಕೋರ ದೇಶಗಳು ರೂಪಿಸಿಕೊಂಡಿರುವ ಒಂದು ಜಾಲ ಅಥವಾ ಯಜಮಾನ ಸಂಸ್ಕೃತಿಯ ಭಾಗ! ಇಂಥ ಯಜಮಾನ ಸಂಸ್ಕೃತಿಯನ್ನು ರೂಪಿಸಿದವರು ಬಡದೇಶದ ಪ್ರತಿನಿಗಳೇನಲ್ಲ. ಯಾವ ರಾಷ್ಟ್ರಗಳನ್ನು ತಮ್ಮ ವಸಾಹತಾಗಿ ಮಾಡಿಕೊಂಡು ಅಲ್ಲಿನ ಸಂಪತ್ತಿನ ರುಚಿ ಕಂಡಿದ್ದರೋ ಆ ದೇಶಗಳ ನಾಯಕರು ಮತ್ತೆ ಮತ್ತೆ ರಚಿ ನೋಡಲು ರೂಪಿಸಿದ ಕುತಂತ್ರ ಇದು. ಎರಡನೇ ಮಾಹಾ ಯುದ್ಧದ ನಂತರ ಬಂಡವಾಳ ಬರಿದು ಮಾಡಿಕೊಂಡಿದ್ದ ಶ್ರೀಮಂತ ದೇಶಗಳು ಅದನ್ನು ತುಂಬಿಕೊಳ್ಳು ಜಾಗತೀಕರಣದಂಥ ಬಲೆ ಬೀಸಿ ಜಗತ್ತನ್ನೇ ತಮ್ಮ ವಸಾಹತಾಗಿಸಿಕೊಳ್ಳುತ್ತಿವೆ. ಅದಕ್ಕೆ ಒಪ್ಪದಿದ್ದರೆ ಯುದ್ಧದಂಥ ಅಸ್ತ್ರಗಳನ್ನು ಪ್ರಯೋಗಿಸುತ್ತವೆ. ಇತ್ತೀಚಿನ ಉದಾಹರಣೆ ಎಂದರೆ ಕೊಲ್ಲಿ ರಾಷ್ಟ್ರಗಳಲ್ಲಿನ ತೈಲಕ್ಕಾಗಿ ಅಮೆರಿಕ ನಡೆಸಿದ ಯುದ್ಧ ಮತ್ತು ಸದ್ದಾಂ ಹುಸೇನ್‌ಗೆ ಗಲ್ಲು. ಇವೆಲ್ಲ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ದೌರ್ಜನ್ಯಗಳು. ಶ್ರೀಮಂತ ದೇಶಗಳಿಗೆ ಇಂಥ ದೌರ್ಜನ್ಯದ್ದೇ ಒಂದು ಕರಾಳ ಇತಿಹಾಸವಿದೆ ಅದರ ಒಂದು ಭಾಗವೇ ಜಾಗತೀಕರಣ.
ಫುಲ್‌ಸ್ಟಾಪ್ ಇಲ್ಲದ ಮಾತುಗಳು:
ಕಾನ್‌ಕುನ್, ಉರುಗ್ವೆ, ಬ್ಲೆರ್‌ಹೌಸ್ ಒಪ್ಪಂದ, ಗ್ಯಾಟ್ ಒಪ್ಪಂದ, ಡಂಕೆಲ್ ಪ್ರಸ್ತಾವ, ದೋಹಾ ಮಾತುಕತೆ... ಹೀಗೆ ಒಂದಲ್ಲಾ ಒಂದು ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ಇವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ದೇಶಗಳ ಖಾಸಗಿ ವಿಚಾರಗಳಂತಾಗಿವೆ. ರಫ್ತು ಮತ್ತು ಆಮದಿಗೆ ಸಂಬಂಸಿದಂತೆ ಮಾತುಕತೆಗಳು ನಡೆಯುತ್ತಿವೆ. ಇಂಥ ವಿಚಾರದಲ್ಲಿ ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿರುವ ಭಾರತ ಅಥವಾ ತೃತೀಯ ಜಗತ್ತಿನ ದೇಶಗಳು ಕೋಲೇ ಬಸವನಂತೆ ತಲೆ ಅಲ್ಲಾಡಿಸದೆ ಸಾಮ್ರಾಜ್ಯಶಾಹಿ ದೇಶಗಳ ಕೃಷಿ ವಿರೋ ಧೋರಣೆಗಳನ್ನು ಖಂಡಿಸಬೇಕು.
ಜಾಗತೀಕರಣದ ಸರಿ ತಪ್ಪುಗಳು ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಭಾರತ ಸಹಿ ಹಾಕಿದ್ದರಿಂದ ಕೃಷಿ ಕ್ಷೇತ್ರ ಹಲವಾರು ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಮತ್ತು ಜಾಗತಿಕ ನಿಯಮಗಳೆಂಬ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅಮೆರಿಕ ಮತ್ತು ಯೂರೋಪಿನ ಶ್ರೀಮಂತ ದೇಶಗಳು ತಮ್ಮ ದೇಶದ ರೈತರಿಗೆ ಶಕ್ತಿ ಮೀರಿ ಸಬ್ಸಿಡಿ ನೀಡುತ್ತಿವೆ. ಅದೇ ಭಾರತ ನೀಡಿದರೆ ಚಕಾರ ಎತ್ತುತ್ತವೆ. ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕದಂಥ ನಿಯಮಗಳನ್ನು ರೂಪಿಸಬೇಕಿದೆ.
ಸಂಕುಚಿತ ಅಮೆರಿಕ:
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಮೆರಿಕದ ಒತ್ತಡಕ್ಕೆ ಮಣಿದು ಕೃಷಿ ಸಬ್ಸಿಡಿ ಕಡಿತ ಮಾಡುತ್ತಿವೆ. ಪ್ರತಿ ವರ್ಷ ತನ್ನ ರೈತರಿಗೆ ೩೦ ಸಾವಿರ ಶತಕೋಟಿ ಡಾಲರ್ ಮೊತ್ತದ ಸಬ್ಸಿಡಿ ನೀಡುತ್ತಿರುವ ಅಮೆರಿಕ, ಇತರೆ ದೇಶಗಳು ಸಬ್ಸಿಡಿ ನೀಡದಂತೆ ಆದೇಶ ರವಾನಿಸುತ್ತದೆ. ಈ ಕಾರಣದಿಂದ ಸಣ್ಣ ಸಣ್ಣ ರಾಷ್ಟ್ರಗಳು ಕೃಷಿಯಲ್ಲಿ ಸ್ವಾವಲಂಬನೆ ಸಾಸಲು ಸಾಧ್ಯವಾಗದೆ ತತ್ತರಿಸುತ್ತಿವೆ. ಇದರಿಂದ ಯಾರಿಗಾದರೂ ಅರ್ಥವಾಗುತ್ತದೆ ಜಾಗತೀಕರಣದ ಗುರಿಗಳೇನು ಎನ್ನುವುದು. ಭಾರತ ಅಥವಾ ಸಮಾನ ಮನಸ್ಕ ರಾಷ್ಟ್ರಗಳು ಸಬ್ಸಿಡಿ ವಿಚಾರದಲ್ಲಿ ಅಮೆರಿಕದ ಅಣತಿಯಂತೆ ನಡೆಯುವ ಬದಲು ಅದರ ಕುತಂತ್ರಗಳನ್ನು ವಿಶ್ವ ವ್ಯಾಪಾರಿ ಸಂಘಟನೆಯ ಸಭೆಗಳಲ್ಲಿ ಪ್ರಶ್ನಿಸಬೇಕು.
ಅಮೆರಿಕದಲ್ಲಿ ಸಾಕುವ ಪ್ರತಿ ಹಸುವಿಗೆ ೧೦ ಹೆಕ್ಟೇರ್ ಭೂಮಿ ಮೀಸಲಿದೆ. ಭಾರತದಲ್ಲಿ ಪ್ರತಿ ಕುಟುಂಬಕ್ಕೆ ೧.೪೭ ಹೆಕ್ಟೇರ್ ಭೂಮಿ ಇದೆ. ಯೂರೋಪಿನಲ್ಲಿ ಸಾಕುವ ಪ್ರತಿ ಹಸುವಿಗೆ ದಿನವೊಂದಕ್ಕೆ ೧೫೦ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ದಿನದ ಆದಾಯ ೫೦ ರೂ. ಮೀರುವುದಿಲ್ಲ. ಇಂಥ ಅಸಮಾನತೆಗಳು ತುಂಬಿ ತುಳುಕುತ್ತಿರುವ ಸನ್ನಿವೇಶದಲ್ಲಿ ಭಾರತೀಯರನ್ನು ಭಾರತದ ನೆಲೆಯಲ್ಲೇ ಯೋಚಿಸಬೇಕು. ತಲಾ ಆದಾಯದ ವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಬ್ರಿಟಿಷ್ ವಸಾಹತು ಮೂಲಕ ದೇಶ ಪ್ರವೇಶ ಮಾಡಿದ ಕೈಗಾರಿಕೀಕರಣ ಕೆಲವು ಕೇಡಿನ ಅಂಶಗಳನ್ನು ದೇಶದ ಆರ್ಥಿಕತೆಯ ಮೇಲೆ ಹೇರಿತು. ಆಗಲೇ ಕೆಲವು ಕುಲಕಸುಬುಗಳು ಸ್ವಲ್ಪ ಪ್ರಮಾಣದಲ್ಲಿ ನಲುಗಿದವು. ಆದರೆ ಇಂದಿನ ಮುಕ್ತ ಮಾರುಕಟ್ಟೆ ನೀತಿ ಕೃಷಿಯನ್ನು ಲಾಭದಾಯಕ ಉದ್ಯಮ ಮಾಡುವ ಹೆಸರಿನಲ್ಲಿ ಸಂಪೂರ್ಣ ನಾಶ ಮಾಡುತ್ತಿದೆ. ಅದಕ್ಕಾಗಿ ಶ್ರೀಮಂತ ವಿಶ್ವ ವಾಣಿಜ್ಯ ಸಂಘಟನೆಯನ್ನು ಸ್ಥಾಪಿಸಿಕೊಂಡಿವೆ. ಇದು ಜನಸಾಮಾನ್ಯರಿಗೆ ಗೊತ್ತಾಗದಂಥ ಗುಲಾಮಗಿರಿ.
ಎಣ್ಣೆ ಕಾಳು ವ್ಯಾಪಾರಕ್ಕೆ ಸಂಬಂಸಿದಂತೆ.೧೯೯೨ರಲ್ಲಿ ಅಮೆರಿಕ ಮತ್ತು ಯೂರೋಪ್ ನಡುವೆ ಏರ್ಪಟ್ಟಿದ್ದ ಕದನವನ್ನು ಸರಿಪಡಿಸಿಕೊಳ್ಳಲು ಮಾಡಿಕೊಂಡ ಒಪ್ಪಂದವನ್ನು ಇಂದು ಎಲ್ಲ ದೇಶಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಸ್ಥಳೀಯ ಪಾನೀಯಗಳನ್ನು ನಾಶಮಾಡಿ ಪೆಪ್ಸಿ ,ಕೊಕಾಕೋಲಾದಂಥ ವಿಷ ಕುಡಿಸುವ ನೀತಿಗಳಿಗೆ ಮಾರಕವಾಗದಂತೆ ಕಾಯ್ದುಕೊಳ್ಳುವುದು ಮುಕ್ತ ಮಮಾರುಕಟ್ಟೆಯ ಉದ್ದೇಶ. ಇವೆಲ್ಲ ಕೃಷಿ ಸಾರ್ವಭೌಮತ್ವಕ್ಕೆ ತಡೆಯೊಡ್ಡುತ್ತಿರುವುದರಿಂದ ಇವುಗಳ ಸಮಸ್ಯೆಗಳ ಚರ್ಚೆಯೇ ಡಬ್ಲ್ಯೂಟಿಒ ಸಭೆಯ ಮುಖ್ಯ ವಿಷಯವಾಗಬೇಕು.

No comments: