Monday, October 12, 2009

ಭಾರತಕ್ಕೆ ದೊಡ್ಡಯೋಜನೆಗಳೊಡ್ಡುತ್ತಿರುವ ಸವಾಲುಗಳಿಗೆ ಮುಕ್ತಿ ಎಂದು?

ನಾವು ಮತ್ತೆ ಮತ್ತೆ ಬೃಹತ್ ಯೋಜನೆಗಳ ಅನುಷ್ಟಾನ ಕುರಿತು, ಭಾರೀ ಕೈಗಾರಿಕೆಗಳ ಸ್ಥಾಪನೆ ಕುರಿತು ಮಾತನಾಡುತ್ತಿದ್ದೇವೆ ಎಂದರೆ ಗಾಂ ಚಿಂತನೆಯನ್ನು ಅರ್ಥಮಾಡಿಕೊಂಡಿಲ್ಲ ಎಂದೇ ಅರ್ಥ. ‘ಭಾರತವನ್ನು ನಗರಗಳ ದೃಷ್ಟಿಯಿಂದ ನೋಡದೆ ಅದರ ಹಳ್ಳಿಗಳ ನೆಲೆಯಿಂದ ನೋಡಬೇಕು. ಭಾರತದ ವೈಚಾರಿಕ, ಸಾಂಸ್ಕೃತಿಕ ಅತಃಸ್ಸತ್ವ ಅಡಗಿರುವುದು ಹಳ್ಳಿಗಳಲ್ಲಿ’ ಎಂದು ಗಾಂ ಹೇಳಿದ್ದಾರೆ. ಇದರ ಅರ್ಥ ಹಳ್ಳಿಗಳಿಂದ ತುಂಬಿರುವ ಭಾರತವನ್ನು ಉತ್ತೇಜಿಸುವುದು ಮತ್ತು ಅದರ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುವುದು ಎಂದರೆ ಹಳ್ಳಿಗಳ ಏಳಿಗೆಯತ್ತ ಗಮನ ಹರಿಸುವುದು ಎಂದರ್ಥ.
ಜಾಗತೀಕರಣದ ಒಪ್ಪಂದಗಳಿಂದ ಬಹುಸಂಸ್ಕೃತಿಯ ಅನೇಕ ದೇಶಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿವೆ. ಮತ್ತೆ ಕೆಲವು ಏಕ ಸಂಸ್ಕೃತಿಯ ನಿಯಮಗಳನ್ನು ಒತ್ತಾಯ ಪೂರ್ವಕವಾಗಿ ಒಪ್ಪಕೊಳ್ಳುತ್ತಿವೆ. ಅಂಥ ಅಪಾಯಕಾರಿ ಶಕ್ತಿಗಳನ್ನು ಮೆಟ್ಟಿನಿಂತು ತನ್ನತನವನ್ನು ಕಾಯ್ದುಕೊಳ್ಳುವ ಶಕ್ತಿ ಭಾರತಕ್ಕಿದೆ. ಅದನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕಾರ್ಯ ಆಗಬೇಕಾಗಿದೆ. ಅದಕ್ಕೆ ಮೊದಲ ಹೆಜ್ಜೆ ಎಂದರೆ ಗ್ರಾಮ ಮುಖಿ ಮತ್ತು ಸಣ್ಣ ಯೋಜನೆಗಳನ್ನು ರೂಪಿಸುವುದು.
ಬೃಹತ್ ಕೈಗಾರಿಕೆಗಳು ಮತ್ತು ಭಾರೀ ನೀರಾವರಿ ಯೋಜನೆಗಳಿಂದ ದೇಶಕ್ಕೆ ಆರ್ಥಿಕ ಹೊರೆ ಬೀಳುತ್ತದೆ. ಇದರಿಂದ ಭಾರೀ ಪ್ರಮಾಣದ ಕೃಷಿ ಭೂಮಿ ನಾಶವಾಗುವುದರ ಜತೆಗೆ ಅಷ್ಟೇ ಪ್ರಮಾಣದ ಅರಣ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ವಿದ್ಯುತ್ ಯೋಜನೆಗೆಂದು ಶರಾವತಿ ನದಿಗೆ ಅಣೆಕಟ್ಟುಕಟ್ಟಿದಾಗ ಭಾರೀ ಪ್ರಮಾಣದ ಅರಣ್ಯ, ನೂರಾರು ಹಳ್ಳಿಗಳು ಮುಳುಗಡೆಯಾಗಿ ಸಾವಿರಾರು ಜನ ನಿರ್ವಸತಿಗರಾದರು ಅವರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸಲಾಗಿಲ್ಲ. ಹಾಗೆಯೇ ಲಕ್ಕವಳ್ಳಿಬಳಿ ಭದ್ರಾನದಿಗೆ ಡ್ಯಾಂ ನಿರ್ಮಿಸಿದಾಗಲೂ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸುತ್ತಮುತ್ತಲ ನೂರಾರು ಹಳ್ಳಿಗಳು ಮುಳುಗಿಹೋದವು ಅಲ್ಲಿಯೂ ಸರಿಯಾದ ಪುನರ್ವಸತಿ ಯೋಜನೆಯನ್ನು ರೂಪಿಸಲಾಗಿರಲಿಲ್ಲ. ಹೀಗೆ ಗಾಜನೂರು, ವರಾಹಿ, ತುಂಗಭದ್ರಾ ಯೋಜನೆಗಳಲ್ಲೂ ಇಂಥ ಅವಾಂತರಗಳು ನಡೆದವು.
ತುಂಗಭದ್ರಾ ಯೋಜನೆಯಿಂದ ಇಡೀ ಬಾಗಲಕೋಟನಗರವನ್ನೇ ಸ್ಥಳಾಂತರಿಸಬೇಕಾಯಿತು. ಆಗ ನಡೆದ ಅವಾಂತರಗಳು ಅಷ್ಟಿಸ್ಟಲ್ಲ. ಪುನರ್ವಸತಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳದೆ ಅನೇಕರು ಸಾಂಕ್ರಾಮಿಕ ರೋಗದಿಂದ ನರಳ ಬೇಕಾಯಿತು. ಕೆಲ ಹಿರಿಯರು ತಮ್ಮ ಮೂಲ ನೆಲೆಯನ್ನು ಬಿಟ್ಟು ಬರಲಾಗದೆ ಕಣ್ಣೀರಿಟ್ಟರು. ತಾವು ಬೆಳೆದ, ಬದುಕು ಕಟ್ಟಿಕೊಂಡ ನೆಲ ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕಿಸಿದರು. ಕೊನೆಗೆ ಅನಿವಾರ್ಯವಾಗಿ ಇಲ್ಲದ ಮನಸ್ಸಿನಿಂದ ಸ್ಥಳಾಂತರಗೊಂಡರು. ಈಗಲೂ ಕೆಲವರು ತಮ್ಮ ಹಳೆಯ ಮನೆಗಳಿದ್ದ ಜಾಗವನ್ನು ಆಗಾಗ ತೆಪ್ಪಗಳಲ್ಲಿ ಹೋಗಿ ನೋಡಿಕೊಂಡು ಬರುತ್ತಾರೆ ಎಂದರೆ ಮಣ್ಣಿನ ಸೆಳೆತ ಎಂಥದ್ದು, ಅದರ ತೀವ್ರತೆ ಎಷ್ಟರುತ್ತದೆ ಎಂಬುದು ಅರಿವಾಗುತ್ತದೆ. ಹೊರಗಿನಿಂದ ನೋಡುವವರಿಗೆ ಭೂಮಿ ಬರೀ ಮಣ್ಣು ಆದರೆ ಅದರೊಂದಿಗೆ ಬೆರೆತುಹೋದ ಜೀವಗಳಿಗೆ ಅದೊಂದು ಜೀವಸೆಲೆ, ಭಾವನಾತ್ಮಕ ಸಂಬಂಧ. ಬೃಹತ್ ಯೋಜನೆಗಳು ಇಂಥ ಭಾವನಾತ್ಮಕ ಸಂಬಂಧಗಳನ್ನು ಕತ್ತರಿಸಿ ಹಾಕಲು ಮುಂದಾಗುವುದರಿಂದ ಸಂಘರ್ಷಗಳು ನಡೆಯುತ್ತವೆ.
೨೦೦೭ರ ಮಾರ್ಚ್ ೧೪ ರಂದು ಪಶ್ಚಿಮ ಬಂಗಾಳದ ಸಿಂಗೂರು ಮತ್ತು ನಂದಿಗ್ರಾಮದಲ್ಲಿ ನಡೆದ ಘರ್ಷಣೆಗೂ ಇಂಥ ಭಾವನಾತ್ಮಕ ಸಂಬಂಧಗಳೇ ಕಾರಣ. ಭೂಮಿ, ಹಳ್ಳಿ ಎಂಬುದು ರೈತರ ದೃಷ್ಟಿಯಲ್ಲಿ ಅಸ್ತಿತ್ವ. ಅದನ್ನೇ ಕಿತ್ತುಕೊಳ್ಳುವುದಾದರೆ ಭವಿಷ್ಯ ಕರಾಳ ಎಂದು ನಿರ್ಧಾರಕ್ಕೆ ಬಂದ ಸಂಘರ್ಷಕ್ಕಿಳಿದರು. ಭೂಮಿಯೊಂದಿಗೆ ಸಂಬಂಧ ಕಡಿದುಕೊಂಡು ಬದುಕುವುದಾದರೆ ಅಂಥ ಬದುಕೇ ಬೇಡ ಎಂದು ನಿರ್ಧರಿಸಿದ್ದರು. ಇಂಥ ಕರುಳ ಸಂಬಂಧವನ್ನು ಆಳುವವರು ಅರಿಯುವುದೇ ಇಲ್ಲವಾದ್ದರಿಂದ ಭಾರೀ ಯೋಜನೆಗಳು ಜಾರಿಗೆ ಬರುತ್ತಿವೆ. ಸದ್ಯದಲ್ಲಿ ಚರ್ಚೆಯಾಗುತ್ತಿರುವುದು ಗುಂಡ್ಯ ಜಲವಿದ್ಯುತ್ ಯೋಜನೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಣಕೋಣ ಯೋಜನೆಗಳು.
ಗುಂಡ್ಯ ಯೋಜನೆಯಂತೂ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ. ಕೇಂದ್ರ ಅರಣ್ಯ ಖಾತೆ ಸಚಿವ ಜಯರಾಂ ರಮೇಶ್ ಇದು ಬೇಡ ಎನ್ನುತ್ತಿದ್ದಾರೆ ರಾಜ್ಯ ಸರಕಾರ ಬೇಕೆ ಬೇಕು ಎನ್ನುತ್ತಿದೆ ಒಟ್ಟಾರೆ ಇದು ಬೇಕು ಬೇಡಗಳ ನಡುವೆ ತೂಗುಯ್ಯಾಲೆಯಲ್ಲಿ ನೇತಾಡುತ್ತಿದೆ.
ಕರ್ನಾಟಕದ ವಿದ್ಯುತ್ ಸಮಸ್ಯೆ ನೀಗಬೇಕಾದರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಅಥವಾ ಉತ್ಪಾದಿಸುವ ಯೋಜನೆಗೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಇಂಧನ ಸಚಿವರು ಆರಂಭದಿಂದಲೂ ಹೇಳುತ್ತಲೇ ಬಂದಿದ್ದಾರೆ. ‘ಗುಂಡ್ಯ ಯೋಜನೆಯಿಂದ ವರ್ಷದ ಐದು ತಿಂಗಳು ಮಾತ್ರ ೨೦೦ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಅದಕ್ಕೆ ೧೨೦೦ ಕೋಟಿ ರೂಪಾಯಿ ವೆಚ್ಚವಾಗಲಿದೆ. ೨೭ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಅರಣ್ಯಕ್ಕೆ ಯಾವುದೇ ಹಾನಿ ಇಲ್ಲ, ಕೇವಲ ೬೦೮ ಎಕರೆ ಪ್ರದೇಶ ಅರಣ್ಯ ಮುಳುಗಡೆಯಾಗಲಿದೆ ಒಟ್ಟು ಯೋಜಗೆಗಾಗಿ ಸರಕಾರ ಈಗಾಗಲೇ ೯೦೭ ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಿದೆ’ ಎಂದು ರಾಜ್ಯ ಸರಕಾರ ತನ್ನ ವಾದ ಮಂಡಿಸುತ್ತಿದೆ.
ಪರಿಸರವಾದಿಗಳೂ ಕೂಡ ಸರಕಾರದ ನಿಲುವನ್ನು ಬೆಂಬಲಿಸುತ್ತಿಲ್ಲ. ಕಾರಣ, ಪಶ್ಚಿಮ ಘಟ್ಟಗಳ ಸಾಲು ಅಪರೂಪದ ಸರೀಸೃಪಗಳನ್ನು ಹೊಂದಿದೆ. ಇಲ್ಲಿ ೧೬ ಸಾವಿರ ವಿಶೇಷ ಸಸ್ಯ ವೈವಿಧ್ಯವಿದ್ದು, ಯೋಜನೆ ಜಾರಿಯಾದರೆ ಅದೆಲ್ಲ ನಾಶವಾಗುತ್ತದೆ. ಒಮ್ಮೆ ಸ್ಥಳಾಂತರಗೊಂಡ ಪ್ರಾಣಿ ಸಂಕುಲ ಮತ್ತೆಂದೂ ಈ ಕಡೆಗೆ ಬರಲಾರದು. ಅವುಗಳಲ್ಲಿ ಪ್ರಮುಖವಾಗಿ ಆನೆ, ಚಿರತೆ, ಕರಡಿಯಂಥ ಪ್ರಾಣಿಗಳು ಜನವಸತಿ ಪ್ರದೇಶಗಳ ಮೇಲೆ ದಾಳಿ ಇಡುವ ಅಪಾಯವಿದೆ. ಮನುಷ್ಯ ಮತ್ತು ಅರಣ್ಯದ ನಡುವಿನ ಅಂತರವನ್ನು ಯೋಜನೆ ಪ್ರೋತ್ಸಾಹಿಸುವವರು ಅರ್ಥಮಾಡಿಕೊಳ್ಳಬೇಕು. ಈ ಯೋಜನೆ ಜಾರಿಗೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಬೇಕು ಎಂಬ ಕಾರಣಕ್ಕೆ ಅರಣ್ಯ ನಾಶಮಾಡುತ್ತ ಭಾರೀ ಜಲವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ಹೋದರೆ ಮುಂದೊಂದು ದಿನ ಮಳೆಯೇ ಬಾರದೆ ಈ ಯೋಜನೆಗಳು ಮನುಷ್ಯನ ಆಸೆಬುರುಕು ತನದ ಸ್ಮಾರಕಗಳಂತೆ ಬಿಸಿಲಲ್ಲಿ ನಿಂತಿರುವುದನ್ನು ನೋಡಬೇಕಾಗುತ್ತದೆ. ಈಗಾಗಲೇ ಪರಿಸರದ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾಗಿ ಮಳೆ ಕಡಿಮೆಯಾಗುತ್ತಿದೆ. ಮತ್ತೆ ಕೆಲವು ಸಂದರ್ಭದಲ್ಲಿ ಯಾವಾಗ ಯಾವಾಗಲೋ ಮಳೆ ಬೀಳುತ್ತಿದೆ. ಆದರೆ ಅತಿವೃಷ್ಟಿ ಇಲ್ಲದಿದ್ದರೆ ಅನಾವೃಷ್ಟಿ ಎನ್ನುವಂಥ ಕಾಲದಲ್ಲಿ ನಾವಿದ್ದೇವೆ. ಪರಿಸರದಲ್ಲಾಗುತ್ತಿರುವ ಏರುಪೇರಿನಿಂದಾಗಿ ಭೂಮಿಯಲ್ಲಿ ಬಿಸಿ ವಾತಾವರಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇದೆಲ್ಲದರ ಹಿಂದೆ ಪ್ರಕೃತಿಯ ಮೇಲೆ ಮನುಷ್ಯ ದೌರ್ಜನ್ಯ ಹೆಚ್ಚುತ್ತಿರುವುದರ ಕುರುಹುಗಳು. ಇವೆಲ್ಲವುಗಳಿಂದ ಮುಕ್ತಿ ಪಡೆಯಬೇಕಾದರೆ ಮೊದಲು ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಭಾರೀ ಯೋಜನೆಗಳ ಅನುಷ್ಟಾನವೇ ಅಭಿವೃದ್ಧಿ ಎನ್ನುವಂಥ ಮೂರ್ಖ ಕಲ್ಪನೆಯಿಂದ ಮೊದಲು ಹೊರಬರಬೇಕಿದೆ.
ಮೊದಲ ಹೆಜ್ಜೆ ಎಂದರೆ ಸಣ್ಣ ಸಣ್ಣ ಯೋಜನೆಗಳನ್ನು ಜಾರಿಗೆ ತರುವುದು. ಉದಾಹರಣೆಗೆ ತುಂಗಾ ಮೇಲ್ದಂಡೆ ಯೋಜನೆ. ತುಂಗಾ ನದಿಗೆ ಶಿವಮೊಗ್ಗ ಜಿಲ್ಲೆ ಗಾಜನೂರು ಬಳಿ ನಿರ್ಮಿಸಿರುವ ಅಣೆಕಟ್ಟೆಯನ್ನು ಎತ್ತರಿಸುವ ಬದಲು ದಾವಣಗೆರೆ, ಹರಿಹರ ಅಥವಾ ಸುತ್ತಮುತ್ತಲ ಸರಿಹೊಂದುವ ಪ್ರದೇಶದಲ್ಲಿ ಚಿಕ್ಕದಾದ ಒಂದು ಅಥವಾ ಎರಡು ಬ್ಯಾರೇಜ್ ನಿರ್ಮಿಸಿದ್ದರೆ ಅಂತರ್ಜಲ ಮಟ್ಟವೂ ವೃದ್ಧಿಸುತ್ತಿತ್ತು ವರ್ಷಪೂರ್ತಿ ನೀರು ದೊರೆಯುತ್ತಿತ್ತು. ಹಾಗಾಗಲಿಲ್ಲ ಇರುವ ಅಣೆಕಟ್ಟೆಯನ್ನು ಮತ್ತಷ್ಟು ಏರಿಸಲಾಯಿತು ಇದರಿಂದ ಮತ್ತಷ್ಟು ಅರಣ್ಯ ಮುಳುಗಡೆಯಾಯಿತು. ಭದ್ರಾ ಮೇಲ್ದಂಡೆ ಯೋಜನೆ ಕೂಡ ಇಂಥದ್ದೇ ಅವಾಂತರ ಸೃಷ್ಟಿಸಲಿದೆ. ಇಂಥ ಜೀವವಿರೋ, ಅರಣ್ಯ ವಿರೋ ಯೋಜನೆಗಳನ್ನು ತಡೆಯಬೇಕಾಗಿದೆ. ಈ ರೀತಿಯ ಭಾರೀ ಯೋಜನೆಗಳನ್ನು ಜಾರಿಗೆ ತರುವ ಸರಕಾರಗಳು ವಾಸ್ತವಾಂಶವನ್ನು ಮುಚ್ಚಿಡುತ್ತವೆ. ಸಾವಿರ ಎಕರೆ ಅರಣ್ಯ ಮುಳುಗುತ್ತದೆ ಎಂದು ಗೊತ್ತಾದರೆ ಆರುನೂರು ಎಕರೆ ಎಂದು ದಾಖಲೆಗಳಲ್ಲಿ ನಮೂದಿಸುತ್ತದೆ. ನೂರು ಹಳ್ಳಿಗಳು ಮುಳುಗಿದರೆ ಎಪ್ಪತ್ತು ಹಳ್ಳಿಗಳು ಎಂದು ತೋರಿಸುತ್ತವೆ.
ಉದಾಹರಣೆಗೆ ಹಿರಾಕುಡ್ ಅಣೆಕಟ್ಟು ನಿರ್ಮಿಸಿದಾಗ ಸರಕಾರದ ದಾಖಲೆಗಳಲ್ಲಿ ನಮೂದಾದ ನಿರಾಶ್ರಿತರ ಸಂಖ್ಯೆ ೧.೧ ಲಕ್ಷ. ವಾಸ್ತವದಲ್ಲಿ ಸ್ಥಳಾಂತರಗೊಂಡವರು ೧.೮ ಲಕ್ಷ ಜನ. ಅಂದರೆ ೭೦ ಸಾವಿರ ಜನರ ಬಗ್ಗೆ ಸರಕಾರ ಸುಳ್ಳು ಮಾಹಿತಿ ನೀಡಿತ್ತು. ಪಶ್ಚಿಮ ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ ಬಾರ್ಗಿ ಜಲಾಶಯದ ಜಾಗದಲ್ಲಿ ಮುಳುಗಡೆಯಾದ ಹಳ್ಳಿಗಳ ಸಂಖ್ಯೆ ೧೬೨ ಆದರೆ ಸರಕಾರ ಹೇಳಿದ್ದು ಕೇವಲ ೧೦೦. ಇವು ಮೇಲ್ನೋಟಕ್ಕೆ ಸಿಗುವ ಅಂಕಿ ಅಂಶಗಳು ಹಳ್ಳಿಗಳ ಜನ- ಜಾನುವಾರು ವಸತಿಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಮುಳುಗಿ ಹೋಗುವ ಅರಣ್ಯ, ಫಲವತ್ತಾದ ಕೃಷಿ ಭೂಮಿ. ಬೆಳೆ ಇಲ್ಲದೆ ದೇಶದ ಆಹಾರ ಭದ್ರತೆಮೇಲೆ ಬೀರಿದ ಪರಿಣಾಮ ಮುಂತಾದವುಗಳು ಇಲ್ಲಿ ಚರ್ಚಿತ ವಿಷಯವೇ ಆಗುವುದಿಲ್ಲ.
೧೯೮೦ ರಲ್ಲಿ ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟೆ ಕಟ್ಟಲು ಯೋಜನೆ ರೂಪಿಸಲಾಯಿತು. ಇದರಿಂದ ೫೦ ಲಕ್ಷ ಎಕರೆ ಭೂಮಿಗೆ ನೀರು, ೧೪೫೦ ಮೆಗಾ ವ್ಯಾಟ್ ವಿದ್ಯುತ್, ೮೦೦ ಹಳ್ಳಿ ಮತ್ತು ೧೩೫ ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ಉದ್ದೇಶ ಸರಕಾರದ್ದು. ಇದು ೯೧ ಸಾವಿರ ಎಕರೆ ಕೃಷಿ ಭೂಮಿಯನ್ನು ಮುಳುಗಿಸಿತು ಜತೆಗೆ ೨೮,೦೦೦ ಎಕರೆ ಕಾಡನ್ನೂ ನುಂಗಿತು. ಇದರಿಂದ ಒಂದು ಮಿಲಿಯನ್ ಜನರು ಅನಿವಾರ್ಯವಾಗಿ ಸ್ಥಳಾಂತರಗೊಳ್ಳುತ್ತಾರೆ. ಮಧ್ಯ ಪ್ರದೇಶದ ಪೂರ್ವ ನಿಮಾರ್‌ನಲ್ಲಿ ಇದೇ ನದಿಗೆ ‘ನರ್ಮದಾ ಸಾಗರ್’ ಅಣೆಕಟ್ಟು ನಿರ್ಮಿಸಲಾಗುತ್ತಿದೆ ಇದರಿಂದಲೂ ಕೂಡ ೨೪೯ ಹಳ್ಳಿಗಳನ್ನು ಮುಳುಗಿಸಿ ೪೦ ಸಾವಿರ ಕುಟುಂಬಗಳನ್ನು ಹೊರಹಾಕುತ್ತದೆ ಇವೆಲ್ಲವನ್ನೂ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವವರು ಅದರ ಸಾಧಕ ಬಾಧಕಗಳನ್ನು ಕುರಿತು ಗಂಭೀರ ಚರ್ಚೆ ಮಾಡಬೇಕು. ಹಳ್ಳಿಗಳ ಪಲ್ಲಟ ಎಂದರೆ ಒಂದು ಭಾವನಾತ್ಮಕ ಬದುಕಿನ ಪಲ್ಲಟ, ಪರಂಪರೆಯ ಪಲ್ಲಟ. ಇಂಥ ಸಂದರ್ಭಗಳಲ್ಲಿ ನಮ್ಮ ಪುನರ್ವಸತಿ ನೀತಿಯನ್ನು ಸರಿಮಾಡಿಕೊಳ್ಳಬೇಕಿದೆ.
ನದಿ ಜೋಡಣೆಯಂಥ ಭಾರೀ ಯೋಜನೆಗಳನ್ನು ಸರಕಾರಗಳು ಕೈಗೆತ್ತಿಕೊಳ್ಳಲು ಮುಂದಾದರೆ ಎಂಥ ಅವಘಡUಳಾಗಬಹುದು ಎಂಬುದು ವರ್ಣಿಸಲಸಾಧ್ಯ. ಭಾರತದಂಥ ಬಡವರಿಂದ ತುಂಬಿರುವ ದೇಶದಲ್ಲಿ ಭಾರೀ ಯೋಜನೆಗಳು ಅನೇಕರೀತಿಯ ಅವಾಂತರಗಳನ್ನು ಸೃಷ್ಟಿಸಿವೆ .... ಹೀಗೆ ಬೃಹತ್ ಯೋಜನೆಗಳು, ಕೈಗಾರಿಕೆಗಳು ಸೃಷ್ಟಿಸಿದ ಅವಾಂತರದ ಕರಾಳ ಇತಿಹಾಸ ಭಾರತದಲ್ಲಿದೆ. ಇದರಿಂದ ಪಾಠಕಲಿಯದೆ ಮತ್ತೆ ಮತ್ತೆ ಭಾರೀ ಯೋಜನೆಗಳಿಗೆ ಅನುಮೋದನೆ ನೀಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಆದ್ದರಿಂದ ಸದ್ಯದ ಕರ್ನಾಟಕ ಅಥವಾ ಭಾರತ ಗುಂಡ್ಯ ಹಣಕೊಣ ದಂಥ ಯೋಜನೆಗಳನ್ನು ಕೈಬಿಟ್ಟು ಸಣ್ಣ ಸಣ್ಣ ಮತ್ತು ಗ್ರಾಮ ಮುಖಿ ಯೋಜನೆಗಳನ್ನು ಜಾರಿಗೆ ತರುವ ಅಗತ್ಯವಿದೆ.

No comments: