Monday, October 12, 2009

ದಾಸ್ಯದ ನಾಡಿನ ಮಾನವತೆಯ ಮುಖವಾಣಿ

ದೇವರುಗಳು ಬಡಜನರ ಬದುಕನ್ನು ಮೌಢ್ಯ, ಭಯ, ತಲ್ಲಣಗಳಿಂದ ನಿಯಂತ್ರಿಸುತ್ತವೆ. ಅವರ ಸಾಹಸೋನ್ಮುಖತೆ, ಹಿರಿಮೆಗಳಿಗೆ ತಡೆಯೊಡ್ಡುತ್ತವೆ. ಮಾನವನನ್ನು ಕುಬ್ಜನನ್ನಾಗಿಸಿ, ದಾಸನನ್ನಾಗಿ ಮಾಡಿಕೊಂಡಿವೆ. ಆದ್ದರಿಂದ ದೇವರುಗಳೇ ಕುಬ್ಜರ ಶತ್ರುಗಳು ಎಂಬ ನಿರ್ಧಾರಕ್ಕೆ ಬಂದಿದ್ದ. ‘ಚಿತ್ರಹಿಂಸೆ ಇಲ್ಲವೆ ಪಿಸ್ತೂಲಿನಿಂದ ಧರ್ಮಶ್ರದ್ಧೆಯನ್ನು ಖರೀದಿಸಬಲ್ಲ ಅಥವಾ ನಮ್ಮ ನೆತ್ತರನ್ನು ಉರಿಸಬಲ್ಲ ದೇವರುಗಳವರೆಲ್ಲರೂ....’ ಎಂದು ದೇವರ ಹೆಸರಿನಲ್ಲಿ ನಡೆಯುವ ಕೃತ್ರಿಮತೆಯನ್ನೂ, ಅವುಗಳ ಮೂಲಕ ಸಮಾಜದಲ್ಲಿ ಸೃಷ್ಟಿಯಾಗುವ ಕುತರ್ಕಗಳನ್ನು ಟೀಕಿಸಿದ. ಕಲ್ಪಿತ ದೇವರುಗಳ ಮೌಢ್ಯವನ್ನು ಪ್ರಶ್ನಿಸಿದ. ಅವನ ಹೆಸರು ಪಾಬ್ಲೊ ನರೂಡ. ದೇಶ ಚಿಲಿ, ಭಾಷೆ ಸ್ಪ್ಯಾನಿಷ್.
ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ೧೨ ಜುಲೈ ೧೯೦೪ರಂದು ಜನಿಸಿದ ಈತ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಾಯ್ನಾಡಿನ ಜನರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಅರಿವಿಗಾಗಿ ತನ್ನನ್ನು ಸಮರ್ಪಿಸಿಕೊಂಡ. ಈತನ ನಿಜವಾದ ಹೆಸರು ನೆಫ್ತಾಲಿ ರಿಕಾರ್ಡೋ. ಜಕೊಸ್ಲಾವಾಕಿಯಾದ ಸಾಹಿತಿ ಜಾನ್ ನೆರೂಡನ ಕೃತಿಗಳಿಂದ ಪ್ರಭಾವಿತನಾಗಿದ್ದರಿಂದ ತನ್ನ ಕಾವ್ಯ ನಾಮವನ್ನು ಪಾಬ್ಲೊ ನೆರೂಡ ಎಂದು ಇಟ್ಟುಕೊಂಡಿದ್ದ.
ಚಿಲಿಯ ವಸಾಹತುಶಾಯಿ ಯುಗದ ಡಿ ಲಾ ಕೈಜ್ ನಂತರ ಬಂದ ನವೀನ ಪಂಥದ ಕವಿ ರುಬೆನ್ ಡೇರಿಯೊ ಸಮಾಜದ ಓರೆ ಕೊರೆಗಳನ್ನು ತಿದ್ದಲು ವಿಫಲನಾದ ಸನ್ನಿವೇಶದಲ್ಲಿ ನೆರೂಡ ಕಾವ್ಯಲೋಕ ಪ್ರವೇಶಿಸಿದ. ಸಾಮಾಜಿಕ ಜಾಗೃತಿಯೇ ಇಲ್ಲದ ನಾಡಿನಲ್ಲಿ ನೆರೂಡನ ಪ್ರವೇಶ ಕತ್ತಲ ಸಾಮ್ರಾಜ್ಯದಲ್ಲಿ ಬೆಳಕಿನ ಕಿಂಡಿಯೊಂದನ್ನು ಕಂಡಂತಾಯಿತು. ನವೀನಪಂಥದ ಏಕತಾನತೆ ಜನರ ಸ್ವಾಭಿಮಾನ ಆತ್ಮಗೌರವವನ್ನು ಹೊಡೆದೆಬ್ಬಿಸದ ಕಾರಣ ಫ್ರಾನ್ಸ್, ಜರ್ಮನಿ, ಪೋರ್ಚುಗೀಸ್ ಇನ್ನಿತರ ಐರೋಪ್ಯ ರಾಷ್ಟ್ರಗಳ ಉಸ್ತುವಾರಿ ನಾಯಕತ್ವವನ್ನು ಪ್ರಶ್ನಿಸಲಾಗದಷ್ಟು ಜನರ ಮನಸುಗಳು ಜಡ್ಡುಗಟ್ಟಿದ್ದವು. ಅವರಿಗೆ ದಾಸ್ಯಕ್ಕೂ ಸ್ವಾತಂತ್ರ್ಯಕ್ಕೂ ನಡುವಿನ ವ್ಯತ್ಯಾಸವೇ ಗೊತ್ತಾಗದಂಥ ಅಂಧಕಾರ ಕವಿದಿತ್ತು. ನೆರೂಡನ ಬರವಣಿಗೆಗಳು ಅವರನ್ನು ಕೆಣಕಿದವು. ಸ್ವ ಎಚ್ಚರದ ಪಾಠ ಹೇಳಿದವು. ಅವನ ಅತಿಯಾದ ಉತ್ಸಾಹ, ಸ್ವಾತಂತ್ರ್ಯ, ಜೀವನ ಪ್ರೀತಿ ಆರಂಭದಲ್ಲಿ ದಕ್ಷಿಣ ಅಮೆರಿಕನ್ನರೇ ಅನುಮಾನದಿಂದ ನೋಡುವಂತೆ ಮಾಡಿದ್ದವು. ಅದೇವೇಳೆಗೆ ಸಾಮ್ರಾಜ್ಯಶಾಹಿಗಳು ಅದನ್ನು ಪ್ರೇರೇಪಿಸಲು ಸಂಚು ರೂಪಿಸಿದ್ದರು ಆದರೆ ಫಲಿಸಲಿಲ್ಲ.
ನಂತರ ಆತ ಚಿಲಿಯ ರಾಜಕೀಯ, ಕಡುಬಡವರ ಗುಲಾಮಗಿರಿ, ಅವಮಾನದ ಬದುಕನ್ನು ತನ್ನ ಕಾವ್ಯದಲ್ಲಿ ಅಭಿವ್ಯಕ್ತಿಸಿದ. ಇದರಿಂದ ಎಚ್ಚರಗೊಂಡ ಚಿಲಿ ರಾಷ್ಟ್ರೀಯತೆಯ ಭಾಗವಾಗಿ ನೆರೂಡ ಹೊರಹೊಮ್ಮಿದ. ಕಾವ್ಯಲೋಕದಲ್ಲಿ ಉತ್ತುಂಗಕ್ಕೇರುತ್ತಿದ್ದ ಕಾಲದಲ್ಲಿ ಆತ ತನ್ನ ಹಳ್ಳಿ ಪೈರಾಟ್ ಬಿಟ್ಟು ಚಿಲಿಯ ಪ್ರಮುಖ ನಗರ ಸ್ಯಾಂಟಿಯಾಗೊಗೆ ಬಂದು ಅಲ್ಲಿನ ಸಾಹಿತಿಗಳನ್ನು, ಕಲಾವಿದರನ್ನು ಭೇಟಿ ಮಾಡಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ. ಆಗಲೇ ಆತ ಹರ್ಷೋತ್ಸವದ ಹಾಡು (La cancion dela Fiesta) ಬರೆದ. ಇದರಿಂದ ದೇಶದ ಆಂತರಿಕ ಜಾಗ್ರತೆಯನ್ನು ಗಮನಿಸಿದ ಅಲ್ಲಿನ ವಿದ್ವಾಂಸರು ‘ದಾಸ್ಯದಲ್ಲಿರುವ ದೇಶದ ಮಾನವತೆಯ ಮುಖವಾಣಿ’ ಎಂದು ಬಣ್ಣಿಸಿದ್ದರು. ಇದನ್ನು ತಿಳಿದ ಸರ್ವಾಕಾರಿಗಳು ದಕ್ಷಿಣ ಅಮೆರಿಕ ಇತಿಹಾಸದ ಅಂಚಿನಲ್ಲಿದೆ ಎಂದು ಟೀಕಿಸಿದ್ದರು.
ಲೋಕಾಂತದ ಜಿನುಗನ್ನು, ಏಕಾಂತದ ಮೊರೆತಗಳನ್ನು ಗ್ರಹಿಸುವಷ್ಟು ಸೂಕ್ಷ್ಮ ಮತೀಯನಾಗಿದ್ದ ನೆರೂಡ, ರಾಜಕಾರಣದ ಆಳವನ್ನು, ಸಾಹಿತ್ಯದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಂಡಿದ್ದ. ಆದ್ದರಿಂದಲೇ ಅನೇಕ ಬಾರಿ ಜಗತ್ತನ್ನು ಸುತ್ತಿದ. ಅವನಷ್ಟು ಲೋಕ ಸುತ್ತಿದ ಕವಿ ಜಗತ್ತಿನಲ್ಲಿ ಮತ್ತೊಬ್ಬನಿಲ್ಲ ಎಂದು ಹೇಳುತ್ತಾರೆ. ಸ್ವಾತಂತ್ರ್ಯದ ಉಲ್ಲಾಸ ಉನ್ಮಾದದಲ್ಲಿದ್ದ ದೇಶಗಳಿಗೆ ಭೇಟಿ ನೀಡಿದಾಗ ತನ್ನ ನಾಡಿನ ಜನರ ಬೌದ್ಧಿಕ ದಾರಿದ್ರ್ಯ ಕಂಡು ಮರುಗುತ್ತಿದ್ದ. ಪೌರ್ವಾತ್ಯ ದೇಶಗಳು ತನ್ನ ದೇಶದ ಜನರಲ್ಲಿ ಧಾರ್ಮಿಕ ಕಲ್ಪನೆಗಳನ್ನು, ದೇವರ ಅಸ್ತಿತ್ವವನ್ನು ತುಂಬಿ ಬೌದ್ಧಿಕ ಗುಲಾಮಗಿರಿಗೆ ವೊಡ್ಡಿದ್ದನ್ನು ಕಂಡು ಸಿಡಿಮಿಡಿಗೊಳ್ಳುತ್ತಿದ್ದ. ದೇವರು ಧರ್ಮದ ಹೆಸರಿನಲ್ಲಿ ಮನುಷ್ಯ ಆತ್ಮಹೀನನೂ, ವಿಚಾರಹೀನನೂ ಆಗುತ್ತಿರುವುದಕ್ಕೆ ಬೇಸರಿಸುತ್ತಿದ್ದ.
ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಹಗಲಿರುಳು ದುಡಿದ. ಬಾಹ್ಯ ಕ್ರಿಯೆಗಳಿಗೂ ಆಂತರಿಕ ಎಚ್ಚರಕ್ಕೂ ನಡುವೆ ಇದ್ದ ಕಂದರವನ್ನು ಗುರುತಿಸುತ್ತ ಸಾರ್ವಜನಿಕ ವೇದಿಕೆಗಳಲ್ಲಿ ಜನರಿಗೆ ಅದನ್ನೇ ಬೋಸಿದ. ದೇಶದ ಬಡತನವನ್ನೇ ಬಿಂಬಿಸಿ ೧೯೫೦ರಲ್ಲಿ ‘ವಿಶ್ವಗೀತೆ’ ಕೃತಿ ಪ್ರಕಟಿಸಿದ. ಅದನ್ನು ದಕ್ಷಿಣ ಅಮೆರಿಕದ ಬೈಬಲ್ ಎಂದೇ ಹೇಳಲಾಗುತ್ತಿದೆ. ಇದರಲ್ಲಿ ನೆರೂಡ ಇತಿಹಾಸವನ್ನು ಕಾರ್ಲ್ ಮಾರ್ಕ್ಸ್‌ನ ದೃಷ್ಟಿಯಲ್ಲಿ ವ್ಯಾಖ್ಯಾನಿಸಿದ್ದಾನೆ. ಇದು ಭೂತದ ಹಳಹಳಿಕೆಯಲ್ಲಿ ಭವಿಷ್ಯದ ಉದಯೋನ್ಮುಖತೆಯ ಅಭಿವ್ಯಕ್ತಿ ಎಂದೂ ಹೇಳಲಾಯಿತು.
ಜೀವನವನ್ನು, ದೇಶವನ್ನು, ಸರಳತೆಯನ್ನು ಮೌನವನ್ನು, ಯೌವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಈ ಕವಿ ದುರಂತವನ್ನು ಅರಗಿಸಿಕೊಂಡು ನಗೆಬೀರಬಲ್ಲವನಾಗಿದ್ದ. ೧೯೩೬ರಲ್ಲಿ ಸ್ಪೇಯಿನ್ ದೇಶದ ರಾಜಧಾನಿ ಮ್ಯಾಡ್ರಿಡ್ ಹತ್ತಿ ಉರಿಯತೊಡಗಿತು. ಆಧುನಿಕ ಜನಪರ ಶಕ್ತಿಗಳು ಶೋಷಕ ಶಕ್ತಿಗಳ ಹೋರಾಟದಲ್ಲಿ ಫ್ರಾಂಕೊ ಎಂಬ ಸರ್ವಾಕಾರಿ ಅಕಾರಕ್ಕೆ ಬಂದ. ಆಗ ನೆರೂಡನ ಆಪ್ತಮಿತ್ರ ಮತ್ತು ಶ್ರೇಷ್ಠ ಕವಿ ಲೋರ್ಕಾನನ್ನು ಗಲ್ಲಿಗೇರಿಸಲಾಯಿತು. ಅದು ನೆರೂಡಗೆ ಆಘಾತವಾಯಿತು. ಅದುವರೆಗೆ ಮನುಷ್ಯನ ನೀಚ ಕೃತ್ಯಗಳನ್ನು ಅರ್ಥ ಮಾಡಿಕೊಂಡಿರದ ನೆರೂಡ ‘ಪ್ರಪಂಚ ಬದಲಾಗಿದೆ, ನನ್ನ ಕಾವ್ಯ ಕೂಡ ಬದಲಾಗಿದೆ. ಒಂದೇ ಒಂದು ಹನಿ ರಕ್ತ ಕಾವ್ಯದ ಸಾಲಿನ ಮೇಲೆ ಬಿದ್ದರೂ ಅದು ಅಲ್ಲಿ ಚಿರಂತನವಾಗುತ್ತಾ, ಅಳಿಸಲಾರದ ಪ್ರೇಮದಂತೆ ಸದಾ ಇರುತ್ತದೆ’ ಎಂದು ಬರೆದ.
೧೯೬೨ರಲ್ಲಿ ಇವನ ಸಮಗ್ರ ಕಾವ್ಯ ಬೆಳಕು ಕಂಡಿತು. ಸುಮಾರು ಎರಡು ಸಾವಿರ ಪುಟಗಳ ಈ ಕಾವ್ಯ ಅನೇಕ ಬಾರಿ ಮರು ಮುದ್ರಣ ಕಂಡಿದೆ. ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡಿದ್ದಾನೆಂದೂ, ಅವರ ವಾದದ ಸಮರ್ಥ ಪ್ರತಿಪಾದಕನೆಂದೂ ಈತನಿಗೆ ಅಮೆರಿಕ ತನ್ನ ದೇಶದಲ್ಲಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿತ್ತು. ಇದಕ್ಕೆ ಜಗತ್ತಿನ ನಾನಾ ದೇಶಗಳ ಸಾಂಸ್ಕೃತಿಕ ಜೀವಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಫಲವಾಗಿ ೧೯೬೬ರಲ್ಲಿ ದೇಶ ಪ್ರವೇಶಕ್ಕೆ ಅಮೆರಿಕ ಅವಕಾಶ ನೀಡಿತು. ಇದೇ ವೇಳೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಆಗಿನ ಬ್ರಿಟಿಷ್ ಪ್ರಧಾನಿ ಮ್ಯಾಕ್ ಮಿಲನ್, ನೆರೂಡನನ್ನು ಆಹ್ವಾನಿಸಿ ಗೌರವ ಡಿ.ಲಿಟ್ ಪದವಿ ನೀಡಿ ಸನ್ಮಾನಿಸಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ದಕ್ಷಿಣ ಅಮೆರಿಕದ ಪ್ರಜೆಗೆ ಆ ಗೌರವ ದೊರೆತದ್ದು ಅದೇ ಮೊದಲು. ೧೯೭೧ರಲ್ಲಿ ಆತನಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಅದರ ಗೌರವ ಸನ್ಮಾನಗಳೆಲ್ಲ ಲ್ಯಾಟಿನ ಅಮೆರಿಕದ ಪ್ರಜೆಗಳಿಗೆ ಸಲ್ಲಬೇಕು ಎಂದು ಅರ್ಪಿಸಿದ. ಅದೇ ಹೊತ್ತಿನಲ್ಲಿ ನಡೆದ ಚುನಾವಣೆಯಲ್ಲಿ ಆತ ಬೆಂಬಲಿಸುತ್ತಿದ್ದ ಸೋಷಲಿಸ್ಟ್ ಪಾರ್ಟಿ ಬಹುಮತ ಪಡೆದಿತ್ತು ಅಧ್ಯಕ್ಷರಾಗುವಂತೆ ನೆರೂಡನನ್ನು ಆಹ್ವಾನಿಸಿತು. ಅದಕ್ಕೆ ಒಪ್ಪದೆ ತನ್ನ ಮಿತ್ರ, ಶ್ರೇಷ್ಠರಾಜಕಾರಣಿ ಅಯೆಂಡೆಯನ್ನು ಅಧ್ಯಕ್ಷನಾಗಲು ಬೆಂಬಲಿಸಿದ. ೧೯೭೩ರಲ್ಲಿ ಅಮೆರಿಕ ಪಿತೂರಿ ನಡೆಸಿ ಅಯೆಂಡೆಯನ್ನು ಕೊಲ್ಲಿಸಿ ಸರ್ವಾಕಾರ ಸ್ಥಾಪಿಸಿತು. ರಾಷ್ಟ್ರೀಯವಾದಿ ಚಿಲಿಯನ್ನರಿಗೆ ಮತ್ತು ಸರ್ವಾಕಾರಿಗಳ ನಡುವೆ ಮತ್ತೊಮ್ಮೆ ಸಂಘರ್ಷ ಆರಂಭವಾಯಿತು.
ಅದೇ ಹೊತ್ತಿಗೆ ನೆರೂಡ ಫ್ರಾನ್ಸ್‌ನಿಂದ ಚಿಲಿಗೆ ಮರಳಿದ್ದ. ಈ ಸಂಘರ್ಷದಲ್ಲಿ ಅಮೆರಿಕದ ಸಿ.ಐ.ಎ. ಕೈವಾಡವಿರುವುದನ್ನು ಮನಗಂಡು ಮತ್ತೊಮ್ಮೆ ಸಾರ್ವಜನಿಕ ರಂಗಕ್ಕೆ ಧುಮುಕಿದ. ಆಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ನೆರೂಡ, ಅಧ್ಯಯನ, ಅನಾರೋಗ್ಯ ಮರೆತು ರಾಷ್ಟ್ರೀಯವಾದಿ ಚಿಲಿ ಮುಖಂಡರನ್ನು ಭೇಟಿ ಮಾಡಿ ನಾಡಿನ ಉಳಿವು ಅಳಿವಿನ ಬಗ್ಗೆ ಮನದಟ್ಟು ಮಾಡಿಕೊಟ್ಟ. ಆದರೂ ಪ್ರಯೋಜನವಾಗಲಿಲ್ಲ. ಕೆಲವೇ ದಿನಗಳಲ್ಲಿ ನೌಕಾಪಡೆ ಮತ್ತು ಭೂಸೇನೆ ರಾಷ್ಟ್ರೀಯವಾದಿ ಚಿಲಿಯರ ಮಾರಣಹೋಮ ನಡೆಸಿದವು. ೧೯೭೩ ಸೆಪ್ಟೆಂಬರ್ ೨೩ರಂದು ಸರ್ವಾಕಾರಿಗಳ ಕುತಂತ್ರಕ್ಕೆ ನೆರೂಡ ಬಲಿಯಾದ. ತೀವ್ರ ‘ಅಸ್ವಸ್ಥತೆಯಿಂದ ನಿಧನ’ರಾದರೆಂದು ಸರಕಾರ ಹೇಳಿತು. ಅದೇ ಸಂದರ್ಭದಲ್ಲಿ ಸ್ಯಾಂಟಿಯಾಗೋದಲ್ಲಿದ್ದ ಕವಿಯ ಮನೆಯನ್ನು ಸರಕಾರ ನೆಲಸಮ ಮಾಡಿತು. ಆತನ ಅಪ್ರಕಟಿತ ಲೇಖನಗಳು, ಕೃತಿಗಳನ್ನು ಬೆಂಕಿ ಹಚ್ಚಿ ಸುಟ್ಟು ಆತನ ಕುರುಹುಗಳನ್ನು ನಾಶಮಾಡಿತು. ದಾಸ್ಯವಿಮೋಚನೆಗೆ ಜೀವನ ಪರ್ಯತ ಶ್ರಮಿಸಿದ ನೆರೂಡಾನ ಚಿಂತನೆಗಳು ಯಾವುದೋ ಒಂದು ದೇಶಕ್ಕೆ, ಭಾಷೆಗೆ, ಕಾಲಕ್ಕೆ ಸೀಮಿತವಲ್ಲ, ಅವು ಸಾರ್ವಕಾಲಿಕ.
ತನ್ನ ಮಿತ್ರ ಸಿಜರ್ ವ್ಯಾಲೇಜೋ ಕುರಿತು ನೆರೂಡ ಬರೆದ ಕವನವೊಂದರ ಸಾಲುಗಳು ಹೀಗಿವೆ ಇವು ಆತನಿಗೂ ಅನ್ವಯವಾದದ್ದು ವಿಪರ್ಯಾಸ.
ಆ ಮಹಾ ಪಾತಕವನ್ನು,
ನಂಜಿನೌತಣವನ್ನು,
ಬುಡಮಟ್ಟ ಶೋಸುವ ಒಬ್ಬನೂ ಸಿಕ್ಕಿಲ್ಲ.
ಮತ್ತೆಂದೂ ಮುಗುಳ್ನಗದ ಮಹತ್ತೊಂದು ಮರೆಯಾಯ್ತು;
ಮಡಿದು ಮನ್ವಂತರಗಳಲ್ಲಿ ಒಂದಾದ ಆತ.

No comments: