Monday, October 12, 2009

ಸುಬ್ಬಣ್ಣಗೆ ರಂಗಶ್ರದ್ಧಾಂಜಲಿ

ಹೆಗ್ಗೋಡಿನ ನೀನಾಸಂ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ದೈಹಿಕವಾಗಿ ನಮ್ಮನ್ನಗಲಿ ಇದೇ ಜುಲೈ ೧೬ಕ್ಕೆ ಮೂರು ವರ್ಷಗಳು ಮುಗಿದು ಹೋಗಲಿವೆ. ಭಾರತದ ಗ್ರಾಮೀಣ ಸಂಸ್ಕೃತಿಗೆ ಜಗತ್ತನ್ನು ಪರಿಚಯಿಸಿದ ಅಥವಾ ಜಗತ್ತಿಗೆ ಭಾರತದ ಗ್ರಾಮಗಳನ್ನು ಪರಿಚಯಿಸಿದ ಸುಬ್ಬಣ್ಣನವರಿಗೆ ಪ್ರತೀ ವರ್ಷ ರಂಗ ಶ್ರದ್ದಾಂಜಲಿ ಸಲ್ಲಿಸಲಾಗುತ್ತಿದೆ.
ಆಧುನಿಕತೆಯ ಅಬ್ಬರದಲ್ಲಿ, ಸಿನಿಮಾಗಳು ರಂಗಭೂಮಿಯನ್ನು ಮಸುಕುಗೊಳಿಸುತ್ತಿವೆ ಎನ್ನುವ ಹೊತ್ತಿನಲ್ಲಿ ‘ನೀನಾಸಂ ತಿರುಗಾಟ’ ಆರಂಭಿಸಿದ ಸುಬ್ಬಣ್ಣ ನಿಂತ ನೀರಾಗಿದ್ದ ಕರ್ನಾಟಕದ ರಂಗ ಭೂಮಿಗೆ ಚಲನಶೀಲತೆಯನ್ನು, ಹೊಸತನವನ್ನು ತಂದುಕೊಟ್ಟರು. ಜಗತ್ತಿನ ಪ್ರಮುಖ ನಾಟಕಗಳನ್ನು ಕನ್ನಡಿಗರಿಗೆ, ಕನ್ನಡಕ್ಕೆ ತಂದುಕೊಟ್ಟು ರಂಗಭೂಮಿಯ ಹೊಸ ಸಾಧ್ಯತೆಗಳನ್ನು ಪರಿಚಯಿಸಿದರು ವಿಶ್ವ ವಿದ್ಯಾಲಯಗಳಿಗೆ ಸೀಮಿತವಾಗಿದ್ದ ವಿಚಾರಗೋಷ್ಠಿಗಳನ್ನು ಹಳ್ಳಿಯಲ್ಲಿ ಆರಂಬಿಸಿ ಶ್ರೀಸಾಮಾನ್ಯನೂ ಭಾಗವಹಿಸುವಂತೆ ಮಾಡಿದರು.
ಗ್ರಾಮ ಭಾರತದ ಎಲ್ಲ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಪರಿಣಾಮಗಳನ್ನು ತಿಳಿಸುವ ಕೆಲಸಕ್ಕೆ ಮುಂದಾದ ಸುಬ್ಬಣ್ಣ, ಅದಕ್ಕಾಗಿ ಚರ್ಚೆಗಳನ್ನೇರ್ಪಡಿಸಿ ಹೊಸ ಸವಾಲುಗಳನ್ನು ಎದುರಿಸುವ ದಾರಿ ತೋರಿದರು. ಉದಾರೀಕರಣದ ಸಾಧಕ ಬಾಧಕಗಳನ್ನು ಅರಿಯುವ ಹೊಸ ಪಡೆಯನ್ನೇ ಅಣಿಗೊಳಿಸಿದರು. ಜನಾಶಯಗಳ ಸೂಕ್ಷ್ಮಗಳನ್ನು ಅರಿತು ಯೋಜನೆ ರೂಪಿಸಿ, ಹೆಗ್ಗೋಡು ಮತ್ತು ಸುತ್ತ ಮುತ್ತಲ ಗ್ರಾಮಗಳ ಯುವಕರಲ್ಲಿ ರಂಗಭೂಮಿಯ ಅಭಿರುಚಿ ಬೆಳೆಸಿದ್ದಾರೆ. ಆ ಕಾರಣದಿಂದಲೇ ಜಗತ್ತಿನ ಪ್ರಮುಖ ನಾಟಕಕಾರರು, ನಿರ್ದೇಶಕರು ಇಂದಿಗೂ ತಮ್ಮೂರಿನವರಂತೆ, ಪಕ್ಕದ ಮನೆಯವರಂತೆ ಸದಾ ಚೆರ್ಚೆಗೊಳಗಾಗುತ್ತಿರುತ್ತಾರೆ. ಅಂಥ ರಂಗ ಜಂಗಮನಿಗೆ ಪ್ರತಿ ವರ್ಷ ಹೆಗ್ಗೋಡು ಮತ್ತು ಸುತ್ತಮುತ್ತಲ ಗ್ರಾಮದ ಯುವಕರು ನಾಟಕದ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತ ಬಂದಿದ್ದಾರೆ. ಅವರ ನೆನಪಿಗಾಗಿ ಚರ್ಚಾಗೋಷ್ಠಿಗಳೂ ನಡೆಯುತ್ತಿವೆ.
ಅಂದು ಬೆಳಗ್ಗೆ ‘ಸತ್ಯದ ಪರಿಕಲ್ಪನೆಗಳು’ ಕುರಿತು ಚರ್ಚೆ ಏರ್ಪಡಿಸಲಾಗಿದೆ. ವಿಜಯಶಂಕರ್ ಮತ್ತು ಓ.ಎಲ್. ನಾಗಭೂಷಣ ಸ್ವಾಮಿ ಅವರು ಮಾತನಾಡಲಿದ್ದಾರೆ. ಮಧ್ಯಾಹ್ನ ಚಲನಚಿತ್ರ ಪ್ರದರ್ಶನವಿದೆ. ಸಂಜೆ ಸ್ಥಳೀಯ ಹವ್ಯಾಸಿ ಕಲಾವಿದರಿಂದ ‘ಆಕಾಶ ಬುಟ್ಟಿ’ ನಾಟಕ ಪ್ರದರ್ಶನವಿದೆ. ಜಯಂತ ಕಾಯ್ಕಿಣಿಯವರು ತಮ್ಮ ಅಮೃತಬಳ್ಳಿ ಮತ್ತು ಕಷಾಯ ಕಥಾ ಸಂಕಲನದಿಂದ ‘ಪ್ರಕಾಶ ವರ್ಷ, ಅಂತಪುರದೊಳಗೆ, ಮಿಥುನ್ ನಂ.೨’ ಕಥೆಗಳನ್ನು ಆಯ್ದುಕೊಂಡು ನಾಟಕ ರಚಿಸಿದ್ದಾರೆ. ಮುಂಬೈ ಜೀವನದ ಸುಖ-ದುಃಖಗಳನ್ನೇ ವಸ್ತುವಾಗಿಸಿಕೊಂಡಿರುವ ನಾಟಕವನ್ನು ರಘುನಂದನ ನಿರ್ದೇಶಿಸುತ್ತಿದ್ದಾರೆ.
ಶಿಕ್ಷಣ ಎನ್ನುವುದು ನಗರದ ಶ್ರೀಮಂತಿಕೆ ಅನುಭವಿಸಲು ಎನ್ನುವ ಹೊತ್ತಿನಲ್ಲೇ ಗಾಂ ಕನಸಿನ ಗ್ರಾಮ ಸ್ವರಾಜ್ಯದ ಹಾದಿ ತುಳಿದು ಹಳ್ಳಿಯ ಮೆಟ್ಟಿಲಲ್ಲೇ ಜಾಗತಿಕ ಸವಾಲುಗಳಿಗೆ ಮುಖಾಮುಖಿಯಾಗುವ ಮೂಲಕ ಕನ್ನಡಕ್ಕಿರುವ ಶಕ್ತಿಯನ್ನು ಪರಿಚಯಿಸಿದ ಸುಬ್ಬಣ್ಣ ಭೌತಿಕವಾಗಿ ನಮ್ಮನ್ನಗಲಿದರೂ ಕನ್ನಡದ ಎಲ್ಲ ಚಿಂತನೆಗಳಲ್ಲಿ ಇದ್ದಾರೆ. ಅಂಥ ಸುಬ್ಬಣ್ಣನನ್ನು ನೆನೆಯಲು ಅಂದು ನೀನಾಸಂಗೆ ನೀವೂ ಬನ್ನಿ.

No comments: