Monday, October 12, 2009

ಮಸನಬು ಫುಕೋಕಾ- ಇದು ಒಂದು ಹುಲ್ಲಿನ ಕ್ರಾಂತಿ

ಕೃಷಿಯೇ ಬದುಕಿನ ವಿಶ್ವ ವಿದ್ಯಾಲಯ. ಅದರಿಂದಲೇ ಬದುಕಿನ ಎಲ್ಲ ಸತ್ಯಗಳ ಅರಿವು ಸಾಧ್ಯ ಎಂದು ಪ್ರತಿಪಾದಿಸಿದವರು ಜಪಾನಿನ ಸಹಜ ಕೃಷಿಯ ಪಿತಾಮಹ ಮಸನಬು ಫುಕೋಕಾ.
ಮನುಷ್ಯ ಮತ್ತು ಕೃಷಿ ಅಥವಾ ಸಹಜ ಜೀವ ವೈವಿಧ್ಯಗಳನ್ನು, ವೈರುದ್ಯಗಳನ್ನು ಗಮನಿಸಿ ಐದು ದಶಗಳ ಹಿಂದೆಯೇ ಸಹಜ ಕೃಷಿ ಎಂಬ ಜೀವಪರ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದವರು ಮತ್ತು ಅದರೊಂದಿಗೆ ಬದುಕು ಕಟ್ಟಿಕೊಂಡವರು ಫುಕೋಕಾ.
ಪ್ರಕೃತಿ ಮತ್ತು ಮನುಷ್ಯನ ನಡುವೆ ಇದ್ದ ಸಹಜ ಸಂಬಧಗಳು ನಾಶವಾಗುತ್ತಿರುವ, ರಾಸಾಯನಿಕ ವಿಷ ಕಂದಕಗಳು ಸೃಷ್ಟಿಯಾಗುತ್ತಿರುವುದನ್ನು ತಡೆಯಬೇಕಾದರೆ ಅದು ಸಹಜ ಕೃಷಿಯಿಂದ ಮಾತ್ರ ಸಾಧ್ಯ ಎಂದು ಸಾರಿದ್ದವರು ಫುಕೋಕಾ. ತನ್ನ ಜೀವಿತದುದ್ದಕ್ಕೂ ರಾಸಾಯನಿಕ ಕೃಷಿಯನ್ನು ವಿರೋಸುತ್ತ ಸಹಜ ಕೃಷಿಗಾಗಿ ದುಡಿದ.
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ್ದ ಫುಕೋಕಾ ಅಸಾಮಾನ್ಯ ಚಿಂತನೆಯ ತತ್ತ್ವಜ್ಞಾನಿಯಾಗಿ ಬೆಳೆದ. ಸಹಜ ಕೃಷಿಯ ಸಾಂದರ್ಭಿಕತೆಯನ್ನು ಅರಿತು ಅದನ್ನು ಸಾರ್ವತ್ರೀಕರಿಸುವತ್ತ ಹೆಜ್ಜೆಹಾಕಿದ. ಅದರಿಂದ ಅನೇಕಬಾರಿ ಎಡವಿ ಸೋತು ಮರುಗಿದ. ಜಗತ್ತು ಸಾಗುವ ದಿಕ್ಕನ್ನು ತಾನು ಗಮನಿಸುತ್ತಿಲ್ಲ ಎಂದು ಹತಾಶನಾದ. ಆದರೆ ಗುರಿಯಿಂದ, ನಂಬಿದ ಸಿದ್ಧಾಂತಗಳಿಂದ ವಿಮುಖನಾಗಲಿಲ್ಲ. ಸೋಲು ಗೆಲುವಿನ ಏರಿಳಿತಗಳನ್ನು ಸಮಾನವಾಗಿಯೇ ಸ್ವೀಕರಿಸಿ ಹಂತಹಂತವಾಗಿ ದೊರೆತ ಗೆಲುವನ್ನು ಮೆಟ್ಟಿಲಾಗಿ ಬಳಸಿಕೊಂಡು ಅಲ್ಲೇ ವಿಜಯ ಸಾಸಿದ. ನಿರ್ಲಕ್ಷ್ಯಕ್ಕೊಳಗಾಗಿದ್ದ ಸಹಜ ಕೃಷಿಯತ್ತ ಎಲ್ಲರೂ ಬರುವಂತೆ ಮಾಡಿದ ಅದಕ್ಕಾಗಿ ‘ಒಂದು ಹುಲ್ಲಿನ ಕ್ರಾಂತಿ’ ಎಂಬ ಪುಸ್ತಕ ಬರೆದು ತಾನು ಇಟ್ಟ ಗೆಲುವಿನ ಹೆಜ್ಜೆಗಳನ್ನು ಅದರಲ್ಲಿ ದಾಖಲಿಸಿದ. ಓದಿದ ಅನೇಕರು ಪ್ರಭಾವಿತರಾಗಿ ಸಹಜ ಕೃಷಿಯತ್ತ ಹೊರಳಿದರು.
ಬೇಸಾಯ ಮಣ್ಣಿನಲ್ಲಿರುವ ಅಸಂಖ್ಯ ಜೀವರಾಶಿಯನ್ನು ನಾಶಮಾಡುತ್ತದೆ ಭೂಮಿಗೆ ಉಳುಮೆ ಅನಗತ್ಯ, ರಸಾಯನಿಕ ಗೊಬ್ಬರವಂತೂ ಬಳಸಲು ಯೋಗ್ಯವೇ ಅಲ್ಲ ಎಂದು ಪ್ರತಿಪಾದಿಸಿದ ಅದರಂತೆ ತಾನೂ ನಡೆದು ಯಶಸ್ವಿಕೃಷಿನನೆನಿಸಿಕೊಂಡ ಅಂದಿನಿಂದ ಹೊಸ ‘ಸಹಜ ಕೃಷಿ’ ಪದ್ಧತಿಯನ್ನು ಜಾರಿಗೆ ತಂದ. ಅದೇ ಇಂದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ.
ಮೂಲತಃ ಕೃಷಿಕನಲ್ಲದಿದ್ದರೂ ಕೃಷಿಯ ಅನ್ವೇಷಕನಾಗಿ,ಅದರ ಆಳ ವಿಸ್ತಾರಗಳನ್ನು ತಿಳಿಸು ಜನರಿಗೆ ಹೇಳುತ್ತ ತತ್ವಜ್ಞಾನಿಯಾಗಿ ಕಂಗೊಳಿಸಿದ. ವರ್ತಮಾನದ ಜಗತ್ತಿಗೆ ಅನೇಕ ದೃಷ್ಟಿ ಕೋನದಿಂದ ಒಪ್ಪಿತವಾಗುವ ಸಿದ್ಧಾಂತ ಆತನದು.
ಹಲವಾರು ರೋಗ ರುಜಿನಗಳಿಂದ ಬಳಲುತ್ತಿರುವ, ಆಹಾರವೇ ವಿಷವಾಗುತ್ತಿರುವ ಈ ಹೊತ್ತಿನಲ್ಲಿ ಜಗತ್ತು ತಾನು ತಪ್ಪಿದ ದಾರಿಯನ್ನು ಹುಡುಕುತ್ತಿದೆ. ಅದಕ್ಕೆ ಫುಕೋಕ ಸಿದ್ದಾಂತಗಳಲ್ಲಿ ಉತ್ತರವಿದೆ. ‘ಆಸೆಗಳ ಜೈಲಿನಲ್ಲಿ ನಿಂತ ಮನುಷ್ಯ ಸಹಜ ಬದುಕನ್ನು ಮಾರಿಕೊಳ್ಳುತ್ತಾನೆ. ಅದರಿಂದ ಹೊರಬರಬೇಕಾದರೆ ಪ್ರಕೃತಿಯ ಸಹಜ ಸೌಂದರ್ಯದಿಂದ ಮಾತ್ರ ಸಾಧ್ಯ, ಪ್ರಕೃತಿಯನ್ನು ಕಲುಷಿತವಾಗದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ಎಲ್ಲರದೂ’ ಎಂದು ಪ್ರತಿಪಾದಿಸಿದ್ದ ಉದಾತ್ತ ಜೀವಿಯನ್ನು ಇಂದು ಜಗತ್ತು ಸ್ಮರಿಸುತ್ತಿದೆ.

No comments: