Monday, October 12, 2009

ಕ್ಷಮಿಸಿ ‘ನಾನು ಹಾಗೆ ಹೇಳಿಯೇ ಇಲ್ಲ ಹೀಗೆ ‘.....’ ಹೇಳಿದ್ದೆ

‘ನಾನು ಹಾಗೆ ಹೇಳಿಯೇ ಇಲ್ಲ ಹೀಗೆ ‘.....’ ಹೇಳಿದ್ದೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ. ಎಂದು ತಮ್ಮ ಹೇಳಿಕೆಗಳಿಂದ ತಪ್ಪಿಸಿಕೊಳ್ಳುವ ರಾಜಕೀಯ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಜನನಾಯಕರೆನಿಸಿಕೊಂಡವರು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ. ಬೇಜವಾಬ್ದಾರಿ ಹೇಳಿಕೆ ನೀಡುವ ನಾಯಕರು ಅದರಿಂತ ತಮ್ಮ ಅಕಾರ ಹೋಗುತ್ತದೆ ಎಂದು ಗೊತ್ತಾದರೆ ನಾನು ಹಾಗೆ ಹೇಳಿಯೇ ಇಲ್ಲ ಮಾಧ್ಯಮಗಳು ಮಾತನ್ನು ತಿರುಚಿವೆ ಎಂದು ಜಾರಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಮ್ಮ ರಾಜಕೀಯ ನಾಯಕರೆನಿಸಿಕೊಂಡವರು ದಿನನಿತ್ಯ ಮುನ್ನುಡಿ ಬರೆಯುತ್ತಿದ್ದಾರೆ. ‘ಸರಕಾರ ಐದು ವರ್ಷ ಅವ ಪೂರೈಸಲ್ಲ, ಇದೆ. ಆದರೆ ಪಕ್ಷದಲ್ಲಿ ಆಂತರಿಕ ಶಿಸ್ತು ಬೇಕು ಈಗ ಅದಿಲ್ಲದಿಲ್ಲ ಅದೂ ಇದೆ’ ಎಂದು ನಾನು ಹೇಳಿದೆ. ಆದರೆ ಮಾಧ್ಯಮಗಳು ಸರಕಾರ ಐದು ವರ್ಷ ಪೂರೈಸಲ್ಲ ಎಂದು ಹೇಳಿದ್ದೇನೆ ಎಂದು ಬರೆದಿವೆ. ಪಕ್ಷದಲ್ಲಿ ಆಂತರಿಕ ಶಿಸ್ತು ಇಲ್ಲ ಎಂದು ಬರೆದಿವೆ. ಆದರೆ ಇಲ್ಲದಿಲ್ಲ ಎಂದು ನಾನು ಹೇಳಿದ್ದೆ ಈ ಮಟ್ಟಿಗೆ ಸುದ್ದಿಯನ್ನು ತಿರುಚಲಾಗಿದೆ’ ಎಂದು ಹೊರಳು ಹೇಳಿಕೆಗಳನ್ನು ಕೊಡುತ್ತ ಅಲ್ಲೇ ಹೊರಳಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಯಾವುದೇ ಪಕ್ಷದ ಹೆಸರು ಸೂಚಿಸುವ ಅಗತ್ಯವಿಲ್ಲ ಎಲ್ಲ ಪಕ್ಷದಲ್ಲೂ ಇಂಥವರು ಇದ್ದಾರೆ. ಹೀಗೆ ಹೇಳುತ್ತ ಎಲ್ಲರನ್ನೂ ದಾರಿ ತಪ್ಪಿಸುವವರು ನಮ್ಮನ್ನಾಳುವವರು! ಇವರೇ ಭವಿಷ್ಯದ ಭಾರತಕ್ಕೆ ದಾರಿ ತೋರುವವರು, ಹೊಸ ತಲೆಮಾರಿನ ನಾಯಕರಿಗೆ ಮಾರ್ಗದರ್ಶಕರು. ಇವರ ಮಾರ್ಗದರ್ಶನದಲ್ಲಿ ಬೆಳೆಯುವ ಯುವ ನಾಯಕರು ಇನ್ನು ಯಾವರೀತಿಯ ಹೇಳಿಕೆಗಳನ್ನು ಕೊಡಬಹುದು ಹೇಗೆ ತಮ್ಮ ಹೇಳಿಕೆಗಳನ್ನು ತಾವೇ ತಿರುಚಿಕೊಳ್ಳಬಹುದು ಎಂದು ಊಹಿಸಿ.
ಸಾರ್ವಜನಿಕ ಜೀವನದಲ್ಲಿರುವವರು ಎಚ್ಚರದಿಂದ ಮಾತನಾಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವರುಣ್ ಗಾಂ ಅಲ್ಪಸಂಖ್ಯಾತ ಸಮುದಾಯದವರನ್ನು ಕುರಿತು ನೀಡಿದ ಹೇಳಿಕೆ ಒಂದು ಸ್ಯಾಂಪಲ್. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಡುವ ಪ್ರತಿಮಾತನ್ನೂ ಜನ ಹಾಗೂ ಮಾಧ್ಯಮಗಳು ಬಹಳ ಎಚ್ಚರದಿಂದ ಆಲಿಸುತ್ತವೆ ಎನ್ನುವ ಸಾಮಾನ್ಯ ಜ್ಞಾನವಿರಬೇಕು. ಏಕೆಂದರೆ ಅವರು ಆಡುವ ಮಾತು ವ್ಯಕ್ತಿ ಕೇಂದ್ರಿತವಾಗುವುದಿಲ್ಲ, ಅದು ಸ್ಥಾನ ಕೇಂದ್ರಿತವಾಗುವುದರಿಂದ ಮಂತ್ರಿಗಳು ಬಹಳ ಯೋಚಿಸಿ ಮಾತನಾಡಬೇಕು ಇಲ್ಲದಿದ್ದರೆ ಆಡಿದ ಮಾತನ್ನು ಸಮರ್ಥಿಸಿಕೊಳ್ಳುವ, ಸಾಸಿ ತೋರುವಷ್ಟು ಶಕ್ತರಾಗಿರಬೇಕು. ಇವೆರಡೂ ಇಲ್ಲದ ಅಸಮರ್ಥ ನಾಯಕ ಮಣಿಗಳು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಇನ್ನೊಂದು ಅಂಶವೆಂದರೆ ಹೇಗೆ ಮಾತಾಡಿದರೂ ನಡೆಯುತ್ತದೆ, ಯಾರು ಕೇಳುತ್ತಾರೆ ಎಂಬ ಉಡಾಫೆ, ಅಕಾರದ ಮದ ಇಂಥ ಹೇಳಿಕೆ ನೀಡಲು ಪ್ರೇರೇಪಿಸುತ್ತದೆ. ಇಂಧನ ಸಚಿವ ಕೆ.ಎಚ್. ಈಶ್ವರಪ್ಪ ಕೂಡ ಇಂಥ ಹೇಳಿಕೆ ಕೊಟ್ಟು ಅದನ್ನು ‘....’ ಹೇಳಿದ್ದೆ ಎಂದರು. ಅವರ ಧಾಟಿಯಲ್ಲೇ ಹೇಳಿಕೆ ಕೊಟ್ಟಿದ್ದ ಇತರ ಶಾಸಕರೂ ಹಾಗೇ ತಿರುವು ಹೇಳಿಕೆ ನೀಡಿದರು. ಅದಕ್ಕಾಗಿ ಪರ್ಯಾಯ ಹೇಳಿಕೆಗಳನ್ನು ನೀಡಿದರು. ಸುಳ್ಳು ಹೇಳುವ ಪರಿಪಾಠ ಹೊಸದೇನಲ್ಲ, ರಾಮಾಯಣ -ಮಹಾಭಾರತದಂಥ ಮಹಾಕಾವ್ಯಗಳಲ್ಲೇ ಸುಳ್ಳು ಹೇಳಿದ ಮತ್ತು ಹೇಳಿಸಿದ ಉದಾಹರಣೆಗಳಿವೆ. ಆದರೆ ಅಲ್ಲಿದ್ದ ಅಲ್ಪ ಸ್ವಲ್ಪ ದಾಖಲೆಗಳು ಈಗ ಯಥೇಚ್ಛವಾಗಿ ಬಳಕೆಯಾಗುತ್ತಿವೆ. ಕಳೆದ ಐದು ವರ್ಷಗಳಿಂದೀಚೆಗಂತೂ ಅದು ಮಿತಿ ಮೀರಿದೆ. ಬಹು ಪಕ್ಷಗಳ ಹೊಂದಾಣಿಕೆ ಸರಕಾರ ರಚನೆ ಮತ್ತು ಪ್ರಾಮಾಣಿಕತೆಯ ಕೊರತೆ ಕಾರಣ. ಜೆಡಿಎಸ್, ಕಾಂಗ್ರೆಸ್‌ಗೆ ಬೆಂಬಲ ನೀಡಿ ಕೊನೆಗೆ ಧರಂಸಿಂಗ್ ಸರಕಾರ ಬೀಳಿಸಿ ನಂತರ ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೆ ಅದಕ್ಕೆ ನೂರಾರು ಸುಳ್ಳುಗಳನ್ನು ಹೇಳಿತು. ಆಗ ಸೃಷ್ಟಿಯಾದ ಸುಳ್ಳುಗಳು ಬಹುಶಃ ರಾಜಕೀಯದ ಇತಿಹಾಸದಲ್ಲೇ ಪ್ರಥಮ ಎನ್ನಬಹುದು. ಅಂದಿನಿಂದ ‘ನಾನು ಆ ರೀತಿ .....’ ಎಂದು ಮಾತು ತಪ್ಪುವ ಸಂಪ್ರದಾಯ ಬೆಳೆಯುತ್ತ ಬಂತು. ಅದನ್ನು ‘ಬಿಜೆಪಿ ವಚನ ಭ್ರಷ್ಟ’ ಎಂದು ಆರೋಪಿಸಿತು. ನಂತರ ಮಗನಿಗೆ ಲೋಕಸಭೆ ಟಿಕೆಟ್ ನೀಡುವ ವಿಚಾರದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ವಚನ ಭ್ರಷ್ಟರಾದರು ಹಾಗೇ ಬಿಜೆಪಿಯಲ್ಲೂ ಅದು ಮುಂದುವರಿದಿದೆ ಅಷ್ಟೆ!
ಮಠಮಾನ್ಯಗಳು, ದೇಗುಲಗಳಲ್ಲೆಲ್ಲಾ ಅಕಾರ ನೀಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಕೊನೆಯ ದಿನ ಮಾತು ಬದಲಿಸಿದ್ದರು. ಇವರು ತಮ್ಮ ಅಕಾರದ ಆಸೆಗಾಗಿ ಮಠಮಾನ್ಯಗಳ ಪಾವಿತ್ರ್ಯತೆಗೂ ಧಕ್ಕೆ ತಂದಿದ್ದರು. ಇಂಥ ಮೇಲಾಟಗಳಿಂದಾಗಿಯೇ ಅವರು ಇಂದು ಪರದೆಯ ಹಿಂದೆ ನಿಂತ ನಾಯಕನಂತೆ ಕಾಣುತ್ತಿದ್ದಾರೆ. ಭವಿಷ್ಯದಲ್ಲಿ ಬಿಜೆಪಿ ಕೂಡ ಇದೇ ಸ್ಥಾನದಲ್ಲಿ ನಿಂತರೆ ಆಶ್ಚರ್ಯವಿಲ್ಲ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಎಚ್. ವಿಶ್ವನಾಥ್ ಶಿಕ್ಷಣ ಸಚಿವರಾಗಿದ್ದರು. ಆಗ ಮೈಸೂರಿನಲ್ಲಿ ನಡೆದ ಕಾನೂನಿಗೆ ಸಂಬಂಸಿದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತ, ‘ವಕೀಲರು ದೊಡ್ಡ ಪುಸ್ತಕಗಳನ್ನು ತೋರಿಸಿ ಕಕ್ಷಿದಾರರಿಂದ ಹೆಚ್ಚು ಹಣ ವಸೂಲಿ ಮಾಡದೆ ನ್ಯಾಯ ಅರಸಿ ಬಂದವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಿ. ಇದರಿಂದ ವ್ಯಕ್ತಿಯ ಸಮಸ್ಯೆ ಪರಿಹಾರವಾಗುವುದರ ಜತೆಗೆ ವಕೀಲರಿಗೂ ಉತ್ತಮ ಹೆಸರು ಬರುತ್ತದೆ. ಈಗ ಅನೇಕ ವಕೀಲರು ದೊಡ್ಡ ಪುಸ್ತಕಗಳನ್ನು ತೋರಿಸಿ ಹೆಚ್ಚು ಹಣ ಕೀಳುತ್ತಿದ್ದಾರೆ ಇದು ಸಲ್ಲ’ ಎಂದಿದ್ದರು. ಇದರಿಂದ ಕುಪಿತರಾದ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಸುಮಾರು ಎಂಟು ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದರು. ವಿಶ್ವನಾಥ್ ಕ್ಷಮೆ ಕೋರಬೇಕೆಂದೂ, ಸಚಿವ ಸ್ಥಾನದಿಂದ ಅವರನ್ನು ಕೈ ಬಿಡಬೇಕೆಂದೂ ಒತ್ತಾಯಿಸಿದರು. ಇದರಿಂದ ಸ್ವಲ್ಪವೂ ವಿಚಲಿತರಾಗದ ವಿಶ್ವನಾಥ್, ‘ಕೆಲವರು ಹಾಗೆ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ’ ಎಂದು ತಮ್ಮ ಮಾತುಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು. ಇದರಿಂದ ಮತ್ತಷ್ಟು ಉಗ್ರ ಮತ್ತು ವ್ಯಗ್ರರಾದ ವಕೀಲರು ಪಟ್ಟುಬಿಡದೆ ಚಳವಳಿ ಮುಂದುವರಿಸಿದರು. ಕೊನೆಗೆ ಈ ವಿಷಯವಾಗಿ ನ್ಯಾಯಾಲಯದ ಆವರಣದಲ್ಲಿ ಬಹಿರಂಗ ಚರ್ಚೆ ಹಮ್ಮಿಕೊಳ್ಳುವುದಾಗಿ, ಅಲ್ಲಿ ಬಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ವಿಶ್ವನಾಥ್ ಅವರನ್ನು ಆಹ್ವಾನಿಸಿದರು. ಸಾರ್ವಜನಿಕ ಚರ್ಚೆಗೆ ಸಮ್ಮತಿ ಸೂಚಿಸಿದ ವಿಶ್ವನಾಥ್ ಸ್ಥಳ ಬದಲಾಗಬೇಕೆಂದು ಆಗ್ರಹಿಸಿದರು. ಅದೇನೆಂದರೆ ‘ನಾನು ಮಂತ್ರಿಯಾಗಿ ವಿಧಾನಸೌಧದಲ್ಲಿ ಚರ್ಚೆಗೆ ಕರೆದರೆ ಅದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಸಾರ್ವಜನಿಕ ವಲಯದಲ್ಲೂ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿಗೆ ದಾರಿಮಾಡಿಕೊಡುತ್ತದೆ. ನ್ಯಾಯಾಲಯದ ಆವರಣದಲ್ಲಿ ಆದರೆ ಅಲ್ಲೂ ಕೆಲವು ಚೌಕಟ್ಟುಗಳು ನಿರ್ಮಾಣವಾಗುತ್ತವೆ. ನಾವು ಮಾಡುತ್ತಿರುವುದು ಬಹಿರಂಗ ಚರ್ಚೆ. ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಲು ಅನುಕೂಲವಾಗಬೇಕು ಆದ್ದರಿಂದ ಮೈಸೂರಿನ ಟೌನ್‌ಹಾಲ್ (ಶ್ರೀರಂಗಚಾರ್ಲು ಸಭಾ ಭವನ) ಆವರಣದಲ್ಲಿ ಚರ್ಚೆ ನಡೆಯಲಿ’ ಅಲ್ಲಿ ಬಂದು ತಾವು ಆಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದರು ಇದಕ್ಕೆ ಒಪ್ಪದ ವಕೀಲರು ವಿವಾದಕ್ಕೆ ತೆರೆ ಎಳೆದಿದ್ದರು. ಇದು ವಿಶ್ವನಾಥ್ ಅವರಿಗೆ ತಮ್ಮ ಹೇಳಿಕೆಯ ಬಗ್ಗೆ ಇದ್ದ ಸ್ಪಷ್ಟತೆಯನ್ನು ತೋರಿಸಿತು. ಜನನಾಯಕನೊಬ್ಬ ತಾನು ಆಡುವ ಮಾತಿಗೆ ಬದ್ಧನಾಗಿರಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳಲು ಶಕ್ತನಾಗಿರಬೇಕು ಇಲ್ಲದಿದ್ದರೆ ಮಾತನಾಡುವುದನ್ನೇ ನಿಲ್ಲಿಸಬೇಕು. ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುವ, ಸರಕಾರದ ಸವಲತ್ತು ಪಡೆಯುವ ವಿಚಾರದಲ್ಲೂ ವಿಶ್ವನಾಥ್ ಆಡಿದ ಮಾತಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಹಾಗೆ ಅವರು ಆಡಿದ ಅನೇಕ ವಿಚಾರಗಳು ವಿವಾದಕ್ಕೆ ಗ್ರಾಸವಾಗಿಬಿಡುತ್ತಿದ್ದವು. (ಈಗಲೂ ಆಗುತ್ತಿರುತ್ತವೆ) ಆದರೂ ವಿಶ್ವನಾಥ್ ಎಂದೂ ‘ನಾನು ಹಾಗೆ ಹೇಳಿಯೇ ಇಲ್ಲ’ ಎಂದು ಮಾತು ತಪ್ಪುವ, ಮಾಧ್ಯಮಗಳಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಿಲ್ಲ. ಇಂಥ ವಿಚಾರಗಳಲ್ಲೇ ನಾಯಕನೊಬ್ಬನ ಸೈದ್ಧಾಂತಿಕ ಗಟ್ಟಿತನ ಬಹಿರಂಗಗೊಳ್ಳುತ್ತದೆ.
ಇನ್ನೊಂದು ಘಟನೆ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲೇ ನಡೆದಿತ್ತು. ಮಂತ್ರಿಯಾಗಿದ್ದ ಟಿ. ಜಾನ್ ಎಂಬುವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ ‘ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ಹಲ್ಲೆ, ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ ಅತಿವೃಷ್ಟಿ , ಅನಾವೃಷ್ಟಿಗಳು ಹೆಚ್ಚುತ್ತಿವೆ. ಪ್ರಕೃತಿಯಲ್ಲಾಗುತ್ತಿರುವ ಏರುಪೇರುಗಳಿಗೆ ಏಸುವಿನ ಶಾಪ ಕಾರಣ’ ಎಂದಿದ್ದರು. ಇದು ಮರುದಿನ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಹಲವು ಸಂಘಟನೆಗಳಿಂದ ತೀವ್ರ ವಿರೋಧವೂ ವ್ಯಕ್ತವಾಯಿತು, ಸಚಿವರ ರಾಜೀನಾಮೆಗೂ ಒತ್ತಾಯಿಸಲಾಯಿತು. ಗಲಿಬಿಲಿಯಾದ ಜಾನ್ ‘ನಾನು ಹಾಗೆ ಹೇಳಿಯೇ ಇಲ್ಲ. ನಾನು ಆಡಿದ ಮಾತುಗಳನ್ನು ಮಾಧ್ಯಮಗಳು ತಿರುಚಿ ಬರೆದಿವೆ’ ಎಂದು ಮಾಮೂಲಿ ವರಸೆ ತೆಗೆದು ಆಡಿದ ಮಾತಿನಿಂದ ನುಣುಚಿಕೊಳ್ಳುವಲ್ಲಿ ಮುಂದಾಗಿದ್ದರು. ‘ನಾವು ಸುಳ್ಳು ಬರೆದಿಲ್ಲ, ಅವರು ಹಾಗೆ ಮಾತನಾಡಿದ್ದು ನಿಜ’ ಎಂದು ಪತ್ರಿಕೆಗಳು ತಮ್ಮ ಬರಹವನ್ನು ಸಮರ್ಥಿಸಿಕೊಂಡಿದ್ದವು. ವಿವಾದ ದೊಡ್ಡದಾಗಿ ಬೆಳೆಯತೊಡಗಿತು. ಖಾಸಗಿ ಚಾನಲ್‌ವೊಂದು ತಾನು ಚಿತ್ರಿಸಿದ ಜಾನ್ ಅವರ ಭಾಷಣದ ಕ್ಲಿಪಿಂಗ್ಸ್‌ನ್ನು ಮುಖ್ಯಮಂತ್ರಿಗೆ ಕಳಿಸಿತು. ಅದನ್ನು ಸಚಿವ ಸಂಪುಟದ ಪ್ರಮುಖರೊಂದಿಗೆ ಜಾನ್ ಅವರನ್ನು ಜತೆಗಿಟ್ಟುಕೊಂಡು ಎಸ್. ಎಂ. ಕೃಷ್ಣ ವೀಕ್ಷಿಸಿದಾಗ ಜಾನ್ ಮಾತನಾಡಿದ್ದು ನಿಜವಾಗಿತ್ತು. ಆದ್ದರಿಂದ ಸ್ಥಳದಲ್ಲಿಯೇ ರಾಜೀನಾಮೆ ನೀಡುವಂತೆ ಸೂಚಿಸಿ ಅದನ್ನು ಪಡೆದು ವಿವಾದಕ್ಕೆ ತೆರೆ ಎಳೆದಿದ್ದರು. ಇಂಥ ಅಸಂಬದ್ಧ ಮಾತುಗಳಿಂದ ಸಚಿವರ ತಲೆದಂಡವಾಯಿತು. ಈ ಎರಡೂ ಘಟನೆಗಳು ಇಲ್ಲಿ ಸಮರ್ಥ್ಯ ಮತ್ತು ಅಸಮರ್ಥ ಎನ್ನುವುದನ್ನು ಬಿಂಬಿಸಿವೆ. ಜೆ.ಎಚ್. ಪಟೇಲರಂತೂ ಆಗಾಗ ಇಂಥ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಿದ್ದರು ಅದು ಅನೇಕ ತಿರುವುಗಳನ್ನು ಪಡೆಯುವವರೆಗೆ ತಮ್ಮಷ್ಟಕ್ಕೆ ತಾವು ಇದ್ದುಬಿಡುತ್ತಿದ್ದರು. ಅದು ಚರ್ಚೆಯಾಗಿ ಹೊಸತಿರುವು ಪಡೆಯುವ ಹೊತ್ತಿನಲ್ಲಿ ಪರ್ಯಾಯ ಹೇಳಿಕೆ ನೀಡಿ ಮತ್ತೊಂದು ದಿಕ್ಕು ತೋರಿಸುತ್ತಿದ್ದರು ಆದರೆ ‘ಮಾಧ್ಯಮದವರ ಸೃಷ್ಟಿ’ ಎಂದೂ ಜಾರಿಕೊಳ್ಳುತ್ತಿರಲಿಲ್ಲ. ಎಸ್. ಎಂ. ಕೃಷ್ಣ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಅಂಥವರು ಅಳೆದು ತೂಗಿ ಮಾತನಾಡುತ್ತಿದ್ದರು. ಅಕಸ್ಮಾತಾಗಿ ತಪ್ಪು ಮಾತಾಡಿದ್ದರೆ ಕ್ಷಮಿಸಿ ಎಂದು ಬಿಡುತ್ತಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡರು ಯಾವಾಗಲೂ ಹಲ್ಲುಕಿರಿದು ನಗುತ್ತಿರುತ್ತಾರೆ ಎಂದು ಎಸ್.ಎಂ. ಕೃಷ್ಣ ಗೇಲಿಮಾಡಿದ್ದರು. ಸಜ್ಜನ ರಾಜಕಾರಣಿ ಎನಿಸಿಕೊಂಡಿರುವ ಕೃಷ್ಣರಿಂದ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮರುದಿನವೇ ಹಾಗೆ ಮಾತನಾಡಿದ್ದು ತಪ್ಪಾಯಿತು ಕ್ಷಮಿಸಿ ಎಂದಿದ್ದರು ಕೃಷ್ಣ. ಇದು ನಾಯಕನೊಬ್ಬನ ಉದಾತ್ತ ಗುಣವನ್ನು ತೋರಿಸಿತು. ಅಕಸ್ಮಾತ್ ಹಾಗೆ ಕೇಳದಿದ್ದರೆ ಕೆಸರೆರೆಚಾಟ ಶುರುವಾಗಿಬಿಡುತ್ತಿತ್ತು. ಜನತಾ ನ್ಯಾಯಾಲಯದ ಎದುರು ಕ್ಷಮೆ ಕೋರಿದರೆ ತಪ್ಪಿಲ್ಲ ಎನ್ನುವಷ್ಟು ನಮ್ಮ ನಾಯಕರೆನಿಸಿಕೊಂಡವರು ವಿಶಾಲ ಹೃದಯಿಗಳಾಗಬೇಕು. ಆದರೆ ಹಾಗಾಗುತ್ತಿಲ್ಲ ಎಲ್ಲರಿಗೂ ಪ್ರತಿಷ್ಠೆ. ಈಗ ರಾಜ್ಯದಲ್ಲಿ ಉದ್ಭವಿಸಿರುವ ‘ನಾನು ಹಾಗೆ ಮಾತನಾಡಿಲ್ಲ, ಆಡಿದ್ದೇನೆ’ ಸಮಸ್ಯೆಯ ಪರಿಹಾರಕ್ಕೆ ಮುಖ್ಯಮಂತ್ರಿ ಅಥವಾ ಬಿಜೆಪಿ ಅಧ್ಯಕ್ಷರು ಸೂಕ್ತ ದಾಖಲೆಗಳನ್ನು ಪಡೆದು ಕ್ರಮಕ್ಕೆ ಮುಂದಾಗಬೇಕು. ತಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸುಮ್ಮನಾಗದೆ ಮಾತು ತಪ್ಪಿದರೆ ತಲೆದಂಡವಾಗಬೇಕು. ಇಲ್ಲದಿದ್ದರೆ ಶಿಸ್ತಿನ ಪಕ್ಷ ಎಂದು ಹೆಸರು ಪಡೆದಿರುವ ಬಿಜೆಪಿಗೆ ಇದು ಕಳಂಕ ತಂದೊಡ್ಡುತ್ತದೆ. ಆ ಪಕ್ಷವಾದರೂ ಇಂಥ ಕೆಟ್ಟ ಸಂಪ್ರದಾಯಕ್ಕೆ ಮಂಗಳ ಹಾಡಬೇಕಿದೆ. ನುಡಿದಂತೆ ನಡೆಯದಿದ್ದರೆ, ನಡೆದಂತೆ ನುಡಿಯದಿದ್ದರೆ ಮತದಾರರು ನಿಮ್ಮನ್ನು ನಂಬರಯ್ಯಾ....

No comments: