Monday, October 12, 2009

‘ಪ್ರೀತಿಯ ಬಿಸಿ’ಗೆ ಬೆಚ್ಚಿ ಬೀಳುತ್ತಿದೆ ಭೂಮಿ !

ಭೂಮಿಯ ಒಳಭಾಗದಲ್ಲಿ ಗಂಟೆ ಬಾರಿಸಿದ ಹಾಗೆ ಭಾರೀ ಸದ್ದು ಕೇಳಿ ಬರುತ್ತಿದೆ. ನೀರಿನ ಮೇಲ್ಮೈಯನ್ನು ಅಲೆಗಳು ಆವರಿಸುವ ಹಾಗೆ ಭೂ ಗ್ರಹವನ್ನು ಉಂಗುರಾಕೃತಿಯ ಗೋಳದಿಂದ ಸುತ್ತುವರಿದಂತೆ ಭೂಮಿಯ ಮೊರೆತವಿದೆ. ಭೂಮಿ ಅತೀ ಸೂಕ್ಷ್ಮವಾಗಿ ಗುಂಯ್ ಗುಡುತ್ತಿದೆ. ಈ ಕಂಪನಗಳು ೨ ರಿಂದ ೫ ನಿಮಿಷಗಳ ಅವಯಲ್ಲಿ ಸಾಗುತ್ತಿವೆ. ಇವುಗಳನ್ನು ‘ಲವ್ ವೇವ್ಸ್’ ಎಂದು ಹತ್ತು ವರ್ಷಗಳ ಹಿಂದೆ ವಿeನಿಗಳು ಹೇಳಿದ್ದರು. ಭೂ ಕಂಪನ ಕೇಂದ್ರಗಳಲ್ಲೂ ಈ ನಿಗೂಢ ದ್ವನಿ ಮುದ್ರಿತಗೊಂಡಿತ್ತು ಅದರ ಆಧಾರದ ಮೇಲೆ ಈ ವಿಷಯಗಳನ್ನು ಬಹಿರಂಗಗೊಳಿಸಿದ್ದರು.
ಲವ್ ವೇವ್ಸ್ ಎಂದ ಮಾತ್ರಕ್ಕೆ ಇವೇನು ಪ್ರೇಮದಲೆಗಳಲ್ಲ. ಭೂಮಿಗೆ ಕೇಡುಗಾಲ ತಂದಿಡುವ ರಾಕ್ಷಸಿ ಕಂಪನಗಳು ಎಂದು ಭಾವಿಸಲಾಗಿತ್ತು. ೧೯೧೧ರಲ್ಲಿ ಈ ಅಲೆಗಳಿಗೆ ಒಂದು ಗಣಿತ ಶಾಸ್ತ್ರೀಯ ಮಾದರಿಯನ್ನು ರೂಪಿಸಿದ ಬ್ರಿಟಿಷ್ ಗಣಿತಜ್ಞ ಆಗಸ್ಟಸ್ ಎಡ್ವರ್ಡ್ ಲವ್‌ನ ನೆನಪಿಗಾಗಿ ಇವನ್ನು ‘ಲವ್ ವೇವ್ಸ್’ ಎಂಬ ಹೆಸರಿನಿಂದ ಗುರುತಿಸಲಾಗಿತ್ತು. ಈ ಅಲೆಗಳು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸುತ್ತುವಂತೆ ಮಾಡುತ್ತವೆ. ಅಂದರೆ ಭೂಮಿ ತಿರುಚಿದ ರೀತಿಯಲ್ಲಿ ನೃತ್ಯ ಮಾಡಿದ ಹಾಗೆ ಅಲೆಗಳು ಒಂದಕ್ಕೊಂದು ಅಪ್ಪಳಿಸುತ್ತವೆಯಂತೆ.
‘ಲವ್ ವೇವ್ಸ್’ ನಿಂದಲೇ ಭೂ ತಾಪಮಾನ ಹೆಚ್ಚುತ್ತಿದೆ ಎಂದೂ ಹೇಳಲಾಗುತ್ತಿದೆ. ಇದರಿಂದ ವಾತಾವರಣದಲ್ಲಿ ಏರುಪೇರುಗಳಾಗುತ್ತಿದ್ದು, ಅತಿವೃಷ್ಟಿ-ಅನಾವೃಷ್ಟಿಗಳೂ ಇದರ ಒಂದು ಭಾಗಗಳಾಗಿವೆ. ಎಲ್ಲ ಗ್ರಹಗಳಿಗೂ ಒಂದೊಂದು ಶಕ್ತಿಯನ್ನು, ಅವುಗಳ ಮಿತಿಗಳನ್ನೂ, ಗುರುತಿಸಿರುವಂತೆಯೇ ಭೂ ಗ್ರಹದ ಮೇಲಿನ ಮಾನವನ ಅವಲಂಬನೆ ಮತ್ತು ಅನಿವಾರ್ಯತೆಯನ್ನು ಶತಶತಮಾನಗಳಿಂದ ಗ್ರಹಿಸುತ್ತಲೇ ಬರಲಾಗುತ್ತಿದೆ. ಜೀವ ವಿಜ್ಞಾನದ ದೃಷ್ಟಿಯಿಂದಲೂ ಭೂ ಗ್ರಹವೊಂದೇ ಮನುಷ್ಯ ವಾಸಯೋಗ್ಯ ಎಂದು ಹೇಳಲಾಗುತ್ತಿದ್ದರೂ ಅದಕ್ಕೆ ಅಪಾಯವಾಗದಂತೆ ಕಾಯ್ದುಕೊಳ್ಳುವ ಎಚ್ಚರ ಮೂಡಲಿಲ್ಲ. ಇದರಿಂದ ಈಗ ನಾವು ನಿಂತ ಭೂಮಿಯೇ ಕೆಂಡವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿದ್ದು, ಇದರ ಪರಿಣಾಮ ಎಲ್ಲ ಪ್ರಾಣಿ ಸಂಕುಲದಮೇಲೆ ಬೀರತೊಡಗಿದೆ. ಜಾಗತಿಕ ತಾಪಮಾನ ಹೆಚ್ಚಳ ಕುರಿತು ಈಗ ಜಗತ್ತಿನ ಬಹುತೇಕ ಶ್ರೀಮಂತ ದೇಶಗಳು ಬಡಬಡಿಸತೊಡಗಿವೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎನ್ನುವಂತೆ ಭೂಮಿ ಬಿಸಿಯಾದಾಗ ನೀರು ಸುರಿಯಲು ಮುಂದಾಗುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬಳಕೆಯೂ ಇದಕ್ಕೆ ಕಾರಣವಾಗಿದ್ದು, ಅದನ್ನು ತಡೆಯಲು ಅಮೆರಿಕ ಈಗ ಪರಿಸರ ಸ್ನೇಹಿ ವಾಹನ ಓಡಿಸಲು ಮುಂದಾಗಿದೆ. ಅದಕ್ಕಾಗಿ ಕಬ್ಬಿನಿಂದ ದೊರೆಯುವ ಎತೆನಾಲ್‌ನಿಂದ ಪೆಟ್ರೊಲ್ ತಯಾರಿಸುತ್ತಿದೆ. ಪೆಟ್ರೊಲ್ ಡೀಸೆಲ್‌ನಿಂದ ಬೂಮಿಯ ಮೇಲೆ ಕಾರ್ಬನ್ ಡೈಆಕ್ಷೈಡ್ ಹೆಚ್ಚುತ್ತಿರುವುದೂ ಕೂಡಾ ಭೂಮಿ ಬಿಸಿಯಾಗಲು ಕಾರಣವಾಗಿದ್ದು ಅದನ್ನು ತಡೆಯಲು ಪರಿಸರ ಸ್ನೇಹಿ ಜೀವನ ನಡೆಸಲು ಇನ್ನಿಲ್ಲದ ಕಸರತ್ತು ಆರಭಿಸಿದೆ.
೧೯೧೧ರಲ್ಲೇ ಈ ವೇವ್ಸ್‌ಗಳನ್ನು ಗುರುತಿಸಲಾಗಿತ್ತಾದರೂ ಅವು ಭೂಮಿಗೆ ಈ ಮಟ್ಟದಲ್ಲಿ ಅಪಾಯವನ್ನು ತಂದೊಡ್ಡುತ್ತವೆ ಎಂದು ಊಹಿಸಿರಲಿಲ್ಲ. ಆದರೂ ಇವುಗಳ ಚಲನೆ ಶುಭ ಸೂಚಕವಲ್ಲ ಎಂದು ಮಾತ್ರ ಹೇಳಲಾಗಿತ್ತು. ಅರಣ್ಯ ನಾಶ, ಮಿತಿಮೀರಿದ ಅಂತರ್ಜಲ ಬಳಕೆಯಿಂದ ಅಲೆಗಳ ಪ್ರಮಾಣ ಹೆಚ್ಚುತ್ತಿದೆ ಎಂದು ೨೦೦೮ರಲ್ಲಿ ವಿeನಿಗಳು ಮತ್ತೊಮ್ಮೆ ದೃಢಪಡಿಸಿದ್ದರು. ಈಗ ಇವುಗಳ ಪ್ರಮಾಣ ೫ ನಿಮಿಷಗಳಿಗೊಮ್ಮೆ ಮೀಟರ್‌ನ ದಶಲಕ್ಷ ಭಾಗದಷ್ಟು ಚಲಿಸುತ್ತಿವೆ ಮತ್ತು ಸುಮಾರು ೫೦೦ ವ್ಯಾಟ್‌ನಷ್ಟು ಶಕ್ತಿಯನ್ನು ಹರಡುತ್ತಿವೆಯಂತೆ. ಇದರಿಂದ ಭೂಮಿಯ ಮೇಲೆ ಮತ್ತು ಒಳಗೆ ಉಷ್ಣ ಹೆಚ್ಚುತ್ತಿದೆ. ಉಷ್ಣ ಹೆಚ್ಚಳದಿಂದ ಉತ್ತರ ಧ್ರುವದ ಮಂಜುಗಡ್ಡೆಗಳು ಮೊದಲಬಾರಿಗೆ ಸಂಪೂರ್ಣ ಕರಗಿ ಹೋಗುವ ಹಂತ ತಲುಪಿವೆ. ಇದು ಭೂ ಮಂಡಲದ ಜೀವಸಂಕುಲಕ್ಕೇ ದೊಡ್ಡ ಅಪಾಯ ತಂದೊಡ್ಡಿವೆ.
ಆರ್ಕ್ಟಿಕ್ ಸಾಗರದ ಮಂಜುಗಡ್ಡೆಗಳು ಈಗ ಅತಿ ವೇಗವಾಗಿ ಕರಗುತ್ತಿದ್ದು, ದೋಣಿಯ ಮೂಲಕವೇ ಉತ್ತರ ಧ್ರುವವನ್ನು ತಲುಪಬಹುದೆಂದು ಹೇಳಲಾಗುತ್ತಿದೆ. ಉತ್ತರ ಧ್ರುವದ ಮಂಜುಗಡ್ಡೆಗಳು ಉರಿಬೇಸಿಗೆಯಲ್ಲೂ ಕರಗದೇ ಇದ್ದರೆ ಮಾತ್ರ ವಾತಾವರಣದಲ್ಲಿ ಸಮತೋಲನ ಇರುತ್ತದೆ. ಸಾಮಾನ್ಯವಾಗಿ ಇವು ಕರಗುತ್ತಿರಲಿಲ್ಲ ಈಗ ಪರಿಸರದಮೇಲೆ ಮನುಷ್ಯನಿಂದ ನಡೆಯುತ್ತಿರುವ ದಬ್ಬಾಳಿಕೆಯಿಂದ ಪಾರಿಸಾರಿಕ ಏರುಪೇರುಗಳಳಾಗುತ್ತಿವೆ ಎಂದು ಅಮೆರಿಕದ ಹಿಮ ಮತ್ತು ಮಂಜುಗಡ್ಡೆ ಮಾಹಿತಿ ಕೇಂದ್ರದ ವಿeನಿ ಮಾರ್ಕ್ ಸೆರೆಜ್ ಹೇಳುತ್ತಾರೆ. ಈ ಮಂಜುಗಡ್ಡೆಗಳು ವಾತಾವರಣದಲ್ಲಿ ಸಮತೋಲನ ಮಾತ್ರ ಕಾಯುತ್ತಿಲ್ಲ ಅವುಗಳ ತಳದಲ್ಲಿ ಅತ್ಯಂತ ಬೆಲೆಬಾಳುವ ಖನಿಜ ಮತ್ತು ತೈಲ ನಿಕ್ಷೇಪಗಳಿದ್ದು ಅವನ್ನೂ ಕಾಯುತ್ತಿವೆ. ಈ ಮಂಜು ಬಂಡೆಗಳಿಲ್ಲದಿದ್ದರೆ ಈ ಪ್ರಾಕೃತಿಕ ಸಂಪತ್ತು ಇಷ್ಟೊತ್ತಿಗಾಗಲೇ ನಾಶವಾಗಿಬಿಡುತ್ತಿತ್ತು. ಇವು ಕರಗಿದರೆ ಈ ನಿಕ್ಷೇಪಗಳನ್ನು ಬಳಕೆ ಮಾಡಿಕೊಳ್ಳಲು ಆರ್ಕ್ಟಿಕ್ ದೇಶಗಳಿಗೆ ಅವಕಾಶ ದೊರೆಯುತ್ತದೆ. ತಾಪಮಾನ ಹೆಚ್ಚಲು ಇದು ಮತ್ತಷ್ಟು ಕೊಡುಗೆ ನೀಡಬಹುದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರ್ಷಗಳಿಂದಲೂ ಉತ್ತರ ಧ್ರುವವನ್ನು ಮುಚ್ಚಿದ್ದ ಬೃಹತ್ ಮಂಜು ಬಂಡೆಗಳು ಈಗ ಕರಗಿ ನೀರಾಗುತ್ತಿರುವುದು ಇಡೀ ಮಾನವ ಕುಲವನ್ನೇ ಆತಂಕಕ್ಕೆ ತಳ್ಳಿದೆ. ಪ್ರಸಕ್ತ ಸಾಲಿನಲ್ಲಿ ಅದರ ಕರಗುವ ಪ್ರಮಾಣ ಹೆಚ್ಚುತ್ತಿದ್ದು, ಮಂಜು ಬಂಡೆಗಳು ಸಂಪೂರ್ಣ ಕರಗಿ ತೆಳ್ಳನೆ ಪದರಗಳು ಮಾತ್ರ ಉಳಿಯುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈಗ ಮಂಜು ಬಂಡೆಗಳು ಕರಗುವ ಪ್ರಮಾಣ ಹಿಂದೆಂದಿಗಿಂತ ಅಕ ಎಂದು ಉಪಗ್ರಹ ಮಾಹಿತಿ ನೀಡಿದೆ. ಚಳಿಗಾಲದಲ್ಲಿ ಉಂಟಾಗುವ ಮಂಜಗಡ್ಡೆಗಳು ಪ್ರತೀ ಬೇಸಿಗೆಯಲ್ಲಿ ಕರಗುವುದು ಸಾಮಾನ್ಯವಾದರೂ ಇದೇ ಮೊದಲ ಬಾರಿಗೆ ಸಂಪೂರ್ಣ ಕರಗಿ ಹೋಗುವ ಸಾದ್ಯತೆ ಇದ್ದು ಇದರಿಂದ ಉತ್ಪತ್ತಿಯಾಗುವ ನೀರು ಉತ್ತರ ಧ್ರುವದ ಹೊರಕ್ಕೆ ೧೧೨೬.೫ ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿದ್ದನ್ನು ೨೦೦೮ರ ಜೂನ್ ತಿಂಗಳಲ್ಲೇ ವಿeನಿಗಳು ತಿಳಿಸಿದ್ದರು.
ಇಂಗಾಲದಿಂದ ಜಗತ್ತು ಕಲುಷಿತಗೊಂಡಿರುವುದೇ ಈ ಪ್ರಾಕೃತಿಕ ಏರುಪೇರುಗಳಿಗೆ ಕಾರಣ. ಅದರ ನಿಯಂತ್ರಣಕ್ಕೆ ತುರ್ತು ಕ್ರಮ ಅನಿವಾರ್ಯ. ೨೦೧೨ರ ಹೊತ್ತಿಗೆ ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ರೂಪಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಸೂಚನೆ ನೀಡಲಾಗುತ್ತಿದೆ. ಇದಕ್ಕಾಗಿ ಭೂಮಿಗೆ ನೀರಿಂಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಮೆರಿಕದಂಥ ಶ್ರೀಮಂತ ದೇಶಗಳು ೨೦೦೫ರವರೆಗೂ ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಅಭಿವೃದ್ಧಿಶೀಲ ದೇಶಗಳು ಕೂಡ ಇದನ್ನು ನಿರ್ಲಕ್ಷಿಸುತ್ತಲೇ ಬಂದದ್ದು ಪರಿಸ್ಥಿತಿ ಇಷ್ಟೊಂದು ಜಟಿಲವಾಗಲು ಕಾರಣವಾಗಿದೆ. ಇದು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು ಅದರ ಅರಿವು ಮೂಡಿಸಲು ಜಗತ್ತಿನಾದ್ಯಂತ ನಾನಾ ಸಂಘಟನೆಗಳು ಜಾಗೃತಿ ಆಂದೋಲನ ಹಮ್ಮಿಕೊಂಡಿವೆ. ಮಾಲಿನ್ಯ ತಡೆ ದೃಷ್ಟಿಯಿಂದ ಜರ್ಮನಿ ಮತ್ತು ಬ್ರಿಟನ್ ಉತ್ತಮ ಕೆಲಸ ಮಾಡಿರುವುದು ಹೆಗ್ಗಳಿಕೆಯಾದರೂ ಒಟ್ಟು ಭೂ ಪ್ರದೇಶದ ದೃಷ್ಟಿಯಿಂದ ನೋಡಿದರೆ ತೀರಾ ಕಡಿಮೆ. ಹೆಚ್ಚಿನ ಶ್ರೀಮಂತ ದೇಶಗಳು ಇಂಗಾಲದ ಹೊರಸೂಸುವಿಕೆ ತಡೆಯಲು ವಿಫಲವಾಗಿವೆ. ಮುಖ್ಯವಾಗಿ ಶ್ರೀಮಂತ ದೇಶಗಳು ಐರೋಪ್ಯ ದೇಶಗಳ ಮಾದರಿ ಅನುಸರಿಸಬೇಕಿದೆ. ಮುಂದಿನ ೧೦ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆ ತಡೆಯಲು ಮಾರ್ಗಗಳನ್ನು ರೂಪಿಸಬೇಕು. ಹಾಗಾದರೆ ಮಾತ್ರ ಜಾಗತಿಕ ತಾಪಮಾನದಿಂದ ಆಗಬಹುದಾದ ಅನಾಹುತಗಳನ್ನು ತಡೆಯಲು ಸಾಧ್ಯ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಬಡದೇಶಗಳಿಗೆ ಹೆಚ್ಚಿನ ಹಣಕಾಸು ನೆರವು ಅಗತ್ಯವಿದೆ ಎಂದು ನವದೆಹಲಿಯ ಶಕ್ತಿ ಮತ್ತು ಸಂಪನ್ಮೂಲ ಸಂಸ್ಥೆಯ ಮಹಾ ನಿರ್ದೇಶಕರಾಗಿರುವ ಪಚೌರಿ ತಿಳಿಸಿದ್ದರು. ಇದ್ದಕ್ಕಿದ್ದಂತೆ ಸುರಿಯುವ ಮಳೆ, ಇಲ್ಲದಿದ್ದರೆ ಉರಿಬಿಸಿಲು, ಹರಡುತ್ತಿರುವ ಹತ್ತಾರು ಕಾಯಿಲೆಗಳು ಜನರನ್ನು ಬಾಸತೊಡಗಿವೆ. ಅರಣ್ಯ ಆಶ್ರಿತರಿಗೆ ಇದರ ಪರಿಣಾಮ ತಟ್ಟಿದೆ. ಗರ್ಭಿಣಿ ಮಹಿಳೆಯರೂ ಮಕ್ಕಳೂ ಇದರಿಂದ ನಾನಾರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಭೂಮಿ ಮನುಷ್ಯ ವಾಸಿಸಲು ಯೋಗ್ಯವಲ್ಲ ಎನ್ನುವ ಹಂತಕ್ಕೆ ಬಂದಿರುವುದು ಮನವರಿಕೆಯಾಗುತ್ತಿದೆ. ಈ ತಾಪಕ್ಕೆ ತಂಪೆರೆಯಲು ಮುಂದಾಗದಿದ್ದರೆ ಭವಿಷ್ಯ ಕರಾಳವಾಗುವುದರಲ್ಲಿ ಸಂದೇಹವಿಲ್ಲ.

No comments: