Monday, October 12, 2009

ಆಹಾರ ಆಮದಿನ ಸಂಕೋಲೆಯಲ್ಲಿ ಭಾರತ

ಈಗ ನಮ್ಮೆದುರು ಎರಡು ಭಾರತಗಳಿವೆ. ಒಂದು ಸಮೃದ್ಧ ಭಾರತ ಅಥವಾ ಶ್ರೀಮಂತ ಭಾರತ. ಇನ್ನೊಂದು ಬಡ ಭಾರತ ಅಥವಾ ಕೊರತೆ ಭಾರತ. ಮೊದಲನೆಯವರಿಗೆ ದೇಶದ ಸಂಪತ್ತು ಮಾತ್ರ ಮುಖ್ಯ. ಪ್ರಾಕೃತಿಕ, ಮಾನವ... ಯಾವುದಾದರೂ ಆಗಬಹುದು. ಎಲ್ಲದೂ ಹಣವಾಗಿಯೇ ಕಾಣುತ್ತದೆ. ಅದೆಲ್ಲವನ್ನೂ ಒಂದೆಡೆ ಸೇರಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತ, ಭದ್ರಪಡಿಸುತ್ತ ಸಾಗುತ್ತಿದ್ದಾರೆ. ಹಣ ಕ್ರೋಢೀಕರಿಸುವ ಆತುರದಲ್ಲಿ ಅನೇಕ ಕಡೆ ಅವರಿಗೆ ಅವರೇ ಪ್ರತಿರ್ಸ್ಪಗಳಾಗಿದ್ದಾರೆ.
ಎರಡನೆಯದರ ಕಥೆಯೇ ಬೇರೆತೆರನಾದದ್ದು. ಇದು ಸಂಕಟಗಳನ್ನು ಅನುಭವಿಸುತ್ತಲೇ ಅದರೊಂದಿಗೆ ತನ್ನನ್ನು ತಾನು ಒಪ್ಪಿಸಿಕೊಂಡಿದೆ. ಅದೇ ಭಾರತದ ಬಹು ಸಂಖ್ಯಾತ ರೈತ ವರ್ಗ. ಮಳೆ ಬೀಳದಿದ್ದರೆ ಹಸಿದು ಸಾಯುತ್ತದೆ. ಹೆಚ್ಚು ಮಳೆ ಬಿದ್ದರೆ ಕೊಚ್ಚಿಹೋದ ಕನಸುಗಳನ್ನು ನೆನೆದು ಹಳಹಳಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ನಿರಂತರ ಸವಾಲುಗಳನ್ನು ಎದುರಿಸುತ್ತ ಗೆದ್ದರೆ ಸಾಮ್ರಾಜ್ಯ. ಸೋತರೆ ಸ್ವರ್ಗ ಎಂಬ ಅತಾರ್ಕಿಕಗಳಿಗೆ ತನ್ನನ್ನು ತಾನೇ ಒಡ್ಡಿಕೊಂಡಿದೆ.
ಎಚ್ ೧ ಎನ್ ೧ನಂಥ ಭೀಕರ ಜ್ವರ ಆವರಿಸಿ ದೇಶದ ಜನ ಭಯದಿಂದ ತಲ್ಲಣಿಸುತ್ತಿದ್ದರೆ ಅಂಬಾನಿ ಸೋದರರು ಇಂಧನ ಹಂಚಿಕೆಯ ಕುರಿತು ಸರಕಾರವನ್ನೇ ಹಾವಾಡಿಗರಂತೆ ಆಡಿಸುತ್ತಿದ್ದರು. ಸರಕಾರವೂ ಹಾಗೇ ಆಡುತ್ತಿತ್ತು. ದೇಶದಲ್ಲಿ ಭೀಕರ ಕ್ಷಾಮ ಎದುರಾಗಲಿದೆ. ಮಳೆ ಬೀಳದೆ ಸಾಮಾನ್ಯ ಜನರ ಬದುಕು ದಿವಾಳಿಯಾಗುತ್ತಿದೆ ಎಂಬ ಅವ್ಯಕ್ತ ಭಯದಿಂದ ದೇಶದ ಬಹುಭಾಗದ ಜನರು ಕಂಪಿಸುತ್ತಿದ್ದರೆ ಕೃಷಿ ಸಚಿವರು ವಿದೇಶದಲ್ಲಿ ಕ್ರಿಕೆಟ್ ಮಂಡಳಿ ಸಭೆ ನಡೆಸುತ್ತಿದ್ದರು. ಇಂಥ ವೈರುಧ್ಯಗಳ ನಡುವೆ ದೇಶ ಭೀಕರ ಬರ ಮತ್ತು ಆಹಾರ ಸಮಸ್ಯೆಯಂಥ ಹೊಸ ಸವಾಲು ಎದುರಿಸಲು ಸಿದ್ಧವಾಗಬೇಕಿದೆ.
ಇಂಥ ಏರುಪೇರುಗಳ ಭಾರತವನ್ನು ಕಣ್ಮುಂದೆ ಇಟ್ಟುಕೊಂಡು ನೋಡುವುದಾದರೆ ತಕ್ಷಣ ನಮಗೆ ಎದುರಾಗುವುದು ಕೊರತೆ ಭಾರತವೆ! ಕಾರಣವಿಷ್ಟೆ, ನಮ್ಮ ಬಳಿ ಸಾಕಷ್ಟು ಧಾನ್ಯವಿದೆ. ಸರಿಸುಮಾರು ೩೦ ತಿಂಗಳು ಇಡೀ ದೇಶದ ಜನರ ಹಸಿವು ನೀಗುವಷ್ಟು ಶಕ್ತರಾಗಿದ್ದೇವೆ ಎಂದು ವಿದೇಶದಿಂದ ಹೇಳಿಕೆ ನೀಡಿದ ಕೃಷಿ ಸಚಿವರು ದೇಶಕ್ಕೆ ಮರಳಿದ ನಂತರ ತಮ್ಮ ಹೇಳಿಕೆಯನ್ನು ನಿಧಾನವಾಗಿ ಬದಲಿಸಿದರು. ‘ದೇಶದಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಬೆಲೆ ಏರಿಕೆ ನಿಯಂತ್ರಣ ಕಷ್ಟ’ ಎಂದರು. ಪ್ರಧಾನಿ ಕೂಡಾ ಅದನ್ನೇ ಸಮರ್ಥಿಸಿಕೊಂಡರು. ಅಂದರೆ ನಮ್ಮ ಗೋದಾಮುಗಳು ತುಂಬಿವೆ ಎಂದು ಹೇಳಿದ್ದ ತಮ್ಮ ಮಾತುಗಳು ಉತ್ಪ್ರೇಕ್ಷೆಯಿಂದ ಕೂಡಿದ್ದವು ಎನ್ನುವುನ್ನು ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಕೆಲವೇ ಶ್ರೀಮಂತರ ಆದಾಯ ಹೆಚ್ಚಿದ್ದನ್ನು ದೇಶದ ಆದಾಯ ಹೆಚ್ಚಳ ಎಂದು ಬಿಂಬಿಸಲಾಯಿತು. ಕೆಳವರ್ಗ ಮತ್ತು ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಸುಧಾರಿಸಿದೆ, ಅವರ ತಲಾ ವರಮಾನ ಹೆಚ್ಚಾಗಿದೆ ಎಂದು ಹೇಳಲಾಯಿತು. ಅರ್ಥಸಚಿವಾಲಯ ಹೇಳಿದ ಪ್ರಮಾಣದಲ್ಲಿ ಈ ಎರಡೂ ವರ್ಗಗಳ ಆರ್ಥಿಕ ಮಟ್ಟ ಸುಧಾರಿಸಿರಲಿಲ್ಲ. ಯಾವುದೋ ಐಟಿ ಬಿಟಿಯಲ್ಲಿ ಕೆಲಸ ಮಾಡುವ ಕೆಲವೇ ಜನರನ್ನು ಪರಿಗಣಿಸಿ ಇಂಥ ಅಸಂಬದ್ಧ ಹೇಳಿಕೆಗಳನ್ನು ನೀಡಲಾಯಿತು. ಆದರೆ ಕೆಳವರ್ಗದ ಜನರ ಬದುಕು ನಿಂತ ಜಾಗದಲ್ಲೇ ಇದ್ದುದನ್ನು ಸರಕಾರದ ಹೇಳಿಕೆಗಳು ಗ್ರಹಿಸಿರಲಿಲ್ಲ. ನಂತರ ಎದುರಾದ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಎಲ್ಲ ವರ್ಗವನ್ನೂ ಬಲಿಪಶು ಮಾಡಲಾಯಿತು.
ಭಾರತದಲ್ಲಿ ಆಹಾರ ಉತ್ಪಾದನೆ ಕುಂಠಿತವಾಗುತ್ತಿರುವ ಬಗ್ಗೆ ಆಹಾರ ಮತ್ತು ಕೃಷಿ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ಎಚ್ಚರಿಸುತ್ತಲೇ ಬಂದಿದ್ದವು. ಆದರೂ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಹಳ ಮುಖ್ಯವಾಗಿ ಸಕ್ಕರೆ ಬೆಲೆ ಹೆಚ್ಚುತ್ತಿದೆ. ಕಾರ್ಖಾನೆಗಳ ದುಸ್ಥಿತಿಯೇ ಇದಕ್ಕೆ ಕಾರಣ. ದೇಶದ ನಾನಾ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯದ ಸ್ಥಿತಿ ತಲುಪಿವೆ. ಶೇ. ೪೫ರಷ್ಟು ಕಬ್ಬು ಬೆಳೆ ಕಡಿಮೆಯಾಗಿದೆ. ಇದು ಉತ್ಪಾದನೆ ಕುಸಿತಕ್ಕೆ ಕಾರಣವಾಗಲಿದೆ ಎಂಬುದನ್ನು ಮೂರು ವರ್ಷಗಳ ಹಿಂದೆಯೇ ತಿಳಿಸಿದ್ದವು. ಆದರೂ ಕಬ್ಬು ಬೆಳೆಗಾರರನ್ನು ಪ್ರೋತ್ಸಾಹಿಸುವಂಥ ಯೋಜನೆಗಳನ್ನು ರೂಪಿಸಲು ರಾಜ್ಯ, ಕೇಂದ್ರ ಸರಕಾರ ಮುಂದಾಗಲಿಲ್ಲ. ಇದೇ ಸಂದರ್ಭದಲ್ಲಿ ಖಾಸಗಿ ಕಾರ್ಖಾನೆಗಳು ರೈತರನ್ನು ಗುಲಾಮರಂತೆ ಕಾಣುವುದು ಮತ್ತು ಸಮಯಕ್ಕೆ ಸರಿಯಾಗಿ ಹಣ ಪಾವತಿಸದೇ ಅಲೆದಾಡಿಸಿದವು ಇಂಥ ಹೀನ ಸ್ಥಿತಿಯಿಂದ ಬೇಸತ್ತ ರೈತರು ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದರು.
ದೇಶದಲ್ಲಿ ೨೦೬ ಸಕ್ಕರೆ ಕಾರ್ಖಾನೆಗಳು ರೋಗಗ್ರಸ್ತವಾಗಿವೆ. ಅದರಲ್ಲಿ ೬೧ ಖಾಸಗಿಯವು ೧೪೫ ಸಹಕಾರ ವಲಯಕ್ಕೆ ಸೇರಿದವು. ಅವುಗಳಲ್ಲಿ ಕರ್ನಾಟಕದ ೨೨ ಸೇರಿವೆ. ಅವೆಲ್ಲ ರಾಜಕೀಯ ನಾಯಕರ ಒಡೆತನದಲ್ಲಿವೆ. ಇವು ನಮ್ಮ ಅಭಿವೃದ್ಧಿಯ ಪಾಠ ಹೇಳುವವರು ಮಾಡಿದ ಘನಕಾರ್ಯಗಳು. ಇದರಿಂದಾಗಿ ಕೇವಲ ಎರಡು ವರ್ಷದ ಹಿಂದೆ ೧೬ ರೂ. ಇದ್ದ ಕೆ.ಜಿ. ಸಕ್ಕರೆ ಬೆಲೆ ಇಂದು ೩೩ ರೂಪಾಯಿಗೇರಿದೆ. ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರಿಂದ ಭಾರತ ಈಗ ೩೦ ಲಕ್ಷಕ್ಕೂ ಹೆಚ್ಚು ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿಹಾಕಿದೆ. ಈ ಮಟ್ಟದಲ್ಲಿ ಭಾರತ ಎಂದೂ ಸಕ್ಕರೆ ಆಮದು ಮಾಡಿಕೊಂಡಿರಲಿಲ್ಲ. ಬೆಲೆಯೂ ಕೂಡ ೨೮ ವರ್ಷಗಳಲ್ಲಿ ಇದೇ ಮೊದಲು ದಾಖಲೆ ಪ್ರಮಾಣದಲ್ಲಿ ಏರಿದೆ.
ಸಕ್ಕರೆ ಇಲ್ಲಿ ಉದಾಹರಣೆಯಷ್ಟೆ. ಪ್ರತಿಯೊಂದೂ ಆಮದಾಗಲೇಬೇಕಾಗಿದೆ. ಅಕ್ಕಿ, ಬೇಳೆ, ಗೋ ಯಾವುದೂ ದೇಶದ ಬರ ಪರಿಸ್ಥಿತಿ ಎದುರಿಸುವಷ್ಟು ದಾಸ್ತಾನಿಲ್ಲ ಎನ್ನುವುದನ್ನು ಸರಕಾರಗಳು ಒಪ್ಪಲು ಸಿದ್ಧವಿಲ್ಲದ ಕಾರಣ ಒಂದೊಂದಾಗಿ ಬಯಲಾಗುತ್ತಿವೆ. ಒಂದು ದಶಕದಿಂದ ಉತ್ಪಾದನೆ ಪ್ರಮಾಣ ಏರಿಕೆಯಾಗದಿರುವುರಿಂದ ಈಗ ಬೇಡಿಕೆ ಮತ್ತು ಪೂರೈಕೆ ನಡುವೆ ಕಂದರ ಸೃಷ್ಟಿಯಾಗಿದೆ. ಜಗತ್ತಿನ ಅಕ್ಕಿ ಕಣಜ ಎಂದೇ ಹೆಸರಾಗಿರುವ ಥಾಯ್ಲೆಂಡ್, ವಿಯೆಟ್ನಾಂಗಳಿಂದ ಅಕ್ಕಿ ಆಮದಿಗೆ ಈಗ ಹಲವಾರು ಅಡೆತಡೆಗಳು ಎದುರಾವೆ. ಭಾರತ ಅಕ್ಕಿ ಆಮದಿಗೆ ಮುಂದಾಗುತ್ತಿದ್ದಂತೆಯೇ ಆ ದೇಶಗಳು ರಫ್ತು ನೀತಿಗಳಲ್ಲಿ ಬದಲಾವಣೆ ಮಾಡಿಕೊಂಡಿವೆ. ಇದು ಭಾರತಕ್ಕೆ ಸಂಕಷ್ಟದ ಸ್ಥಿತಿ ತಂದೊಡ್ಡಿದೆ. ಆಮದು ಬೆಲೆ ಹೆಚ್ಚಾಗಿರುವುದರಿಂದ ಅದನ್ನು ಭಾರತದಲ್ಲಿ ಈಗಿರುವ ಬೆಲೆಯಲ್ಲಿ ವಿತರಿಸಲು ಸಾಧ್ಯವಿಲ್ಲ ಎಂದು ಸರಕಾರಗಳೇ ಹೇಳುತ್ತಿವೆ. ದೇಶದ ಶೇಕಡ ೬೫ ಜನರ ಆಹಾರವಾಗಿರುವ ಅಕ್ಕಿ ಇಂದು ಕೊರತೆಯಾಗಿದೆ. ಚೀನಾ ಹೊರತುಪಡಿಸಿದರೆ ಭಾರತವೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶ. ಭಾರತದಲ್ಲಿ ವಾರ್ಷಿಕ ೮೫ರಿಂದ ೯೦ ಮಿಲಯನ್ ಟನ್ ಅಕ್ಕಿ ಉತ್ಪಾದನೆಯಾಗುತ್ತಿತ್ತು ಅದರಲ್ಲಿ ಕರ್ನಾಟಕದ ಪಾಲು ೪೦ ಮಿಲಿಯನ್ ಟನ್. ಪ್ರಸಕ್ತ ಸಾಲಿನಲ್ಲಿ ಉತ್ತರದ ರಾಜ್ಯಗಳಲ್ಲಿ ತೀವ್ರ ಮಳೆ ಕೊರತೆಯಿಂದ ನಿರೀಕ್ಷಿತ ಉತ್ಪಾದನೆ ಸಾಧ್ಯವಿಲ್ಲ.
ಬೇಳೆಯಂತೂ ಅನೇಕ ರೀತಿಯ ಅಡೆತಡೆಯನ್ನು ಎದುರಿಸುತ್ತಿದೆ. ನಮ್ಮ ಗುಲ್ಬರ್ಗದ ರೈತರು ತೊಗರಿ ಬೆಳೆದು ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಂಡರು. ಆದರೆ ಅವರ ಬದುಕು ಸುಧಾರಿಸಲಿಲ್ಲ. ಅಲ್ಲಿ ಸ್ಥಾಪಿಸಿರುವ ತೊಗರಿ ಮಂಡಳಿ ಕೂಡಾ ನಾಮಕಾವಸ್ತೆಯಾಗಿದೆ. ಸರಕಾರ ಕ್ವಿಂಟಾಲಿಗೆ ೧೮೦೦ರೂ. ಬೆಂಬಲ ಬೆಲೆ ನೀಡುತ್ತಿದೆ ಆದರೆ ೩೦೦೦ ರೂ. ಕೊಡಿ ಎಂಬ ರೈತರ ಒತ್ತಾಯಕ್ಕೆ ಮಾನ್ಯತೆ ಸಿಕ್ಕಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೆಲೆ, ಕ್ವಿಂಟಾಲ್ ಬೇಳೆಗೆ ೯.೫೦೦ರಿಂದ ೧೦,೦೦೦ ವರೆಗೆ ಇದೆ.ಬೆಳೆಯುವವರು ಮತ್ತು ಬಳಕೆದಾರರ ನಡುವೆ ಇರುವ ಇಷ್ಟು ದೊಡ್ಡ ಮಟ್ಟದ ಹಣ ದಲ್ಲಾಳಿಗಳ ಪಾಲಾಗುತ್ತಿದೆ. ಇಂಥ ಮಾರುಕಟ್ಟೆಯ ಅವಾಂತರಗಳನ್ನು ಅರ್ಥಮಾಡಿಕೊಳ್ಳಲಾಗದ ರೈತರು ಕೃಷಿಯನ್ನೇ ನಿರಾಕರಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಪರಿಸ್ಥತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈಗ ಬೇಳೆ ಬೆಲೆ ಗಗನಕ್ಕೇರುತ್ತಿದ್ದಂತಯೇ ಬೆಳೆಗಾರನತ್ತ ಎಲ್ಲರೂ ದೃಷ್ಟಿ ನೆಟ್ಟಿದ್ದಾರೆ. ಅನೇಕ ವರ್ಷಗಳಿಂದ ಭಾರತ ಬೇಳೆ ಆಮದನ್ನೇ ನೆಚ್ಚಿಕೊಂಡಿದೆ. ಪ್ರಸಕ್ತ ವರ್ಷ ಅದು ಹಿಂದೆಂದಿಗಿಂತ ಹೆಚ್ಚಾಗುವ ಸೂಚನೆಗಳು ಕಾಣುತ್ತಿವೆ. ಕಳೆದ ವರ್ಷ ೨೫ ಲಕ್ಷ ಟನ್ ಬೇಳೆ ಆಮದು ಮಾಡಿಕೊಳ್ಳಲಾಗಿತ್ತು.
ಭಾರತಕ್ಕೆ ಬೇಳೆ ಪೂರೈಸುವ ಪ್ರಮುಖ ರಾಷ್ಟ್ರಗಳಾದ ಕೆನಡಾ, ಆಸ್ಟ್ರೇಲಿಯಾ, ಮ್ಯಾನ್ಮಾರ್ ಮತ್ತು ಟರ್ಕಿಯಲ್ಲೇ ಈ ಬಾರಿ ಬೇಳೆ ಬೆಲೆ ಗಗನಕ್ಕೇರಿದೆ. ಕಾರಣ ಜಾಗತಿಕ ಮಟ್ಟದಲ್ಲಿ ಬೇಳೆ ಉತ್ಪಾದನೆ ೫೬ ದಶಲಕ್ಷ ಟನ್ ಕುಸಿದಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪಾದನೆ ಪ್ರಮಾಣ ಕುಸಿದಿರುವುದು ಮನವರಿಕೆಯಾಗುತ್ತದೆ. ಆಮದು ಮಾಡಿಕೊಂಡ ಧಾನ್ಯ ಖರೀದಿಸುವಷ್ಟು ಶಕ್ತರಾಗಿ ಭಾರತೀಯರಿಲ್ಲ. ಭಾರತದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚುತ್ತಿಲ್ಲ. ಇದರಿಂದ ಇಡೀ ದೇಶವೇ ಇಂದು ಆಹಾರ ಆಮದಿನ ಸಂಕೋಲೆಯಲ್ಲಿ ಸಿಲುಕುತ್ತಿದೆ. ಮೊದಲೇ ಹೇಳಿದಂತೆ ಭಾರತದ ಶ್ರೀಮಂತ ವರ್ಗಕ್ಕೆ ಇದರ ಸಮಸ್ಯೆಗಳು ಗೊತ್ತಾಗುತ್ತಿಲ್ಲ. ಬಡವರು ತುತ್ತಿನ ಚೀಲ ತುಂಬಲಾಗದೆ ತತ್ತರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹಳ್ಳಿಗಳು ಖಾಲಿಯಾಗಿ, ನಗರಗಳು ವಿಸ್ತರಿಸುತ್ತ, ತುಂಬಿ ತುಳುಕುತ್ತಿವೆ. ಇಂಥ ಅಸಮಾನತೆಗಳ ನಿವಾರಣೆಗೆ ಮಾರ್ಗಗಳನ್ನು ಕಂಡುಕೊಳ್ಳದಿದ್ದರೆ, ನಗರ ಮತ್ತು ಗ್ರಾಮಗಳ ನಡುವಿನ ತಾರತಮ್ಯ ಮತ್ತಷ್ಟು ಹೆಚ್ಚಿ ಭವಿಷ್ಯದಲ್ಲಿ ಭಾರತ ಆಹಾರ ಮಾತ್ರವಲ್ಲ ಸಾಮಾಜಿಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

No comments: