Monday, October 12, 2009

ಗಣ್ಯರ ವಿಷಯ ಹಾಗಿರಲಿ, ನಮ್ಮಂತವರ ಪಾಡೇನು?

ಭಾರತೀಯರ ಪಾಸ್‌ಪೋರ್ಟ್ ನೋಡುತ್ತಿದ್ದಂತೆ ಶ್ರೀಮಂತ ದೇಶಗಳ ವಿಮಾನಯಾನ ಸಿಬ್ಬಂದಿ ಮೈಗೆ ಮುಳ್ಳು ಹತ್ತಿದವರಂತೆ ವರ್ತಿಸುತ್ತಿರುತ್ತಾರೆ. ಭಾರತೀಯರ ಬಗ್ಗೆ ಅವರ ನಿಕೃಷ್ಟ ಮನೋಭಾವಕ್ಕೆ ಕಾರಣ ಗೊತ್ತಿಲ್ಲ. ಜಗತ್ತಿನ ವಿeನಿ, ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನೇ ಶಿಷ್ಟಾಚಾರ ಉಲ್ಲಘಿಸಿ ತಪಾಸಣೆಗೊಳಪಡಿಸಿದ ಅಮೆರಿಕದ ವಿಮಾನಯಾನ ಸಂಸ್ಥೆಯೊಂದು ನಂತರ ಕ್ಷಮೆ ಯಾಚಿಸಿತ್ತು. ಅಂಥ ಘಟನೆ ಇನ್ನೂ ಹಸಿಯಾಗಿರುವಾಗಲೇ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ನೆವಾರ್ಕ್‌ನ ಲಿಬರ್ಟಿ ವಿಮಾನ ನಿಲ್ದಾಣದಲ್ಲಿ ಅವಮಾನಿಸಲಾಗಿದೆ. ಭಾರತೀಯ ನಟರಿಗೆ ಅವಮಾನವಾಗುತ್ತಿರುವುದು, ಅವರನ್ನು ಎರಡನೇ ದರ್ಜೆಯಲ್ಲಿ ತಪಾಸಣೆಗೊಳಪಡಿಸುವುದು ಇದೇ ಮೊದಲೇನಲ್ಲ. ಆಮೀರ್‌ಖಾನ್, ಇರ್ಫಾನ್‌ಖಾನ್,ಮಮ್ಮುಟ್ಟಿ ಮುಂತಾದವರು ಇದೇ ರೀತಿಯ ಕಿರಿಕಿರಿಯನ್ನು ಈ ಹಿಂದೆಯೂ ಅನುಭವಿಸಿದ್ದಾರೆ. ಈ ವಿಚಾರಗಳು ಕೆಲವು ಸಲ ಭಾರೀ ಪ್ರಚಾರ ಪಡೆದು ತಣ್ಣಗಾಗುತ್ತವೆ, ಮತ್ತೆ ಕೆಲವು ಗೊತ್ತೇ ಆಗುವುದಿಲ್ಲ. ಒಟ್ಟಿನಲ್ಲಿ ಭಾರತೀಯರು ಮರ್ಯಾದೆಗೆ ಯೋಗ್ಯರಲ್ಲ ಎನ್ನುವಂಥ ಮೂರ್ಖ ಕಲ್ಪನೆಗಳು ಶ್ರೀಮಂತ ರಾಷ್ಟಗಳಲ್ಲಿವೆ ಎನ್ನುವುದು ಇಂಥ ಅವಘಡಗಳು ಪದೇ ಪದೆ ಘಟಿಸುತ್ತಿರುವುದರಿಂದ ಎಲ್ಲರಿಗೂ ಮನವರಿಕೆಯಾಗುತ್ತದೆ.
ನನ್ನ ಹೆಸರಿನ ಮುಂದೆ ‘ಖಾನ್’ ಎಂದು ಇದ್ದದ್ದೇ ಈ ತಪಾಸಣೆಗೆ, ಕಿರಿಕಿರಿಗೆ ಕಾರಣವಿರಬಹುದು ಎಂದು ಬಾಲಿವುಡ್‌ನ ಐಕಾನ್ ಶಾರುಖ್ ಖಾನ್ ಹೇಳಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಸತ್ಯ ಇರಬಹುದು. ಕೆಲವು ಸಂದರ್ಭಗಳಲ್ಲಿ ಹೆಸರುಗಳೂ ಕೂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಂಥ ಕಿರಿಕಿರಿಗೆ ದಾರಿಮಾಡಿಕೊಡುತ್ತವೆ. ಅನೇಕ ಸಂದರ್ಭದಲ್ಲಿ ಬೇರೆ ದೇಶದವರಿಗೆ ಭಾರತೀಯರ ಹೆಸರನ್ನು ಉಚ್ಛರಿಸಲು ಬರುವುದೇ ಇಲ್ಲ. ಹಾಗೂ ಉಚ್ಛರಿಸಿದರೆ ಅಕ್ಷರಗಳು ಎಲ್ಲೆಲ್ಲೋ ಸೇರಿಬಿಡುತ್ತವೆ. ಅದನ್ನು ಗಮನಿಸುತ್ತ ನಾವೇ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಹೆಸರೊಂದೇ ಈ ರೀತಿಯ ತಪಾಸಣೆಗೆ ಕಾರಣ ಆಗಿರಲಾರದು ಎನ್ನುವುದು ನನ್ನ ಸ್ವಂತ ಅನುಭವದ ಅಭಿಪ್ರಾಯ. ಭಾರತ, ಶ್ರೀಲಂಕಾ, ಚೀನಾ, ಪಾಕಿಸ್ತಾನ, ಅಫಘಾನಿಸ್ತಾನ ಅಥವಾ ಏಷ್ಯಾದ ಕೆಲವು ರಾಷ್ಟ್ರದ ಸಾಮಾನ್ಯ ಪ್ರಜೆ ಅಥವಾ ನಾಯಕರು ಹೋದರೂ ಸಾಮ್ರಾಜ್ಯ ಶಾಹಿ ದೇಶಗಳಲ್ಲಿ ಇಂಥ ಕಿರಿಕಿರಿಯನ್ನು ಅನುಭವಿಸಿಯೇ ಇರುತ್ತಾರೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ಮಾಡುವುದು ಸರಿ, ಆದರೆ ತಪಾಸಣೆಯ ನೆಪದಲ್ಲಿ ಕಿರುಕುಳ, ಹಿಂಸೆ ಕೊಡುವುದು. ಸರಿಯೇ ಎನ್ನುವುದು ಪ್ರಶ್ನೆ. ಅಬ್ದುಲ್ ಕಲಾಂ, ಶಾರುಖ್ ಖಾನ್‌ರಂಥ ಖ್ಯಾತ ನಾಮರದ್ದೇ ಈ ಸ್ಥಿತಿಯಾದರೆ ಇನ್ನು ಸಾಮಾನ್ಯ ಪ್ರಜೆಗಳ ಪಾಡು ಹೇಳತೀರದು.
ಕಳೆದ ವರ್ಷ (೨೦೦೮)ಮೂರೂವರೆ ತಿಂಗಳ ಕಾಲ ನಾನು ಯುರೋಪ್ ಮತ್ತು ದಕ್ಷಿಣ ಅಮೆರಿಕದ ದೇಶಗಳಿಗೆ ಕೃಷಿ ಅಧ್ಯಯನಕ್ಕಾಗಿ ಹೋಗಿದ್ದೆ. ಸ್ವಿಟ್ಜರ್‌ಲೆಂಡಿನ ಜಿನಿವಾ ನಗರದಲ್ಲಿ ಕೆಲವು ದಿನ ಇದ್ದು ನಂತರ ಬ್ರೆಜಿಲ್ ದೇಶದ ಸಾವ್‌ಪಾವ್ಲೊ ನಗರಕ್ಕೆ ಹೋಗಬೇಕಾಗಿತ್ತು. ಪ್ಯಾರಿಸ್ ಮೂಲಕ ಹೋಗಲು ವಿಮಾನ ಗೊತ್ತು ಮಾಡಿಕೊಂಡಿದ್ದೆ. ಅಕ್ಟೋಬರ್ ೨೧ರಂದು ನನ್ನ ಪ್ರಯಾಣ ನಿಗದಿಯಾಗಿತ್ತು. ವಿಮಾನ ನಿಲ್ದಾಣಕ್ಕೆ ಹೋದಾಗ ಅಲ್ಲಿಯ ಇಮಿಗ್ರೆಶನ್ ಅಕಾರಿಗಳ ವರಸೆ ಬೇರೆಯಾಗಿತ್ತು. ಅದೇನೆಂದರೆ ನೀವು ಪ್ಯಾರಿಸ್ ನಗರ ಪ್ರವೇಶ ಮಾಡಬೇಕೆಂದರೆ ‘ಫ್ರಾನ್ಸ್ ವಿಸಾ ಪಡೆಯುವುದು ಕಡ್ಡಾಯ’ ಎಂದು. ನಾನು ಪ್ಯಾರಿಸ್ ನಗರ ಪ್ರವೇಶ ಮಾಡುವುದಿಲ್ಲ. ವಿಮಾನ ಬದಲಿಸುತ್ತೇನೆ ಅಷ್ಟೇ ಅದಕ್ಕೆ Transit Visa ದಲ್ಲಿ ಅವಕಾಶವಿದೆ ಎಂದು ಹೇಳಿದೆ. ಅದಕ್ಕೆ ಅಲ್ಲಿನ ಕಾರಿಗಳು ಒಪ್ಪಲಿಲ್ಲ. (Transit Visa ಎಂದರೆ ನಾವು ತಲುಪಬೇಕಾದ ದೇಶದ ವಿಸಾ ಇದ್ದರೆ ನಡುವೆ ಬರುವ ದೇಶದ ಗಡಿ ದಾಟುವ ಮತ್ತು ವಿಮಾನ ಬದಲಿಸುವ ಅವಕಾಶ. ಉದಾಹರಣೆಗೆ ಸ್ವಿಟ್ಜರ್‌ಲೆಂಡ್ ವಿಸಾ ಪಡೆದರೆ ಫಿನ್‌ಲೆಂಡಿನ ಹೆಲ್ಸಿಂಕಿಯಲ್ಲಿ ವಿಮಾನ ಬದಲಿಸಬಹುದು. ಮೂರ್ನಾಲ್ಕು ಗಂಟೆಗಾಗಿ ಫಿನ್‌ಲೆಂಡ್ ದೇಶದ ವಿಸಾ ಪಡೆಯಬೇಕಾಗಿಲ್ಲ.) ಈ ಅವಕಾಶವಿದೆ ಎಂದು ತಿಳಿಸಿದರೂ ಅವರು ಸಮ್ಮತಿಸಲಿಲ್ಲ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನನ್ನ ಪಾಸ್‌ಪೋರ್ಟ್ ತನಿಖೆ ಮಾಡಿ ಹಿಂತಿರುಗಿಸಿದರು. ಅಲ್ಲಿಗೆ ಅಂದಿನ ನನ್ನ ಪ್ರವಾಸ ಮೊಟಕುಗೊಂಡಿತು.
ಲಂಡನ್ ಮೂಲಕ ಹೋಗುವಂತೆ ಟಿಕೆಟ್ ಕಾಯ್ದಿರಿಸುವ ಏಜೆಂಟ್ ಸಲಹೆ ನೀಡಿದ್ದರಿಂದ ಅ. ೨೨ರಂದು ಪ್ರಯಾಣ ಬೆಳೆಸಲು ನಿರ್ಧರಿಸಿ ಲಂಡನ್‌ಗೆ ತೆರಳಲು ಬ್ರಿಟಿಷ್ ಏರ್‌ವೇಸ್ ನಿಗದಿ ಮಾಡಿಕೊಂಡೆ. ಸಂಜೆ ೪.೨೫ ಕ್ಕೆ ವಿಮಾನ ಇದ್ದುದರಿಂದ ೩ ಗಂಟೆಗೇ ನನ್ನ ಬ್ಯಾಗ್‌ಗಳನ್ನು ಲಗೇಜ್ ಕ್ಯಾಬಿನ್‌ನಲ್ಲಿ ಹಾಕಿ ಜಿನಿವಾದ cointrain ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪಡೆದು ಲಂಡನ್‌ನ Heathrow ನಿಲ್ದಾಣಕ್ಕೆ ಹೊರಡಲು ಕಾಯುತ್ತ ಕುಳಿತ್ತಿದ್ದೆ. ವಿಮಾನ ಹತ್ತಲು ಸೂಚನೆ ಬರುತ್ತಿದ್ದಂತೆ ಸಾಲಿನಲ್ಲಿ ನಿಂತಿದ್ದಾಗ ಬ್ರಿಟಿಷ್ ಏರ್‌ವೇಸ್ ಸಿಬ್ಬಂದಿ ನನ್ನ ಪಾಸ್‌ಪೋರ್ಟ್ ಚೆಕ್ ಮಾಡಿ, (ಎರಡನೇ ದರ್ಜೆ ತನಿಖೆ) ಭಾರತೀಯರು ಲಂಡನ್ ಪ್ರವೇಶ ಮಾಡವುದಾದರೆ ವಿಸಾ ಕಡ್ಡಾಯ ಎಂದರು. ನಾನು ಲಂಡನ್ ನಗರ ಪ್ರವೇಶ ಮಾಡುವುದಿಲ್ಲ, ಬ್ರೆಜಿಲ್‌ನ ಸಾವ್‌ಪಾವ್ಲೊಗೆ ಹೋಗುವುದರಿಂದ ವಿಮಾನ ಬದಲಾವಣೆಗೆ Transit Visa ದಲ್ಲಿ ಅವಕಾಶವಿದೆ ಎಂದು ವಾದಿಸಿದೆ. ಅದಕ್ಕೆ ಬ್ರಿಟಿಷ್ ಏರ್‌ವೇಸ್ ಸಿಬ್ಬಂದಿ ಒಪ್ಪಲಿಲ್ಲ. ನನ್ನ ಪಾಸ್‌ಪೋರ್ಟ್ ಹಿಡಿದು ಅರ್ಧ ಗಂಟೆಗೂ ಹೆಚ್ಚು ಕಾಲ ಹಿರಿಯ ಅಕಾರಿಗಳೊಂದಿಗೆ ಚರ್ಚಿಸಿ, ಗೂಗಲ್ ವೆಬ್‌ಸೈಟ್‌ನಲ್ಲಿ ನೋಡಿ, ಸಹ ಸಿಬ್ಬಂದಿಯೊಂದಿಗೆ ಚರ್ಚಿಸಿ ಕೊನೆಗೆ ಒಂದು ಪಟ್ಟಿಯನ್ನು ತಂದು ನನ್ನ ಮುಂದೆ ಹಿಡಿದರು. ಅದರಲ್ಲಿ ಕೆಲವು ದೇಶಗಳ ಹೆಸರನ್ನು ಕೆಂಪು ಅಕ್ಷರದಲ್ಲಿ, ಮತ್ತೆ ಕೆಲವನ್ನು ಹಸಿರು ಅಕ್ಷರದಲ್ಲಿ ಮುದ್ರಿಸಲಾಗಿತ್ತು. ‘ಈ ಕೆಂಪು ಅಕ್ಷರದಲ್ಲಿರುವ ದೇಶದ ಪ್ರಜೆಗಳು ಲಂಡನ್ ಪ್ರವೇಶ ಅಥವಾ ಬ್ರಿಟಿಷ್ ಏರ್‌ವೇಸ್‌ನಲ್ಲಿ ಪ್ರಯಾಣ ಮಾಡಬೇಕೆಂದರೆ ವಿಸಾ ಕಡ್ಡಾಯ. ಉಳಿದವರು ಪಡೆಯದಿದ್ದರೂ ಆದೀತು’ ಎಂದರು. ಭಾರತವನ್ನು ಕೆಂಪು ಅಕ್ಷರಗಳಲ್ಲಿ ಗುರುತಿಸಲಾಗಿತ್ತು. ‘ನಾನು ಭಾರತೀಯ ಪತ್ರಕರ್ತ, ಕೃಷಿ ಅಧ್ಯಯನಕ್ಕಾಗಿ ಹೋಗುತ್ತಿದ್ದೇನೆ. ಅವಕಾಶ ನೀಡಲೇಬೇಕು’ ಎಂದು ಪಟ್ಟು ಹಿಡಿದೆ. ಯಾವ ಕಾರಣಕ್ಕೆ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿದ್ದೀರಿ ಇದನ್ನು ಮೊದಲೇ ಏಕೆ ತಿಳಿಸಲಿಲ್ಲ ಎಂದೆಲ್ಲ ಏರು ಧ್ವನಿಯಲ್ಲಿ ಕೇಳಿದೆ. ಅದಕ್ಕೆ ಸರಿಯಾಗಿ ಉತ್ತರ ನೀಡದ ಅವರು 'We will not allow Indians' ನಮಗೆ ಸರಕಾರದ ಆದೇಶವೇ ಹೀಗಿದೆ ಅದನ್ನು ನಾವು ಪಾಲಿಸುತ್ತೇವೆ’ ಎಂದು ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಕೊಡುತ್ತ ನನ್ನ ಪಾಸ್‌ಪೋರ್ಟ್ ಕೈಗಿಟ್ಟು ಸಾಗ ಹಾಕಿದರು. ಅಂದೂ ನನ್ನ ಬ್ರೆಜಿಲ್ ಪ್ರಯಾಣದ ಉದ್ದೇಶ ಈಡೇರಲಿಲ್ಲ.
ಭಾರತದ ಸಂಪತ್ತನ್ನೆಲ್ಲ ನೆಕ್ಕಿ ನೀರು ಕುಡಿದು ಶ್ರೀಮಂತರಾದ ಬ್ರಿಟಿಷರು ಇಂದು ಬೌದ್ಧಿಕ ದಬ್ಬಾಳಿಕೆ ಆರಂಭಿಸಿದ್ದಾರೆ ಎಂದು ಮನಸ್ಸಿಗೆ ಪಿಚ್ ಎನಿಸಿತು. ಸಾವ್‌ಪಾವ್ಲೊಗೆ ಬೇರೆ ಮಾರ್ಗಗಳಿದ್ದರೆ ಹಾಗೆಯೇ ಹೋಗಬೇಕು, ಲಂಡನ್ ಮೂಲಕ ಹೋಗುವುದಾದರೆ ಪ್ರವಾಸವನ್ನೇ ರದ್ದುಪಡಿಸಿ ಭಾರತಕ್ಕೆ ಹಿಂತಿರುಗಬೇಕು. ಬ್ರಿಟಿಷ್ ನೆಲ ತುಳಿಯ ಕೂಡದೆಂದು ನಿರ್ಧರಿಸಿ ಮರುದಿನ ಜರ್ಮನಿ (ಫ್ರಾಂಕ್ ಫುರ್ಟ್) ಮೂಲಕ ಸಾವ್ ಪಾವ್ಲೊ ತಲುಪಿದೆ. ವಸಾಹತು ಶಾಹಿ ದೇಶಗಳು ಭಾರತಿಯರನ್ನು ನಡೆಸಿಕೊಳ್ಳುವ ಪರಿ ಇದು. ದೇಶದ ಪ್ರಜೆಗಳಿಗೆ ಆಗುವ ಅಂತಾರಾಷ್ಟಿಯ ಮಟ್ಟದ ಕಿರುಕುಳಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ಅವಮಾನಿಸಿದಾಗಲೇ ಬಿಗಿ ನಿಲುವು ತಾಳಿದ್ದಿದ್ದರೆ ಇಂಥ ಘಟನೆಗಳು ಪುನರಾವರ್ತನೆಯಾಗುತ್ತಿರಲಿಲ್ಲ. ತಪ್ಪು ಮಾಡಿದ ದೇಶದಿಂದ ಒಂದು ಕ್ಷಮಾಪಣೆ ಪತ್ರಬಂದರೆ ಅಥವಾ ಪತ್ರಿಕಾಹೇಳಿಕೆ ಬಂದರೆ ತೃಪ್ತವಾಗುವ ಅಲ್ಪತೃಪ್ತಿ ಮನಸ್ಥಿತಿಯಿಂದ ಭಾರತ ಸರಕಾರ ಹೊರಬಂದು ಕಠಿಣ ನಿಲುವು ತಾಳಬೇಕು. ಇಲ್ಲದಿದ್ದರೆ ಭಾರತೀಯರ ಮಾನ ಮೂರು ಕಾಸಿಗೆ ಹರಾಜಾಗುತ್ತಲೇ ಇರುತ್ತದೆ.
ಅಂತೂ ಬ್ರಿಟಿಷ್ ದೇಶಕ್ಕೆ ಹೋಗಲಾಗದಿದ್ದಕ್ಕೆ ಅತಿಯಾದ ಸಂತೋಷವೂ, ಅವರ ದುರ್ವರ್ತನೆಗೆ ಬೇಸರವೂ ಆಯಿತು. ವಿಮಾನ ನಿಲ್ದಾಣ ಪ್ರವೇಶ ಮಾಡುವುದು ಒಂದು ಸಮಸ್ಯೆಯಾದರೆ ವಿಸಾ ಮತ್ತಿತರ ಕಾರಣಗಳಿಂದ ಹೊರಬರುವುದು ಇನ್ನೊಂದು ಸವಾಲು. ಪ್ರಯಾಣ ಮೊಟಕುಗೊಳಿಸಿ ಹೊರಗೆ ಬರೋಣವೆಂದರೆ, ಪ್ರವೇಶ ಮಾಡಿದ ಯಾವುದೇ ಮಾರ್ಗದಿಂದ ಹೊರಬರಲು ಸಾಧ್ಯವೇ ಇಲ್ಲ. ಫ್ರೆಂಚ್ ಬಿಟ್ಟರೆ ಅಲ್ಲಿನ ಪೊಲೀಸರಿಗೆ ಬೇರೆ ಯಾವುದೇ ಭಾಷೆ ಗೊತ್ತಾಗುವುದಿಲ್ಲ. ಈ ಸಮಸ್ಯೆ ತಿಳಿಸೋಣವೆಂದರೆ ಕೇಳುವ ವ್ಯವಧಾನವೂ ಅವರಿಗಿರುವುದಿಲ್ಲ. ಹೊರಗೆ ಹೋಗಲು ಕೇಳಿದರೆ ಭದ್ರತಾ ಕೊಠಡಿಗಳಲ್ಲಿ ಪೊಲೀಸರು ವಾಪಸ್ ಕಳಿಸುತ್ತಾರೆ. ಸ್ವಲ್ಪ ಅನುಮಾನ ಬಂದರೂ ಕ್ಯಾಮರಾದಲ್ಲಿ ಸುತ್ತುತ್ತಿರುವ ಪೊಲೀಸ್ ಕಣ್ಣುಗಳು ಬಂಸಿಯಾವು ಎನ್ನುವ ಭಯ. ಒಟ್ಟಾರೆ ವಿಮಾನ ನಿಲ್ದಾಣದ ಒಳಗೆ ಹೋದವರು ಸಣ್ಣ ಕಾರಣಗಳಿಗೂ ಹೊರಗೆ ಬರುವುದು ಎಂದರೆ ಚಕ್ರವ್ಯೂಹ ಭೇದಿಸಿದಂತೆ.
ಎಷ್ಟೇ ಪ್ರಯತ್ನ ಮಾಡಿದರೂ ನಾನು ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಅಲ್ಲಿ ಸಹಾಯಕ್ಕೆ ಯಾರೂ ಇರುವುದಿಲ್ಲವಾದ್ದರಿಂದ ಗಲಿಬಿಲಿ ಶುರುವಾಗಿತ್ತು. ಕೊನೆಗೆ ಕೌಂಟರ್‌ವೊಂದರಲ್ಲಿ ಕುಳಿತಿದ್ದ ಮಹಿಳೆಯ ಹತ್ತಿರ ಈ ವಿಚಾರ ತಿಳಿಸಿದೆ. ಆಕೆ ಬಂದು ನನ್ನನ್ನು ನಿಲ್ದಾಣದಿಂದ ಹೊರಗೆ ಬರಲು ಸಹಾಯ ಮಾಡಿದಳು. ಅಷ್ಟೊತ್ತಿಗೆ ನಾನು ಜಾತ್ರೆಯಲ್ಲಿ ಕಳೆದುಹೋದ ಮಗುವಿನಂತಾಗಿದ್ದೆ.
ಖ್ಯಾತನಾಮರಿಗೆ ಅವಮಾನವಾದರೆ ಎರಡು ದೇಶಗಳ ರಾಯಭಾರಿಗಳೇ ಎಚ್ಚೆತ್ತುಕೊಳ್ಳುತ್ತಾರೆ. ಕೆಲಸಕ್ಕೆ, ಅಧ್ಯಯನಕ್ಕೆ, ಪ್ರವಾಸಕ್ಕೆ ಹೋದವರು ಇಂಥ ಅವಮಾನವನ್ನು ನಿರಂತರ ಅನುಭವಿಸುತ್ತಿರುತ್ತಾರೆ. ಜಗತ್ತಿನ ಸಾಂಸ್ಕೃತಿಕ ರಾಯಭಾರಿ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿ ಅವಮಾನಿಸುವ ದೇಶಗಳನ್ನು ಭಾರತವೂ ಕೆಂಪು ಪಟ್ಟಿಗೆ ಸೇರಿಸಿ ಎಲ್ಲ ಭದ್ರತಾ ನಿಯಮಗಳನ್ನೂ ಅನುಸರಿಸಬೇಕು. ಅತಿಥಿಗಳಂತೆ ಸ್ವಾಗತಿಸುವ ಪರಿಪಾಠವನ್ನು ನಿಲ್ಲಿಸಿ ತೃತೀಯ ದರ್ಜೆ ಸ್ವಾಗತ ನೀಡದಿದ್ದರೆ ಭಾರತೀಯರ ಸಂಪನ್ನತೆಯನ್ನು ದೌರ್ಭಲ್ಯ ಎಂದು ಭಾವಿಸುವ ಸಾಧ್ಯತೆ ಇದೆ. ಕ್ರಮಕ್ಕೆ ಮುಂದಾಗದಿದ್ದರೆ ಶ್ರೀಮಂತ ದೇಶಗಳ ದೌರ್ಜನ್ಯ ಎನ್ನುವುದು ಸಾಮಾನ್ಯ ಸಂಗತಿಯಾಗುತ್ತದೆ.

No comments: