Monday, October 12, 2009

ಶಿಕ್ಷಕರ ಚುನಾವಣೆ: ಒಂದು ‘ರಾಜಕೀಯ’ ಅನುಭವ

ಈಗ ಎಲ್ಲೆಡೆ ತಾಲೂಕು ಶಿಕ್ಷಕರ ಸಂಘದ ಚುನಾವಣೆಗಳು ನಡೆದು ಫಲಿತಾಂಶ ಹೊರಬಿದ್ದಿದೆ. ಆ ಮೂಲಕ ಚುನಾವಣೆ ಪ್ರಕ್ರಿಯೆಯೊಂದು ಮುಗಿದಿದೆ. ಈ ಸಂದರ್ಭದಲ್ಲಿ ಆದ ಶಿಷ್ಟಾಚಾರದ ಬಗ್ಗೆ ಚಿಂತಿಸಬೇಕಿದೆ. ಶಿಕ್ಷಕರ ಸಂಘದ ಚುನಾವಣೆಗಳು ಘೋಷಣೆಯಾದ ನಂತರ ಗ್ರಾಮಾಂತರ ಪ್ರದೇಶದಲ್ಲಾದ ಸಂಚಲನಗಳನ್ನು ಗಮನಿಸಿದರೆ ಅದೊಂದು ಸ್ಥಳೀಯ (ಗ್ರಾ.ಪಂ., ತಾ.ಪಂ.) ಚುನಾವಣೆ ಘೋಷಣೆಯಂತಿತ್ತು. ಕಾರಣ ಈ ಚುನಾವಣೆಗಳು ಸುಶಿಕ್ಷತ ಸಮುದಾಯದ ಚುನಾವಣೆಯಂತೆ ಕೊನೆಗೂ ಕಾಣಲೇ ಇಲ್ಲ. ಇಲ್ಲಿ ವೃತ್ತಿ ರಾಜಕಾರಣದ ಮಟ್ಟಕ್ಕಿಳಿದು ಬಾಡೂಟ, ಹೆಂಡ ಹಂಚಿಕೆಯಂಥ ಹೀನ, ನಿರ್ಲಜ್ಜ ಆಮಿಷಗಳನ್ನೊಡ್ಡಿ ಅನೇಕ ಕಡೆ ಶಿಕ್ಷಕ ಪ್ರತಿನಿಗಳು ಮತ ಯಾಚಿಸಿದರು. ಹಾಗೆಯೇ ಕೆಲವರು ಅದನ್ನು ಪಡೆದು ಮತ ಚಲಾಯಿಸಿದರು ಎಂದರೆ ನೈತಿಕ, ಮೌಲ್ಯ ಶಿಕ್ಷಣದ ಕನಸು ಕಂಡ ಮಂತ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆತ್ಮ ಸ್ಮಶಾನದಲ್ಲೇ ಮಗ್ಗುಲು ಬದಲಿಸಿ ನಕ್ಕಿರಬೇಕು!
ಯಾವ ಸಮುದಾಯ ಸಮಾಜಕ್ಕೆ ಜ್ಞಾನದ ಬೆಳಕು ನೀಡಬೇಕೋ ಅದೇ ಅಜ್ಞಾನದ ಅಂಧಕಾರದಲ್ಲಿ ಮುಳುಗಿದರೆ ಈ ದೇಶದ ಭವಿಷ್ಯ ಏನು ಎಂಬ ಬಗ್ಗೆ ಶಿಕ್ಷಕರ ಪ್ರತಿನಿಗಳೇ ಚಿಂತಿಸಬೇಕಿದೆ. ಶಿಕ್ಷಕರ ಸಂಘಟನೆಗಳು ಪ್ರಬಲಗೊಂಡಂತೆ ಪರಿಷತ್‌ಗೆ ಆಯ್ಕೆಯಾಗುವ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಅದರಲ್ಲಿ ಮಿಳಿತಗೊಂಡಿದ್ದರಿಂದ ಇವರನ್ನು ಪ್ರಶ್ನಿಸಲಾಗದಂಥ ವಾತಾವರಣ ನಿರ್ಮಾಣವಾಗುತ್ತಿದೆ. ಸ್ಥಳೀಯವಾಗಿ ಶಿಕ್ಷಕರ ಸಂಘಟನೆಗಳು ಬಲಿಷ್ಠವಾದರೆ ರಾಜಕೀಯ ನಾಯಕರಿಗೆ ಲಾಭ. ಆದ್ದರಿಂದ ಅವರೂ ಇಂಥ ಕೆಲಸಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಇಲ್ಲಿ ಸ್ವಸ್ಥ ಸಮಾಜ ಎಂಬುದು ಬೂಟಾಟಿಕೆಯಾಗುತ್ತಿದೆ.
ರಾಜ್ಯದಲ್ಲಿ ಬಹುತೇಕ ಶಿಕ್ಷಕರ ಸಂಘಟನೆಗಳು ರಾಜಕೀಯ ಗುಂಪುಗಳಾಗಿ ರೂಪಾಂತರಗೊಂಡಿವೆ. ಮುಖಂಡರು ಸಂಘಟನೆಯ ಮೂಲ ಸಿದ್ಧಾಂತವನ್ನು ಗಾಳಿಗೆ ತೂರಿ, ಸ್ಥಳೀಯ ರಾಜಕೀಯ ಪುಢಾರಿಗಳ ಚೇಲಾಗಳಂತೆ ವರ್ತಿಸತೊಡಗಿದ್ದಾರೆ. ಕೆಲವರಂತೂ ರಾಜಕೀಯ ಪುಢಾರಿಗಳೇ ಆಗಿದ್ದಾರೆ! ಯಾವಾಗಲೋ ಶಾಲೆಗೆ ಭೇಟಿ ನೀಡಿ ಪಾಠ ಮಾಡುವ ಶಾಸ್ತ್ರ ಮಾಡಿ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಚಹಾದ ಅಂಗಡಿ ಮುಂದೆ ಸಿಗರೇಟು ಹಿಡಿದು ನಿಂತರೆ ಅವರ ಅಧ್ಯಾಪನ ವೃತ್ತಿಗೆ ಜೈ!
ಡಿ.ಎಲ್. ನರಸಿಂಹಾಚಾರ್, ಪರಮೇಶ್ವರ್ ಭಟ್, ಬೇಂದ್ರೆ, ಕುವೆಂಪು, ಲಂಕೇಶ್ ಮುಂತಾದ ಜ್ಞಾನ ಶಿಖರಗಳ ಮಹಾನ್ ಪರಂಪರೆಯೇ ಶಿಕ್ಷಕ ವೃತ್ತಿಯ ಬೆನ್ನಿಗಿದೆ. ಸಮಾಜಕ್ಕೆ ಸಾಂಸ್ಕೃತಿಕ, ರಾಜಕೀಯ, ವೈಚಾರಿಕ ತ್ರಾಣ ತುಂಬುವುದು ಶಿಕ್ಷಕ ಸಮುದಾಯ ಎಂಬ ನಂಬಿಕೆ ಸಮಾಜದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಸಾಗುತ್ತಿರುವ ದಿಕ್ಕುಗಳನ್ನು ಗಮನಿಸಿದರೆ ಆ ನಂಬಿಕೆ ಹುಸಿಯಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇವರು ಹೀಗೇ ಸಾಗಿದರೆ ವೃತ್ತಿ ರಾಜಕಾರಣಿಗಳಂತೆ ನಿರ್ಲಜ್ಜ ರಾಜಕೀಯ ಪ್ರಜ್ಞೆಯನ್ನು ಹೊರತು ಪಡಿಸಿ ಮಕ್ಕಳಿಗೆ ಯಾವುದೇ ನೈತಿಕ ಮೌಲ್ಯಗಳನ್ನು ತುಂಬಲಾರರು.
ಶಿಕ್ಷಕರ ಸಂಘದ ಚುನಾವಣೆಯ ಆಟಾಟೋಪಗಳನ್ನು ಗಮನಿಸಿದರಂತೂ ಇದು ನಿಜ ಎನಿಸುತ್ತಿದೆ. ಶಿಕ್ಷಕರು ಸಂಘಟಿತರಾಗಲು ಸಂವಿಧಾನ ಅವಕಾಶ ನೀಡಿದೆಯೇ ಹೊರತು ಸರ್ವಾಕಾರಿಗಳಾಗಲು ಅಲ್ಲ. ಹಕ್ಕು ರಕ್ಷಿಸಿಕೊಳ್ಳಲು ಸ್ವಾತಂತ್ರ್ಯ ನೀಡಿದೆಯೇ ಹೊರತು ಸ್ವೇಚ್ಛಾಚಾರಕ್ಕಲ್ಲ ಎನ್ನುವ ಅರಿವು ಆ ಸಮುದಾಯದ ಬಹುತೇಕರಲ್ಲಿ ಕಂಡುಬರುತ್ತಿಲ್ಲ. ಬಯಲ ನಾಡು ಕೋಲಾರ ಜಿಲ್ಲೆಯಲ್ಲಿ ಶಿಕ್ಷಕರ ಸಂಘಗಳಿಲ್ಲ ಅವು ರಾಜಕೀಯ ಪಕ್ಷಗಳಂತೆ ಗುಂಪುಗಳಾಗಿ, ಬಣಗಳಾಗಿ ಚುನಾವಣೆ ಎದುರಿಸಿದ್ದು ಮಾತ್ರ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಯಾವುದೋ ಒಂದು ಬಣ ತನ್ನ ಹೆಚ್ಚುಗಾರಿಕೆಯನ್ನು ಮೆರೆಯಲು ಗೆದ್ದವನನ್ನು ಮೆರವಣಿಗೆ ಮಾಡಿದರೆ ನಮ್ಮ ಸ್ಥಳೀಯ ಚುನಾವಣೆಗಳಿಗೂ ಇದಕ್ಕೂ ಏನು ವ್ಯತ್ಯಾಸ? ಕಾಂಗ್ರೆಸ್‌ನವರು ಗೆದ್ದು ಬಿಜೆಪಿ ಮತದಾರರಿರುವ ಬಡಾವಣೆಗಳಲ್ಲಿ ಕೊಳಾಯಿ ನೀರು ಹರಿಸದೆ ಮಾಡಿದ ಹೊಲಸು ರಾಜಕಾರಣದಂತೆ ಇಲ್ಲೂ ಆ ಬಣದವರು ನಮ್ಮನ್ನು ಬೆಂಬಲಿಸಿಲ್ಲ ಎಂದು ರಾಜಕೀಯ ಒತ್ತಡ ತಂದು ಒತ್ತಾಯಪೂರ್ವಕವಾಗಿ ವರ್ಗಾವಣೆಯಂಥ ನೀಚ ಕೃತ್ಯಗಳಿಗೆ ಮುಂದಾದರೆ ಸಂಘಟನೆಯ ಉದ್ದೇಶ ಏನಾಗುತ್ತದೆ ಎಂಬ ಬಗ್ಗೆ ಯೋಚಿಸಬೇಕಿದೆ. ಸಾಲದೆಂಬಂತೆ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೋಲಾರ ಜಿಲ್ಲೆಯ ಫಲಿತಾಂಶ ೧೭ನೇ ಸ್ಥಾನದಲ್ಲಿದೆ. ಚುನಾವಣೆ, ಸ್ಥಳೀಯ ರಾಜಕಾರಣ, ಅಂತಃಕಲಹವೇ ಶಿಕ್ಷಕರ ಗುರಿಯಾದರೆ ಫಲಿತಾಂಶ ಮತ್ತಷ್ಟು ಹಿಂದೆ ಬೀಳುವುದರಲ್ಲಿ ಅನುಮಾನವಿಲ್ಲ. ನಮ್ಮ ಎಚ್ಚರ ಇರಬೇಕಾಗಿರುವುದು ಇಲ್ಲಿ. ರಾಜಕಾರಣದಲ್ಲಿ ಅಲ್ಲ. ಸ್ಥಳೀಯ ರಾಜಕೀಯ ನಾಯಕರೂ ಸಹ ಉರಿಯುವ ಮನೆಯ ಗಳ ಹಿರಿಯದೆ ಶಿಕ್ಷಕರನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳದೆ ಶೈಕ್ಷಣಿಕ ಅಭಿವೃದ್ಧಿಗೆ ಗಮನಹರಿಸಬೇಕು ಮತ್ತು ಅದರ ಪಾವಿತ್ರ್ಯ ಕಾಪಾಡಬೇಕು. ಇಲ್ಲವಾದರೆ ಶಿಕ್ಷಕರು ರಾಜಕೀಯ ನಾಯಕರಾಗುತ್ತಾರೆ, ಅವರ ಕೈಯಲ್ಲಿ ಕಲಿಯುವ ಮಕ್ಕಳು ಪಕ್ಷಗಳ ಕಾರ್ಯಕರ್ತರಾಗುತ್ತಾರೆ. ಬರುವ ದಿನಗಳಲ್ಲಿ ಅವರೂ ಕೂಡ ಇದೇ ಹೆಂಡ, ಹಣ, ಗುಂಪು ಎಂಬ ತತ್ತ್ವ ರಹಿತ ರಾಜಕಾರಣದ ನಾಯಕರ ಪಾತ್ರವಹಿಸುತ್ತಾರೆ. ತಿದ್ದಿ ಬೆಳೆಸಬೇಕಾದ ಶಿಕ್ಷಕರೇ ಅವರ ವರ್ತಮಾನವನ್ನು ಇಷ್ಟು ಗೊಂದಲದಲ್ಲಿ ಸಿಲುಕಿಸಿದರೆ ಭವಿಷ್ಯ ಹೇಗೆ ಎಂಬ ಬಗ್ಗೆ ಪೋಷಕರೂ ಚಿಂತಿಸಿ ಪಾಠ ಮಾಡದ ಶಿಕ್ಷಕರಿಗೆ ‘ಪಾಠ’ ಕಲಿಸಬೇಕಾದೀತು. ಪರಿಸ್ಥೀತಿ ಆ ಹಂತ ತಲುಪುವ ಮೊದಲು ಶಿಕ್ಷಕರು ಅವರ ಪರಿಷತ್ ಪ್ರತಿನಿಗಳು ಎಚ್ಚರವಾಗುವುದು ಸೂಕ್ತ. ಕೋಲಾರ ಜಿಲ್ಲೆ ಇಲ್ಲಿ ಉದಾಹರಣೆಯಷ್ಟೇ. ರಾಜ್ಯದಲ್ಲಿ ಬಹುತೇಕ ತಾಲೂಕುಗಳಲ್ಲಿ ಇಂಥದ್ದೇ ವಾತಾವರಣವಿದೆ. ‘ಅಂದೋ ಮುಂದೆ ಗುರಿ ಇತ್ತು ಹಿಂದೆ ಗುರುವಿದ್ದ ಸಾಗುತ್ತಿತ್ತು ರರ ದಂಡು. ಇಂದು ಮುಂದೆ ಗುರಿ ಇಲ್ಲ ಹಿಂದೆ ಗುರುವಿಲ್ಲ ಮುಗ್ಗರಿಸುತಿದೆ ಹೇಡಿಗಳ ಹಿಂಡು’ ಎಂದಿದ್ದರು ಕುವೆಂಪು. ಇಲ್ಲಿ ಆಯ್ಕೆ ಶಿಕ್ಷಕರದ್ದೇ ಅವರೇ ನಿರ್ಧರಿಸಬೇಕು.

No comments: